- ಸನತ್‌ಕುಮಾರ ಬೆಳಗಲಿ
ರಾಜಧಾನಿ ಬೆಂಗಳೂರಿನ ಜನಸಂಖ್ಯೆ ಈಗ ಒಂದು ಕೋಟಿಗೆ ತಲುಪಿದೆ. ಭಾರತದ ಎಲ್ಲ ರಾಜ್ಯಗಳ ಜನ ಇಲ್ಲಿ ಆಸರೆ ಪಡೆದಿದ್ದಾರೆ. ಎಲ್ಲ ಜಾತಿ, ಧರ್ಮ, ಭಾಷೆಗಳು ನೆಲೆಸಿದ ಸರ್ವಜನಾಂಗದ ಶಾಂತಿಯ ತೋಟವಿದು. ಅಕ್ಷರಶಃ ಇದೀಗ ಕಾಸ್ಮೋಪಾಲಿಟಿನ್ ನಗರ ವಾಗಿ ಮಾರ್ಪಟ್ಟಿದೆ. ವಲಸೆ ಪ್ರಮಾಣ ಹೆಚ್ಚುತ್ತಿದ್ದಂತೆ ಮೂಲಭೂತ ಸೌಕರ್ಯಗಳ ಕೊರತೆಯೂ ಎದ್ದು ಕಾಣುತ್ತಿದೆ. ಈ ಕೊರತೆ ಯನ್ನು ಹೇಗೋ ನಿವಾರಿಸಬಹುದು. ಆದರೆ ಹೃದಯವಂತಿಕೆಯ ಕೊರತೆಯನ್ನು ಹೇಗೆ ನೀಗಿಸಲು ಸಾಧ್ಯ? ಈ ನಗರ ಬೆಳೆದಂತೆ ಇಲ್ಲಿ ನೆಲೆಸಿದವರ ಮನಸ್ಸು ವಿಶಾಲವಾಗಬೇಕಿತ್ತು. ಸಂಕುಚಿತ ಜಾತಿ ಮತದ ಕೂಪದಿಂದ ಜನ ಹೊರಬೇಕಾಗಿತ್ತು. ಆದರೆ ನೋವಿನ ಸಂಗತಿ ಯೆಂದರೆ ಭೌತಿಕವಾಗಿ ಬೆಳೆದ ಬೆಂಗಳೂರಿಗರ ಮನಸ್ಸು ಕಂದಾಚಾರದ ಕೂಪದಲ್ಲಿ ಕೊಳೆತು ಹೋಗುತ್ತಿದೆ.
ಮೊನ್ನೆ ನಾನು ಬೆಳಗಿನ ವಾಯು ವಿಹಾರಕ್ಕೆ ಹೊರಟಾಗ ದಾರಿ ಬದಿಯ ವಿದ್ಯುತ್ ಕಂಬಕ್ಕೆ ತೂಗು ಹಾಕಿದ್ದ ಭಿತ್ತಿಫಲಕವೊಂದನ್ನು ನೋಡಿ ಬೆವೆತು ಹೋಗಿ ಬಿಟ್ಟೆ. ನಮ್ಮ ಮನೆ ಹತ್ತಿರದ ಮನೆಯೊಂದರ ಮಾರಾಟಕ್ಕಾಗಿ ಆ ಮನೆ ಮಾಲಕರು ತೂಗು ಹಾಕಿದದ ಬೋರ್ಡ್ ಅದು. ಅವರು ತಮ್ಮ ಬಿಡಿಎ ಫ್ಲಾಟ್ ಒಂದರ ಮನೆಯನ್ನು ಮಾರಾಟ ಕ್ಕಿಟ್ಟಿರುವುದಾಗಿ ಬೋರ್ಡನ್ನು ತೂಗು ಹಾಕಿದ್ದರು. ಇದಿಷ್ಟೆ ಆಗಿ ದ್ದರೆ ಗಾಬರಿಯಾಗುತ್ತಿರಲಿಲ್ಲ. ಆದರೆ ಅದೇ ಬೋರ್ಡ್‌ನಲ್ಲಿ ’ಖಿಖಔಐಖ ಓಐಘೆಈಔ್ಗ ಉಗಿಇಖಿಖಉ’ (ಮುಸಲ್ಮಾನರಿಗೆ ಮನೆ ಮಾರುವುದಿಲ್ಲ) ಎಂದು ಸ್ಪಷ್ಟವಾಗಿ ಬರೆದಿದ್ದರು.
