ಜಿಲ್ಲಾ ಪಂಚಾಯತಿಯಿಂದ ಅನುಷ್ಠಾನಗೊಳಿಸಲಾಗುವ ಪ್ರಸಕ್ತ ಸಾಲಿನ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ೮೫. ೯೩ ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಕೊಪ್ಪಳ ಜಿಲ್ಲಾ ಪಂಚಾಯತ್ ಅನುಮೋದನೆ ನೀಡಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಕುರಿತು ಸೋಮವಾರ ಏರ್ಪಡಿಸಲಾಗಿದ್ದ ಜಿ.ಪಂ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ರೂ. ೮೫೯೩. ೩೦ ಲಕ್ಷ ರೂ.ಗಳ ಕ್ರಿಯಾ ಯೋಜನೆಯಲ್ಲಿ ಕೇಂದ್ರ ಪಾಲು ೪೧೭೭. ೪೯ ಲಕ್ಷ ರೂ. ಗಳಾಗಿದ್ದರೆ, ರಾಜ್ಯದ ಪಾಲಿನ ಮೊತ್ತ ೪೪೧೫. ೮೧ ಲಕ್ಷ ರೂ.ಗಳು. ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದು ಒಟ್ಟು ೪೭೦೦. ೩೩ ಲಕ್ಷ ರೂ.ಗಳನ್ನು ಕಾಯ್ದಿರಿಸಿದೆ. ಈ ಪೈಕಿ ಕೇಂದ್ರದ ಪಾಲು ೩೨೯೩. ೮೦ ಲಕ್ಷ ಹಾಗೂ ರಾಜ್ಯದ್ದು ೧೪೦೬. ೫೩ ಲಕ್ಷ ರೂ.ಗಳು. ಕಳೆದ ೨೦೧೨-೧೩ ನೇ ಸಾಲಿನಲ್ಲಿ ೬೭. ೯೪ ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಗಿತ್ತು. ಇದರಿಂದಾಗಿ ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ಸುಮಾರು ೧೮ ಕೋಟಿ ರೂ.ಗಳ ಹೆಚ್ಚುವರಿ ಅನುದಾನ ನಿಗದಿಪಡಿಸಿದಂತಾಗಿದೆ.
ಪ್ರಸಕ್ತ ವರ್ಷದ ಕ್ರಿಯಾ ಯೋಜನೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನಿಗದಿಪಡಿಸಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ೭೪೮. ೨೬ ಲಕ್ಷ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ- ೪೭೭. ೫೦ ಲಕ್ಷ, ಸಮಾಜ ಕಲ್ಯಾಣ- ೪೧೪. ೫೦ ಲಕ್ಷ, ಮಹಿಳಾ ಮತ್ತು ಮಕ್ಕಳ ಕಲ್ಯಾಣ- ೫೧೦. ೫೬ ಲಕ್ಷ, ರಸ್ತೆ ಮತ್ತು ಸೇತುವೆಗಳ ನಿರ್ಮಾಣ- ೧೭೭. ೪೪ ಲಕ್ಷ, ಕೃಷಿ ಇಲಾಖೆ- ೧೭೧. ೩೭ ಲಕ್ಷ, ವೈದ್ಯಕೀಯ ಮತ್ತು ಜನಾರೋಗ್ಯ ಸೇವೆಗಳು- ೭೦೬ ಲಕ್ಷ, ಅಲ್ಪಸಂಖ್ಯಾತರ ಕಲ್ಯಾಣ- ೮೧. ೧೦ ಲಕ್ಷ, ಅರಣ್ಯ ಇಲಾಖೆ- ೧೩೦ ಲಕ್ಷ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್- ೭೫ ಲಕ್ಷ, ಪಶು ಸಂಗೋಪನೆ- ೫೫ ಲಕ್ಷ, ತೋಟಗಾರಿಕೆ ಇಲಾಖೆ- ೮೯ ಲಕ್ಷ, ಮೀನುಗಾರಿಕೆಗೆ- ೧೫. ೫೦ ಲಕ್ಷ, ಯುವಜನ ಸೇವಾ ಮತ್ತು ಕ್ರೀಡೆಗೆ- ೩೬. ೫೦ ಲಕ್ಷ, ಗ್ರಾಮೀಣ ಇಂಧನ ಕಾರ್ಯಕ್ರಮಕ್ಕೆ- ೪೦ ಲಕ್ಷ, ಕೈಗಾರಿಕೆ- ೧೨. ೨೫ ಲಕ್ಷ, ವಯಸ್ಕರ ಶಿಕ್ಷಣ- ೧೦ ಲಕ್ಷ, ಆಯುಷ್- ೧೫ ಲಕ್ಷ, ಸಹಕಾರ- ೯. ೬೮ ಲಕ್ಷ, ಪಂಚಾಯತ್ ಸಂಸ್ಥೆಗಳಿಗೆ ಅನುದಾನ- ೫೭ ಲಕ್ಷ, ರೇಷ್ಮೆ- ೯. ೧೦ ಲಕ್ಷ, ವಿಜ್ಞಾನ ಮತ್ತು ತಂತ್ರಜ್ಞಾನ- ೫ ಲಕ್ಷ, ಅಂಗವಿಕಲರ ಕಲ್ಯಾಣ- ೨೦. ೯೬ ಲಕ್ಷ ರೂ. ಅಲ್ಲದೆ ವಿವಿಧ ಇಲಾಖೆಗಳಿಗೆ ಅಗತ್ಯ ಅನುದಾನವನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಹೇಳಿದರು.
