- ಸನತ್‌ಕುಮಾರ ಬೆಳಗಲಿ
ಇತ್ತೀಚೆಗೆ ಖಾಸಗಿ ಟಿವಿ ಚಾನೆಲ್‌ವೊಂದರಲ್ಲಿ ರಾತ್ರಿ 11 ಗಂಟೆಗೆ ಫ್ಲಾಶ್ ಸುದ್ದಿಯೊಂದು ತೆರೆಯ ಮೇಲೆ ಮೂಡಿ ಬರತೊಡಗಿತು.ರಾಯಚೂರು ಜಿಲ್ಲೆಯ ದೇವದುರ್ಗದ ಸಮೀಪದ ಹಳ್ಳಿಯೊಂದರಲ್ಲಿ ‘ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಹೀನಾಯವಾಗಿ ಮಾತಾಡಿದ ಬಿಜೆಪಿ ಸ್ಪರ್ಧಿ ಶಿವನಗೌಡ ನಾಯಕ ಮೇಲೆ ಹಲ್ಲೆ, ಕಲ್ಲು ತೂರಾಟ’. ಈ ಸುದ್ದಿ ಬಂದ ಐದೇ ನಿಮಿಷದಲ್ಲಿ ಶಿವನಗೌಡರು ನೇರವಾಗಿ ಸದರಿ ಚಾನೆಲ್‌ನ ಬೆಂಗಳೂರು ಕಚೇರಿಗೆ ಫೋನ್ ಮಾಡಿ ‘ನಿಮ್ಮ ಚಾನೆಲ್‌ನಲ್ಲಿ ಬರುತ್ತಿ ರುವುದೆಲ್ಲ ಸುಳ್ಳು. ಅಂಥ ಯಾವ ಘಟನೆಯೂ ನಡೆದಿಲ್ಲ. ನಿಮ್ಮ ಜಿಲ್ಲಾ ವರದಿಗಾರರಿಗೆ ಹಣ ಕೊಡದಿದ್ದರೆ ಈ ರೀತಿ ಸುಳ್ಳು ಸುದ್ದಿಗಳನ್ನು ಫ್ಲಾಶ್ ಎಂದು ಕಳಿಸುತ್ತಾರೆ’ ಎಂದು ನೇರವಾಗಿ ಹೇಳಿದರು. ಅವರ ಮಾತುಗಳು ಟಿವಿಯಲ್ಲಿ ಬಂದವು. ಆ ನಂತರ ಈ ಸುದ್ದಿ ಮತ್ತೆ ಬರಲಿಲ್ಲ. ಪತ್ರಿಕೆ ಗಳಲ್ಲೂ ಪ್ರಕಟವಾಗಲಿಲ್ಲ. ಅಲ್ಲಿಗೆ ಎಲ್ಲ ಮುಗಿಯಿತು.
ಇದು ನಮ್ಮ ಮಾಧ್ಯಮಗಳು ಇಂದು ತಲುಪಿದ ಸ್ಥಿತಿ. ಮುದ್ರಣ ಮಾಧ್ಯಮ ಮಾತ್ರ ಇದ್ದಾಗ ಪರಿಸ್ಥಿತಿ ಇಷ್ಟು ಹದಗೆಟ್ಟಿರಲಿಲ್ಲ. ಆದರೆ ಟಿವಿ ಮಾಧ್ಯಮದ ಪ್ರವೇಶವಾದ ನಂತರ ಪತ್ರಕರ್ತರೆಂದು ಹೇಳಿಕೊಳ್ಳುವ ನಾವೆಲ್ಲ ಕನ್ನಡಿಯಲ್ಲಿ ನಮ್ಮ ಮುಖವನ್ನು ನಾವೇ ನೋಡಿಕೊಳ್ಳಬೇಕಾಗಿದೆ. ನೀವು ಯಾವುದೇ ಜಿಲ್ಲೆಗೆ ಹೋದರೂ ಸುದ್ದಿ ನೀಡುವವರ ಮೇಲೆ ಇಂಥ ಆರೋಪಗಳು ಕೇಳಿ ಬರುತ್ತಲೇ ಇವೆ. ರಾಜಕಾರಣ ದಲ್ಲಿ ಪರಿಶುದ್ಧ ವ್ಯಕ್ತಿಗಳನ್ನು ಹುಡುಕಿ ದಂತೆ ಮಾಧ್ಯಮ ರಂಗದಲ್ಲೂ ಹುಡುಕಬೇಕಾಗಿ ಬಂದಿದೆ.