ಮುಸ್ಲಿಮರಿಗೆ ಮಾರಾಟ ಮಾಡುವುದಿಲ್ಲ ಎಂಬುದನ್ನೆ ಮೃದು ಭಾಷೆಯಲ್ಲಿ ‘ಕೈಂಡ್ಲಿ ಎಕ್ಸ್‌ಕ್ಯೂಸ್’ ಎಂದು ಎಂದು ಬರೆದಿದ್ದರು. ಇದನ್ನು ಓದಿ ನಾನು ದಂಗು ಬಡಿದು ನಿಂತು ಬಿಟ್ಟೆ. ಬೆಂಗಳೂರಿನ ಕೆಲ ಬಡಾವಣೆಗಳಲ್ಲಿ ದಲಿತರಿಗೆ ಮುಸಲ್ಮಾನರಿಗೆ ಮನೆಯನ್ನು ಬಾಡಿಗೆ ಕೊಡುವುದಿಲ್ಲ ಎಂದು ನಾನು ಕೇಳಿದ್ದೆ. ಬಸವನಗುಡಿಯಂಥ ಪ್ರದೇಶದಲ್ಲಿ ಮನೆ ಬಾಡಿಗೆ ಪಡೆಯಲು ರಮಝಾನ್ ದರ್ಗಾ, ಹನೀಫರಂಥವರು ಪರದಾಡಿ ವಿಫಲರಾಗಿದ್ದು ಗೊತ್ತಿತ್ತು. ಆದರೆ ಅದೆಲ್ಲ ಹತ್ತು ವರ್ಷಗಳ ಹಿಂದಿನ ಕತೆ, ಅದೂ ಬಸವನಗುಡಿಯಂಥ ಬ್ರಾಹ್ಮಣರು ಹೆಚ್ಚಾಗಿರುವ ಬಡಾವಣೆಗೆ ಮಾತ್ರ ಇದು ಸೀಮಿತವಾಗಿರಬಹುದು ಎಂದು ಭಾವಿಸಿದ್ದೆ.
ಆದರೆ ಜಾಗತೀಕರಣದ ಈ ದಿನಗಳಲ್ಲಿ ಬೆಂಗಳೂರು ಐ.ಟಿ. ನಗರಿ ಎಂಬ ಖ್ಯಾತಿ ಗಳಿಸಿದ ಸಂದರ್ಭದಲ್ಲಿ ಅದೂ ನಾನು ನೆಲೆಸಿದ ಎಲ್ಲ ಜಾತಿ-ಮತಗಳ ಜನರಿರುವ ಬಡಾವಣೆಯಲ್ಲಿ ಈ ಬೋರ್ಡ್ ನೋಡಿ ಕಂಗಾಲಾದೆ.ಮೊದಲೆಲ್ಲ ದಲಿತರಿಗೆ, ಮುಸಲ್ಮಾನರಿಗೆ ಮನೆಯನ್ನು ಬಾಡಿಗೆ ಕೊಡಲು ಇಷ್ಟ ಪಡದವರು ನೇರವಾಗಿ ಜಾತಿಯ ಕಾರಣ ನೀಡುತ್ತಿರಲಿಲ್ಲ. ಸಸ್ಯಾಹಾರಿಗಳಿಗೆ ಮಾತ್ರ ಮನೆ ಕೊಡುವುದಾಗಿ ಮನಸ್ಸಿಗೆ ನೋವಾಗದಂತೆ ಸೂಚ್ಯವಾಗಿ ಸಾಗ ಹಾಕುತ್ತಿದ್ದರು.
