ಕೊಪ್ಪಳ : ಈ ಹಿಂದೆ ಮಾಧ್ಯಮ ಕ್ಷೇತ್ರ ಸೇವಾ ಮನೋಭಾವ ಹೊಂದಿತ್ತು. ಈಚೆಗಿನ ದಿನಗಳಲ್ಲಿ ಇದೊಂದು ಉದ್ಯಮವಾಗಿ ಬೆಳೆಯುತ್ತಿದ್ದು ಪತ್ರಿಕೋದ್ಯಮ ಎನಿಸಿಕೊಂಡಿದೆ. ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ಕೆಲ ದಶಕಗಳವರೆಗೆ ವಸ್ತುನಿಷ್ಠತೆಯನ್ನು ಮೈಗೂಡಿಸಿಕೊಂಡಿದ್ದ ಪತ್ರಿಕಾ ಕ್ಷೇತ್ರ ಈಗೀಗ ವ್ಯಾಪಾರಿ ಧೋರಣೆ ಅನುಸರಿಸುತ್ತಿದೆ. ಮಾಧ್ಯಮ ಕ್ಷೇತ್ರ ಇಂದು ಧ್ವನಿ ಇಲ್ಲದವರ ಪರ ನಿಂತು ಕೆಲಸ ಮಾಡಬೇಕಿದೆ ಎಂದು ಮೈಸೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಪಿ.ಮಹೇಶ್ಚಂದ್ರ ಗುರು ಹೇಳಿದರು.
ಕೊಪ್ಪಳ ಮೀಡಿಯಾ ಕ್ಲಬ್ ಸೋಮವಾರ ನಗರದ ಭಾಗ್ಯನಗರ ರಸ್ತೆಯ ಪಾನಘಂಟಿ ಮಂಗಲ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಭಾರತೀಯ ಪತ್ರಿಕಾರಂಗದಲ್ಲಿ ಧ್ವನಿ ಇಲ್ಲದವರ ಪರವಾಗಿ ಮೊದಲು ನಿಂತದ್ದು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ. ಮೂಕನಾಯಕ ಎಂಬ ಪತ್ರಿಕೆಯನ್ನು ಆರಂಭಿಸಿದ ಅವರು ದುರ್ಬಲ ವರ್ಗದ ಜನರ ಅಶೋತ್ತರಗಳಿಗೆ ವೇದಿಕೆಯಾದರು. ಪತ್ರಿಕೆಯ ಶೀರ್ಷಿಕೆಯೇ ಇದು ಧ್ವನಿ ಇಲ್ಲದವರ ಪರವಾಗಿರುವ ದನಿ ಎಂಬುದನ್ನು ಸೂಚ್ಯವಾಗಿ ಹೇಳುತ್ತಿತ್ತು ಎಂದು ವಿವರಿಸಿದರು.
ಮಾಧ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಮೊದಲ ಆದ್ಯತೆ ಸಿಗಬೇಕು. ನಂತರ ಶಿಕ್ಷಣ, ಜಾಹೀರಾತು ಮನರಂಜನೆಗೆ ಪ್ರಾಧಾನ್ಯತೆ ಇರಬೇಕು. ಆದರೆ ಈಗ ಮಾಧ್ಯಮ ಕ್ಷೇತ್ರ ಒಂದು ಉದ್ದಿಮೆಯಾಗಿರುವುದರಿಂದ ಮನರಂಜನೆಗೆ ಮೊದಲ ಪ್ರಾಶಸ್ತ್ಯ ನಂತರ ಜಾಹೀರಾತು, ಶಿಕ್ಷಣ ಕೊನೆಗೆ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವುದು ಕಳವಳಕಾರಿ ಸಂಗತಿ ಎಂದು ಅವರು ವಿಷಾದಿಸಿದರು.
