PLEASE LOGIN TO KANNADANET.COM FOR REGULAR NEWS-UPDATES


ನೋಟ ಮತ್ತು ಒಳನೋಟಗಳ ನಡುವೆ...

ನಾವು ದೃಷ್ಟಿ ಮತ್ತು ದೂರದೃಷ್ಟಿ ಕುರಿತು ಹಾಗೆಯೇ ನೋಟ ಮತ್ತು ಒಳನೋಟದ ಬಗ್ಗೆ ನಾನಾ ರೀತಿಯಲ್ಲಿ ವ್ಯಾಖ್ಯಾನಿಸುತ್ತೇವೆ. ಇದನ್ನು ಯಾವ ಹಂತಕ್ಕೆ ಬೇಕಾದರೂ ವಿಸ್ತರಿಸಬಹುದು. ಮೊದಲು ಕೊನೆಯೆಂಬುದಿಲ್ಲ. ನಮ್ಮ ದೇಹದ ಪ್ರತಿಯೊಂದು ಅಂಗವೂ ಅತ್ಯಂತ ಸೂಕ್ಷ್ಮವಾಗಿರುವಂಥದ್ದು. ಅದರಲ್ಲೂ ದೃಷ್ಟಿಯ ಕೇಂದ್ರ ಬಿಂದುವಾದ ಕಣ್ಣು, ನುಡಿಗೆ ಮೂಲ ಕಾರಣವಾದ ನಾಲಿಗೆ ಹಾಗೆಯೇ ಆಲಿಸುವುದಕ್ಕೆ ಕಿವಿ. ಇವುಗಳ ಆಂತರಿಕ ಸಂಬಂಧವನ್ನು ವಿಸ್ತರಿಸಿಕೊಂಡು ಯೋಚಿಸಿದಂತೆಲ್ಲ ಎಂತೆಂಥದೋ ಧುತ್ತನೆ ಮನಸ್ಸಿಗೆ ಎದುರಾಗ ಬಹುದು. ಈ ದೃಷ್ಟಿಯಿಂದ ಪ್ರತಿಯೊಬ್ಬ ಅಂಗವಿಕಲ ವ್ಯಕ್ತಿಯನ್ನು ನೋಡಿದಾಗಲೆಲ್ಲ ಒಂದು ರೀತಿಯ ವಿಷಾದ ಆವರಿಸಿಕೊಳ್ಳುತ್ತದೆ. ಅದೇ ಸಮಯಕ್ಕೆ ಅಂಗವಿಕಲರು ತಮ್ಮ ದೇಹದಲ್ಲಿ ಏನನ್ನೋ ಕಳೆದುಕೊಂಡಾಗ ಅದನ್ನು ಬೇರೊಂದು ರೂಪದಲ್ಲಿ ತುಂಬಿಕೊಳ್ಳಲು ಕ್ರಿಯಾಶೀಲರಾಗು ವುದನ್ನು ಕಂಡರೆ ಸಂತೋಷ ವಾಗುತ್ತದೆ. ಇಂಥ ಸಂತೋಷದ ಬಗ್ಗೆ ಯೋಚಿಸುವಾಗಲೆಲ್ಲ; ನನ್ನ ನಾಲ್ಕು ದಶಕಗಳಿಗೂ ಮೇಲ್ಪಟ್ಟು ಗೆಳೆಯನಾದ ಪರಶಿವ ಮೂರ್ತಿಯನ್ನು ಕಂಡಾಗ ‘ಹಾಯ್’ ಅನ್ನಿಸುತ್ತದೆ.