ಜಿ.ಪಂ. ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್ ಅವರು ಮಾತನಾಡಿ, ಪ್ರಸಕ್ತ ಸಾಲಿಗಾಗಿ ಕೊಪ್ಪಳ ಜಿಲ್ಲೆಗೆ ಯೋಜನಾ ಕಾರ್ಯಕ್ರಮಗಳ ಅನುದಾನವನ್ನು ಜಿಲ್ಲಾ ಪಂಚಾಯತಿಗೆ ೮೫೯೩. ೩೦ ಲಕ್ಷ, ತಾಲೂಕಾ ಪಂಚಾ
ಯತಿಗೆ ೬೨೧೭. ೬೩ ಲಕ್ಷ ಹಾಗೂ ಗ್ರಾಮ ಪಂಚಾಯತಿಗೆ ೧೩೭೯. ೩೪ ಲಕ್ಷ ಸೇರಿದಂತೆ ಒಟ್ಟು ೧೬೧೯೦. ೨೭ ಲಕ್ಷ ರೂ.ಗಳನ್ನು ಸರ್ಕಾರದಿಂದ ನಿಗದಿಪಡಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಜಿ.ಪಂ. ಕಾರ್ಯಕ್ರಮಗಳಿಗೆ ಇಲಾಖಾವಾರು ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದರು.
ಜಿಲ್ಲಾ ಆಡಳಿತ ಭವನದ ಕಟ್ಟಡಕ್ಕೆ ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸುವ ಮೊದಲ ಹಂತದ ಕಾಮಗಾರಿ ಕೈಗೊಳ್ಳಲು ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ಅನುಮೋದನೆ ನೀಡಿದೆ. ಅದೇ ರೀತಿ ಪಂಚಾಯತಿರಾಜ್ ಮತ್ತು ಇಂಜಿನಿಯರಿಂಗ್ ವಿಭಾಗದ ವಿವಿಧ ಕಚೇರಿಗಳಿಗೆ ಸಂಬಂಧಿಸಿದಂತೆ ಕಟ್ಟಡ ಮತ್ತು ದುರಸ್ತಿ ಕಾಮಗಾರಿಗಳ ೩೧. ೬೩ ಲಕ್ಷ ರೂ. ಕ್ರಿಯಾ ಯೋಜನೆ, ವಿಶೇಷ ಅಭಿವೃದ್ಧಿ ಯೋಜನೆಯಡಿ ಸಣ್ಣ ನೀರಾವರಿ ಕೆರೆಗಳ ಪುನಃಶ್ಚೇತನ ಮತ್ತು ಪುನರುಜ್ಜೀವನ ಕಾರ್ಯಗಳಿಗೆ ೧೩೬. ೪೨ ಲಕ್ಷ ರೂ.ಗಳ ಕ್ರಿಯಾ ಯೋಜನೆ, ೧೩ನೇ ಹಣಕಾಸು ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ರಸ್ತೆ ಅಭಿವೃದ್ಧಿ ಯೋಜನೆಯ ೨೮೫. ೯೭ ಲಕ್ಷ ರೂ.ಗಳ ಕ್ರಿಯಾ ಯೋಜನೆ ಮತ್ತು ಸಿಎಂಜಿಎಸ್‌ವೈ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿಗಳ ೧೭೭. ೪೪ ಲಕ್ಷ ರೂ.ಗಳ ಕ್ರಿಯಾ ಯೋಜನೆಗೆ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ, ಜಿ.ಪಂ. ಸದಸ್ಯರು ಹಾಗೂ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅಮರೇಶ್ ಕುಳಗಿ ಮತ್ತು ವಿನಯಕುಮಾರ್ ಮೇಲಿನಮನಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಭೆಯಲ್ಲಿ ಜಿ.ಪಂ. ಸದಸ್ಯರು, ತಾಲೂಕು ಪಂಚಾಯತಿ ಅಧ್ಯಕ್ಷರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಭಾಗವಹಿಸಿದ್ದರು.
0 comments:
Post a Comment