ದೇಶದಲ್ಲಿ ಹಲವು ದಶಕಗಳಿಂದ ಕಾಣಸಿಗುವ ನಿರುದ್ಯೋಗ ನಿವಾರಣೆಗೆ, ಶಿಕ್ಷಣದ ಬೆಳವಣಿಗೆಗೆ ಹಾಗೂ ಪರಿಸರ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಧ್ಯಮಗಳಿಂದ ಆಗಬೇಕು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿವರೆಗೆ ಅದು ಕೇಂದ್ರ ಸರಕಾರದಲ್ಲಿರಬಹುದು ಹಾಗೆಯೇ ರಾಜ್ಯ ಸರಕಾರದಲ್ಲಾಗಿರಬಹುದು ಸಮರ್ಥ ವಿರೋಧ ಪಕ್ಷ ಇರಲೇ ಇಲ್ಲ. ಅದನ್ನು ಇಲ್ಲಿವರೆಗೂ ನಿಭಾಯಿಸುತ್ತಿರುವುದು ಮಾಧ್ಯಮ ಕ್ಷೇತ್ರ. ಇದು ಪತ್ರಿಕಾರಂಗದ ಹೆಗ್ಗಳಿಕೆಯೇ ಸರಿ ಎಂದು ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಮೀಡಿಯಾ ಕ್ಲಬ್‌ನ ಅಧ್ಯಕ್ಷ ಸೋಮರಡ್ಡಿ ಅಳವಂಡಿ ಮಾತನಾಡಿ, ವಿದ್ಯೆ ಎಲ್ಲಕ್ಕಿಂತ ಮೇಲು ಎನ್ನುವ ಕಾಲ ಒಂದಿತ್ತು. ಈಗ ವಿದ್ಯೆಗಿಂತ ವಿಚಾರಿಸುವ ವಿವೇಚನೆ ಮೇಲು ಎಂದರೆ ಅತಿಶಯೋಕ್ತಿಯಾಗಲಾರದು. ಪತ್ರಿಕೋದ್ಯಮಕ್ಕೆ ಬರುವವರಲ್ಲಿ ವಿದ್ಯೆಗಿಂತ ವಿವೇಚನಾ ಶಕ್ತಿ ಹೆಚ್ಚಿರಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಸಂಸ್ಥಾನಮಠದ ಪರಮಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, ಎಲ್ಲ ರಂಗಕ್ಕೂ ಒಂದೊಂದು ದಿನವನ್ನು ಮೀಸಲಿಡಲಾಗಿದೆ. ಹಾಗೆಯೇ ಸ್ವಾಮಿಜಿಗಳಿಗೂ ಯಾಕೆ ಒಂದು ದಿನಾಚರಣೆ ಬಂದಿಲ್ಲ ಎಂದು ಪ್ರಶ್ನಿಸುವ ಮೂಲಕ ಎಲ್ಲ ದಿನಾಚರಣೆಯ ಕಾರ್ಯಕ್ರಮಗಳಲ್ಲೂ ನಾವು ಇದ್ದೇ ಇರುತ್ತೇವೆ ಹಾಗಾಗಿ ನಮಗೂ ಒಂದು ದಿನಾಚರಣೆಯ ಅಗತ್ಯವಿಲ್ಲದಂತೆ ತೋರುತ್ತದೆ ಎಂದು ನುಡಿದರು.
ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು. ಖಡ್ಗಕ್ಕಿಂತ ಲೇಖನಿ ಹರಿತ ಎಂಬ ಮಾತೊಂದಿದೆ. ಒಂದೇ ಒಂದು ಅಕ್ಷರ ತಿರುವು ಮುರುವಾದರೆ ಅರ್ಥ ಹೋಗಿ ಅನರ್ಥವಾಗುತ್ತದೆ. ಶಾಂತಿಯಿಂದ ಇರಬೇಕಾದ ಸ್ಥಳದಲ್ಲಿ ಅಶಾಂತಿ ತಲೆದೋರುತ್ತದೆ. ಹಾಗೆಯೇ ಶಮನವಾಗದ ಮುನಿಸನ್ನು ಧಮನ ಮಾಡುವ ಶಕ್ತಿ ಲೇಖನಿಗಿದೆ. ಪತ್ರಕರ್ತರು ಸಮಾಜದ ಸ್ವಾಸ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದಾಗ ಅಭಿವೃದ್ದಿ ಸಾಧ್ಯ ಎಂದು ಶ್ರೀಗಳು ಆಶೀರ್ವಚನ ನೀಡಿದರು.
