ಜಿ.ಆರ್. ಗ್ರೂಪ್ ಕಂಪನಿಯ ಪರ್ಚೇಸ್ ಮ್ಯಾನೇಜರ್ ಎಂಬುದಾಗಿ ಸುಳ್ಳು ಹೇಳಿಕೊಂಡು, ಸಾರ್ವಜನಿಕರಿಗೆ ಲಕ್ಷಾಂತರ ರೂ. ವಂಚನೆ ಮಾಡಿದ ಆರೋಪಿ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರಿನ ಹುಸೇನ್ ಅಲಿಯಾಸ್ ರಾಹಿಲ್(೩೨) ತಂದೆ ಮಹಮ್ಮದ್ ಹುಸೇನ್ ಎಂಬಾತನನ್ನು ಕೊಪ್ಪಳ ಗ್ರಾಮೀಣ ಪೊಲೀಸರು ಬಂಧಿಸಿ, ೧. ೩೭ ಲಕ್ಷ ರೂ. ನಗದು ಸೇರಿದಂತೆ ಸುಮಾರು ೧೦ ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು, ಫರ್ನಿಚರ್ ಇನ್ನಿತರೆ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೊಪ್ಪಳ ತಾಲೂಕಿನ ಹೊಸನಿಂಗಾಪುರ ಹಾಗೂ ಮುನಿರಾಬಾದ್ ಗ್ರಾಮದಲ್ಲಿ ಫತೇಖಾನ ಎಂಬುವವರ ಮನೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದ ಮೊಳಕಾಲ್ಮೂರಿನ ಬಾಗ್ಯಜೋತಿನಗರದ ನಿವಾಸಿ ಹುಸೇನ್ @ ರಾಹಿಲ್ ತಂದೆ ಮಹಮ್ಮದ್ ಹುಸೇನ (೩೨) ಎಂಬ ಆರೋಪಿಯು ಜಿ.ಆರ್. ಗ್ರೂಪ ಎಂಬ ನಕಲಿ ಕಂಪನಿ ಮಾಡಿಕೊಂಡು ತಾನು ಜಿ.ಆರ್.ಗ್ರೂಪ ಕಂಪನಿಯ ಪರ್ಚೆಸ್ ಮ್ಯಾನೇಜರ್ ಎಂದು ಸುಳ್ಳು ಹೇಳಿಕೊಂಡು, ನಮ್ಮ ಕಂಪನಿಗೆ ೫ ಸಾವಿರ ಮನೆಗಳು ಜಿಲ್ಲೆಯಲ್ಲಿ ಕಟ್ಟಲು ಕನ್‌ಸ್ಟ್ರಕ್ಷನ್ ಕೆಲಸ ಸಿಕ್ಕಿದ್ದು, ಉಸುಕು, ಕಂಕರ್ ಬೇಕಾಗಿದೆ ಹಾಗೂ ಎಲೆಕ್ಟ್ರಿಕಲ್, ಸೆಕ್ಯೂರಿಟಿ ವರ್ಕ್ ಕಾಂಟ್ರಾಕ್ಟರ್ ಬೇಕಾಗಿದ್ದಾರೆ. ನಮ್ಮ ಕಂಪನಿಯಿಂದ ಕಾಂಟ್ರಾಕ್ಟರ್ ಕೊಡಿಸುತ್ತೇನೆ ಎಂದು ಹೇಳಿಕೊಂಡು ವೆಂಡರ್ ಶುಲ್ಕ, ಅಪಾರ್ಟಮೆಂಟ ಶುಲ್ಕ, ಇನ್ನಿತರೆ ಶುಲ್ಕ ಪಾವತಿಸಬೇಕಿದೆ ಎಂದು ಹೇಳಿಕೊಂಡು ಹಲವರಿಂದ ಲಕ್ಷಾಂತರ ರೂ.ಗಳನ್ನು ಪಡೆದುಕೊಂಡಿದ್ದನು. ಇದಲ್ಲದೆ ತನ್ನ ಆಫೀಸಿಗೆ ಹೊಸಪೇಟೆ ಮತ್ತು ಕೊಪ್ಪಳದಿಂದ ಪರ್ನಿಚರ್‍ಸ್, ಲ್ಯಾಪಟ್ಯಾಪ್, ಪ್ರೀಜ್, ಟಿ.ವಿ. ಮುಂತಾದ ವಸ್ತುಗಳನ್ನು ಅಂಗಡಿ ಮಾಲಿಕರಿಗೆ ಕಂಪನಿಯಿಂದ ಚೆಕ್ ಬಂದ ನಂತರ ಹಣ ಕೊಡುತ್ತೇನೆ ಎಂದು ಹೇಳಿ ನಂಬಿಸಿ, ಪಡೆದಿದ್ದನು. ನಂತರ ಇವೆಲ್ಲ್ಲಾ ವಸ್ತುಗಳನ್ನು ರಾತ್ರೋ ರಾತ್ರಿ ಸಾಗಿಸಿ, ಕಾಣೆಯಾದ ನಂತರವೇ, ಈತನದು ನಕಲಿ ಕಂಪನಿ ಎಂಬುದು ಗೊತ್ತಾಗಿದೆ. ಈ ಕುರಿತಂತೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ವಂಚನೆಯ ದೂರು ದಾಖಲಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಹುಲಿಗಿಯ ಲಾಡ್ಜ್ ಒಂದರಲ್ಲಿ ತಂಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ ೧. ೩೭ ಲಕ್ಷ ರೂ. ನಗದು ಸೇರಿದಂತೆ ಸುಮಾರು ೧೦ ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು, ಫರ್ನಿಚರ್ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಎಸ್‌ಪಿ ಮಂಜುನಾಥ ಅಣ್ಣಿಗೇರಿ, ಡಿವೈಎಸ್‌ಪಿ ಬಸವರಾಜ ಬಾವಲತ್ತಿ ಇವರ ಮಾರ್ಗದರ್ಶನದಲ್ಲಿ ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ವೆಂಕಟಪ್ಪ ನಾಯಕ, ಮುನಿರಾಬಾದ್ ಪಿಎಸ್‌ಐ ವಿಶ್ವನಾಥ ಕೆ. ಹಿರೇಗೌಡರ ಇವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಇನಾಯತ್, ಖಾಜಾಸಾಬ್, ಸುಭಾಸ್, ಮಾರುತಿ, ರಾಮಣ್ಣ, ಮಹಾಂತಗೌಡ ಅವರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
0 comments:
Post a Comment