PLEASE LOGIN TO KANNADANET.COM FOR REGULAR NEWS-UPDATES

 ವಾರ್ತಾಭಾರತಿ ಸಂಪಾದಕೀಯ

ರಾಜಕೀಯ ಅಂದ ಮೇಲೆ ಹೊಂದಾಣಿಕೆ ಸಹಜವಾದುದು. ಈ ಮೈತ್ರಿ ಕೂಟದ ಯುಗದಲ್ಲಿ ಯಾವ ಪಕ್ಷದೊಂದಿಗೂ ಹೊಂದಾಣಿಕೆಯಿಲ್ಲದೆ ತಾನು ಚುನಾವಣೆಯನ್ನು ಗೆಲ್ಲುತ್ತೇನೆ ಎಂದು ಹೊರಡುವುದು, ಪರೋಕ್ಷವಾಗಿ ಆತ್ಮಹತ್ಯಾ ರಾಜಕಾರಣವೇ ಆದೀತು. ಕಳೆದ ಚುನಾವಣೆಯಲ್ಲಿ ಬಿಜೆಪಿ ಆ ದಾರಿಯಲ್ಲಿ ಹೊರಟು ಆತ್ಮಹತ್ಯೆಯನ್ನು ಮಾಡಿಕೊಂಡಿತು. ಕನಿಷ್ಠ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಿದ್ದರೂ, ಎರಡೂ ಪಕ್ಷಗಳು ಹೀನಾಯಸೋಲು ಅನುಭವಿಸಬೇಕಾಗಿ ಇರುತ್ತಿರಲಿಲ್ಲ. ಕೆಜೆಪಿಯ ದೆಸೆಯಿಂದಾಗಿ ಬಿಜೆಪಿಯ ಸ್ಥಿತಿ ಹೀನಾಯವಾಗಿದೆ. ರಾಷ್ಟ್ರಮಟ್ಟದ ಪಕ್ಷವಾದರೂ ಯಾವುದಾದರೊಂದು ಪ್ರಾದೇಶಿಕ ಪಕ್ಷದ ನೆರವಿಲ್ಲದೆ ಮುಂದೆ ಚಲಿಸುವುದು ಕಷ್ಟ ಎನ್ನುವಂತಹ ಪರಿಸ್ಥಿತಿ ಅದರದ್ದಾಗಿದೆ. ಕೆಜೆಪಿ ಯೊಂದಿಗೆ ಕೈಜೋಡಿಸಿದರೆ, ಪರೋಕ್ಷವಾಗಿ ಯಡಿಯೂರಪ್ಪನವರಿಗೆ ತಲೆಬಾಗಿದಂತೆ. ಇದು ವರಿಷ್ಠರಿಗೆ ಇಷ್ಟವಾಗುವ ವಿಷಯವಲ್ಲ. ಉಳಿದಿರುವುದು ಜೆಡಿಎಸ್ ಜೊತೆಗೆ ಕೈ ಜೋಡಿಸುವುದಷ್ಟೇ.
ಈ ಹಿಂದೆ ಜೆಡಿಎಸ್‌ನ ನೆರವಿನಿಂದಲೇ ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚನೆಯಾಯಿತು. ಆದುದರಿಂದ ಜೆಡಿಎಸ್‌ಗೂ ಬಿಜೆಪಿ ತೀರಾ ಅಸ್ಪೃಶ್ಯವಲ್ಲ. ಈಗಾಗಲೇ ಜೆಡಿಎಸ್‌ನ ಜಾತ್ಯಾತೀತತೆಯ ಶೀಲವನ್ನು ಬಿಜೆಪಿ ಹರಿದಿದೆ. ಆದುದರಿಂದ, ಮತ್ತೆ ಅದರ ಜೊತೆ ಸೇರುವುದರಲ್ಲಿ ಜೆಡಿಎಸ್‌ಗೆ ದೊಡ್ಡ ಸಂಕೋಚವೇನೂ ಇಲ್ಲ. ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಅದನ್ನು ಸಾಬೀತು ಪಡಿಸಿದೆ.ಅಧಿಕಾರ ಹಿಡಿಯುವುದಕ್ಕೆ ಎಂತಹ ರಾಜಕೀಯವನ್ನು ನಡೆಸಲೂ ತಾನು ಸಿದ್ಧ ಎನ್ನುವುದನ್ನು ತೋರಿಸಿಕೊಟ್ಟ ಜೆಡಿಎಸ್ ಕುರಿತಂತೆ ಜನರಿಗೆ ದೊಡ್ಡ ನಿರೀಕ್ಷೆಗಳೂ ಇಲ್ಲ. ಆದುದರಿಂದ, ಬಿಜೆಪಿಯೊಂದಿಗಿನ ಅದರ ಮೈತ್ರಿಯಿಂದ ನಾಡಿನ ಜನತೆಗೆ ಆಘಾತವೇನೂ ಆಗಿಲ್ಲ.
