- ಸನತ್ ಕುಮಾರ
ಸಾಮಾಜಿಕ ನ್ಯಾಯಕ್ಕಾಗಿ, ಸಮಾನತೆಗಾಗಿ ದನಿಯೆತ್ತುವ ಎಲ್ಲರನ್ನು ‘ನಕ್ಸಲೈಟ್ಸ್’ ಎಂದು ಹೆಸರಿಸಿ ಹತ್ತಿಕ್ಕುವ ಪ್ರಭುತ್ವ ನಮ್ಮಲ್ಲಿದೆ. ಕವಿಗಳು, ಕಲಾವಿದರು, ಹಾಡುಗಾರರು ಹೀಗೆ ಮನುಷ್ಯನ ಘನತೆಗಾಗಿ ಉಸಿರೆತ್ತುವ ಎಲ್ಲರನ್ನು ಮುಗಿಸಲು ಈ ವ್ಯವಸ್ಥೆ ಹೊಂಚು ಹಾಕುತ್ತಲೇ ಇರುತ್ತದೆ. ಒಂದೆಡೆ ಸರಕಾರದ ಅಂದರೆ ಪೊಲೀಸರ ಕಾಟ, ಇನ್ನೊಂದೆಡೆ ತೊಂಬತ್ತರ ದಶಕದಿಂದೀಚೆಗೆ ಹುಟ್ಟಿಕೊಂಡಿರುವ ಸಂಘ ಪರಿವಾರದ ಅನೈತಿಕ ಪೊಲೀಸರ ಕಿರಿಕಿರಿ ಹೀಗೆ ಎರಡು ದಿಕ್ಕಿನಿಂದಲೂ ಬರುವ ದಾಳಿಗಳನ್ನು ಸಮಾನತೆಯ ಪರ ಹೋರಾಟ ಗಾರರು ಎದುರಿಸಿ ನಿಲ್ಲಬೇಕಾಗಿದೆ.
ಮಹಾರಾಷ್ಟ್ರದ ಕಬೀರ ಕಲಾಮಂಚ್ ಹೆಸರು ಬಹಳ ಜನರಿಗೆ ಗೊತ್ತಿಲ್ಲ. ಆದರೆ ಮಹಾರಾಷ್ಟ್ರ ದಲ್ಲಿ ಇದರ ಹೆಸರು ಗೊತ್ತಿಲ್ಲ ದವರೇ ಇಲ್ಲ. ಕವಿತೆ ರಚಿಸುವ, ಹಾಡು ಹಾಡುವ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುವ ಈ ತಂಡದ ಬಿಸಿ ರಕ್ತದ ಯುವಕ- ಯುವತಿಯರು ಅಲ್ಲಿನ ಸರಕಾರದ ಕೆಂಗಣ್ಣಿಗೆ ಗುರಿ ಯಾಗಿ ಜೈಲು ಸೇರಿ ಇದೀಗ ಹೊರಗೆ ಬಂದಿದ್ದಾರೆ. ಮೊನ್ನೆ ಶನಿವಾರ ಮತ್ತು ರವಿವಾರ ಇವರು ಬೆಂಗಳೂರಿಗೂ ಬಂದಿದ್ದರು. ಮನಸುಗಳನ್ನು ನವಿರೇಳಿಸುವ ಅದ್ಭುತ ಕಾರ್ಯಕ್ರಮ ನೀಡಿದರು.