ಚುನಾವಣೆಗಳು ಬಂದಾಗ ಲಂತೂ ಸುಗ್ಗಿಯೇ ಸುಗ್ಗಿ. ರಾಜ್ಯದ ಅನೇಕ ಜಿಲ್ಲೆ-ತಾಲೂಕುಗಳಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಲಕೋಟೆ ನೀಡುವ ಸಂಪ್ರದಾಯ ಕಳೆದ ಹತ್ತು ವರ್ಷಗಳಿಂದ ಅನೂಚಾನವಾಗಿ ನಡೆದು ಬಂದಿದೆ. ಈ ಲಕೋಟೆಯಲ್ಲಿ ಐದು ಸಾವಿರ ರೂಪಾಯಿಗೆ ಕಡಿಮೆ ಹಣ ಇರುವುದಿಲ್ಲ. ಎಲ್ಲ ಬಂಡವಾಳಶಾಹಿ ಪಕ್ಷಗಳು ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿವೆ. ಅದರಲ್ಲೂ ಮುದ್ರಣ ಮಾಧ್ಯಮಗಳಿಗಿಂತ ದೃಶ್ಯ ಮಾಧ್ಯಮಗಳಿಗೆ ಹೆಚ್ಚಿನ ಅದ್ಯತೆ ಇದೆ.
ಪತ್ರಿಕಾಗೋಷ್ಠಿಗಳಲ್ಲಿ ನೀಡುವ ಈ ಲಕೋಟೆಗಳಲ್ಲದೇ ಹೆಚ್ಚಿನ ರಕ್ಷಣೆಗಳಿ ಗಾಗಿ ಡೀಲಿಂಗ್‌ಗಳು ನಡೆಯುತ್ತಲೇ, ತಮ್ಮ ಪರವಾಗಿ ಪ್ರಕಟವಾಗುವ ಸುದ್ದಿಗಾಗಿ ನೀಡುವ ಕಾಣಿಕೆಗಳು ಒಂದೆಡೆಯಾದರೆ, ತಮಗೆ ಇಕ್ಕಟ್ಟನ್ನು ಉಂಟು ಮಾಡುವ ಸುದ್ದಿಗಳನ್ನು ಪ್ರಕಟಿಸದಿರಲೂ ಹೆಚ್ಚಿನ ಕಾಣಿಕೆ ನೀಡಬೇಕಾ ಗುತ್ತದೆ. ಇತ್ತೀಚೆಗೆ ಒಂದು ಮತಕ್ಷೇತ್ರದಲ್ಲಿ ಕೋಟ್ಯಧೀಶ ಅಭ್ಯರ್ಥಿ ಯೊಬ್ಬನ ಪರವಾಗಿ ಕೆಲವರು ಹಳ್ಳಿಯೊಂದಕ್ಕೆ ಹೋಗಿ ಮತದಾರ ರಿಂದ ಅವರ ಬ್ಯಾಂಕ್ ಖಾತೆಗಳ ನಂಬರುಗಳನ್ನು ಸಂಗ್ರಹಿಸತೊಡಗಿದ್ದರು.
