PLEASE LOGIN TO KANNADANET.COM FOR REGULAR NEWS-UPDATES

ಉದ್ಯೋಗಖಾತ್ರಿ ಯೋಜನೆ
ಜಿಲ್ಲೆಯಲ್ಲಿ ಉದ್ಯೋಗಖಾತ್ರಿ ಯೋಜನೆಗಾಗಿ ೮೦ ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಅನುಮೋದನೆ ನೀಡಲಾಗಿದ್ದು, ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಜಿ.ಪಂ. ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಹೇಳಿದರು.
  ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ಸಣ್ಣ, ಅತಿ ಸಣ್ಣ ರೈತರು, ಪ.ಜಾತಿ ಮತ್ತು ಪ.ಪಂಗಡದ ಫಲಾನುಭವಿಗಳನ್ನು ಆಯ್ಕೆಗೊಳಿಸುವ ಬಗ್ಗೆ ಮಾಹಿತಿ ನೀಡುವ ಸಂಬಂಧ ಚುನಾಯಿತ ಪ್ರತಿನಿಧಿಗಳಿಗೆ ಶನಿವಾರ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
  ಬಡಜನರ ಅಭ್ಯುದಯಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಬಹುತೇಕ ಯೋಜನೆಗಳ ಅನುಷ್ಠಾನಗೊಳಿಸುವ ಹೊಣೆಯನ್ನು ಆಯಾ ಗ್ರಾಮ ಪಂಚಾಯತಿಗಳಿಗೇ ನೀಡಿರುವುದರಿಂದ, ಗ್ರಾ.ಪಂ. ಗಳ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ.  ಜನರಿಂದ ಚುನಾಯಿತರಾಗುವ ಜನಪ್ರತಿನಿಧಿಗಳು, ಜನರ ಹಿತಕ್ಕಾಗಿ ರೂಪಿಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಹೊಂದುವುದು ಅಗತ್ಯವಾಗಿದೆ.  ಇಲ್ಲವಾದಲ್ಲಿ, ಯೋಜನೆಗಳ ಸಮರ್ಪಕ ಅನುಷ್ಠಾನ ಕಷ್ಟಸಾಧ್ಯ.  ಗ್ರಾಮಗಳ ಅಭಿವೃದ್ಧಿಯ ವಿಷಯ ಬಂದಾಗ ಎಲ್ಲ ಜನಪ್ರತಿನಿಧಿಗಳು ಪಕ್ಷ-ಭೇದ ಬದಿಗಿರಿಸಿ, ಅಭಿವೃದ್ಧಿಯ ಕಡೆಗಷ್ಟೇ ಗಮನ ನೀಡಬೇಕು.  ಉದ್ಯೋಗಖಾತ್ರಿ ಯೋಜನೆಗಾಗಿ ಇದೀಗ ೮೦ ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಜಿ.ಪಂ. ಅನುಮೋದನೆ ನೀಡಿದ್ದು, ಈ ಯೋಜನೆಯಡಿ ಜಿಲ್ಲೆಯಲ್ಲಿ ಇನ್ನೂ ೩೦೦ ಕೋಟಿ ರೂ.ಗಳ ಅನುದಾನವನ್ನು ಬಳಸಲು ಸಾಕಷ್ಟು ಅವಕಾಶವಿದೆ.  