ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ದಸಂಸ ಧರಣಿ
ಬೆಂಗಳೂರು, ಮೇ 16: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹುಚ್ಚನೂರು ಗ್ರಾಮದ ದಲಿತ ಯುವಕ ದೇವಸ್ಥಾನ ಪ್ರವೇಶಿಸಿದ್ದನ್ನು ನೆಪವಾಗಿಟ್ಟುಕೊಂಡು ಆತನ ತಾಯಿಯನ್ನು ಥಳಿಸಿ ಹತ್ಯೆಗೈದ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ದಸಂಸ (ಸಮತಾವಾದ) ಕಾರ್ಯಕರ್ತರು ನಗರದ ಪುರಭವನದ ಮುಂಭಾಗದಲ್ಲಿ ಧರಣಿ ನಡೆಸಿದರು.ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಸಮಿತಿಯ ರಾಜ್ಯಾಧ್ಯಕ್ಷ ಮಾರಪ್ಪ ಮಾತನಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ ಬಂದು ಆರು ದಶಕಗಳು ಕಳೆದರೂ ಈ ನಾಡಿನಲ್ಲಿ ದಲಿತರು ನೆಮ್ಮದಿಯ ಜೀವನ ನಡೆಸುವುದು ದುಸ್ತರವಾಗಿದೆ. ಕ್ಷುಲ್ಲಕ ಕಾರಣಕ್ಕೆ ದಲಿತರನ್ನು ಹತ್ಯೆ ಮಾಡುವುದು ಅತ್ಯಂತ ಹೇಯ ಮಾತ್ರವಲ್ಲ, ದೇಶದ ನಾಗರಿಕರು ತಲೆತಗ್ಗಿಸುವಂತಹವು ಎಂದು ವಿಷಾದಿಸಿದರು. ಧ್ವನಿವರ್ಧಕಕ್ಕೆ ವಿದ್ಯುತ್ ಸಂಪರ್ಕ ಪಡೆದು ಕೊಳ್ಳಲು ಹುಚ್ಚನೂರು ಗ್ರಾಮದ ದಲಿತ ಯುವಕ ಆನಂದ್ ದೇವಸ್ಥಾನ ಪ್ರವೇಶ ಮಾಡಿದ್ದ.
ಆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸವರ್ಣೀಯ ರಮೇಶ್ ತುರುಮರಿ, ಬಸವರಾಜು ಹಾಗೂ ಪುರನಗೌಡ ಮಾಲಿ ಪಾಟೀಲ್ ಮಧ್ಯೆ ಜಗಳ ನಡೆದಿದೆ. ಈ ವಿಷಯ ತಿಳಿದ ದಲಿತ ಯುವಕನ ತಾಯಿ ಜಗಳ ಬಿಡಿಸಲು ಬಂದಿದ್ದು, ಸವರ್ಣೀಯರು ಆನಂದ್ ಹಾಗೂ ಆತನ ತಾಯಿಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆಂದು ಮಾರಪ್ಪ ಘಟನೆಯ ಬಗ್ಗೆ ವಿವರಿಸಿದರು.ಕ್ಷುಲ್ಲಕ ಕಾರಣಕ್ಕೆ ದಲಿತ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ್ದಾರೆ.
ಆ ಹಿನ್ನೆಲೆಯಲ್ಲಿ ಸವರ್ಣೀಯರನ್ನು ಕೂಡಲೇ ಕೊಲೆ ಆರೋಪದಡಿ ಬಂಧಿಸಬೇಕು. ಅಲ್ಲದೆ, ಜಾತಿ ನಿಂದನೆ ವೊಕದ್ದಮೆ ದಾಖಲಿಸಬೇಕು. ಮೃತ ದಲಿತ ಮಹಿಳೆಯ ಕುಟುಂಬಕ್ಕೆ ಕನಿಷ್ಠ 10 ಲಕ್ಷ ರೂ. ಪರಿಹಾರ ನೀಡಬೇಕು. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು.ಹುಚ್ಚನೂರು ಗ್ರಾಮದ ದಲಿತರಿಗೆ ಸರಕಾರ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮಾರಪ್ಪ ಆಗ್ರಹಿಸಿದರು.
ಈ ಸಂಬಂಧ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಗೆ ಮನವಿ ನೀಡಿದ್ದು,ಆರೋಪಿಗಳ ಬಂಧನದ ಭರವಸೆ ನೀಡಿದ್ದಾರೆಂದು ಮಾರಪ್ಪ ಪತ್ರಿಕೆಗೆ ತಿಳಿಸಿದರು.ಪ್ರತಿಭಟನನಿರತರು ಸವರ್ಣೀಯರ ದೌರ್ಜನ್ಯ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ, ಮೃತ ದಲಿತ ಮಹಿಳೆಯ ಕುಟುಂಬಕ್ಕೆ 10ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಪಡಿಸಿದರು. ದಸಂಸ ಮುಖಂಡರಾದ ಅಣ್ಣಯ್ಯ, ಚಂದ್ರಪ್ಪ, ಆವಲಹಳ್ಳಿ ರಮೇಶ್, ರಭದ್ರೇಗೌಡ ಸೇರಿದಂತೆ ಹಲವರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
0 comments:
Post a Comment