ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಯಾಗಬೇಕು ಎಂದರೆ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮೊದಲು ಆತ್ಮವಿಶ್ವಾಸ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಹೇಳಿದರು.
ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗಾಗಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಜಿಲ್ಲೆಯ ಪ್ರೌಢಶಾಲೆಗಳ ವಿಜ್ಞಾನ, ಗಣಿತ ಮತ್ತು ಇಂಗ್ಲೀಷ್ ವಿಷಯಗಳ ಸಹ ಶಿಕ್ಷಕರಿಗೆ ಏರ್ಪಡಿಸಲಾಗಿದ್ದ ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
೨೦೧೩ ರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆ ಶೇ. ೮೧. ೯೩ ರಷ್ಟು ಸಾಧನೆ ಮಾಡಿ, ರಾಜ್ಯದಲ್ಲಿ ೧೬ ನೇ ಸ್ಥಾನದಲ್ಲಿದೆ. ೨೦೧೨ ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂ
ಶದಲ್ಲಿ ೨೬ನೇ ಸ್ಥಾನದಲ್ಲಿದ್ದ ಕೊಪ್ಪಳ ಜಿಲ್ಲೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಶ್ರಮದ ಫಲವಾಗಿ ೧೬ನೇ ಸ್ಥಾನಕ್ಕೇರಿದೆ. ಶಿಕ್ಷಕರು ಇನ್ನಷ್ಟು ಶ್ರಮ ವಹಿಸಿದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ಹೆಚ್ಚಿಸಬೇಕು, ಗುಣಮಟ್ಟದ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪಾಲಕರು ಹೆಚ್ಚಿನ ಶ್ರಮ ವಹಿಸುವ ಅಗತ್ಯವಿದೆ. ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳು ಹೊಂದಿರುವ ಭಯದ ಮನೋಭಾವನೆಯನ್ನು ನಿವಾರಿಸಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕಾದ ಅಗತ್ಯವಿದೆ. ಫಲಿತಾಂಶ ಸುಧಾರಣೆಗೆ ವಿದ್ಯಾರ್ಥಿಗಳ ಜೊತೆಗೆ ಪಾಲಕರ ಜವಾಬ್ದಾರಿಯೂ ಇದ್ದು, ವರ್ಷದಲ್ಲಿ ಕನಿಷ್ಟ ಎರಡು ಬಾರಿಯಾದರೂ ಶಿಕ್ಷಕರು ಪಾಲಕರ ಸಭೆ ನಡೆಸಿ, ಅವರ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಬೇಕು. ಶಿಕ್ಷಕರು ಮಕ್ಕಳಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತಹ ಮನೋಭಾವ ಮೂಡಿಸಬೇಕು. ಬಿಸಿಯೂಟ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಶಿಕ್ಷಕರ ಮೇಲೆ ಹೊರಿಸಿರುವುದರಿಂದ ಸ್ವಲ್ಪ ಮಟ್ಟಿಗೆ ಶಿಕ್ಷಕರಿಗೆ ತೊಂದರೆಯಾಗಿರುವುದು ನಿಜ. ಆದರೆ ದೃಢಸಂಕಲ್ಪ ಹಾಗೂ ಶ್ರಮದಿಂದ ಫಲಿತಾಂಶದ ಗುಣಮಟ್ಟ ಉತ್ತಮಗೊಳಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಅವರು ಮಾತನಾಡಿ, ೨೦೧೨ ರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ೧೬ನೇ ಸ್ಥಾನ ಪಡೆದುಕೊಂಡಿದೆ, ೨೦೧೨ ರಲ್ಲಿ ಜಿಲ್ಲೆ ೨೬ನೇ ಸ್ಥಾನದಲ್ಲಿತ್ತು. ೨೦೧೧ ರಲ್ಲಿ ೨೦ನೇ ಸ್ಥಾನದಲ್ಲಿತ್ತು. ಜಿಲ್ಲೆಯ ೧೧೫ ಸರ್ಕಾರಿ, ೧೯- ಅನುದಾನಿತ ಮತ್ತು ೬೨- ಅನುದಾನರಹಿತ ಶಾಲೆಗಳಲ್ಲಿ ಶೇ. ೮೦ ಕ್ಕೂ ಹೆಚ್ಚು ಫಲಿತಾಂಶ ಬಂದಿದೆ. ೨೦೧೩ರ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಯಾವುದೇ ಶಾಲೆಯಲ್ಲಿ ಶೂನ್ಯ ಫಲಿತಾಂಶ ಬಂದಿಲ್ಲ. ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನೂ ಉತ್ತಮ ಸಾಧನೆ ತೋರಬೇಕಿದೆ. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಕೊಪ್ಪಳ ಜಿಲ್ಲೆಯ ಇಂಡಿಯಾ ಎಜುಕೇಷನ್ ಟ್ರಸ್ಟ್ ಮತ್ತು ಸಿಂಡಿಯಾ ಸ್ಟೀಲ್ಸ್ ಲಿಮಿಟೆಡ್ ನವರು ಉತ್ತಮ ಸಹಕಾರ ನೀಡುತ್ತಿದ್ದು, ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಜಿಲ್ಲೆಯಲ್ಲಿ ಶಿಕ್ಷಕರಿಗಾಗಿ ಕಾರ್ಯಾಗಾರ ಹಮ್ಮಿಕೊಳ್ಳಲು ಸಹಕಾರ ನೀಡಿದ್ದಾರೆ. ಇಂಗ್ಲೀಷ್, ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಮಕ್ಕಳು ಸುಲಭವಾಗಿ ಗ್ರಹಿಕೆ ಮಾಡಿಕೊಳ್ಳುವಂತೆ ಬೋಧನೆ ಮಾಡುವ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಲು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಬೆಳಗಾವಿ ಮುಂತಾದ ಜಿಲ್ಲೆಗಳಿಂದ ವಿಷಯಾಧಾರಿತ ಸಂಪನ್ಮೂಲ ವ್ಯಕ್ತಿಗಳನ್ನು ಕಾರ್ಯಾಗಾರಕ್ಕಾಗಿ ಕರೆಯಿಸಲಾಗಿದೆ. ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಎಲ್ಲ ಅಧಿಕಾರಿಗಳ ಸಹಕಾರ ಅಗತ್ಯವಾಗಿದ್ದು, ಇಂತಹ ಮಹತ್ವಪೂರ್ಣ ಕಾರ್ಯಾಗಾರಕ್ಕೆ ಯಲಬುರ್ಗಾ, ಕುಷ್ಟಗಿ ಮತ್ತು ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗೈರು ಹಾಜರಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.
ಸಿಂಡಿಯಾ ಸ್ಟೀಲ್ಸ್ ಲಿಮಿಟೆಡ್‌ನ ಉಪಾಧ್ಯಕ್ಷ ಅನುರಾಗ ತ್ಯಾಗಿ ಅವರು ಮಾತನಾಡಿ, ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಯಾವುದೇ ಸಹಕಾರವಾದರೂ ನೀಡಲು ತಮ್ಮ ಟ್ರಸ್ಟ್ ಹಾಗೂ ಕಂಪನಿ ಸಿದ್ಧವಿದೆ ಎಂದರು. ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ್ ಕುಳಗಿ, ಸಿಂಡಿಯಾ ಸ್ಟೀಲ್ಸ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಸೋಮಶೇಖರ ಬಾವಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವರಾಜಯ್ಯ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳ ವಿಜ್ಞಾನ, ಇಂಗ್ಲೀಷ್ ಮತ್ತು ಗಣಿತ ವಿಷಯಗಳ ಸಹ ಶಿಕ್ಷಕರು ಪಾಲ್ಗೊಂಡಿದ್ದರು. ಎನ್.ಹೆಚ್. ಪಾಟೀಲ್ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
0 comments:
Post a Comment