ಉದ್ಯೋಗಖಾತ್ರಿ ಯೋಜನೆಯನ್ನು ಬಳಸಿಕೊಂಡು, ಜಿಲ್ಲೆಯಲ್ಲಿ ತೋಟಗಾರಿಕೆಯನ್ನು ಅಭಿವೃದ್ಧಿಪಡಿಸುವ ಮೂಲಕ ಸಣ್ಣ, ಅತಿ ಸಣ್ಣ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಗುರಿ ಹೊಂದಲಾಗಿದೆ. ಉದ್ಯೋಗಖಾತ್ರಿ ಯೋಜನೆಯಡಿ ವಯಕ್ತಿಕ ಶೌಚಾಲಯ ನಿರ್ಮಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಿಂದಾಗಿ ಪ್ರತಿ ಶೌಚಾಲಯಕ್ಕೆ ೪೫೦೦ ರೂ.ಗಳ ಸಹಾಯಧನ ಪಡೆಯಲು ಅವಕಾಶವಿದೆ.  ಗ್ರಾಮೀಣರಲ್ಲಿ ಶೌಚಾಲಯದ ಬಗ್ಗೆ ಮನೆಮಾಡಿರುವ ತಪ್ಪು ಕಲ್ಪನೆಯನ್ನು ದೂರ ಮಾಡಿ, ಶೌಚಾಲಯದ ಅಗತ್ಯತೆಯ ಬಗ್ಗೆ ಮನವರಿಕೆ ಮಾಡುವ ಜವಾಬ್ದಾರಿ ಆಯಾ ಗ್ರಾ.ಪಂ. ಗಳ ಸದಸ್ಯರದ್ದಾಗಿದೆ. ಇದಕ್ಕಾಗಿ ವಿಶೇಷ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಇದಕ್ಕೆ ಎಲ್ಲ ಚುನಾಯಿತ ಪ್ರತಿನಿಧಿಗಳ ಸಹಕಾರ ಅಗತ್ಯವಾಗಿದೆ ಎಂದು ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ ಅವರು ಹೇಳಿದರು.
  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಉದ್ಯೋಗಖಾತ್ರಿ ಯೋಜನೆಯಡಿ ತೋಟಗಾರಿಕೆ ಹಾಗೂ ವಯಕ್ತಿಕ ಶೌಚಾಯಲಕ್ಕೆ ನೀಡಿರುವ ಆದ್ಯತೆ ಕುರಿತು ವಿವರಣೆ ನೀಡಿ, .  ಜಿಲ್ಲೆಯಲ್ಲಿ ಸುಮಾರು ೭೪೦೪೬ ಸಣ್ಣ ರೈತರು, ೫೭೩೫೮- ಅತಿ ಸಣ್ಣ ರೈತರು, ೧೮೯೪೬- ಪ.ಜಾತಿಯ ರೈತರು, ೨೨೦೮೨- ಪ.ಪಂಗಡ ರೈತರಿದ್ದಾರೆ.  ಉದ್ಯೋಗಖಾತ್ರಿಯಡಿ ಇಷ್ಟೂ ಸಂಖ್ಯೆಯ ಫಲಾನುಭವಿಗಳು  ಯೋಜನೆಯ ಲಾಭ ಪಡೆಯಬಹುದಾಗಿದೆ.  ಒಣ ಬೇಸಾಯ ತೋಟಗಾರಿಕೆ ಬೆಳೆಗಳಾದ ಹುಣಸೆ, ನೇರಳೆ, ಸೀತಾಫಲ, ಅಂಜೂರ, ನೆಲ್ಲಿ, ನೀರಾವರಿ ತೋಟಗಾರಿಕೆ ಬೆಳೆಗಳಾದ ಮಾವು, ಸಪೋಟ, ದಾಳಿಂಬೆ, ಸೀಬೆ, ಲಿಂಬೆ, ತೆಂಗು, ತಾಳೆ, ನುಗ್ಗೆ ಮುಂತಾದ ಬೆಳೆ ಬೆಳೆಯಲು ಪ್ರತಿ ಎಕರೆಗೆ ಆಯಾ ಬೆಳೆ ಬೆಳೆಯಲು ತಗಲುವ ವೆಚ್ಚವನ್ನು ಮಾನವ ದಿನಗಳಿಗೆ ಅನುಗುಣವಾಗಿ ಮೊತ್ತ ಪಾವತಿಸಲಾಗುವುದು.  ಅಲ್ಲದೆ ಗಿಡಗಳನ್ನು ಇದೇ ಯೋಜನೆಯಡಿ ಒದಗಿಸಲು ಅವಕಾಶ ಕಲ್ಪಿಸಲಾಗಿದೆ.  ಪ್ರತಿ ಕುಟುಂಬಕ್ಕೆ ವಾರ್ಷಿಕ ೧೫೦ ಮಾನವ ದಿನಗಳಷ್ಟು ಕೂಲಿ ಮೊತ್ತವನ್ನು ಪಡೆಯಲು ಅವಕಾಶವಿದೆ.  