ನೋಟ ಮತ್ತು ಒಳನೋಟಗಳ ನಡುವೆ...ಈತ ಹುಟ್ಟು ಕುರುಡ. ಪರಿಚಯವಾಗಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕಚೇರಿಯ ಮುಂದೆ. ನಾವಿಬ್ಬರು ಬಿ.ಎ. (ಆನರ್ಸ್)ಗೆ ಅಪ್ಲಿಕೇಷನ್ ಪಡೆಯಲು ಕ್ಯೂನಲ್ಲಿ ನಿಂತಿದ್ದೆವು. ಆಗ ಆನರ್ಸ್‌ಗೆ ಸೇರಲು ವಿದ್ಯಾರ್ಥಿಗಳು ಎಲ್ಲಿಲ್ಲದ ಉತ್ಸಾಹವನ್ನು ತುಂಬಿ ಕೊಳ್ಳುತ್ತಿದ್ದರು. ಈಗಿನ ರೀತಿಯಲ್ಲಿ ಕಂಪ್ಯೂಟರ್ ಮತ್ತು ಎಂ.ಬಿ.ಎ ಕೋರ್ಸ್‌ಗಳು ಇರಲಿಲ್ಲ. ವಿಜ್ಞಾನ, ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ, ಇತಿಹಾಸ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಎಲ್ಲಿಲ್ಲದ ಉತ್ಸಾಹ ತೋರಿಸುತ್ತಿದ್ದರು.
ಅಂದು ಪರಶಿವಮೂರ್ತಿ ಇಂಗ್ಲಿಷ್ ಆನರ್ಸ್‌ಗೆ, ನಾನು ಸಮಾಜಶಾಸ್ತ್ರದ ಆನರ್ಸ್‌ಗೆ ಅಪ್ಲಿಕೇಷನ್ ತೆಗೆದುಕೊಂಡೆವು. ಆತ ಅತ್ಯಂತ ಸೂಕ್ಷ್ಮ ಸಂವೇದನೆಯ ವಿದ್ಯಾರ್ಥಿಯಾಗಿದ್ದ. ಪರಶಿವ ಮೂರ್ತಿಯ ಅಧ್ಯಯನದ ಬಗೆಗಿನ ಉತ್ಸಾಹ ಮತ್ತು ಶ್ರದ್ಧೆಯನ್ನು ಕಂಡು ಲಂಕೇಶ್ ಅವರು ತುಂಬ ಇಷ್ಟ ಪಡುತ್ತಿದ್ದರು. ನಾನು ಸಮಾಜಶಾಸ್ತ್ರವನ್ನು ಇಷ್ಟಪಟ್ಟು ತೆಗೆದು ಕೊಂಡರೂ; ಇಂಗ್ಲಿಷ್ ಭಾಷೆಯ ಸಮಸ್ಯೆಯಿಂದ ಅಲ್ಲಿಯ ಪ್ರಾಧ್ಯಾಪಕ ರೊಬ್ಬರ ಸಹಾಯದಿಂದ ಕನ್ನಡ (ಆನರ್ಸ್)ಕ್ಕೆ ಸೇರಿಕೊಳ್ಳಲು ಸಾಧ್ಯವಾಯಿತು. ಅದೂ ನಾಲ್ಕು ತಿಂಗಳ ನಂತರ. ಇದರಿಂದ ಆದ ಅನುಕೂಲವೆಂದರೆ ಲಂಕೇಶ್ ಅವರ ವಿದ್ಯಾರ್ಥಿಯಾಗಿದ್ದು ಅವರು ಮೊದಲನೆಯ ಆನರ್ಸ್‌ಗೆ ಇಂಗ್ಲಿಷ್ ತೆಗೆದುಕೊಳ್ಳುತ್ತಿದ್ದರು.
ನಮ್ಮ ಜೊತೆ ರಸಾಯನ ಶಾಸ್ತ್ರದ ವಿದ್ಯಾರ್ಥಿಗಳು ಸೇರಿಕೊಳ್ಳುತ್ತಿದ್ದರು. ಪರಶಿವ ಮೂರ್ತಿ ಪ್ರತಿದಿವಸ ಗ್ರಂಥಾಲಯ ದಲ್ಲಿ ಸಿಗುತ್ತಿದ್ದರು. ಸಂಜೆ ನಾವಿಬ್ಬರು ಗ್ರಂಥಾಲಯಕ್ಕೆ ಎದುರಿದ್ದ ಭೌತಶಾಸ್ತ್ರದ ಕಟ್ಟಡದ ಜಗಲಿಯ ಮೇಲೆ ಕೂತು, ಕಾಲು ಇಳಿಬಿಟ್ಟುಕೊಂಡು ಹರಟೆ ಕೊಚ್ಚುತ್ತಿದ್ದೆವು.ಈ ಹರಟೆ ಬಹುಪಾಲು ಸಾಹಿತ್ಯದ ಚೌಕಟ್ಟಿನಲ್ಲಿಯೇ ಇರುತ್ತಿತ್ತು. ಇದಕ್ಕೆ ಸಮೀಪದಲ್ಲಿಯೇ ಐವತ್ತು ಗಜ ದೂರದಲ್ಲಿ ಕಲ್ಲುಬೆಂಚು ಇತ್ತು.