ಆದರೆ ಈಗ ಈ ಸೂಚ್ಯ ಸೂಕ್ಷ್ಮ ಭಾಷೆ ಹೋಗಿ ಜಾತಿ-ಧರ್ಮದ ಹೆಸರು ಉಲ್ಲೇಖಿಸಿ ಇಂಥ ಜನಾಂಗದವರಿಗೆ ಮನೆ ಕೊಡುವುದಿಲ್ಲ ಎಂದು ರಸ್ತೆಯಲ್ಲಿ ಬೋರ್ಡು ಬರೆದು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಮೊದಲೆಲ್ಲ ಬಾಡಿಗೆ ನೀಡಲು ಮಾತ್ರ ಜಾತಿ ಮತ್ತು ಧರ್ಮ ಅಡ್ಡ ಬರುತ್ತಿತ್ತು. ಬಾಡಿಗೆ ನೀಡಲು ಮಾತ್ರವಲ್ಲ ಮನೆಯನ್ನು ಮಾರಾಟ ಮಾಡುವಾಗಲು ಈ ಜಾತಿ ಧರ್ಮ ಅನ್ವಯಿಸ ಲ್ಪಡುತ್ತಿದೆ. ಈ ಬೋರ್ಡ್‌ನಲ್ಲಿ ದಲಿತರ ಹೆಸರನ್ನ ಉಲ್ಲೇಖಿಸಿಲ್ಲ. ಆದರೆ ‘ಮುಸಲ್ಮಾನರಿಗೆ ಕೊಡುವುದಿಲ್ಲ’ ಎಂದು ಖಡಾಖಂಡಿತ ವಾಗಿ ಹೇಳಲಾಗಿದೆ.
ನ್ಯಾಯಮೂರ್ತಿ ಸಾಚಾರ್ ವರದಿ ಪ್ರಕಾರ ಮುಸಲ್ಮಾನರ ಪರಿಸ್ಥಿತಿ ದಲಿತರಿಗಿಂತ ಹೀನಾಯವಾಗಿದೆ. ನಾನು ಈ ಬೋರ್ಡನ್ನು ನೋಡಿದಾಗ ಇದು ಮತ್ತಷ್ಟು ಮನವರಿಕೆ ಆಯಿತು. ಪ್ರಸಂಗ ಬಂದರೆ ದಲಿತರಿಗಾದರೂ ಕೊಡಬಹುದು. ಮುಸಲ್ಮಾನರಿಗೆ ಕೊಡಲು ಸಾಧ್ಯವೇ ಇಲ್ಲವಂತೆ! ನಾನಿರುವ ಪ್ರದೇಶದಲ್ಲಿ ಇತ್ತೀಚೆಗೆ ಉತ್ತರ ಭಾರತ ಹಾಗೂ ಈಶಾನ್ಯ ಭಾರತದಿಂದ ಹೊಟ್ಟೆಪಾಡಿಗಾಗಿ ದುಡಿಯಲು ಬಂದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ಹಿಂದಿ ಮಾತಾಡುತ್ತಾರೆ. ಅವರಲ್ಲಿ ಕೆಲವರು ಸಾಫ್ಟ್‌ವೇರ್ ಕಂಪೆನಿಗಳಲ್ಲೂ ಕೆಲಸ ಮಾಡುತ್ತಾರೆ. ಇಂಥವರಿಗೆ ಮನೆ ಕೊಡಲು ಸಂಪ್ರದಾಯವಾದಿಗಳಿಗೆ ಅಭ್ಯಂತರವಿಲ್ಲ. ಆದರೆ ಮುಸಲ್ಮಾನರಿಗೆ ಕೊಡಲು ಸಾಧ್ಯವೇ ಇಲ್ಲ. ಇದು ಬೆಂಗಳೂರಿಗರ ಇಂದಿನ ಮನಸ್ಥಿತಿ.