ಆದರೆ ಆಘಾತವಾಗಿರುವುದು ಮಾಜಿ ಪ್ರಧಾನಿ ದೇವೇಗೌಡರ ಮಾತಿನಿಂದ. ಜೆಡಿಎಸ್ ನೊಂದಿಗೆ ಮೈತ್ರಿ ನಡೆಸಿ ಬಿಜೆಪಿ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳನ್ನೂ ಹಿಂದೆಗೆದುಕೊಂಡಿರುವಾಗ, ಇತ್ತ ದೇವೇಗೌಡರು ತನ್ನ ಹಳೆಯ ತಂತ್ರದ ಮಾತುಗಳನ್ನು ಮತ್ತೆ ಜನರ ಮುಂದಿಟ್ಟಿದ್ದಾರೆ. ‘‘ಬಿಜೆಪಿಯೊಂದಿಗೆ ಮೈತ್ರಿ ಮಾಡಿರುವುದು ನನಗೆ ಗೊತ್ತಿಲ್ಲ...ನಾನು ಬಿಜೆಪಿಯ ಮುಖಂಡನ ಮನೆಗೆ ಹೋಗಿರುವುದು ಬೇರೆ ಕಾರಣಕ್ಕೆ’’ ಎಂಬಿತ್ಯಾದಿ ಅಣಿಮುತ್ತುಗಳನ್ನು ಮಾಧ್ಯಮಗಳಲ್ಲಿ ಉದುರಿಸುತ್ತಿದ್ದಾರೆ.
ಜನಸಾಮಾನ್ಯರನ್ನು ದೇವೇಗೌಡರು ‘ಶತಮೂರ್ಖರು’ ಎಂದು ಭಾವಿಸಿದ್ದಾರೆಯೇ ಎನ್ನುವ ಕಾರಣಕ್ಕೆ ಜನರು ಆಘಾತಗೊಂಡಿದ್ದಾರೆ. ಈ ನಾಡಿನ ಜನರ ಕುರಿತಂತೆ ಒಂದಿಷ್ಟು ಗೌರವ ಇದ್ದರೂ, ಗೌಡರು ಇಂತಹ ಹೇಳಿಕೆ ನೀಡುವ ಧೈರ್ಯ ಮಾಡುತ್ತಿರಲಿಲ್ಲ. ಈ ಹಿಂದೊಮ್ಮೆ, ಬಿಜೆಪಿಯ ಬೆಂಬಲದಿಂದ ಮಗನನ್ನು ಮುಖ್ಯಮಂತ್ರಿ ಮಾಡಿದಾಗಲೂ ಇದೇ ಹೇಳಿಕೆಯನ್ನು ನೀಡಿ ದ್ದರು. ಮಗ ಪಕ್ಷವನ್ನು ಒಡೆದು ಬಿಜೆಪಿಯೊಂದಿಗೆ ಸೇರಿ ಮುಖ್ಯಮಂತ್ರಿಯಾಗಿದ್ದಾನೆ. ಇದರಲ್ಲಿ ತನ್ನ ಪಾಲೇನೂ ಇಲ್ಲ ಎಂದು ಮಾಧ್ಯಮಗಳಲ್ಲಿ ಕಣ್ಣೀರಿಟ್ಟರು.