ಈ ಜಾಗ ಒಂದು ದೃಷ್ಟಿಯಿಂದ ಸಾಂಸ್ಕೃತಿಕ ವೇದಿಕೆಯೇ ಆಯಿತು. ಇದಕ್ಕೆ ಹಿರಿಯ ವಿಮರ್ಶಕರಾದ ಡಾ. ಕೆ.ವಿ. ನಾರಾಯಣ, ಚಿ.ಶ್ರೀನಿವಾಸ ರಾಜು, ಕಿ.ರಂ.ನಾಗರಾಜ್, ಡಾ.ಹೆಚ್.ಎಸ್. ರಾಘವೇಂದ್ರರಾವ್ ಮುಂತಾದವರೆಲ್ಲ ಸೇರಿ ಕೊಂಡು ‘ಪಿ.ಪಿ.’ಕಟ್ಟೆ ಎಂದು ನಾಮಕರಣ ಮಾಡಿದರು. ಅದರ ಮುಂದುವರಿದ ಅರ್ಥ ‘ಪೋಲಿಪಟಾಲಂ’ಕಟ್ಟೆ ಎಂದು. ಇದಕ್ಕೆ ಪರೋಕ್ಷವಾಗಿ ಲಂಕೇಶ್, ಡಾ. ಮರುಳಸಿದ್ದಪ್ಪ ಅಂಥವರ ಬೆಂಬಲವಿತ್ತು.
ಈಗ ಅಮೆರಿಕದಲ್ಲಿರುವ ಖ್ಯಾತ ಭಾಷಾ ಶಾಸ್ತ್ರಜ್ಞ ಎಸ್.ಎನ್. ಶ್ರೀಧರ್ ಅವರು ಸೇರಿಕೊಂಡರು. ಶ್ರೀಧರ್ ಅವರು ಜಗತ್ತಿನ ಶ್ರೇಷ್ಠ ಚಿಂತಕ ಮತ್ತು ಹೋರಾಟಗಾರ ‘ನೋಮ್ ಚೋಮಸ್ಕಿ’ಯ ವಿದ್ಯಾರ್ಥಿ. ಅದು ತುಂಟತನಕ್ಕೆ ಹೇಳಿ ಮಾಡಿಸಿದ ಗುಂಪಿನಂತಿತ್ತು. ಅಷ್ಟೇ ಸಾಹಿತ್ಯ ಸಂಸ್ಕೃತಿಯ ಗಂಭೀರ ವಿದ್ಯಾರ್ಥಿಗಳಾಗಿದ್ದರು. ಎಂ.ಎ. ಮತ್ತು ಆನರ್ಸ್ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಸಾಹಿತ್ಯದ ಹರಟೆ ಉತ್ತುಂಗಕ್ಕೇರುತ್ತಿತ್ತು.