ಹಳ್ಳಿಯ ಜನರು ಅವರನ್ನು ಹಿಡಿದು ಚುನಾವಣಾ ಅಧಿಕಾರಿಗಳ ವಶಕ್ಕೆ ಒಪ್ಪಿಸಿದರು. ಈ ಸುದ್ದಿ ಟಿವಿ ಚಾನೆಲ್‌ಗಳಲ್ಲಿ ಬೆಳಕಿಗೆ ಬರಲಿಲ್ಲ. ಆದರೆ ಅದೇ ಊರಿನಲ್ಲಿ ಇಪ್ಪತ್ತು ಬಾಟಲಿ ಅಕ್ರಮ ಸಾರಾಯಿ ಸಾಗಿಸುತ್ತಿದ್ದ ಸುದ್ದಿ ಫ್ಲಾಶ್ ಆಗಿ ಪ್ರಕಟವಾಯಿತು. ಚುನಾವಣೆಯಲ್ಲಿ ಮತದಾರರಿಗೆ ನೇರವಾಗಿ ಹಣ ವಿತರಿಸಿದರೆ ನೀತಿ ಸಂಹಿತೆ ಉಲ್ಲಂಘನೆ ಯಾಗುತ್ತದೆ ಎಂದು ಚಾಪೆಯ ಕೆಳಗೆ ನುಸು ಳುವ ಅಡ್ಡ ಹಾದಿ ಹಿಡಿದಿರುವ ರಾಜಕಾರಣಿ ಗಳು ಮತದಾರರ ಬ್ಯಾಂಕ್ ಅಕೌಂಟ್ ಸಂಗ್ರಹಿಸಿ ನೇರವಾಗಿ ಖಾತೆಗೆ ಹಣ ವರ್ಗಾವಣೆ ಮಾಡುವ ಗುಪ್ತ ಮಾರ್ಗ ಕಂಡುಕೊಂಡಿದ್ದಾರೆ.
ಮಾಧ್ಯಮಗಳಲ್ಲಿ ಕೆಲಸ ಮಾಡುವವರೂ ಈ ಸಮಾಜದಿಂದಲೇ ಬಂದವರು. ನಮ್ಮ ಸಾಮಾಜಿಕ ಜೀವನದ ವೌಲ್ಯಗಳೇ ಈಗ ಬದಲಾಗಿವೆ. ನೀತಿ, ನೀಯತ್ತು, ಆತ್ಮಸಾಕ್ಷಿಯ ಭಾಗವನ್ನು ಈಗ ಹಣ ಆಕ್ರಮಿಸಿದೆ. ಮಾರು ಕಟ್ಟೆ ಆರ್ಥಿಕತೆ ಪ್ರವೇಶಿಸಿದ ನಂತರ ಎಲ್ಲವೂ ಮಾರಾಟದ ವಸ್ತುವಾದಂತೆ ಸುದ್ದಿಯೂ ಮಾರಾಟದ ವಸ್ತುವಾಗಿದೆ. ಅಂತಲೆ ಮಾಧ್ಯಮಗಳಲ್ಲಿ ಕೆಲಸ ಮಾಡುವವರೂ ಸಹಜವಾಗಿ ಆಮಿಷಕ್ಕೆ ಒಳಗಾಗಿದ್ದಾರೆ.
ಮಾಧ್ಯಮಗಳಲ್ಲಿ ಇರುವವರ ಇನ್ನೊಂದು ದುರಂತವೆಂದರೆ ಯಾರ್ಯಾರೋ ಈ ಕ್ಷೇತ್ರ ವನ್ನು ಪ್ರವೇಶಿಸಿದ್ದಾರೆ. ಮುದ್ರಣ ಮಾಧ್ಯಮ ದಲ್ಲಿ ಬರವಣಿಗೆ ಎಂಬ ಮಾನದಂಡ ವಾದರೂ ಇತ್ತು. ಆದರೆ ದೃಶ್ಯಮಾಧ್ಯಮದಲ್ಲಿ ಇರುವ ವರಿಗೆ ಅದರ ಅಗತ್ಯವೂ ಇಲ್ಲ. ಮಾತಾಡಲು ಬಂದರೆ ಸಾಕು. ಕೈಯಲ್ಲಿ ಕೆಮೆರಾ ಮತ್ತು ಲೋಗೋ ಇದ್ದರೆ ಸಾಕು ಎಂಥವ ನಾದರೂ ಮೀಡಿಯಾ ಮ್ಯಾನ್ ಎಂದು ಕರೆಸಿಕೊಳ್ಳಬಹುದು.
