PLEASE LOGIN TO KANNADANET.COM FOR REGULAR NEWS-UPDATES

 ತೀವ್ರ ವಾದ-ವಿವಾದಗಳ ನಡುವೆ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ `ಟಿಪ್ಪುಸುಲ್ತಾನ್ ಅಲ್ಪಸಂಖ್ಯಾತ ವಿಶ್ವವಿದ್ಯಾಲಯ'ಕ್ಕೆ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ಅಧ್ಯಕ್ಷ ಪ್ರೊ. ಸುಖ್‌ದೇವ್ ಥೋರಟ್ ನೇತೃತ್ವದ ತಜ್ಞರ ಸಮಿತಿ `ಕೆಂಪು ಸಂಕೇತ' ತೋರಿಸಿದೆ.
ಶ್ರೀರಂಗಪಟ್ಟಣದ ಟಿಪ್ಪುಸುಲ್ತಾನ್ ವಿವಿ ಒಳಗೊಂಡಂತೆ ದೇಶದಾದ್ಯಂತ ಐದು ಅಲ್ಪಸಂಖ್ಯಾತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಮುಂದಾಗಿದ್ದ ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯ, ಈ ಬಗ್ಗೆ ಅಧ್ಯಯನ ನಡೆಸಿ ವರದಿ ಕೊಡಲು ಸುಖದೇವ್ ಥೋರಟ್ ಅಧ್ಯಕ್ಷತೆಯಲ್ಲಿ ಶಿಕ್ಷಣ- ಕಾನೂನು ತಜ್ಞರ ಸಮಿತಿ  ನೇಮಿಸಿತ್ತು. 
ಆದರೆ, `ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಸಂವಿಧಾನದ ಚೌಕಟ್ಟಿನೊಳಗೆ ಸರಕಾರ ಕ್ರಮಕೈಗೊಳ್ಳಲಿದೆ ಎಂದು ಥೋರಟ್ ಸಮಿತಿ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ. ಆದರೆ, `ಕೇಂದ್ರೀಯ ವಿವಿ'ಗಳನ್ನು ತೆರೆದು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವೇಶದಲ್ಲಿ ಆದ್ಯತೆ ಕೊಡಬಹುದೆಂದು  ಅಭಿಪ್ರಾಯ ಪಟ್ಟಿದೆ.
ಕೇಂದ್ರೀಯ ವಿವಿಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರವೇಶ ನೀಡುವಾಗ ನಿಯಮಗಳನ್ನು ಸಡಿಲಿಸಬಹುದು. ಪ್ರವೇಶ ಪರೀಕ್ಷೆಗಳಲ್ಲಿ ಹೆಚ್ಚುವರಿ ಅಂಕ ಕೊಡಬಹುದು. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮಹಿಳೆಯರು ಹಾಗೂ ಹಿಂದುಳಿದ ಜಿಲ್ಲೆಗಳ ಅಭ್ಯರ್ಥಿಗಳಿಗೆ ಈ ರೀತಿ ವಿಶೇಷ ಸೌಲಭ್ಯಗಳಿವೆ ಎಂದು ಸಮಿತಿ ಸ್ಪಷ್ಟಪಡಿಸಿದೆ.
ಬೇಕಾದರೆ ಕೇಂದ್ರೀಯ ವಿವಿಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಸಾಮಾಜಿಕ- ಆರ್ಥಿಕ ಸ್ಥಿತಿಗತಿ ಕುರಿತ ಅಧ್ಯಯನಕ್ಕೆ ಪ್ರತ್ಯೇಕ ವಿಭಾಗ ತೆರೆಯಬಹುದು ಎಂದು ಸಮಿತಿ ಹೇಳಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಆರು ವರ್ಷದ ಹಿಂದೆಯೇ ಅಲ್ಪಸಂಖ್ಯಾತ ವಿವಿ ಸ್ಥಾಪನೆಗೆ ಮುಂದಾಗಿತ್ತು. ಆದರೆ, ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಮಾನವ ಸಂಪನ್ಮೂಲ ಸಚಿವಾಲಯ ಅಭಿಪ್ರಾಯಪಟ್ಟಿತ್ತು.

Advertisement

0 comments:

Post a Comment

 
Top