PLEASE LOGIN TO KANNADANET.COM FOR REGULAR NEWS-UPDATES

 : ಹೊಸ ಟ್ರಾಕ್ಟರ್ ಖರೀದಿಸಿದ ನಾಲ್ಕು ತಿಂಗಳಲ್ಲಿಯೇ ಟೈರ್‌ಗಳಲ್ಲಿ ಬಿರುಕು ಬಂದಿದ್ದರಿಂದ, ದೋಷಪೂರಿತ ಟೈರ್‌ಗಳನ್ನು ಬದಲಾಯಿಸಿ, ಟ್ರಾಕ್ಟರ್ ಖರೀದಿಸಿದವರಿಗೆ, ಹೊಸ ಟೈರ್‌ಗಳನ್ನು ನೀಡುವಂತೆ ಕೊಪ್ಪಳ ಗ್ರಾಹಕರ ವೇದಿಕೆ ತೀರ್ಪು ನೀಡಿದೆ.
  ಗಂಗಾವತಿ ತಾಲೂಕು ಮರಳಿ ಗ್ರಾಮದ ವೆಂಕೋಬ ತಂದೆ ಹನುಮಂತಪ್ಪ ಮರಳಿ ಎಂಬುವವರು ಗಂಗಾವತಿಯ ವಿನಯ್ ಟ್ರಾಕ್ಟರ್‍ಸ್ ಅವರ ಬಳಿ ಸ್ವರಾಜ್ ಟ್ರಾಕ್ಟರ್ ಅನ್ನು ೨೦೧೨ ರ ಮಾರ್ಚ್ ೨೩ ರಂದು ಖರೀದಿಸಿದ್ದರು.  ನಂತರ ನಾಲ್ಕು ತಿಂಗಳ ಅವಧಿಯೊಳಗಾಗಿ ಟ್ರಾಕ್ಟರ್‌ನ ಹಿಂಬದಿಯ ಗಾಲಿಯ ದೊಡ್ಡ ಟೈರ್‌ಗಳು (ರಿಯರ್ ಬಿಗ್ ಟೈರ್‍ಸ್) ಬಿರುಕು (ಕ್ರ್ಯಾಕ್) ಬಂದಿದ್ದವು.  ಈ ಕುರಿತಂತೆ ವಿನಯ್ ಟ್ರಾಕ್ಟರ್‍ಸ್ ಅವರಿಗೆ ವಿಷಯ ತಿಳಿಸಿದಾಗ, ಸರ್ವಿಸ್ ಇಂಜಿನಿಯರ್ ನಿಂದ ತಪಾಸಣೆ ಮಾಡಿಸಿ, ಟೈರ್‌ಗಳು ಚಲಿಸುವಾಗ ಹೊರಗಿನ ವಸ್ತುಗಳಿಗೆ ತಗುಲಿದ್ದರಿಂದ ಟೈರ್‌ಗಳಲ್ಲಿ ಬಿರುಕು ಬಂದಿವೆ ಎಂಬುದಾಗಿ ಸರ್ವಿಸ್ ಇಂಜಿನಿಯರ್ ವರದಿ ನೀಡಿದ್ದರಿಂದ ಟೈರ್‌ಗಳನ್ನು ಬದಲಾಯಿಸಿಕೊಡಲು ವಿನಯ್ ಟ್ರಾಕ್ಟರ್‍ಸ್ ಅವರು ನಿರಾಕರಿಸಿದರು.  ಟೈರ್‍ಸ್‌ಗಳನ್ನು ಬದಲಾಯಿಸಿಕೊಡಲು ನಿರಾಕರಿಸಿರುವುದನ್ನು ಸೇವಾ ನ್ಯೂನತೆ ಎಂದು ಪರಿಗಣಿಸಿ, ಅದರ ಮೊತ್ತ ೫೦೦೦೦ ರೂ., ಪ್ರಕರಣದ ಖರ್ಚು ರೂ. ೫೦೦೦ ಹಾಗೂ ಶೇ. ೧೦ ರ ಬಡ್ಡಿಯೊಂದಿಗೆ ಒದಗಿಸುವಂತೆ ವೆಂಕೋಬ ಅವರು ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.
  ಪ್ರಕರಣದ ವಿಚಾರಣೆ ನಡೆಸಿದ ವೇದಿಕೆ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ, ಸದಸ್ಯರುಗಳಾದ ಶಿವರೆಡ್ಡಿ ಬಿ. ಗೌಡ ಮತ್ತು ವೇದಾ ಜೋಷಿ ಅವರು, ಯಾವುದೇ ವಸ್ತುಗಳು ಖರೀದಿಸಿದ ಕಡಿಮೆ ಅವಧಿಯಲ್ಲಿಯೇ ಅವುಗಳಲ್ಲಿ ಏನಾದರೂ ದೋಷ ಕಂಡುಬಂದರೆ, ಅವು ತಯಾರಿಕಾ ದೋಷದಿಂದ ಕೂಡಿರುತ್ತವೆಯೇ ಹೊರತು, ಅವುಗಳನ್ನು ಉಪಯೋಗಿಸುವುದರಿಂದ ಹಾಳಾಗುವುದಿಲ್ಲ.  ಟೈರ್‍ಸ್ ಗಳಲ್ಲಿ ಬಿರುಕುಗಳು ಬಂದಿರುವುದನ್ನು ಕಂಪನಿಯ ಸರ್ವಿಸ್ ಇಂಜಿನಿಯರ್ ಅವರೇ ಸ್ಪಷ್ಟಪಡಿಸಿದ್ದು, ಟ್ರಾಕ್ಟರ್‌ನ ಟೈರ್‌ಗಳು ದೋಷಪೂರಿತವಾಗಿವೆ.  ವಾರಂಟಿ ಅವಧಿಯ ಬಗ್ಗೆ ಯಾವುದೇ ರೀತಿಯ ಪ್ರಸ್ತಾವನೆ ಮಾಡದೇ ಇರುವುದರಿಂದ, ಟೈರ್‌ಗಳನ್ನು ಬದಲಾಯಿಸಿಕೊಡದೇ ಇರುವುದು ಸೇವಾ ನ್ಯೂನತೆ ಆಗುತ್ತದೆ.  ಟ್ರಾಕ್ಟರ್‌ನ ದೋಷಪೂರಿತ ಟೈರ್‌ಗಳನ್ನು ಎರಡು ತಿಂಗಳ ಒಳಗಾಗಿ ಅದೇ ಮಾದರಿಯ ಹೊಸ ಟೈರ್‌ಗಳೊಂದಿಗೆ ಬದಲಾಯಿಸಿಕೊಡುವಂತೆ ಗ್ರಾಹಕರ ವೇದಿಕೆ ನಿರ್ದೇಶನ ನೀಡಿದ್ದು, ತಪ್ಪಿದಲ್ಲಿ, ತಮಗಿಷ್ಟವಾದ ಟೈರ್‌ಗಳನ್ನು ಗ್ರಾಹಕರು ಖರೀದಿಸಿ, ಅದರ ಬಿಲ್ಲಿನ ಮೊತ್ತವನ್ನು ವಿನಯ್ ಟ್ರಾಕ್ಟರ್‍ಸ್ ಅವರೇ ಪಾವತಿಸಲು ಹೊಣೆಗಾರರಾಗುತ್ತಾರೆ ಎಂದು ಆದೇಶದಲ್ಲಿ ತಿಳಿಸಿದೆ.

Advertisement

0 comments:

Post a Comment

 
Top