ಮೀಡಿಯಾದಲ್ಲಿವವರಿಗೆ ಪ್ರಾಮಾಣಿಕತೆ ಇರುವುದಿಲ್ಲ ಎಂಬ ಆರೋಪ ಒಂದೆಡೆಗಿದ್ದರೆ ವೃತ್ತಿ ಬದ್ಧತೆ ಕಡಿಮೆಯಾಗುತ್ತದೆ ಎಂಬ ಟೀಕೆಗಳೂ ಕೇಳಿ ಬರುತ್ತಿವೆ.ಗಿಪ್ಟುಗಳು ಬರುವ ಪತ್ರಿಕಾಗೋಷ್ಠಿಗಳಿಗೆ ಎಲ್ಲರೂ ಹೋಗುತ್ತಾರೆ.ಕಾಣಿಕೆಗಳಿಲ್ಲದ ಪತ್ರಿಕಾ ಗೋಷ್ಠಿಗಳಿಗೆ ಯಾರೋ ಒಂದಿಬ್ಬರು ಹೋಗುತ್ತಾರೆ. ಉಳಿದವರು ಅವರಿಂದ ಸುದ್ದಿ ಸಂಗ್ರಹಿಸಿ ಸುದ್ದಿ ಮಾಡುತ್ತಾರೆ. ಟಿ.ವಿ. ಮಾಧ್ಯಮದಲ್ಲಂತೂ ಒಬ್ಬನೆ ಸುದ್ದಿಗಾರ ಎರೆಡೆರಡು ಲೋಗೊ ಕ್ಯಾಮೆರಾ ಹಿಡಿದುಕೊಂಡು ಹೋದ ಉದಾಹರಣೆಗಳಿವೆ. ಹೀಗೆ ಲೋಗೊ ಹಿಡಿದುಕೊಂಡು ಚುನಾವಣೆಗೆ ಸ್ಪರ್ಧಿಸಿದ ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ರಕ್ಷಣೆ ಸ್ವೀಕರಿಸಿದ ಘಟನೆಗಳು ನಡೆದಿವೆ. ನಂತರ ವಸೂಲಿ ಮಾಡಿದ ಹಣಕ್ಕಾಗಿ ಕಿತ್ತಾಡಿಕೊಂಡಿದ್ದು ಉಂಟು.
ಇತ್ತೀಚೆಗೆ ರಾಜಕೀಯ ರಂಗಕ್ಕೆ ಗಣಿ ಮಾಫಿಯಾ, ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಸಕ್ಕರೆ ಲಾಬಿಯ ಉದ್ಯಮಪತಿಗಳು ದಂಡು ದಂಡಾಗಿ ಬಂದಿರುವುದರಿಂದ ಸುದ್ದಿ ಮಾಡುವವರು ಸುಖವಾಗಿಯೇ ಇದ್ದಾರೆ.ನಾನು ಪತ್ರಿಕೋದ್ಯಮ ಪ್ರವೇಶಿಸಿದಾಗ ನೋಡಿದ ಜೊತೆಗೆ ಕೆಲಸ ಮಾಡಿದ ಸಂಪಾದಕರು ಈಗ ಇಲ್ಲ. ಕೆಲವರು ಬದುಕಿ ಉಳಿದಿದ್ದರೂ ಅವರಿಗೆ ತುಂಬ ವಯಸ್ಸಾಗಿದೆ. ಅಂದಿನ ಸಂಪಾದಕರು ಸಿಟಿ ಬಸ್ಸುಗಳಲ್ಲಿ ಆಫೀಸಿಗೆ ಬರುತ್ತಿದ್ದರು. ಅದೇ ದಾರಿಯಲ್ಲಿ ಸಾಗಿದ ನನ್ನಂಥ ಕೆಲವರು ಇಂದಿಗೂ ಸಿಟಿ ಬಸ್ಸುಗಳಲ್ಲೇ ಓಡಾಡುತ್ತಾರೆ.ಆದರೆ ಎಲ್ಲರೂ ಹೀಗೆ ಇಲ್ಲ.