ಆದರೆ ದೇವೇಗೌಡರೇ ಈ ತಂತ್ರವನ್ನು ಹೂಡಿ, ಮಗನನ್ನು ಮುಖ್ಯಮಂತ್ರಿ ಮಾಡಿರುವುದು ಬಳಿಕ ಬಯಲಾಯಿತು. ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಕೂಡಲೇ ಮತ್ತೆ ಮಗನನ್ನು ಪಕ್ಷದೊಳಗೆ ಸೇರಿಸಿಕೊಂಡು, ಚುಕ್ಕಾಣಿಯನ್ನು ಕೈಗಿತ್ತರು. ಇದೀಗ, ಲೋಕಸಭಾ ಉಪಚುನಾವಣೆಯ ಸಂದರ್ಭದಲ್ಲೂ ಅದೇ ರೀತಿಯ ಕಪಟ ನಾಟಕ ವನ್ನು ದೇವೇಗೌಡರು ಆಡುತ್ತಿದ್ದಾರೆ. ಮಗ ಬಿಜೆಪಿಯೊಂದಿಗೆ ಕೈ ಜೋಡಿಸಿದರೆ, ಇತ್ತ ಅಪ್ಪ ‘‘ನನಗೆ ಆ ಬಗ್ಗೆ ಏನೇನೂ ಗೊತ್ತಿಲ್ಲ’’ ಎನ್ನುತ್ತಿದ್ದಾರೆ.
ಹಾಗೆ ಹೇಳಿದಾಕ್ಷಣ ಈ ನಾಡಿನ ಜನರು ತನ್ನ ಮಾತನ್ನು ನಂಬಿ ಬಿಡುತ್ತಾರೆ ಎನ್ನುವ ಅವರ ಆತ್ಮವಿಶ್ವಾಸವಿದೆಯಲ್ಲ, ಅದು ನಿಜಕ್ಕೂ ಅಪಾಯಕಾರಿ ಮತ್ತು ಆಘಾತಕಾರಿ. ಬಿಜೆಪಿಯೊಂದಿಗೆ ಮೈತ್ರಿ ಬೇಕು, ಆದರೆ ಸಂಬಂಧ ಬೇಡ ಎನ್ನುವುದು ವೇಶ್ಯಾವಾಟಿಕೆ ರಾಜಕಾರಣವಾಗುತ್ತದೆ. ಒಬ್ಬನೊಂದಿಗೆ ದೈಹಿಕ ಸುಖ ಬೇಕು ಆದರೆ ಆತನೊಂದಿಗೆ ಕೌಟುಂಬಿಕ ಸಂಬಂಧ ಬೇಡ ಎಂಬಂತಹ ರಾಜಕಾರಣವನ್ನು ದೇವೇಗೌಡರು ಸದ್ಯಕ್ಕೆ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆಯ ಒಂದು ಗೆಲುವಿಗಾಗಿ ಬಿಜೆಪಿಯೊಂದಿಗೆ ದೇಹ ಹಂಚಿಕೊಳ್ಳಲು ಜೆಡಿಎಸ್ ಸಿದ್ಧವಾಗಿದೆ.
ಆದರೆ ಅವರ ಜೊತೆಗೆ ಮೈತ್ರಿಯನ್ನು ಮಾಡಿಕೊಂಡಿದ್ದೇನೆ ಎಂದು ಹೇಳಲು ಮಾತ್ರ ಜೆಡಿಎಸ್ ಸಿದ್ಧವಾಗಿಲ್ಲ. ಮೈತ್ರಿ ಮಾಡಿಕೊಳ್ಳುವುದಕ್ಕಿಂತಲೂ ಹೆಚ್ಚು ಅಪಾಯಕಾರಿಯಾದುದು, ಈ ಗೋಸುಂಬೆತನ. ಜೆಡಿಎಸ್ ಕೋಮುವಾದಿ ಪಕ್ಷವಾದರೂ ಪರವಾಗಿಲ್ಲ, ಈ ತರದ ಕಪಟ ಜಾತ್ಯತೀತವಾದಿಯಾಗಿರುವುದು ಮಾತ್ರ ತೀರಾ ಅಸಹ್ಯವಾಗಿದೆ. ಒಂದು ಕಾಲದಲ್ಲಿ ಜಾತ್ಯತೀತತೆಯ ಹೆಸರಲ್ಲಿ, ತೃತೀಯ ಶಕ್ತಿಯಾಗಿ ದೇಶದ ಪ್ರಧಾನಿಯಾದವರು ದೇವೇಗೌಡರು.
