ದುಡಿತವೇ ದುಡ್ಡಿನ ತಾಯಿ..
ಜನಪ್ರತಿನಿಧಿಯಾದರೂ ಕಸಪೊರಕೆ ಮಾರುವ ಛತ್ರವ್ವ!
ಕುಷ್ಟಗಿ ತಾಲೂಕಿನ ಹುಲಿಯಾಪೂರ ತಾ.ಪಂ ಕ್ಷೇತ್ರದ ಸದಸ್ಯೆ ಛತ್ರವ್ವ ದೇವಪ್ಪ ಭಜಂತ್ರಿ ಗುರುವಾರ ಹಿರೇಮನ್ನಾಪೂರ ಗ್ರಾಮದಲ್ಲಿ ಕಸಪೊರಕೆ ಮಾರಾಟ ಮಾಡುತ್ತಿರುವುದು. |
ಕುಷ್ಟಗಿ : ತಾಲೂಕ ಪಂಚಾಯತಿಯ ಪ್ರತಿ ಸಭೆಯಲ್ಲಿ ಜನಪ್ರತಿನಿಧಿಯಾಗಿ ಕುಳಿತುಕೊಳ್ಳುವ ಮಹಿಳೆಯೊಬ್ಬರು ಇನ್ನುಳಿದ ದಿನಗಳಲ್ಲಿ ಊರೂರು ಅಲೆಯುತ್ತ ಕಸ ಪೊರಕೆ(ಬಾರಿಗೆ) ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ತಾನೊಬ್ಬ ಜನಪ್ರತಿನಿಧಿಯಾದರೂ ಯಾವುದೇ ಕೀಳರಮೆಯಿಲ್ಲದೇ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಿರುವುದು ಆಕೆಯ ವಿಶೇಷತೆ.
ತಾಲೂಕಿನ ಹುಲಿಯಾಪೂರ ತಾ.ಪಂ ಕ್ಷೇತ್ರದ ಸದಸ್ಯೆಯಾಗಿರುವ ಛತ್ರಮ್ಮ ದೇವಪ್ಪ ಭಜಂತ್ರಿ ೨೬-೦೭-೨೦೧೩ ತಾಲೂಕ ಪಂಚಾಯತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು. ಮರುದಿವಸ ಹಿರೇಮನ್ನಾಪೂರ ಗ್ರಾಮದ ಮನೆ ಮನೆಗೆ ತೆರಳಿ ಕಸಪೊರಕೆ ಮಾರಾಟ ಮಾಡುತ್ತಿದ್ದ ಅವರು, ನೋಡಿದವರೆಲ್ಲ ಅಚ್ಛರಿ ಪಡುವಂತೆ ಮಾಡಿದರು.
ಈಚಲ ಹುಲ್ಲು ಸಿಗೋದೇ ಕಷ್ಟ ಆಗೈತಿ. ದೂರದೂರಿಗೆ(ಮಾನ್ವಿ ರಾಯಚೂರು) ಹೋಗಿ ಕಷ್ಟಪಟ್ಟು ಹುಲ್ಲು ತಂದು ಬಾರಿಗೆ(ಪೊರಕೆ) ತಯಾರಿಸೋವಷ್ಟರಲ್ಲಿ ನೂರಾರು ರೂಪಾಯಿ ಖರ್ಚು ಆಗಿರ್‍ತಾವ. ಅಂಥದ್ದರೊಳಗ ಅಡ್ಡಾದುಡ್ಡಿ(ಕನಿಷ್ಟ ಬೆಲೆ)ಗೆ ಕೇಳಿದರ ಹ್ಯಾಂಗ ಗಿಟ್ಟತ್ರಿ..ಎನ್ನುತ್ತ ಕಸಪೊರಕೆ ಮಾರಾಟದಲ್ಲಿ ತೊಡಗಿಕೊಂಡಿದ್ದ ತಾ.ಪಂ ಸದಸ್ಯೆ ಛತ್ರವ್ವ ತನ್ನ ಕುಲಕಸುಬಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದಳು.