ದೇಶದ ವಾಣಿಜ್ಯ ರಾಜಧಾನಿ ಮುಂಬೈ ಯಲ್ಲಿ ಇಂಥದೇ ಪರಿಸ್ಥಿತಿ ಇರುವುದನ್ನು ಹಿಂದೆ ಕೇಳಿದ್ದೆ, ಓದಿದ್ದೆ. ಇಮ್ರಾನ್‌ಹಷ್ಮಿ ಎಂಬ ಬಾಲಿವುಡ್ ನಟ ಮೂರು ವರ್ಷಗಳ ಹಿಂದೆ ಅಲ್ಲಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮನೆ ಬಾಡಿಗೆ ಹಿಡಿಯಲು ಪರದಾಡಿದ್ದರು. ದುಬಾರಿಯಾದ ಬಾಡಿಗೆ ನೀಡಲು ತಯಾರಾಗಿದ್ದರೂ ‘ಮುಸಲ್ಮಾನ’ ಎಂಬ ಏಕೈಕ ಕಾರಣಕ್ಕೆ ಆತನಿಗೆ ಮನೆ ಬಾಡಿಗೆ ನೀಡಲು ಕಾಸ್ಮೊಪಾಲಿಟನ್ ನಗರಿಯ ಮನೆ ಮಾಲ ಕರು ನಿರಾಕರಿಸಿದ್ದರು. ಆಗ ಇದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಖ್ಯಾತ ನಿರ್ದೇಶಕ ಮಹೇಶ್ ಭಟ್‌ರಂಥವರು ಇಮ್ರಾನ್ ಹಷ್ಮಿ ಪರವಾಗಿ ದನಿಯೆತ್ತಿದ್ದರು.
ಮುಂಬೈ ಎಂಬುದು ಎಲ್ಲ ಭಾರತೀಯರಿಗೂ ಸೇರಿದ ನಗರ. ಇಲ್ಲಿ ಜಾತಿಮತದ ಹೆಸರಿನಲ್ಲಿ ಯಾರಿ ಗೂ ಅನ್ಯಾಯವಾಗಬಾರದು ಎಂದಿದ್ದರು.ತೊಂಬತ್ತರ ದಶಕಕ್ಕಿಂತ ಮುಂಚೆ ಮನುಷ್ಯ ಇಷ್ಟೊಂದು ಕೆಟ್ಟಿರಲಿಲ್ಲ. ಯಾವಾಗ ಸಮಾಜವಾದಿ ಸೋವಿಯತ್ ರಶ್ಯ ಪತನಗೊಂಡು ಮಾರುಕಟ್ಟೆ ಆರ್ಥಿಕತೆ ಎಲ್ಲೆಡೆ ಹಬ್ಬ ತೊಡಗಿತೋ ಆಗಿನಿಂದಲೇ ಎಲ್ಲವೂ ಹಳಿತಪ್ಪಿತು. ಜಾಗತೀಕರಣದ ಭಾಗವಾಗಿ ಹಿಂದೂ ಕೋಮುವಾದಿ ಉನ್ಮಾದ, ಭಾರತದಲ್ಲಿ ವಿಕಾರರೂಪ ತಾಳಿತು.