ಇದಕ್ಕಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಜಿಲ್ಲೆಯ ಎಲ್ಲ ೧೩೪ ಗ್ರಾಮ ಪಂಚಾಯತಿಗಳಿಗೆ ಕಾಲಮಿತಿಯನ್ನು ನಿಗದಿಪಡಿಸಲಾಗಿದ್ದು, ರೈತರು ಜು. ೧ ರಿಂದ ೭ ರವರೆಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.  ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಜು. ೧ ರಿಂದ ೦೪ ರವರೆಗೆ ವಾರ್ಡ್ ಸಭೆ ನಡೆಸಿ, ಫಲಾನುಭವಿಗಳ ಯಾದಿ ಸಿದ್ಧಗೊಳ್ಳಬೇಕು, ಜುಲೈ ೦೫ ರಿಂದ ೦೭ ವರೆಗೆ ಗ್ರಾಮ ಸಭೆ ನಡೆಸಿ, ಫಲಾನುಭವಿಗಳ ಪಟ್ಟಿ ಅಂತಿಮಗೊಳ್ಳಬೇಕು.  ನಂತರ ಜುಲೈ ೦೮ ರಂದು ಸಾಮಾನ್ಯ ಸಭೆ ನಡೆಸಿ, ಫಲಾನುಭವಿಗಳ ಪಟ್ಟಿಗೆ ಅನುಮೋದಿಸಬೇಕು.  ಜುಲೈ ೦೯ ರ ಒಳಗಾಗಿ ಎಲ್ಲ ಫಲಾನುಭವಿಗಳ ಪಟ್ಟಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಿ ಸಲ್ಲಿಸಲು ಸೂಚನೆ ನೀಡಲಾಗಿದೆ.  ನಿಗದಿತ ಕಾಲಮಿತಿಯೊಳಗೆ ಈ ಯೋಜನೆಯನ್ನು ಕಾರ್ಯಗತಗೊಳಿಸದ ಗ್ರಾಮ ಪಂಚಾಯತಿ ಅಧ್ಯಕ್ಷರು, ಪಿಡಿಓ ಗಳನ್ನೇ ಹೊಣೆಗಾರರನ್ನಾಗಿಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
  ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಸದಸ್ಯರುಗಳಾದ ಅರವಿಂದಗೌಡ ಪಾಟೀಲ, ಗಂಗಣ್ಣ ಸಮಗಂಡಿ, ಚನ್ನಮ್ಮ ಹೇರೂರ, ಶ್ಯಾವಮ್ಮ ಕತ್ತಿ, ಉಮಾ ಶಿವಪ್ಪ ಮುತ್ತಾಳ, ವನಿತಾ ಗಡಾದ್, ಅಮರೇಶ್ ಕುಳಗಿ, ಪರಸಪ್ಪ ಕತ್ತಿ, ಪಿಲ್ಲಿ ವೆಂಕಟರಾವ್ ಸೇರಿದಂತೆ ಜಿ.ಪಂ. ವಿವಿಧ ಸದಸ್ಯರುಗಳು, ತಾ.ಪಂ. ಅಧ್ಯಕ್ಷ ದೇವಪ್ಪ ಮೇಕಾಳಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.  ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ತಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಆಸಕ್ತ ಸದಸ್ಯರುಗಳು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top