ಈಗ ಮಾಧ್ಯಮಕ್ಕೆ ಬಂದವರು ಆಗಿನಂತಿಲ್ಲ. ಅದರಲ್ಲೂ ದೃಶ್ಯ ಮಾಧ್ಯಮಕ್ಕೆ ಬಂದವರು ಕೆಲಸಕ್ಕೆ ಸೇರಿದ ಒಂದೆರಡು ವರ್ಷಗಳಲ್ಲೇ ಕಾರು ಖರೀದಿಸುತ್ತಾರೆ. ಐದಾರು ವರ್ಷಗಳಲ್ಲೇ ಸ್ವಂತ ಮನೆ ಮಾಡಿಕೊಳ್ಳುತ್ತಾರೆ. ಅವರ ಸಂಬಳ ಮಾತ್ರ ಐದಂಕಿ ದಾಟಿರುವುದಿಲ್ಲ. ಸಂಬಳದಲ್ಲೇ ಇದನ್ನೆಲ್ಲ ಸಂಪಾದಿಸಲು ಸಾಧ್ಯವೂ ಇಲ್ಲ.ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಖಾಸಗಿ ಚಾನೆಲ್‌ಗಳು ವರದಿ ಮಾಡಿದ ವೈಖರಿ ಬಗ್ಗೆ ಚರ್ಚೆ ಆಗಬೇಕಾಗಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಕೆಜೆಪಿ ಪಕ್ಷಗಳು ಮಾತ್ರ ಸ್ಪರ್ಧೆಯಲ್ಲಿವೆಯೇನೋ ಎಂಬ ಭಾವನೆ ಬರುವಂತೆ ಟಿವಿ ಸುದ್ದಿಗಳು ಬರುತ್ತಿದ್ದವು. ಉಭಯ ಕಮ್ಯುನಿಸ್ಟ್ ಪಕ್ಷಗಳು, ಪಾರ್ವರ್ಡ್ ಬ್ಲಾಕ್, ಎಸ್.ಯು.ಪಿ.ಐ ಸೇರಿದಂತೆ ನಾಲ್ಕು ಎಡಪಕ್ಷಗಳು, ರೈತಸಂಘ, ಬಿಎಸ್‌ಪಿ, ಎಸ್‌ಡಿಪಿಐ ಗಳು ಚುನಾವಣಾ ಕಣದಲ್ಲಿದ್ದರೂ ಮಾಧ್ಯಮಗಳು ಅವುಗಳನ್ನು ನಗಣ್ಯವಾಗಿ ನೋಡಿದವು.
‘ವಾರ್ತಾಭಾರತಿ’ಯಲ್ಲಿ ಮಾತ್ರ ಈ ಜನಪರ ಪಕ್ಷಗಳ ಸುದ್ದಿಗಳು ಪ್ರಕಟವಾಗುತ್ತಿದ್ದವು. ಅಂತಲೇ ನಮ್ಮ ಅನೇಕ ಸ್ನೇಹಿತರು ಲ್ಯಾಪ್‌ಟಾಪ್ ತೆಗೆದು ವಾರ್ತಾಭಾರತಿ ಪುಟಗಳನ್ನು ಓದುವುದಾಗಿ ಹೇಳಿದರು.ನರೇಂದ್ರ ಮೋದಿ ಬೆಳಗಾವಿಗೆ ಬಂದಾಗ ಕೆಲ ಚಾನೆಲ್‌ಗಳು ಲೈವ್ ಪ್ರಸಾರ ಮಾಡಿದವು. ಆದರೆ ಬಾಗೆಪಲ್ಲಿಯಂಥ ಗಡಿ ತಾಲೂಕಿನಲ್ಲಿ ಸಿಪಿಎಂ ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ ಪರ ಪ್ರಚಾರಕ್ಕೆ ಸೀತಾರಾಮ ಯೆಚೂರಿ ಬಂದಾಗ ಅವರ ಸಭೆಗೆ ಐವತ್ತು ಸಾವಿರ ಜನ ಸೇರಿದ್ದರೂ ಅದು ಸುದ್ದಿಯಾಗಲೇ ಇಲ್ಲ.
ಆದರೆ ಸರಕಾರಿ ಚಾನೆಲ್ ಎಂದು ನಾವು ಹಿಂದೆಲ್ಲ ಟೀಕಿಸುತ್ತಿದ್ದ ದೂರದರ್ಶನದ ಕನ್ನಡ ಚಾನೆಲ್ ಮಾತ್ರ ಸುದ್ದಿಯಲ್ಲಿ ಎಲ್ಲ ಪಕ್ಷಗಳಿಗೂ ಸಮಾನ ನ್ಯಾಯ ನೀಡಿತು. ಎಲ್ಲ ರಾಷ್ಟ್ರೀಯ ಪಕ್ಷಗಳ ಜೊತೆ ಎಡಪಕ್ಷಗಳ ನಾಯಕರ ಸಭೆಗಳು ಈ ಚಾನೆಲ್‌ನಲ್ಲಿ ವರದಿಯಾದವು.ಮಾಧ್ಯಮಗಳೆಲ್ಲ ಸಂಪೂರ್ಣವಾಗಿ ಸಮಾಜ ದಿಂದ ವಿಮುಖವಾಗಿವೆ ಎಂದಲ್ಲ. ಗಣಿ ಹಗರಣ, ಭೂ ಮಾಫಿಯಾ ಲೂಟಿ, ಭ್ರಷ್ಟಾಚಾರ ಇವುಗಳೆನ್ನಲ್ಲ ಮಾಧ್ಯಮಗಳೇ ಬಯಲಿಗೆ ತಂದವು ಎಂಬುದು ನಿಜ.
