ಹಣಕ್ಕಾಗಿ ಪೀಡಿಸಿ, ಪತ್ನಿಯನ್ನೇ ಸುಟ್ಟು ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ ಡಿ. ಬಬಲಾದಿ ಅವರು ತೀರ್ಪು ನೀಡಿದ್ದಾರೆ.
ಜಿಲ್ಲೆಯ ಕುಷ್ಟಗಿ ಪಟ್ಟಣದ ಬಾಬುವಲಿ ತಂದೆ ಜನಿಮಿಯಾ ಕರಡಿ ಎಂಬಾತನೆ ಹಣಕ್ಕಾಗಿ ತನ್ನ ಪತ್ನಿ ಚಾಂದಬಿ ಯನ್ನು ಸೀಮೆಎಣ್ಣೆ ಹಾಕಿ ಸುಟ್ಟು ಕೊಲೆಗೈದ ಆರೋಪಕ್ಕಾಗಿ ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿ.
ಕುಷ್ಟಗಿ ಪಟ್ಟಣದ ಹೊರವಲಯದ ಹನುಮಸಾಗರಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಜನತಾ ಕಾಲೋನಿಯಲ್ಲಿ ವಾಸಿಸುತ್ತಿದ್ದ ಬಾಬುವಲಿ ತಂದೆ ಜನಿಮಿಯಾ ಕರಡಿ ಎಂಬಾತ ಕಳೆದ ೨೦೧೨ ರ ಜೂನ್ ೧೧ ರಂದು ತನ್ನ ಪತ್ನಿಗೆ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಎಂದು ಪೀಡಿಸಿದ್ದಾನೆ. ಇದಕ್ಕೆ ಪತ್ನಿ ನಿರಾಕರಿಸಿದಾಗ ಆರೋಪಿಯು ಪತ್ನಿಗೆ ಸೀಮೆ ಎಣ್ಣೆ ಉಗ್ಗಿ ಬೆಂಕಿ ಹಚ್ಚಿದ್ದಾನೆ. ಸುಟ್ಟ ಗಾಯಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಪತ್ನಿ ಚಾಂದ್‌ಬಿ ಮೃತಪಟ್ಟಿದ್ದಳು.
ಈ ಕುರಿತಂತೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ ಡಿ.ಬಬಲಾದಿ ಅವರು, ಆರೋಪಿ ಮೇಲಿನ ಕೊಲೆ ಆರೋಪ ಸಾಬೀತಾಗಿರುವುದರಿಂದ ಆತನಿಗೆ ಭಾ.ದ.ಸ. ಕಲಂ : ೩೦೨ ರ ಅಡಿ ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಕುಷ್ಟಗಿ ಪಿಎಸ್‌ಐ ನಾರಾಯಣ ದಂಡಿನ ಹಾಗೂ ಸಿಪಿಐ ನೀಲಪ್ಪ ಎಂ.ಓಲೇಕಾರ ಅವರು ಪ್ರಕರಣದ ತನಿಖೆ ಕೈಗೊಂಡಿದ್ದರು. ಸರ್ಕಾರಿ ಅಭಿಯೋಜಕ ಎಂ.ಎ.ಪಾಟೀಲ್ ಸರ್ಕಾರದ ಪರ ವಾದ ಮಂಡಿಸಿದ್ದರು.
0 comments:
Post a Comment