ಒಮ್ಮೊಮ್ಮೆ ಅರ್ಥಪೂರ್ಣ ಕಥೆಗಾರರಾದ ರಾಘವೇಂದ್ರ ಖಾಸನೀಸರು ಬಂದು ಮಾತಾ ಡಿಸಿ ಹೋಗುತ್ತಿದ್ದರು. ಅವರ ‘ತಬ್ಬಲಿಗಳು’ಮತ್ತು ‘ಅಲ್ಲಾವುದ್ದೀನನ ಅದ್ಭುತ ದೀಪ’ ಕಥೆಗಳು ಚರ್ಚೆಯಾಗುತ್ತಿದ್ದ ಕಾಲಘಟ್ಟವದು. ಮುಂದೆ ಇದಕ್ಕೆ ಡಿ.ಆರ್. ನಾಗರಾಜ್, ದಲಿತ ಕವಿ ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪ ಮುಂತಾದವರೆಲ್ಲ ಸೇರಿಕೊಂಡರು. ಈ ಪಿ.ಪಿ.ಕಟ್ಟೆ ಒಂದು ದಶಕಕ್ಕೂ ಮೇಲ್ಪಟ್ಟು ಅತ್ಯಂತ ಕ್ರಿಯಾಶೀಲವಾಗಿತ್ತು. ಪರಶಿವಮೂರ್ತಿ ಇದರ ಸದಸ್ಯರಾದರು.
ಆದರೆ ಅತ್ಯಂತ ಮೌನಿ. ಸಾಹಿತ್ಯಬಿಟ್ಟು ಅಕ್ಕಪಕ್ಕ ಚಲಿಸುತ್ತಿರಲಿಲ್ಲ. ಯಾಕೆಂದರೆ ಪಿ.ಪಿ.ಕಟ್ಟೆ ಕೇವಲ ಸಾಹಿತ್ಯಕ್ಕೆ ಮಾತ್ರ ಮೀಸಲಾಗಿರಲಿಲ್ಲ. ಸಮಕಾಲೀನ ಆಗು ಹೋಗುಗಳ ಬಗ್ಗೆಯೂ ಅದು ಚರ್ಚೆಯ ಕೇಂದ್ರವಾಗಿತ್ತು. ಹಾಗೆಯೇ ಲಂಕೇಶ್ ಅವರನ್ನು ನೋಡಲು ಯಾರೇ ಲೇಖಕರು ಬಂದರೂ, ಅವರಿಗೆ ಪಿ.ಪಿ.ಕಟ್ಟೆಯ ವಿಷಯ ತಲುಪುತ್ತಿತ್ತು. ಎ.ಕೆ. ರಾಮಾನುಜಂ ಅವರಂಥ ಪ್ರತಿಭಾವಂತ ಕವಿ ಮತ್ತು ಜಾನಪದ ತಜ್ಞರು ಬಂದು ಹರಟೆಯಲ್ಲಿ ಭಾಗಿಯಾಗಿ ಕವಿತೆ ಓದಿದ್ದಾರೆ.
ಆಗಿನ ಉಪಕುಲಪತಿಗಳಾಗಿದ್ದ ವಿ.ಕೃ. ಗೋಕಾಕ್ ಅವರು ಗ್ರಂಥಾಲಯಕ್ಕೆ ವಾರಕ್ಕೆರಡು ಬಾರಿಯಾದರೂ ಬರುತ್ತಿದ್ದರು. ಇವರ ಸಮಯದಲ್ಲಿಯೇ ಅಪರೂಪದ ಗ್ರಂಥಾಲಯದ ಅಧಿಕಾರಿಗಳಾದ ದೇಶಪಾಂಡೆಯವರು ಮುಖ್ಯ ಗ್ರಂಥಾಲಯದ ಅಧಿಕಾರಿಗಳಾಗಿ ಬಂದರು. ಕರ್ನಾಟಕ ಕಂಡ ಅತ್ಯಂತ ಸೂಕ್ಷ್ಮ ಸಂವೇದನೆಯ ಗ್ರಂಥಾಲಯಾಧಿಕಾರಿ, ಗೋಕಾಕರು ಪಿ.ಪಿ.ಕಟ್ಟೆ ಬಗ್ಗೆ ಕೇಳಿಬಲ್ಲವರಾಗಿದ್ದರು. ಆದರೆ ತೊಂದರೆ ಕೊಡಲಿಲ್ಲ.
