ಕೇಂದ್ರ ಸರ್ಕಾರವು ಎಲ್.ಪಿ.ಜಿ. ಸಹಾಯ ಧನದ ನೇರ ವರ್ಗಾವಣೆ ಯೋಜನೆಯನ್ನು ಈಗಾಗಲೇ ದೇಶದ ೨೦ ಜಿಲ್ಲೆಗಳಲ್ಲಿ ಜಾರಿಗೊಳಿಸಿದ್ದು, ಇನ್ನೂ ೨೬೯ ಜಿಲ್ಲೆಗಳಲ್ಲಿ ಜಾರಿಗೆ ತರಲು ನಿರ್ಧರಿಸಿದೆ. ಈ ೨೬೯ ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆಯೂ ಒಂದಾಗಿದ್ದು, ಡಿಸೆಂಬರ್ ೦೧ ರಿಂದ ಈ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಗೆ ತರಲಾಗುವುದು ಎಂದು ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ರವೀಂದ್ರ ಢಾಣಕ್ ಶಿರೂರ ಅವರು ತಿಳಿಸಿದ್ದಾರೆ.
ಎಲ್‌ಪಿಜಿ ಗ್ಯಾಸ್ ಸಂಪರ್ಕ ಹೊಂದಿರುವ ಜಿಲ್ಲೆಯ ಎಲ್ಲಾ ಗ್ರಾಹಕರು ಆಧಾರ ಸಂಖ್ಯೆಯನ್ನು ಜೋಡಣೆ (ಸಿಡ್) ಮಾಡಿದ ವಾಣಿಜ್ಯ ಅಥವಾ ಪ್ರಗತಿ ಗ್ರಾಮೀಣ ಬ್ಯಾಂಕ್ ಉಳಿತಾಯ ಖಾತೆಗಳನ್ನು ಹೊಂದುವುದು ಅತ್ಯಾವಶ್ಯಕವಾಗಿರುತ್ತದೆ. ಈಗಾಗಲೇ ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರು ತಮ್ಮ ಬ್ಯಾಂಕಿನ ಉಳಿತಾಯ ಖಾತೆಗೆ ಆಧಾರ ಸಂಖ್ಯೆಯನ್ನು ಜೋಡಣೆ ಮಾಡಿಸಬೇಕು. ಇದುವರೆಗೂ ಬ್ಯಾಂಕ್ ಖಾತೆಗಳನ್ನು ಹೊಂದಿರದ ಗ್ರಾಹಕರು ತಮ್ಮ ಸೇವಾ ವ್ಯಾಪ್ತಿಯ ಶೆಡ್ಯೂಲ್ ಕಮರ್ಷಿಯಲ್ ಬ್ಯಾಂಕ್ ಅಥವಾ ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆಗಳಲ್ಲಿ ಉಳಿತಾಯ ಖಾತೆಗಳನ್ನು ತೆರೆದು ಆಧಾರ್ ಸಂಖ್ಯೆಯನ್ನು ತಮ್ಮ ಖಾತೆಗೆ ಜೋಡಣೆ ಮಾಡಿಸಬೇಕು.
ಎಲ್‌ಪಿಜಿ ಸಹಾಯ ಧನದ ನೇರ ವರ್ಗಾವಣೆ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರು ಪ್ರತಿ ಗ್ಯಾಸ್ ಸಿಲಿಂಡರ್‌ಗೆ ಸಿಗುವ ಸರ್ಕಾರದ ಸಹಾಯ ಧನವನ್ನು ಅವರ ಆಧಾರ ಸಂಖ್ಯೆ ಜೋಡಣೆ (ಸಿಡ್) ಮಾಡಿದ ಬ್ಯಾಂಕಿನ ಉಳಿತಾಯ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.
ಎಲ್ಲಾ ಎಲ್‌ಪಿಜಿ ಗ್ರಾಹಕರು ತಮ್ಮ ಗ್ಯಾಸ್ ಕಂಪೆನಿ, ಏಜೆನ್ಸಿಗಳಿಗೆ ತಾವು ಉಳಿತಾಯ ಖಾತೆ ಹೊಂದಿದ ಬ್ಯಾಂಕಿನ ಹೆಸರು, ಶಾಖೆ, ಉಳಿತಾಯ ಖಾತೆ ಸಂಖ್ಯೆ, ಬ್ಯಾಂಕ್‌ನ ಐ.ಎಫ್.ಎಸ್.ಸಿ. ಕೋಡ್, ಆಧಾರ್ ಸಂಖ್ಯೆ ಮತ್ತು ತಮ್ಮ ದೂರವಾಣಿ, ಮೊಬೈಲ್ ಸಂಖ್ಯೆಗಳ ಮಾಹಿತಿಯನ್ನು ಕೂಡಲೇ ನೀಡಿ ಕೇಂದ್ರ ಸರ್ಕಾರದ ಈ ಯೋಜನೆಯ ವ್ಯಾಪ್ತಿಗೆ ಸೇರಬೇಕಾಗುತ್ತದೆ. ಅಂತಹವರಿಗೆ ಮಾತ್ರ ಪ್ರತಿ ಸಿಲಿಂಡರ್‌ನ ಸಹಾಯಧನದ ಸೌಲಭ್ಯ ಲಭ್ಯವಾಗಲಿದೆ. ಇಲ್ಲದಿದ್ದಲ್ಲಿ ಗ್ರಾಹಕರಿಗೆ ದೊರೆಯಬೇಕಾದ ಗ್ಯಾಸ್ ಸಿಲಿಂಡರಿನ ಸಹಾಯಧನ ದೊರೆಯದೇ ಹೋಗಬಹುದು. ಈ ನಿಟ್ಟಿನಲ್ಲಿ ಗ್ರಾಹಕರು, ಏಜೆನ್ಸಿ ಹಾಗೂ ಬ್ಯಾಂಕುಗಳಿಗೆ ಅಗತ್ಯ ಮಾಹಿತಿ ನೀಡಿ ಜಿಲ್ಲಾ ಲೀಡ್ ಬ್ಯಾಂಕಿನೊಂದಿಗೆ ಸಹಕರಿಸಬೇಕೆಂದು ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ರವೀಂದ್ರ ಢಾಣಕ್ ಶಿರೂರ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
0 comments:
Post a Comment