PLEASE LOGIN TO KANNADANET.COM FOR REGULAR NEWS-UPDATES

 ನಮ್ಮ ದೇಶ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ, ಜನಸಂಖ್ಯಾ ಬೆಳವಣಿಗೆಯ ವೇಗವನ್ನು ಕಡಿಮೆಗೊಳಿಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವ

ರು ಅಭಿಪ್ರಾಯಪಟ್ಟರು.
  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಾರದಾ ಪದವಿ ಪೂರ್ವ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳದ ಶಾರದಾ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
  ಭಾರತ ಜಗತ್ತಿನಲ್ಲಿಯೇ ಎರಡನೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನ ಪಡೆಯುವ ಎಲ್ಲಾ ಲಕ್ಷಣಗಳು ಇವೆ.  ಜನಸಂಖ್ಯೆಯ ಹೆಚ್ಚಳದಿಂದಾಗಿ ಆಹಾರ, ನೀರು ಮುಂತಾದ ಅಗತ್ಯತೆಯಲ್ಲಿ ನಾವು ಕೊರತೆಯನ್ನು ಕಾಣಬೇಕಾಗುತ್ತದೆ.  ದೇಶದ ಅಭಿವೃದ್ಧಿಗಾಗಿ ರೂಪಿಸುವ ಹಲವಾರು ಯೋಜನೆಗಳು ಜನಸಂಖ್ಯಾ ಸ್ಫೋಟದಿಂದ ವಿಫಲತೆಯನ್ನು ಕಾಣುತ್ತವೆ.  ಸಾಮಾಜಿಕವಾಗಿ ಹಿಂದುಳಿದವರು, ಬಡವರು ಜನಸಂಖ್ಯೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಹೊಂದದೇ ಇರುವುದರಿಂದ, ಜನಸಂಖ್ಯೆಯ ಹೆಚ್ಚಳದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಒಂದೇ ಈಗಿರುವ ಮಾರ್ಗೋಪಾಯವಾಗಿದೆ.  ಇದಕ್ಕೆ ಸಮುದಾಯದ ಸಹಕಾರವೂ ಅಗತ್ಯವಾಗಿದೆ ಎಂದು ಜಿ.ಪಂ. ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಹೇಳಿದರು.
  ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಾನಂದ ಕಡಪಟ್ಟಿ ಅವರು ಮಾತನಾಡಿ, ೧೯೮೭ ರಲ್ಲಿ ಜಗತ್ತಿನ ಒಟ್ಟು ಜನಸಂಖ್ಯೆ ೫೦೦ ಕೋಟಿ ಮೀರಿದ್ದರಿಂದ, ಆತಂಕಗೊಂಡ ವಿಶ್ವಸಂಸ್ಥೆ, ಜನಸಂಖ್ಯಾ ಹೆಚ್ಚಳದ ಬಗ್ಗೆ ಅರಿವು ಮೂಡಿಸಲು ಜನಸಂಖ್ಯಾ ದಿನಾಚರಣೆ ಆಚರಿಸಲು ನಿರ್ಧರಿಸಿತು.  ಸದ್ಯ ಜಗತ್ತಿನ ಜನಸಂಖ್ಯೆ ೭೧೫ ಕೋಟಿ ಇದ್ದರೆ, ಈ ಪೈಕಿ ನಮ್ಮ ಭಾರತ ಮತ್ತು ಚೀನಾ ದೇಶಗಳನ್ನೊಳಗೊಂಡ ಏಷ್ಯ ಖಂಡವೊಂದರಲ್ಲಿಯೇ ೪೧೫ ಕೋಟಿ ಜನಸಂಖ್ಯೆ ಇದೆ.  ಕಡಿಮೆ ವಯಸ್ಸಿನಲ್ಲಿ ಮದುವೆ ಮಾಡಿಸುವುದು ನಮ್ಮ ದೇಶಕ್ಕೆ ಅಂಟಿಕೊಂಡ ಸಾಮಾಜಿಕ ಪಿಡುಗು, ಮೂಢನಂಬಿಕೆ, ಅನಕ್ಷರತೆ ಜನಸಂಖ್ಯಾ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.  ಜನಸಂಖ್ಯಾ ಹೆಚ್ಚಳದ ಬಗ್ಗೆ ಅರಿವು ಮೂಡಿಸಲು ಕುಟುಂಬ ಕಲ್ಯಾಣ ಯೋಜನೆಯಡಿ, ೧೯೭೧ ರಲ್ಲಿ ಎರಡು ಬೇಕು, ಮೂರು ಸಾಕು ಎಂಬ ಘೋಷಣೆ ಇತ್ತು.  ನಂತರ ಇದು ೧೯೮೧ ರಲ್ಲಿ ಆರತಿಗೊಬ್ಬಳು, ಕೀರುತಿಗೊಬ್ಬ ಎಂದಾಯಿತು.  ತರುವಾಯ ೧೯೯೧ ರಿಂದೀಚೆಗೆ ಹೆಣ್ಣಿರಲಿ, ಗಂಡಿರಲಿ, ಮನೆಗೊಂದೇ ಇರಲಿ ಎಂಬ ಘೋಷಣೆ ಜಾರಿಗೆ ಬಂದಿದೆ ಎಂದರು.
  ರೋಟರಿ ಮಾಜಿ ಗೌರ್ನರ್ ಡಾ. ಕೆ.ಜಿ. ಕುಲಕರ್ಣಿ, ಸಾವಿತ್ರಿ ಮುಜುಂದಾರ್ ಅವರು ಜನಸಂಖ್ಯಾ ಹೆಚ್ಚಳದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹದೇವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್, ತಾ.ಪಂ. ಅಧ್ಯಕ್ಷ ದೇವಪ್ಪ ಮೇಕಾಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ, ಶಾರದಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಚೌಕಿಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರತ್ನಾಕರ್ ಪ್ರಾರಂಭದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು.  ಸುಪ್ರಿಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಶಿಕ್ಷಕಿ ಹೇಮಾವತಿ ವಂದಿಸಿದರು.  ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶಾರದಾ ಕಾಲೇಜಿನ ವಿದ್ಯಾರ್ಥಿಗಳಿಂದ ನಗರದ ವಿವಿಧ ರಸ್ತೆಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.


Advertisement

0 comments:

Post a Comment

 
Top