ಅಯೋಧ್ಯೆಯ ಬಾಬರಿ ಮಸೀದಿ ನೆಲಸಮದ ನಂತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಈಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬ್ರಾಹ್ಮಣರಿಗಾಗಿ, ವೀರ ಶೈವರಿಗಾಗಿ ಪ್ರತ್ಯೇಕ ಟೌನ್‌ಶಿಪ್‌ಗಳೇ ನಿರ್ಮಾಣವಾಗುತ್ತಿವೆ. ಅಲ್ಲಿ ಬೇರೆ ಜಾತಿಯವರಿಗೆ ಒಂದಿಂಚೂ ಜಾಗವಿಲ್ಲ. ಹಿಂದಿನ ಬಿಜೆಪಿ ಸರಕಾರ ಇಂಥದಕ್ಕೆಲ್ಲ ಮುಕ್ತ ಅವಕಾಶ ನೀಡಿತು.ಸ್ವಾತಂತ್ರ ನಂತರ ಈ ದೇಶಕ್ಕೆ ಡಾ.ಅಂಬೇಡ್ಕರ್ ರೂಪಿಸಿದ ಸಂವಿಧಾನವೊಂದು ಅಸ್ತಿತ್ವಕ್ಕೆ ಬಂತು.
ಆ ಸಂವಿಧಾನದ ಆಶಯ ದಂತೆ ಜಾತಿ, ಮತ ಭೇದ ತೊಲಗಿಸುವ ಕಾರ್ಯ ಕ್ರಮಗಳನ್ನು ಸರಕಾರ ರೂಪಿಸಿತು. ಅಂತಲೆ ಗೃಹ ಮಂಡಲಿ ಬಡಾವಣೆಗಳಲ್ಲಿ ಹಾಗೂ ನಗರಾಭಿವೃದ್ಧಿ ಮಂಡಲಿ ನಿರ್ಮಿಸುವ ಲೇ ಔಟ್‌ಗಳಲ್ಲಿ ಯಾವುದೇ ಒಂದು ಜಾತಿಯ, ಧರ್ಮದ ಜನರಿಗೆ ಮಾತ್ರ ಮನೆಯನ್ನು ನೀಡುವುದಿಲ್ಲ. ಎಲ್ಲರೂ ಒಂದಾಗಿ ಚೆಂದವಾಗಿ ಸಹಜೀವಿ ಗಳಾಗಿ ಬದುಕಲಿ ಎಂದು ಹಿಂದೂ- ಮುಸಲ್ಮಾನ್, ಕ್ರೈಸ್ತರು, ದಲಿತರು, ಹಿಂದುಳಿದವರು, ಜೈನರು ಹೀಗೆ ಎಲ್ಲರಿಗೂ ಮನೆಗಳ ಹಂಚಿಕೆ ಮಾಡಲಾಗುತ್ತದೆ.
ಆದರೆ ಈಗ ಗೃಹಮಂಡಲಿಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು ಹೆಸರಿಗೆ ಮಾತ್ರ ಉಳಿದಿವೆ. ಖಾಸಗಿ ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ಮಾಫಿಯಾಗಳು ರೈತರಿಂದ ಅಗ್ಗದ ದರದಲ್ಲಿ ಭೂಮಿ ಖರೀದಿಸಿ ಬಡಾವಣೆಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿರುವುದರಿಂದ ಇಂಥ ಅವಾಂತರಗಳು ನಡೆಯುತ್ತಿವೆ. ನಾನಿರುವ ಪ್ರದೇಶದಲ್ಲಿ ‘ಮನೆ ಮಾರಾಟಕ್ಕಿದೆ. ಆದರೆ ಮುಸಲ್ಮಾನರಿಗೆ ಕೊಡುವುದಿಲ್ಲ’ ಎಂದು ಬೋರ್ಡು ತೂಗು ಹಾಕಿದ ವ್ಯಕ್ತಿಯೂ ಮಾರಾಟಕ್ಕಿಟ್ಟ ಮನೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಖರೀದಿಸಿದ ಮನೆ. ಈತನಿಗೆ ಮನೆ ನೀಡುವಾಗ ಬಿಡಿಎ ಈತನ ಜಾತಿ ಯನ್ನು ಕೇಳಲಿಲ್ಲ. ಆದರೆ ಮಾರಾಟ ಮಾಡುವಾಗ ಈತನಿಗೆ ಜಾತಿ, ಧರ್ಮ ಮುಖ್ಯವಾಗಿದೆ.