ಆಗಾಗ ಪ್ರೊ. ಶಿವರುದ್ರಪ್ಪನವರು ಪ್ರೀತಿಯಿಂದ ‘‘ಏನು ನಿಮ್ಮ ಪಿ.ಪಿ.ಕಟ್ಟೆ ಜೋರಾಗಿದೆಯಂತೆ’’ ಎಂದು ಕೇಳಿ ಸುಮ್ಮನಾಗುತ್ತಿದ್ದರು. ಇದರ ನೆನಪಿಗೆ ಆರೇಳು ವರ್ಷಗಳ ಹಿಂದೆ ಶೂದ್ರದ ಮೂಲಕ ಒಂದು ದಿವಸದ ಕಾರ್ಯಕ್ರಮ ಏರ್ಪಡಿಸಿದ್ದೆ. ಬಹಳಷ್ಟು ಪತ್ರಿಕೆಗಳು ಇಂಥ ಕಟ್ಟೆಗಳು ಮರುಜೀವ ಪಡೆಯಬೇಕು ಎಂದು ಬರೆದಿದ್ದೆವು.
ನಾವು ಹರಟೆ ಕೊಚ್ಚುತ್ತಿದ್ದ ಭೌತಶಾಸ್ತ್ರದ ವಿಭಾಗದಲ್ಲಿ ಸರ್.ಸಿ.ವಿ. ರಾಯನ್ ಅಂಥವರು ಪಾಠ ಮಾಡಿದ ಜಾಗ. ಆದರೆ ಪರಶಿವ ಮೂರ್ತಿ ಮತ್ತು ನಾನು ಸೆಂಟ್ರಲ್ ಕಾಲೇಜ್ ಲೈಬ್ರರಿಯನ್ನು ಎಷ್ಟು ಚೆನ್ನಾಗಿ ಬಳಸಿಕೊಂಡೆವು.ಈ ಕಾಲಘಟ್ಟದಲ್ಲಿಯೇ ದೇಶಪಾಂಡೆ ಯವರು ಬೃಹತ್ತಾದ ಸೌಂಡ್ ಡಿಸ್ಕನ್ನು ಲೈಬ್ರರಿಗೆ ತರಿಸಿದ್ದರು. ಅದಕ್ಕಾಗಿಯೇ ಪ್ರತ್ಯೇಕವಾದ ಕೊಠಡಿಯನ್ನು ಸಿದ್ಧಪಡಿಸಿದ್ದರು. ಅಲ್ಲಿ ವಾರಕ್ಕೆರಡು ಬಾರಿ ಸೇರುತ್ತಿದ್ದೆವು. ಹೀಗೆ ಸೇರಿ ಜಗತ್ತಿನ ಶ್ರೇಷ್ಠ ರಂಗತಂಡಗಳ ನಿರ್ದೇಶನದ ನಾಟಕಗಳ ಧ್ವನಿ ಮುದ್ರಣವನ್ನು ಕೇಳುವ ಅವಕಾಶ ಲಭಿಸಿತ್ತು. ಇದಂತೂ ಒಂದು ಸ್ಮರಣೀಯ ಅನುಭವ.
ಆಗ ಇನ್ನೂ ದೂರದರ್ಶನ ಬಂದಿರಲಿಲ್ಲ. ಇದರಲ್ಲಿ ಖಾಸನೀಸರು ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದರು. ಹಾಗೆಯೇ ಜೆ.ಆರ್. ರಾಮಮೂರ್ತಿಯಂಥ ಅದ್ಭುತ ಪ್ರತಿಭೆಯ ಗ್ರಂಥಾಲಯಾಧಿಕಾರಿ ನಮ್ಮಿಂದ ಎಂತೆಂಥ ಪುಸ್ತಕಗಳನ್ನು ಓದಿಸಿದ್ದಾರೆ. ಪರಶಿವಮೂರ್ತಿಯವರಿಗಂತೂ ಅಂಧರಿಗೆ ಸಂಬಂಧಿಸಿದ ಏನೇ ಸಾಹಿತ್ಯ ಬಂದರೂ ಅದನ್ನು ತಲುಪಿಸುತ್ತಿದ್ದರು. ಒಮ್ಮೆ ನನಗೆ ತುಂಬ ಪಿಚ್ಚೆನಿಸಿತು. ದೇಶಪಾಂಡೆಯವರು ಕೆ.ಕೆ. ಹೆಬ್ಬಾರರ ಒಂದು ಪೆಯಿಂಟಿಂಗ್‌ನ್ನು ಗ್ರಂಥಾಲಯಕ್ಕೆ ಚಿತ್ರಿಸಿದರು.
