PLEASE LOGIN TO KANNADANET.COM FOR REGULAR NEWS-UPDATES

ಮದ್ದಿನೇನಿ ಮೇಡಂ ಎತ್ತಂಗಡಿಗೆ ಸಿದ್ಧತೆ? : ಕೈಗಾರಿಕಾ ಪರ ಹಾಗೂ ರೈತವಿರೋದಿ ಡಿಸಿ ವರ್ಗಕ್ಕೆ ಹೆಚ್ಚುತ್ತಿರುವ ಒತ್ತಡ


        ಕೊಪ್ಪಳ : ಕೊಪ್ಪಳ ಜಿಲ್ಲಾದಿಕಾರಿ ತುಳಸಿ ಮದ್ದಿನೇನಿಯವರ ವರ್ಗಾವಣೆಗೆ ಕೊಪ್ಪಳ ಜಿಲ್ಲೆಯ ಜನ ಒತ್ತಾಯಿಸುತ್ತಿದ್ದಾರೆ. ಅವರು ಜಿಲ್ಲೆಗೆ ಬಂದಾಗಿನಿಂದ ರೈತವಿರೋದಿನೀತಿಯನ್ನು ಅನುಸರಿಸುತ್ತಾ ಬಂದಿದ್ದಾರೆ. ಸದಾ ಕೈಗಾರಿಕಾ ಕಂಪನಿಗಳ ಪರ ಮಾತನಾಡುವ ಅವರ ವರ್ಗಾವಣೆಗೆ ಈ ಹಿಂದೆಯೇ ಕೂಗು ಕೇಳಿ ಬಂದಾಗ ಆಗಿನ ಶಾಸಕ ಬಿಜೆಪಿಯ ಕರಡಿ ಸಂಗಣ್ಣ ಅವರನ್ನು ರಕ್ಷಿಸಿದ್ದರು. ಮೊದಲಿನಿಂದಲೂ ಕಾಂಗ್ರೆಸ್ ನಾಯಕರ ವಿರೋಧ ಕಟ್ಟಿಕೊಂಡಿರುವ ಡಿಸಿಗೆ ಈಗ ಕಾಂಗ್ರೆಸ್ ನಾಯಕರ ಮಾತು ಕೇಳುವ ಪರಿಸ್ಥಿತಿ ಬಂದೊದಗಿದೆ.
        ಕೊಪ್ಪಳದಲ್ಲಿ ಸಂಗಣ್ಣ ಕರಡಿ ಹಾಗೂ ಬಿಜೆಪಿಯ ಜನಪ್ರತಿನಿದಿಗಳ ಕೈಗೊಂಬೆಯಾಗಿದ್ದ ತುಳಸಿ ಮದ್ದಿನೇನಿಯವರನ್ನು ವರ್ಗಾವಣೆ ಮಾಡಲು ಕಾಂಗ್ರೆಸ್ ಮೊದಲಿನಿಂದಲೂ ಸಂಚು ನಡೆಸಿತ್ತು. ಆದರೆ ತುಳಸಿ ಮದ್ದಿನೇನಿಯವರನ್ನು ಕೊಪ್ಪಳದಲ್ಲಿಯೇ ಉಳಿಯುವಂತೆ ಅಂದಿನ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಎಲ್ಲ ತಂತ್ರ ಹೆಣೆದಿದ್ದರು. ಜಿಲ್ಲೆಗೆ ಫೋಸ್ಕೋ ಇಲ್ಲವೇ ಬೃಹತ್ ಕೈಗಾರಿಕೆ ತರುವ ಉದ್ದೇಶದಿಂದ ನಿರಾಣಿಯವರು ಮದ್ದಿನೇನಿಯವರನ್ನು ಕೊಪ್ಪಳದಲ್ಲಿ ಉಳಿಯುವಂತೆ ಮಾಡಿದ್ದರು.
       