ಗುಜರಾತ್‌ನಂಥ ರಾಜ್ಯದಲ್ಲಿ ಮುಸಲ್ಮಾನರು ನೆಲೆಸಿದ ಪ್ರದೇಶಕ್ಕೆ ಪಾಕಿಸ್ತಾನ ಎಂದು, ಹಿಂದುಗಳು ನೆಲೆಸಿದ ಪ್ರದೇಶಕ್ಕೆ ಹಿಂದುಸ್ತಾನ ಎಂದು ಕರೆದು ಪ್ರತ್ಯೇಕಿಸಿದ ಸಂಘಪರಿವಾರದ ಕೋಮುವಾದಿಗಳ ಹುನ್ನಾರ ಎಲ್ಲರಿಗೂ ಗೊತ್ತಿದೆ. ಆದರೆ ನಮ್ಮ ಬೆಂಗಳೂರು, ಕೆಂಪೇಗೌಡರು ಕಟ್ಟಿದ, ಟಿಪ್ಪು ಸುಲ್ತಾನರು ಆಳಿದ, ಮಿರ್ಜಾ ಇಸ್ಮಾಯೀಲ್ ಬೆಳೆಸಿದ, ಕಬ್ಬನ್ ರಂಥವರು ಉದ್ಯಾನ ನಿರ್ಮಿಸಿ ತಂಪನ್ನು ನೀಡಿದ ಬೆಂಗಳೂರು ಹಾಗಾಗಬಾರದು. ಆದರೆ ಈಗ ಹಾಗಾಗುತ್ತಿದೆ.
‘ಮುಸಲ್ಮಾನರಿಗೆ ಮನೆ ಮಾರಾಟ ಮಾಡುವುದಿಲ್ಲ’ ಎಂದು ಬಹಿರಂಗವಾಗಿ ರಸ್ತೆಯಲ್ಲೆ ಬೋರ್ಡು ತೂಗು ಹಾಕುವ ರೋಗ ಈ ನಗರಕ್ಕೂ ಹಬ್ಬಿದೆ.ಮುಹ್ಮದ್ ರಫಿಯ ಹಳೆಯ ಹಾಡು ಕೇಳುವಾಗ, ಶಾರೂಕ್‌ಖಾನ್ ಸಿನೆಮಾ ನೋಡುವಾಗ, ಉಸ್ತಾದ್ ಬಿಸ್ಮಿಲ್ಲಾಖಾನ್ ಶಹನಾಯಿ ಆಲಿಸುವಾಗ ನಮ್ಮ ವಾಹನ ಕೆಟ್ಟಾಗ ದುರಸ್ತಿಗಾಗಿ ಗ್ಯಾರೇಜಿಗೆ ಹೋಗಿ ಅಬ್ದುಲ್ಲಾನಿಗೋ, ಇಮ್ತಿಯಾಝ್‌ನಿಗೋ ದುಂಬಲು ಬೀಳುವಾಗ, ಮನೆಯ ನಲ್ಲಿಯ ರಿಪೇರಿಗಾಗಿ ಇನ್ಯಾವುದೋ ಮಲ್ಲಿಕ್ ಸಾಬನಿಗೊ, ಪಿಂಟೊ ನಿಗೋ ಬೆನ್ನು ಹತ್ತಿ ಕರಕೊಂಡು ಬರುವಾಗ ಅಡ್ಡ ಬಾರದ ಈ ಜಾತಿ-ಧರ್ಮ ಕೆಲ ಸಂದರ್ಭ ಗಳಲ್ಲಿ ಮತ್ತೆ ಮತ್ತೆ ಯಾಕೆ ಹಣಿಕಿ ಹಾಡುತ್ತದೋ ಅರ್ಥವಾಗುತ್ತಿಲ್ಲ. ಈ ಕೋಮುವಾದಿ ಮನೋ ರೋಗಕ್ಕೆ ಮದ್ದು ಎಲ್ಲಿದೆ. vbnews
0 comments:
Post a Comment