ಅದು ಸುಮಾರು ಹದಿನೈದು ಅಡಿ ಉದ್ದ ಮತ್ತು ಹತ್ತು ಅಡಿ ಅಗಲವಿತ್ತು. ಅದನ್ನು ನೋಡು ವುದಕ್ಕಾಗಿಯೇ ಎಷ್ಟೋ ಕಲಾಪ್ರೇಮಿಗಳು ಬರುತ್ತಿದ್ದರು. ಆಗ ಈಗಿನ ಪ್ರಮಾಣದಲ್ಲಿ ಚಿತ್ರಕಲೆ ಬೆಳೆದಿರ ಲಿಲ್ಲ. ನನಗೆ ಅದನ್ನು ನೋಡಿದಾಗಲೇ ಪಿಕಾಸೋವಿನ ಜಗತ್ಪ್ರಸಿದ್ದ ಗರ್ನಿಕಾ ಚಿತ್ರ ನೆನಪಿಗೆ ಬರುತ್ತಿತ್ತು. ಆ ರೀತಿಯ ವಿಶಾಲ ಕ್ಯಾನ್‌ವಾಸ್‌ನಲ್ಲಿ ಸೃಷ್ಟಿಯಾಗಿತ್ತು.
ಕೊನೆಗೆ ಜಾತಿಯ ಗೂಬೆಕೂರಿಸಿ ಹೆಬ್ಬಾರರಂಥ ಸಭ್ಯ ಕಲಾವಿದರಿಗೆ ಮತ್ತು ದೇಶಪಾಂಡೆಯಂಥ ಗ್ರಂಥ ಪಾಲಕರಿಗೆ ಅವಮಾನ ಮಾಡಿದರು. ಸಾವಿರಾರು ರೂಪಾಯಿ ಅಕ್ರಮ ನಡೆದಿದೆ ಎಂದು. ಅನಗತ್ಯ ಅಪಪ್ರಚಾರಕ್ಕೊಳಗಾಗಿದ್ದ ಈ ಚಿತ್ರವನ್ನು ನೋಡಲು ಪರಶಿವಮೂರ್ತಿ ಲೈಬ್ರೆರಿ ಒಳಕ್ಕೆ ಕರೆದುಕೊಂಡು ಹೋದರು. ಅದನ್ನು ನನ್ನ ಮಿತಿಯಲ್ಲಿ ವಿವರಿಸುತ್ತಿದ್ದಾಗ; ‘‘ಅಯ್ಯೋ ನನಗೆ ಸ್ವಲ್ಪ ಸಮಯವಾದರೂ ದೃಷ್ಟಿ ಇದ್ದಿದ್ದರೆ ಇಂಥದನ್ನು ನೋಡಿ ಎಷ್ಟು ರೋಮಾಂಚಿತ ನಾಗುತ್ತಿದ್ದೆ’’ ಎಂಬ ಧ್ವನಿ ಈಗಲೂ ನನ್ನಲ್ಲಿ ಧ್ವನಿಸುತ್ತಿದೆ.