ಕಬೀರ ಕಲಾಮಂಚದ ಈ ತರುಣರನ್ನು ಕಂಡರೆ ಪೊಲೀಸರಿಗೆ ಮಾತ್ರವಲ್ಲ ಆರೆಸ್ಸೆಸ್ ಚಡ್ಡಿಗಳಿಗೂ ನಡಕು ಶುರುವಾಗುತ್ತದೆ. ಅಂತಲೇ ಇತ್ತೀಚೆಗೆ ಎಬಿವಿಪಿ ಪುಂಡರು ಇವರ ಮೇಲೆ ಹಲ್ಲೆ ಮಾಡಿದರು. ಕೋಮುವಾದಿ ಗಳಿಂದ ಹತ್ಯೆಗೊಳಗಾದ ಅಂಧಃಶ್ರದ್ಧೆ ವಿರೋಧಿ ಹೋರಾಟಗಾರ ನರೇಂದ್ರ ದಾಭೋಲ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇತ್ತೀಚೆಗೆ ಪುಣೆಯ ‘ಫಿಲಂ ಆ್ಯಂಡ್ ಟೆಲಿವಿಷನ್ ಇನ್ಸಿಟ್ಯೂಟ್’ ನಲ್ಲಿ ಕಾರ್ಯಕ್ರಮ ಏರ್ಪಡಿಸಲಾ ಗಿತ್ತು. ಈ ಸಭೆಗೆ ಹಾಡಲು, ಮಾತಾ ಡಲು ಬಂದಿದ್ದ ಕಬೀರ ಕಲಾಮಂಚದ ಕಲಾವಿದರನ್ನು ಕಂಡು ಪಿತ್ತ ನೆತ್ತಿಗೇರಿದ ಎಬಿವಿಪಿ ಗೂಂಡಾಗಳು ಗಲಾಟೆ ಮಾಡಿ ಹಲ್ಲೆ ಮಾಡಿದರು.
ಇಂಥ ಕಬೀರ ಕಲಾ ಮಂಚ್ ಜನ್ಮತಾಳಿದ್ದು ಒಂದು ಚಾರಿತ್ರಿಕ ಹಿನ್ನೆಲೆಯಲ್ಲಿ. 1997ರ ಜುಲೈ 11ರ ಮುಂಜಾನೆ ಮುಂಬೈನ ಘಾಟ್‌ಕೊಪರ್‌ನ ರಮಾಬಾಯಿ ಕಾಲನಿಯಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಯಾರೊ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದನ್ನು ಜನ ನೋಡಿದರು. ಇದರಿಂದ ಕೆರಳಿ ಕೆಂಡವಾದ ಬಾಬಾ ಸಾಹೇಬರ ಅಭಿಮಾನಿಗಳು ಪಕ್ಕದ ರಸ್ತೆ, ಪಾರ್ಕುಗಳಲ್ಲಿ ನಿಂತಿದ್ದ ವಾಹನಗಳ ಮೇಲೆ ಕಲ್ಲೆಸೆದರು. ಪೊಲೀಸರಿಗೆ ಇದೇ ಬೇಕಾಗಿತ್ತು. ಮೀಸಲು ಪಡೆ ಪೊಲೀಸರು ಯಾವ ಮುನ್ಸೂಚನೆಯನ್ನು ಕೊಡದೆ ಕಾಲನಿಗೆ ನುಗ್ಗಿ ಗುಂಡಿನ ಮಳೆಗರೆದರು. ಈ ಗೋಲಿಬಾರ್‌ನಲ್ಲಿ ಮಕ್ಕಳು, ಮಹಿಳೆ ಯರು ಸೇರಿ 10 ಮಂದಿ ಕೊಲ್ಲಲ್ಪಟ್ಟರು.
ಈ ಗೋಲಿಬಾರ್‌ನಿಂದ ರಮಾಬಾಯಿ ಕಾಲನಿ ಜನ ತತ್ತರಿಸಿ ಹೋದರು. ಈ ಬಗ್ಗೆ ಅತ್ಯಂತ ಸಂಕಟಪಟ್ಟವರು ವಿಲಾಸ ಗೊಗ್ರೆ ಎಂಬ ಯುವ ಕವಿ ಮತ್ತು ಹಾಡುಗಾರ. ಈ ತರುಣ ಎಷ್ಟು ಆತಂಕಿತನಾಗಿದ್ದನೆಂದರೆ ನೋವನ್ನು ತಡೆಯಲಾಗದೆ ಸಮೀಪದ ಮುಳುಂದ್‌ನಲ್ಲಿ ನೇಣುಹಾಕಿಕೊಂಡು ಕೊನೆ ಯುಸಿರೆಳೆದ. ಮೂವತ್ತರೊಳಗಿನ ದಲಿತ ಯುವಕ ಈ ವಿಲಾಸ ಗೊಗ್ರೆ ಡಾ.ಅಂಬೇಡ್ಕರ್ ಜೊತೆಗೆ ಮಾರ್ಕ್ಸವಾದ ವನ್ನು ತನ್ನ ಸಿದ್ಧಾಂತವನ್ನಾಗಿ ಒಪ್ಪಿಕೊಂಡ ವನು. ಅಂತಲೆ ಸಾಯುವ ಮುನ್ನ ನೀಲಿ ಸ್ಕಾರ್ಪನ್ನು ಕೊರಳಿಗೆ ಸುತ್ತಿಕೊಂಡು ತನ್ನ ಗುಡಿಸಲಿನ ಕಪ್ಪು ಹಲಗೆಯ ಮೇಲೆ ‘‘ಅಂಬೇಡ್ಕರ್‌ವಾದಿಗಳ ಏಕತೆ ಚಿರಾಯುವಾಗಲಿ’’ ಎಂದು ಬರೆದು ಕೊರಳಿಗೆ ಹಗ್ಗ ಬಿಗಿದುಕೊಂಡಿದ್ದ.
