PLEASE LOGIN TO KANNADANET.COM FOR REGULAR NEWS-UPDATES

  ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡಬಹುದಾದ ರೋಗಗಳ ನಿಯಂತ್ರಣಕ್ಕೆ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಲಾರ್ವ ಸಮೀಕ್ಷೆ ಮತ್ತು ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನ ಅಭಿಯಾನವನ್ನು ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಆರಂಭಿಸಲಾಗಿದ್ದು, ಜೂ. ೨೨ ರವರೆಗೆ ಅಭಿಯಾನ ನಡೆಯಲಿದೆ.
   ರಾಜ್ಯದಲ್ಲಿ ರೋಗವಾಹಕ ಆಶ್ರಿತ ರೋಗಗಳ ಹರಡುವಿಕೆ ಏರಿಕೆಯಾಗುತ್ತಿದ್ದು ಹಾಗೂ ಮಳೆಗಾಲ ಪ್ರಾರಂಭವಾಗಿರುವುದರಿಂದ ಡೆಂಗ್ಯು, ಚಿಕೂನ್ ಗುನ್ಯಾ ಮತ್ತು ಮಲೇರಿಯಾ ಸೇರಿದಂತೆ ನಾನಾ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಈ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ರೋಗವಾಹಕ ಆಶ್ರಿತ ರೋಗಗಳ ಹರಡುವಿಕೆ ಮತ್ತು ನಿಯಂತ್ರಣದ ಸಲುವಾಗಿ ಜೂ.೨೦ ರಿಂದ ಜೂ.೨೨ ರವರೆಗೆ ಈಡೀಸ್ ಲಾರ್ವ ಸಮೀಕ್ಷೆ ಮತ್ತು ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನಾ ಅಭಿಯಾನವನ್ನು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಹಮ್ಮಿಕೊಳ್ಳಲಾಗಿದೆ. 
ಪ್ರತಿ ಹಳ್ಳಿಯಲ್ಲಿ ಆರೋಗ್ಯ ಕಾರ್ಯಕರ್ತರ ನೇತೃತ್ವದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ.ಸದಸ್ಯರು, ಸಾಕ್ಷರತಾ ಪ್ರೇರಕರ ತಂಡವನ್ನು ರಚಿಸಲಾಗಿದ್ದು, ಈ ತಂಡವು ಮನೆ ಮನೆಗೆ ತೆರಳಿ ಈಡೀಸ್ ಲಾರ್ವ ಸಮೀಕ್ಷೆ ಮತ್ತು ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಹಾಗೂ ಜನಜಾಗೃತಿ ಕಾರ್ಯಕ್ರಮವನ್ನು ನಡೆಸಲಿದ್ದಾರೆ. 
ಡೆಂಗ್ಯು ಜ್ವರ ಮುಂಜಾಗೃತಾ ಹಾಗೂ ನಿಯಂತ್ರಣ ಕ್ರಮ ತೀವ್ರಗೊಳಿಸುವ ಪ್ರಕ್ರಿಯೆಯಲ್ಲಿ ಸೊಳ್ಳೆಗಳ ನಿರ್ಮೂಲನೆಗಾಗಿ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಬೆಳಿಗ್ಗೆ ಪ್ರಾರ್ಥನೆಯ ನಂತರ ಡೆಂಗ್ಯು ಜ್ವರ ಮುಂಜಾಗೃತ ಹಾಗೂ ನಿಯಂತ್ರಣ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶ್ರಮಿಸಲಾಗುತ್ತಿದೆ. 
  ಯಾವುದೇ ಜ್ವರ ಇರಲಿ ಮೊದಲು ರಕ್ತ ಪರೀಕ್ಷೆ ಮಾಡಿಸಬೇಕು, ಆರೋಗ್ಯ ಸಿಬ್ಬಂದಿ ನಿಮ್ಮ ಮನೆ ಹತ್ತಿರ ಬಂದಾಂಗ ಜ್ವರ ಪಿಡಿತರು ರಕ್ತ ಲೇಪನ ನೀಡಿ ಸಹಕರಿಸಿ, ಬೆಳಿಗ್ಗೆ ಮತ್ತು ಸಂಜೆ ವೇಳೆ ಸೊಳ್ಳೆಯ ಚಟುವಟಿಕೆ ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ ಆದಷ್ಟು ಮೈ ತುಂಬಾ ಬಟ್ಟೆಯನ್ನು ಧರಿಸಬೇಕು ಹಾಗೂ ಮನೆಯ ಕಿಟಕಿ, ಬಾಗಿಲು ಮುಚ್ಚಬೇಕು, ಸಂಜೆಯ ವೇಳೆ ಮನೆಯ ಮುಂದೆ ಬೇವಿನ ಸೊಪ್ಪಿನ ಹೊಗೆ ಹಾಕಬೇಕು, ಮಲಗುವಾಗ ಸೊಳ್ಳೆ ಪರದೆಗಳನ್ನು ತಪ್ಪದೇ ಉಪಯೋಗಿಸಬೇಕು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಚರಂಡಿ ನಾಲೆಗಳಲ್ಲಿ ಕಸಕಡ್ಡಿ ಎಸೆದು ನೀರಿನ ಸರಗವಾದ ಹರಿಯುವಿಕೆಗೆ ತಡೆಯೊಡ್ಡದಂತೆ ನೋಡಿಕೊಳ್ಳಬೇಕು, ನೀರು ಶೇಖರಣಾ ಸಲಕರಣೆಗಳಾದ ಡ್ರಮ್‌ಗಳು, ಬ್ಯಾರಲ್‌ಗಳು, ತೊಟ್ಟಿಗಳು, ಏರ್‌ಕೂಲರ್‌ಗಳು, ಕಲ್ಲಿನ ದೋಣಿಗಳನ್ನು ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಚವಾಗಿ ತೊಳೆದು ಮತ್ತೆ ಭರ್ತಿ ಮಾಡಿ ಭದ್ರವಾದ ಮುಚ್ಚಳದೊಂದಿಗೆ ಮುಚ್ಚಿಡಬೇಕು, ಮನೆಯ ಸುತ್ತ-ಮುತ್ತ ಮನೆಗಳ ಮೇಲೆ ತ್ಯಾಜ್ಯ ವಸ್ತುಗಳಾದ ಹಳೆಯ ಟೈರು, ಒರಳುಕಲ್ಲು, ಎಳೆನೀರಿನ ಚಿಪ್ಪು, ಪ್ಲಾಸ್ಟಿಕ್ ಹಾಗೂ ಗಾಜಿನ ಸಲಕರಣೆಗಳನ್ನು ನೀರು ಸಂಗ್ರಹವಾಗದಂತೆ ಎಚ್ಚರವಹಿಸಬೇಕು, ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ತಡಗಟ್ಟುವ ಜಾಲರಿಗಳನ್ನು ಅಳವಡಿಸಬೇಕು.
  ಆರೋಗ್ಯ ಇಲಾಖೆ, ನಗರಸಭೆ, ಪುರಸಭೆ ಹಾಗೂ ಗ್ರಾ.ಪಂ.ಗಳು ಹಮ್ಮಿಕೊಳ್ಳುವ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಎಲ್ಲರೂ ಸಹಕಾರ ನೀಡಬೇಕು.  ಈ ಮೂಲಕ ಈ ಜಾಗೃತಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.   

Advertisement

0 comments:

Post a Comment

 
Top