ಪರಶಿವಮೂರ್ತಿ ಕನಸುಗಾರ. ಒಂದು ಕಡೆ ಕಳೆದುಕೊಂಡಿದ್ದಕ್ಕೆ ಕೊರಗದೆ ಅದರ ದುಪ್ಪಟ್ಟು ಮತ್ತೊಂದು ಕಡೆ ಪಡೆಯಬೇಕು ಎಂಬ ಅದ್ಭುತ ಆಶಯವನ್ನು ತುಂಬಿಕೊಂಡವರು. ಆ ಕಾರಣ ಕ್ಕಾಗಿಯೇ ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದುಕೊಂಡೇ ‘ಕರ್ನಾಟಕದ ಅಂಧರ ಕ್ಷೇಮಾಭಿವೃದ್ಧಿ ಸಂಘ’ವನ್ನು ಪ್ರಾರಂಭಿಸಿದರು. ಇಂದು ಅದು ಅದ್ಭುತವಾಗಿ ಬೆಳೆದಿದೆ. ಬೆಂಗಳೂರಿನ ಶೇಷಾದ್ರಿ ಪುರಂನಲ್ಲಿ ಅದರ ಕಚೇರಿ ಇದೆ. ಅಲ್ಲಿ ನಾನು ಕರ್ನಾಟಕದಲ್ಲಿ ನಡೆಯುತ್ತಿರುವ ಸಾಹಿತ್ಯ ಚಳವಳಿಗಳನ್ನು ಕುರಿತು ಮತ್ತು ಶೂದ್ರದ ಅನುಭವಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎರಡು ಬಾರಿ ಮಾತಾಡಿದ್ದೇನೆ. ಆಗ ಅವರೆಲ್ಲ ಚರ್ಚೆಯಲ್ಲಿ ಎಷ್ಟು ಚೆನ್ನಾಗಿ ಭಾಗವಹಿಸುತ್ತಿದ್ದರು.
ಹೀಗೆ ಕಾವ್ಯ, ಕಥೆ ಮತ್ತು ಕಾದಂಬರಿಯ ಭಾಗಗಳನ್ನು ಓದಿಸಿ ವರ್ತಮಾನದ ಬಗ್ಗೆ ಲವಲವಿಕೆಯನ್ನು ತುಂಬಿಕೊಳ್ಳುತ್ತ ಬಂದವರು. ಅಷ್ಟೇ ಅಲ್ಲ ಇವರು ಬರವಣಿಗೆ ಕುರಿತು ಶಿಬಿರಗಳನ್ನು ಏರ್ಪಡಿಸುವುದು; ಅದರ ಮೂಲಕ ಸಾಹಿತ್ಯ, ಸಂಸ್ಕೃತಿ ಕುರಿತಂತೆ ತಮ್ಮನ್ನು ತೊಡಗಿಸಿಕೊಳ್ಳುವ ಕ್ರಿಯೆ ಅಪರೂಪದ್ದು. ಪರಶಿವ ಮೂರ್ತಿಯು ಮೂರು ನಾಲ್ಕು ಕವನ ಸಂಕಲನಗಳನ್ನು ತಮ್ಮ ಸಂಘದ ವತಿಯಿಂದ ತಂದಿದ್ದಾರೆ.
ಹಾಗೆಯೇ ಬೇರೆಯವರದ್ದು ಕೂಡ. ಇದರಲ್ಲಿ ರಾಜ್ಯದ ಸಂಚಾಲಕರಾಗಿರುವ ಮುದುಗೆರೆ ರಮೇಶ್ ಕುಮಾರ್ ಅವರು ಎಷ್ಟು ಚೆನ್ನಾಗಿ ಅಭಿವೃದ್ಧಿ ಹೊಂದಿದ್ದಾರೆ. ಒಂದು ಗಂಟೆ ಕರಾರುವಕ್ಕಾಗಿ; ನಮ್ಮ ಸಂದರ್ಭದ ಸಾಹಿತ್ಯ ಸಂಸ್ಕೃತಿಯನ್ನು ಕುರಿತು ಮಾತಾಡಬಲ್ಲರು. ಇಂಥದ್ದನ್ನು ಪರಶಿವಮೂರ್ತಿಯು ತಯಾರು ಮಾಡಿರುವ ಬಹಳಷ್ಟು ಗೆಳೆಯರಿಂದ ಕೇಳಿದ್ದೇವೆ.ಇತ್ತೀಚೆಗೆ ಅಂದರೆ ಇದೇ ಜುಲೈ 13ರಂದು ಶನಿವಾರ ಒಂದು ಅಪೂರ್ವ ಕಾರ್ಯಕ್ರಮ ನಡೆಸಿದರು. ಅದು ನಡೆದದ್ದು ಬೆಂಗಳೂರಿನ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ. ಅಂದು ಅಂಧರಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ‘ಅಂಗವಿಕಲ ಅಧಿನಿಯಮ’ ಇಲಾಖೆಯ ಆಯುಕ್ತರಿಗೆ ಗೌರವ ಸಮರ್ಪಣೆಯನ್ನು ಏರ್ಪಡಿಸಿದ್ದರು.