ವಿಲಾಸಗೊಗ್ರೆ ಕಬೀರ ಕಲಾಮಂಚದ ಸೃಷ್ಟಿಕರ್ತ. ಈತನ ಹಾಡು ಮಾತುಗಳನ್ನು ತಮ್ಮ ಡಾಕ್ಯುಮೆಂಟರಿಯಲ್ಲಿ ದಾಖಲಿಸಿ ಕೊಂಡಿರುವ ಖ್ಯಾತ ಚಿತ್ರನಿರ್ದೇಶಕ ಆನಂದ ಪಟವರ್ಧನ್ ಆ ನೋವಿನ ನೆನಪುಗಳನ್ನು ‘ಜೈಭೀಮ ಕಾಮ್ರೇಡ್’ ಸಾಕ್ಷಚಿತ್ರದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿ ದ್ದಾರೆ. ವಿಲಾಸ ಸಾವಿನ ನಂತರ ಕಬೀರ ಕಲಾಮಂಚ ಸಮ್ಮನಿರಲಿಲ್ಲ. ಈ ಕಲಾ ತಂಡಕ್ಕೆ ಹೊಸ ತರುಣರು ಸೇರಿದರು. ಮಹಾರಾಷ್ಟ್ರದ ಊರೂರಿಗೆ ಹೋಗಿ ಹಾಡಿ ದರು. ಈ ಹಾಡುಗಳು ಎಷ್ಟು ಪ್ರಭಾವಿ ಆಗಿದ್ದವೆಂದರೆ ಕೊನೆಗೆ ಮಹಾರಾಷ್ಟ್ರ ಸರಕಾರ ಈ ಕಬೀರ ಕಲಾ ತಂಡವನ್ನು ನಕ್ಸಲೈಟ್ ಎಂದು ಬ್ರಾಂಡ್ ಮಾಡಿ ಕಲಾವಿದರನ್ನೆಲ್ಲ ಜೈಲಿಗೆ ತಳ್ಳಿತು.
ಆದರೆ ಕಬೀರ ಕಲಾ ಮಂಚದ ಕಲಾವಿದರು ಈ ದೌರ್ಜನ್ಯಕ್ಕೆ ಕುಗ್ಗಲಿಲ್ಲ. ತಮ್ಮ ಛಲ ಬಿಡಲಿಲ್ಲ. ಆನಂದ ಪಟವರ್ಧನ್, ಪ್ರಕಾಶ್ ಅಂಬೇಡ್ಕರ್‌ರಂಥ ಬುದ್ಧಿಜೀವಿಗಳು ಇವರ ಬೆಂಬಲಕ್ಕೆ ನಿಂತರು. ಕೆಲ ಸಮಯ ಭೂಗತರಾಗಿದ್ದ ಇವರೆಲ್ಲ ಇತ್ತೀಚೆಗೆ ಮಹಾರಾಷ್ಟ್ರ ವಿಧಾನ ಸೌಧದ ಮುಂದೆ ಪ್ರತ್ಯಕ್ಷರಾಗಿ ಬಂಧನಕ್ಕೊಳ ಗಾದರು. ಇವರನ್ನು ನಕ್ಸಲೈಟ್ ಎಂದು ಕರೆದು ಸರಕಾರ ಹಾಕಿದ ಕೇಸು ಕೋರ್ಟಿ ನಲ್ಲಿದೆ. ಜಾಮೀನಿನ ಮೇಲೆ ಬಿಡುಗಡೆ ಯಾಗಿ ಹೊರಗೆ ಬಂದಿರುವ ಇವರೀಗ ಜನಜಾಗೃತಿ ಗಾಗಿ ಇಡೀ ದೇಶವನ್ನು ಸುತ್ತುತ್ತಿದ್ದಾರೆ.