ಕೊಪ್ಪಳದಿಂದ ಮತ್ತೊಂದು ಜಿಲ್ಲೆಗೆ ವರ್ಗವಾಗಿರುವ ಪತ್ರಕರ್ತರಾದ ಶರಣಬಸವ ಹುಲಿಹೈದರ, ವಾಸಿಂ ಭಾವಿಮನಿಯವರನ್ನು ಸಮಾರಂಭದಲ್ಲಿ ಸತ್ಕರಿಸಿ ಬೀಳ್ಕೊಡಲಾಯಿತು. ಈ ವರ್ಷ ವಿವಿಧ ಪ್ರಶಸ್ತಿಗೆ ಭಾಜನವಾಗಿರುವ ಪತ್ರಕರ್ತರಾದ ಶರಣಪ್ಪ ಬಾಚಲಾಪುರ, ಹುಸೇನ್ ಪಾಷಾ ಅವರನ್ನು ಗೌರವಿಸಲಾಯಿತು. ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿಯವರನ್ನು ಕಾರ್ಯಕ್ರಮದಲ್ಲಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಽಕಾರಿ ಬಿ.ವಿ.ತುಕಾರಾಂ, ಹಿರಿಯ ಛಾಯಾಗ್ರಾಹಕ ಪ್ರಕಾಶ ಕಂದಕೂರ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕ ಕರಡಿ ಸಂಗಣ್ಣ, ಅಪರ ಜಿಲ್ಲಾಽಕಾರಿ ಗೋವಿಂದರಡ್ಡಿ, ಜಿ.ಪಂ.ಅಧ್ಯಕ್ಷ ಜನಾರ್ಧನ ಹುಲಗಿ, ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಕಂದಕೂರಪ್ಪ, ಜೆಡಿಎಸ್ ಮುಖಂಡರಾದ ಪ್ರದೀಪಗೌಡ ಮಾಲೀಪಾಟೀಲ್, ವೀರೇಶ ಮಹಾಂತಯ್ಯನಮಠ, ಪತ್ರಕರ್ತರಾದ ನಾಭಿರಾಜ್ ದಸ್ತೇನವರ್, ಗಂಗಾಧರ ಬಂಡಿಹಾಳ, ಮಹೇಶಗೌಡ ಭಾನಾಪೂರ, ಶರತ್ ಹೆಗ್ಡೆ, ದೇವು ನಾಗನೂರು, ದತ್ತು ಕಮ್ಮಾರ, ತಿಪ್ಪನಗೌಡ ಮಾಲೀಪಾಟೀಲ್, ಬಸವರಾಜ ಬಿನ್ನಾಳ, ಪರಮೇಶರಡ್ಡಿ ಹ್ಯಾಟಿ, ಸಂತೋಷ ದೇಶಪಾಂಡೆ, ಶಿವರಾಜ ನುಗಡೋಣಿ, ಶ್ರೀಪಾದ ಅಯಾಚಿತ್, ವಿಷ್ಣು ಪ್ರಸಾದ, ಮುಕ್ಕಣ್ಣ ಕತ್ತಿ, ರವಿಕುಮಾರ ನಾಯಕ, ಮಲ್ಲಿಕಾರ್ಜುನಸ್ವಾಮಿ, ಸಿರಾಜ್ ಬಿಸರಳ್ಳಿ, ನಾಗರಾಜ, ಬಸವರಾಜ ಶೀಲವಂತರ, ಶರಣಪ್ಪ ಕೊತಬಾಳ, ಸತೀಶ ಮುರಾಳ, ಮಾರುತಿ ಕಟ್ಟಿಮನಿ, ಸಮೀರ್ ಪಾಟೀಲ್, ಈರಣ್ಣ ಬಡಿಗೇರ, ನಾಗರಾಜ ಹಿರೆಮಠ ಹಾಗೂ ವಿವಿಧ ಪಕ್ಷಗಳ ಮುಖಂಡರು, ಗಣ್ಯರು ಪಾಲ್ಗೊಂಡಿದ್ದರು.
ಮೌನೇಶ ಬಡಿಗೇರ ನಿರೂಪಿಸಿದರು. ದೊಡ್ಡೇಶ ಯಲಿಗಾರ ಸ್ವಾಗತಿಸಿದರು. ಬಸವರಾಜ ಕರುಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುರಾಜ್.ಬಿ.ಆರ್. ಅತಿಥಿ ಪರಿಚಯ ಮಾಡಿಕೊಟ್ಟರು. ಶಂಕರ ಕೊಪ್ಪದ ವಂದಿಸಿದರು.
0 comments:
Post a Comment