ಅಧಿಕಾರ ಅನ್ನೋದು ತಾತ್ಕಾಲಿಕ. ತಾತ ಮುತ್ತಾತನ ಕಾಲದಿಂದಲೂ ಮೂರು ಹೊತ್ತಿನ `ಅನ್ನ' ದಯಪಾಲಿಸುತ್ತ ಬಂದಿರೋ ಕುಲಕಸುಬೇ ಶಾಶ್ವತ. ಹಿಂಗಾಗಿ ಜನಸೇವಾ ಮಾಡ್ತಾ ಕುಲಕಸುಬನ್ನೂ ಮುಂದುವರೆಸಿಕೊಂಡು ಹೊಂಟೀನ್ರಿ ಎನ್ನುವ ಛತ್ರವ್ವ ವರ್ಷವಿಡೀ ಒಂದಿಲ್ಲೊಂದು ವಸ್ತುಗಳ ಮಾರಾಟದಲ್ಲಿ ತೊಡಗಿಕೊಂಡಿರುತ್ತಾಳೆ.
ದುಡಿತವೇ ದುಡ್ಡಿನ ತಾಯಿ..
ಬಾರಿಗೆ(ಕಸ ಪೊರಕೆ) ಕಟ್ಟುವುದು, ಬಿದರಿನ ಬುಟ್ಟಿ ಎಣೆಯುವುದು ನಂತರ ಅವುಗಳನ್ನು ಮಾರಾಟ ಮಾಡಿ ಆದಾಯ ಕಂಡುಕೊಳ್ಳುವುದು ಆಕೆಯ ಕುಲಕಸುಬು. ಮಾವಿನ ಹಾಗೂ ಹುಣಸೆ ಸುಗ್ಗಿ ಬಂದಾಗ ಆಯಾ ಮರಗಳನ್ನು ಗುತ್ತಿಗೆ ಪಡೆದು ಅವುಗಳ ಹಣ್ಣುಗಳನ್ನೂ ಸಹ ಮಾರಾಟ ಮಾಡುವ ಛತ್ರವ್ವ `ದುಡಿತವೇ ದುಡ್ಡಿನ ತಾಯಿ' ಎಂಬ ಗಾದೆ ಮಾತಿಗೆ ಪೂರಕ ಎಂಬಂತೆ ಜೀವನ ನಡೆಸುತ್ತಿದ್ದಾಳೆ.
ಅನಕ್ಷರಸ್ಥೆಯಾದರೂ..
ಅನಕ್ಷರಸ್ಥೆಯಾದರೂ ಮಕ್ಕಳಿಗೆ ಶಿಕ್ಷಣ ಕೊಡಿಸಿರುವುದು ಛತ್ರವ್ವಳ ಮತ್ತೊಂದು ವಿಶೇಷ. ಅಧಿಕಾರ ಕೈಗೆ ಬಂತೆಂದರೆ ಸಾಕು ತಮ್ಮ ವರ್ತನೆ ಬದಲಾಯಿಸಿಕೊಳ್ಳುವ, ಐಶಾರಾಮಿ ಜೀವನ ನಡೆಸಲು ಹಾತೊರೆಯುವ ಹಾಗೂ ತಮ್ಮ ಕುಲಕಸುಬನ್ನೇ ಕೈ ಬಿಡುವ ಹಲವರಿರುವ ಸಂದರ್ಭದಲ್ಲಿಯೇ ಕೆಲವರು ಮಾತ್ರ ಶ್ರಮ ಪಡುತ್ತಲೇ ಸರಳ ಜೀವನ ಸಾಗಿಸುತ್ತಿದ್ದಾರೆ. ಅಂಥಹ ಸರಳ ಜೀವನ ನಡೆಸುವವರ ಪೈಕಿ ತಾಲೂಕಿನ ಹುಲಿಯಾಪೂರ ತಾಲೂಕ ಪಂಚಾಯತಿ ಕ್ಷೇತ್ರದ ಸದಸ್ಯೆ ಛತ್ರವ್ವಳೇ ಸಾಕ್ಷಿ.
--- ಬಸವರಾಜ ಪಲ್ಲೇದ
0 comments:
Post a Comment