ಆ ಆಯುಕ್ತರ ಹೆಸರು: ಕೆ.ವಿ. ರಾಜಣ್ಣ ಎಂದು. ಅದರಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಲೇಖಕರಾದ ನ್ಯಾಯಮೂರ್ತಿ ಕೊ. ಚೆನ್ನಬಸಪ್ಪನವರು, ಸೂಕ್ಷ್ಮ ಸಂವೇದನೆಯ ಚಿಂತಕರು ಹಾಗೂ ಹೋರಾಟಗಾರ ರಾದ ಡಾ.ಕೆ.ಮರುಳಸಿದ್ದಪ್ಪನವರು ಹಾಗೂ ನಾನು ಭಾಗವಹಿಸಿದ್ದೆ.ಕರ್ನಾಟಕದ ಉದ್ದಗಲದಿಂದ ಬಂದ ನೂರಾರು ಮಂದಿ ಇದರಲ್ಲಿ ಭಾಗವಹಿಸಿದ್ದರು. ಇದೊಂದು ಸ್ಮರಣೀಯ ಅನುಭವವಾಗಿತ್ತು ನಮಗೆ. ರಾಜಣ್ಣನವರು ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿ ಎದುರಿಸಿದ ಕೆಲವು ಸಮಸ್ಯೆಗಳನ್ನು ಎಷ್ಟು ಚೆನ್ನಾಗಿ ನಮ್ಮ ಮುಂದಿಟ್ಟರು.
ಹಾಗೆಯೇ ಪ್ರಾಸ್ತಾವಿಕವಾಗಿ ಮುದುಗೆರೆ ರಮೇಶ್ ಅವರು ತಮ್ಮ ಸಂಸ್ಥೆಯ ಬೆಳವಣಿಗೆ ಬಗ್ಗೆ ಮಾತಾಡುತ್ತಲೇ ನಮ್ಮ ಸಾಹಿತ್ಯ ಸಂದರ್ಭದ ಏಳುಬೀಳುಗಳನ್ನು ಅಚ್ಚುಕಟ್ಟಾಗಿ ಸಭೆಯ ಮುಂದಿಟ್ಟಿದ್ದರು. ಇದನ್ನು ಡಾ. ಮರುಳಸಿದ್ದಪ್ಪನವರು ಉದ್ಘಾಟಿಸಿ ದೀರ್ಘವಾಗಿಯೇ ಮಾತಾಡಿದರು.
ಹಾಗೆಯೇ ಹಿರಿಯರಾದ ಕೋ.ಚೆನ್ನಬಸಪ್ಪನವರು ಮಾತಾಡಿದರು.ನಾನು ಮಾತಾಡುವಾಗ ಮುಂದೆ ಕೂತಿದ್ದ ಪರಶಿವ ಮೂರ್ತಿಯವರನ್ನು ಕಂಡು 1969ರಿಂದ ಇಲ್ಲಿಯವರೆಗಿನ ಕೆಲವು ನೆನಪುಗಳು ನನ್ನ ಮನಸ್ಸಿನ ತುಂಬ ಆವರಿಸಿಕೊಂಡಿದ್ದವು. ಒಂದು ವೇಳೆ ಅಂದು ನಾನು ಸೆಂಟ್ರಲ್ ಕಾಲೇಜಿನ ಕ್ಯೂನಲ್ಲಿ ಪರಶಿವ ಮೂರ್ತಿಯವರನ್ನು ಅಪ್ಲಿಕೇಶನ್ ಪಡೆಯುವಾಗ ಪರಿಚಯ ಮಾಡಿಕೊಳ್ಳದಿದ್ದರೆ; ಮೊನ್ನೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಶ್ರೀಮಂತ ನೆನಪು ನನಗೆ ದೊರಕುತ್ತಿರಲಿಲ್ಲ.

Advertisement

0 comments:

Post a Comment

 
Top