ನಿಜಕ್ಕೂ ಬಿಜೆಪಿಯೊಂದಿಗೆ ಮೈತ್ರಿ ಇಷ್ಟವಿಲ್ಲದಿದ್ದರೆ, ಮಗನನ್ನು ಪಕ್ಷದಿಂದ ದೂರವಿಡುವುದು ಲೇಸು. ಅಥವಾ, ಮಗ ತನ್ನ ಮಾತು ಕೇಳುವುದಿಲ್ಲ ಎನ್ನುವುದು ಅವರಿಗೆ ಸ್ಪಷ್ಟವಾದರೆ, ಅವರೇ ಪಕ್ಷದಿಂದ ದೂರವಿದ್ದರೂ ಸಾಕು. ಅದು ಬಿಟ್ಟು ಆತ್ಮವಂಚನೆಯ ಮಾತುಗಳು ಅವರ ಘನತೆಗೆ, ವರ್ಚಸ್ಸಿಗೆ ಒಪ್ಪುವಂಥದ್ದಲ್ಲ. ರಾಷ್ಟ್ರೀಯ ಪಕ್ಷವಾಗಿಯೂ ಲೋಕಸಭಾ ಉಪಚುನಾವಣೆಯಿಂದ ದೂರ ನಿಲ್ಲುವ ಪರಿಸ್ಥಿತಿ ಬಿಜೆಪಿಗೆ ನಿರ್ಮಾಣವಾಗಿರುವುದು ಅದರ ಇನ್ನಷ್ಟು ಅಧಃಪತನವನ್ನು ಸೂಚಿಸಿದೆ. ಈ ಚುನಾವಣೆಯಲ್ಲಿ ಗೆಲ್ಲುವ ಯಾವ ದಾರಿಯೂ ಇಲ್ಲದೆ ಇರುವ ಕಾರಣದಿಂದಲೇ, ಬೇಷರತ್ ತನ್ನ ಅಭ್ಯರ್ಥಿಯನ್ನು ಬಿಜೆಪಿ ಹಿಂದೆಗೆದು ಕೊಂಡಿದೆ.
ಹಾಗೆಯೇ ವಿಧಾನಪರಿಷತ್ ಸ್ಥಾನವನ್ನು ಜೆಡಿಎಸ್ ಮೂಲಕ ತನ್ನ ಬಗಲಿಗೆ ಹಾಕಿಕೊಳ್ಳುವ ಯೋಚನೆ ಮಾಡಿದೆ. ಅದೇನೇ ಇರಲಿ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಾಗದೆ ಇರುವ ಅಸಹಾಯಕತೆ, ಪರೋಕ್ಷವಾಗಿ ಕಾಂಗ್ರೆಸ್ ಮತ್ತು ಯಡಿಯೂರಪ್ಪನವರ ಗೆಲುವು ಎನ್ನುವುದರಲ್ಲಿ ಅಡ್ಡಿಯಿಲ್ಲ. ಇದೀಗ ಬಿಜೆಪಿಯ ಜೊತೆಗಿನ ಮೈತ್ರಿಯ ಬಳಿಕವೂ ಜೆಡಿಎಸ್ ಅಭ್ಯರ್ಥಿ ಗೆಲ್ಲದೆ ಇದ್ದಲ್ಲಿ ಜೆಡಿಎಸ್ ಭಾರೀ ಮುಖಭಂಗವನ್ನನುಭವಿಸಬೇಕಾಗುತ್ತದೆ ಮತ್ತು ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅದು ಪರಿಣಾಮವನ್ನು ಬೀರಿಯೇ ಬೀರುತ್ತದೆ.
ಒಟ್ಟಿನಲ್ಲಿ ಜೆಡಿಎಸ್‌ನದು ಮಾಡು-ಮಡಿ ಹೋರಾಟ. ಸಿದ್ದರಾಮಯ್ಯ ನವರ ಮುಂದೆ ತಲೆಬಾಗಿಸದೆ ಇರಬೇಕಾದರೆ ಜೆಡಿಎಸ್ ಗೆಲ್ಲಲೇ ಬೇಕು.ಒಟ್ಚಿನಲ್ಲಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಹಿಂದಕ್ಕೆ ಸರಿಯುವ ಮೂಲಕ ನೇರ ಸ್ಫರ್ಧೆ ಎದುರಾಗಿದೆ. ಮತ್ತು ಉಭಯ ಪಕ್ಷಗಳಿಗೂ ಪ್ರತಿಷ್ಠೆಯ ಚುನಾವಣೆಯಾಗಿ ಪರಿಣಮಿಸಿದೆ. 

Advertisement

0 comments:

Post a Comment

 
Top