ಈ ಕಬೀರ ಕಲಾಮಂಚದಲ್ಲಿ ಶೀತಲ ಸಾಠೆ ಎಂಬ ಯುವತಿಯ ಹಾಡುಗಳನ್ನು ಕೇಳಲು ಮಹಾರಾಷ್ಟ್ರದಲ್ಲಿ ಜನ ಜೇನ್ನೊಣಗಳಂತೆ ಮುತ್ತುತ್ತಾರೆ. ಆಗಾಗ ಗದ್ದರ್ ನೆನಪು ತರುವ ಈ ಯುವತಿಯ ಜೊತೆ ಸಾಗರ್ ಮತ್ತು ಸಚಿನ್ ಎಂಬ ಕಲಾವಿದರು ದನಿಗೂಡಿಸುತ್ತಾರೆ. ಇವರಿಗೆಲ್ಲ ಹಾಡುವ ಮಾತ್ರವಲ್ಲ ಸೈದ್ಧಾಂತಿಕ ತರಬೇತಿ ನೀಡಿದ ಸಂಭಾಜಿ ಭಗತ್ ಮಹಾರಾಷ್ಟ್ರದ ದಮನಿತ ವರ್ಗಗಳಲ್ಲಿ ಮನೆ ಮಾತಾಗಿದ್ದಾರೆ. ಹಾಗೆಂದು ಕಬೀರ ಕಲಾವಿದರು ಬರೀ ಒಂದು ಸಂಘಟನೆಗೆ ತಮ್ಮನ್ನು ಕಟ್ಟಿಹಾಕಿಕೊಂಡಿಲ್ಲ. ಅಂಬೇಡ್ಕರ್, ಮಾರ್ಕ್ಸ್, ಫುಲೆ ಹೀಗೆ ಎಲ್ಲ ವಿಚಾರಧಾರೆಯ ವರಿಗೂ ಇದು ಸಾಮಾನ್ಯ ವೇದಿಕೆಯಾಗಿದೆ.
ಈ ಕಬೀರ ಕಲಾ ಮಂಚದ ಪ್ರಮುಖ ಕಾರ್ಯಕರ್ತ ದೀಪಕ್ ಡಾಂಗ್ಲೆಯನ್ನು 2011 ರಲ್ಲಿ ಮಹಾರಾಷ್ಟ್ರದ ಭಯೋ ತ್ಪಾದನ ವಿರೋಧಿ ಸ್ಕ್ವಾಡ್ (ಎಟಿಎಸ್) ನಕ್ಸಲೈಟ್ ಎಂದು ಬಂಧಿಸಿತು. ಆಗಿನಿಂದ ಇಡೀ ಕಬೀರ ಕಲಾ ಮಂಚ್ ಭೂಗತ ವಾಗಿತ್ತು. ಬಂಧಿಸಲ್ಪಟ್ಟಿದ್ದ ದೀಪಕ್ ಡಾಂಗ್ಲೆಗೆ ಚಿತ್ರಹಿಂಸೆ ನೀಡಿದ ಪೊಲೀಸರು ಮಾವೊವಾದಿಗಳ ಸಭೆಯಲ್ಲಿ ತಾನು ಪಾಲ್ಗೊಂಡಿದ್ದಾಗಿ ಆತನಿಂದ ಬಲವಂತದ ಹೇಳಿಕೆ ಪಡೆದರು. ಆದರೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಗೆ ಬಂದ ಡಾಂಗ್ಲೆ ತನಗೆ ಪೊಲೀಸರು ಚಿತ್ರಹಿಂಸೆ ನೀಡಿ ಹೇಳಿಕೆ ಪಡೆದ ಸತ್ಯವನ್ನು ಬಹಿರಂಗ ಪಡಿಸಿದರು.