ಡಿಸಿ ಸೇರಿದಂತೆ ಸುಮಾರು ೨೦ ಅಧಿಕಾರಿಗಳ ವರ್ಗ? :
        ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸೇರಿದಂತೆ ಜಿಲ್ಲಾಮಟ್ಟದ ಸುಮಾರು ೨೦ ಅಧಿಕಾರಿಗಳ ವರ್ಗಾವಣೆಗೆ ಕಾಂಗ್ರೆಸ್ ಮುಖಂಡರು ಸಿದ್ದತೆ ನಡೆಸಿದ್ದಾರೆ. ಹಲವು ವರ್ಷಗಳಿಂದ ಕೊಪ್ಪಳದಲ್ಲಿಯೇ ಬೀಡು ಬಿಟ್ಟಿರುವ ಕೆಲ ಅಧಿಕಾರಿಗಳು ಬಿಜೆಪಿ ನಾಯಕರ ಪ್ರಭಾವ ಬಳಸಿ ಕೊಪ್ಪಳದಲ್ಲಿಯೇ ನೆಲೆ ನಿಲ್ಲುವ ವ್ಯವಸ್ಥೆ ಮಾಡಿಕೊಂಡಿದ್ದರು. ಈಗ ಸರಕಾರ ಬದಲಾಗಿದ್ದರಿಂದ ಜನಪ್ರತಿನಿಧಿಗಳು ಬದಲಾಗಿದ್ದರಿಂದ ಕೊಪ್ಪಳದಲ್ಲಿಯೇ ನೆಲೆ ನಿಂತಿದ್ದ ಅಧಿಕಾರಿಗಳಿಗೆ ಈಗ ಇಲ್ಲಿರಲು ಆಗುತ್ತಿಲ್ಲ.
         ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿಯವರು ಕೊಪ್ಪಳಕ್ಕೆ ಬಂದು ಅಧಿಕಾರ ವಹಿಸಿಕೊಂಡಾಗಿನಿಂದ ಜನವಿರೋಧಿ ಕಾನೂನುಗಳನ್ನು ರೂಪಿಸಿದ್ದಾರೆ. ಜನರಗೆ ಅನುಕೂಲ ಕಲ್ಪಿಸಿದ್ದಕ್ಕಿಂತ ಅನಾನುಕೂಲ ಮಾಡಿದ್ದೇ ಹೆಚ್ಚು. ಎಂಎಸ್‌ಪಿಎಎಲ್ ಕೈಗಾರಿಕೆ ಕಂಪನಿ ವಿರುದ್ದ ನ್ಯಾಯಾಲಯದಲ್ಲಿ ದಾವೆ ಹೂಡಿ ತಮ್ಮ ಜಮೀನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ ರೈತರಿಗೆ ಇಲ್ಲಸಲ್ಲದ ಕಾನೂನು ನಿಯಮಗಳನ್ನು ಹೇಳಿ ಭೂಮಿಯನ್ನು ಕೊಡಲಿಲ್ಲ.
         ಭಾನಾಪೂರ-ಇಟಗಿ ಭಾಗದಲ್ಲಿ ರೈತರ ವಿರೋಧವಿದ್ದರೂ ಭೂವಶಕ್ಕೆ ಪರೋಕ್ಷವಾಗಿ ಮುಂದಾಗಿದ್ದ ಜಿಲ್ಲಾಧಿಕಾರಿಯವರು ಅಲ್ಲಿನ ಕೆಲ ಭೂಮಾಫಿಯಾ ಜನ ಬಹಿರಂಗವಾಗಿ ಭುಮಿ ಕೊಡದಿದ್ದರೂ ಬಲವಂತವಾಗಿ ಕಿತ್ತುಕೊಳ್ಳುವುದಾಗಿ ಡಂಗುರ ಸಾರಿದರೂ ಯಾವ ಕಾನೂನಿನ ಅಸ್ತ್ರ ಬಳಸದ ಮದ್ದಿನೇನಿಯವರು ಸುಮ್ಮನಿದ್ದುದನ್ನು ಜಿಲ್ಲೆಯ ಜನರು ಮರೆತಿಲ್ಲ.
          ಕೊಪ್ಪಳ ಶಾಸಕ ಕರಡಿ ಸಂಗಣ್ಣನವರ ಬೆಂಬಲಕ್ಕೆ ಸದಾ ನಿಂತಿರುತ್ತಿದ್ದ ತುಳಸಿ ಮದ್ದಿನೇನಿಯವರು ಚುನಾವಣೆ ಸಂದರ್ಭದಲ್ಲಿ ದೂರು ಕೊಟ್ಟರೂ ಕರಡಿ ಸಂಗಣ್ಣನವರಿಗೆ ಸೇರಿದ್ದ ಕೋಟ್ಯಂತರ ರುಪಾಯಿಯನ್ನು ವಶಕ್ಕೆ ಪಡೆಯಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‌ನವರ ವಸ್ತುಗಳನ್ನು ಜಪ್ತಿ ಮಾಡಿ ಬಿಜೆಪಿ ಪರ ನಿಲುವು ಪ್ರದರ್ಶಿಸಿದ್ದರು. 
          ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪ್ರತಿಯೊಂದು ಕೆಲಸಕ್ಕೂ ಅಡ್ಡಗಾಲು ಹಾಕುತ್ತಿದ್ದ ತುಳಸಿ ಮದ್ದಿನೇನಿಯವರಿಗೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಯವರು ಸಾರ್ವಜನಿಕರ ಸಮ್ಮುಖದಲ್ಲೇ ಲೆಕ್ಕ ಹಾಕೋದು ಒಳ್ಳೇಯದು. ಆದರೆ ಕನ್ನಡದ ಕೆಲಸಕ್ಕೆ ಈ ರೀತಿ ಲೆಕ್ಕ ಹಾಕಿ ಸ್ಥಳೀಯರ ಉತ್ಸಾಹಕ್ಕೆ ತಣ್ಣಿರೆರೆಚಬೇಡಿ ಎಂದು ತಾಕೀತು ಮಾಡಿದ್ದರು. ಆದರೂ ಹಠಮಾರಿತನ ಬಿಡದ ಮದ್ದಿನೇನಿವರು ಸ್ಮರಣ ಸಂಚಿಕೆಯ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಹಣ ಸಂದಾಯ ಮಾಡುವುದನ್ನು ವಿಳಂಬ ಮಾಡಿ ಸಾಹಿತ್ಯಾಸಕ್ತರ ಕೆಂಗಣ್ಣಿಗೂ ಗುರಿಯಾಗಿದ್ದರು.
         ಕಳೆದ ವರ್ಷದ ಬರಗಾಲದಲ್ಲಿ ಗೋಶಾಲೆಯ ಜಾನುವಾರುಗಳಿಗೆ ಮೇವು ಪೂರೈಸಿದ್ದ ಪೂರೈಕೆದಾರರಿಗೆ ಇಂದಿಗೂ ಬಾಕಿ ಹಣ ಕೊಟ್ಟಿಲ್ಲ. ಕೇಳಿದರೆ ಸರಕಾರದ ಕಡೆ ಬೆರಳು ಮಾಡಿ ತೋರಿಸುತ್ತಾ ಇಲ್ಲಿವರೆಗೆ ಕಾಲ ದೂಡಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎಂದರೂ ಮದ್ದಿನೇನಿವರು ಉದಾಸೀನತೆ ಮೆರೆದು ರೈತರ ವಿರೋಧ ಕಟ್ಟಿಕೊಂಡಿದ್ದಾರೆ.

Advertisement

0 comments:

Post a Comment

 
Top