ಆದರೆ ಮಾಧ್ಯಮಗಳಲ್ಲಿರುವವರು ತಾವಾಗಿ ಹಗರಣಗಳನ್ನು ಬಯಲಿಗೆ ಎಳೆಯುವ ಸಾಹಸ ಮಾಡಲಿಲ್ಲ. ಮಾಜಿ ಲೋಕಾ ಯುಕ್ತ ಸಂತೋಷ್ ಹೆಗ್ಡೆ ಗಣಿ ವರದಿ ನೀಡಿದ ನಂತರ, ಎಸ್.ಆರ್.ಹಿರೇಮಠ ಬೇತಾಳನಂತೆ ಬೆನ್ನು ಹತ್ತಿದ ನಂತರ ಮಾಧ್ಯಮಗಳಿಗೆ ತಮ್ಮ ಕರ್ತವ್ಯಪಾಲನೆ ಅನಿವಾರ್ಯ ವಾಯಿತು.ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಈಗ ಹಿಂದಿನಂತೆ ಸೂಕ್ತ ತರಬೇತಿ ಇಲ್ಲ.
ವಿಶ್ವವಿದ್ಯಾಲಯಗಳ ಸಮೂಹ ಸಂಪರ್ಕ ವ್ಯಾಸಂಗದಲ್ಲೂ ಕೇವಲ ತಾಂತ್ರಿಕ ಪಾಠ ಮಾಡಲಾಗುತ್ತದೆ. ಸಾಮಾಜಿಕ ಹೊಣೆಗಾರಿಕೆ, ನೈತಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯುತ್ತಿಲ್ಲ.ವಿದರ್ಭದ ಬರಗಾಲ ಪೀಡಿತ ರೈತರ ಬವಣೆಗಳ ಬಗ್ಗೆ ಅಲ್ಲಿ ಸುತ್ತಾಡಿ ಮಾನವೀಯ ವರದಿ ಮಾಡಿದ ಸಾಯಿನಾಥ ಅವರಂಥ ಪತ್ರಕರ್ತರು ಪತ್ರಕರ್ತರು ಮಾಧ್ಯಮಗಳಲ್ಲಿರು ವವರಿಗೆ ರೋಲ್‌ಮಾಡೆಲ್ ಆಗಬೇಕು.
ಖರೀದಿಸಿದ (ಅಕ್ರಮವಾಗಿ) ಕಾರು, ಮನೆ, ಐಹಿಕ ಸುಖ ನೀಡಬಹುದು. ಆದರೆ ಮಾನಸಿಕ ನೆಮ್ಮದಿ ನೀಡುವುದಿಲ್ಲ ಎಂಬುದನ್ನು ಮರೆಯಬಾರದು.ಮಾಧ್ಯಮ ಈಗ ಬದಲಾಗದಷ್ಟು ದೂರ ಹೋಗಿದೆ.ಕಾರ್ಪೊರೇಟ್ ಕಂಪೆನಿಗಳೇ ಮಾಧ್ಯಮಗಳ ಒಡೆತನ ಹೊಂದಿರುವುದರಿಂದ ಜನತೆಯ ನೋವಿಗೆ ಸ್ಪಂದಿಸುವ ಸೂಕ್ಷ್ಮತೆಯನ್ನು ಮಾಧ್ಯಮಗಳು ಕಳೆದುಕೊಂಡಿವೆ. ಈಗ ಜನತೆಯ ನೋವಿಗೆ ಸ್ಪಂದಿಸುವ ಪರ್ಯಾಯ ಮಾಧ್ಯಮದ ಅಗತ್ಯವಿದೆ.
0 comments:
Post a Comment