ಈ ನಡುವೆ 2012ರಲ್ಲಿ ಕಬೀರ ಕಲಾ ಮಂಚ್ ರಕ್ಷಣಾ ಸಮಿತಿ ಉದಯ ವಾಯಿತು. ಡಾ.ಅಂಬೇಡ್ಕರ್‌ರ ಮೊಮ್ಮಗ ಪ್ರಕಾಶ ಅಂಬೇಡ್ಕರ್, ಮೇಧಾಪಾಟ್ಕರ್, ಸಿಪಿಐ ನಾಯಕರು ಕಟ್ಟಿದ ಈ ನಾಗರಿಕ ಹಕ್ಕು ಸಂಘಟನೆಯಲ್ಲಿ ಹಲವಾರು ವಕೀಲರು, ಸಾಹಿತಿಗಳು, ಪತ್ರಕರ್ತರು ಸೇರಿದರು. ಈ ಸಂಘಟನೆಯ ನಿರಂತರ ಹೋರಾಟದ ಫಲವಾಗಿ ಕಬೀರ ಕಲಾ ಮಂಚ್ ಈಗ ಉಸಿರಾಡುತ್ತಿದೆ. ಈ ತಂಡದ ಕಲಾವಿದರು ವಿಧಾನಸೌಧದ ಮುಂದೆ ಸತ್ಯಾಗ್ರಹ ನಡೆಸಿ (ಸರಂಡರ್ ಸಲ್ಲ) ಬಂಧನಕ್ಕೊಳಗಾದರು.
ಈ ನಡುವೆ ಈ ಕಬೀರ ಕಲಾ ತಂಡ ಸೇರಿದಂತೆ ಮಹಾರಾಷ್ಟ್ರ ಮಾತ್ರವಲ್ಲ, ಭಾರತದ ದಲಿತ ಹೋರಾಟದ ಚರಿತ್ರೆಯನ್ನು ತಮ್ಮ ‘ಜೈಭೀಮ ಕಾಮ್ರೇಡ್’ ಡಾಕ್ಯುಮೆಂಟರಿಯಲ್ಲಿ ಕಟ್ಟಿಕೊಟ್ಟಿರುವ ಆನಂದ ಪಟವರ್ಧನ್‌ರಿಗೆ ಈ ಚಿತ್ರಕ್ಕಾಗಿ ರಾಷ್ಟ್ರೀಯ ಸಿನೆಮಾ ಪ್ರಶಸ್ತಿ ಬಂತು. ನಂತರ ಮಹಾರಾಷ್ಟ್ರ ಸರಕಾರವೂ ಇನ್ನೊಂದು ಪ್ರಶಸ್ತಿ ನೀಡಿತು. ಒಂದೆಡೆ ಪ್ರಶಸ್ತಿ ನೀಡಿದ ಸರಕಾರವೇ ಈ ಕಲಾವಿದರನ್ನು ನಕ್ಸಲೈಟ್ ಎಂದು ಬ್ರಾಂಡ್ ಮಾಡಿ ಜೈಲಿಗೆ ಹಾಕಿತು.
ಪ್ರಜಾಪ್ರಭುತ್ವದ ಆರೋಗ್ಯಕ್ಕಾಗಿ ಕಬೀರ ಕಲಾ ಮಂಚ್‌ದಂಥ ಸಾಂಸ್ಕೃತಿಕ ತಂಡಗಳು ಇರಲೇಬೇಕು. ಗದ್ದರ್, ಶೀತಲ ಸಾಠೆ, ಸಂಭಾಜಿ ಭಗತ್, ಸಾಗರರಂಥವರು ಹಾಡು ತ್ತಲೇ ಇರಬೇಕು. ಇಂಥವರ ಹಾಡುಗಳು, ಜನತಂತ್ರವನ್ನು ಜೀವಂತವಾಗಿ ಇಡುತ್ತವೆ. ಈಗಾಗಲೇ ಕಾರ್ಪೊರೇಟ್ ಕಂಪೆನಿಗಳು ನುಂಗಿ ಜೀರ್ಣಿಸಿಕೊಳ್ಳಲು ಹೊರಟಿರುವ ‘ಪ್ರಜಾ ಪ್ರಭುತ್ವ’ ಉಳಿವಿಗಾಗಿ ಈ ಕ್ರಾಂತಿದನಿಗಳನ್ನು ನಾವು ಕೇಳಲೇಬೇಕಾಗಿದೆ. Varthabharati
0 comments:
Post a Comment