ಸಿದ್ದು ಸಂಪುಟ ವಿಸ್ತರಣೆ: 22 ಮಂದಿ ಮಂತ್ರಿಮಂಡಲ ಸೇರ್ಪಡೆ ಸಾಧ್ಯತೆ, ಕೋಳಿವಾಡ ಸ್ಪೀಕರ್?
ಬೆಂಗಳೂರು,ಮೇ,16: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಶನಿವಾರ ಬೆಳಗ್ಗೆ 10.30ಕ್ಕೆ ವಿಸ್ತರಣೆಯಾಗುತ್ತಿದ್ದು, 22 ಮಂದಿ ಸದಸ್ಯರು ಮಂತ್ರಿಮಂಡಲ ಸೇರಲಿದ್ದಾರೆ. ರಾಜಭವನದ ಗಾಜಿನ ಮನೆಯ ಹುಲ್ಲು ಹಾಸಿನ ಮೇಲೆ ನಡೆಯಲಿರುವ ಸಮಾರಂಭದಲ್ಲಿ ಮೇಲ್ಮನೆಯ ಇಬ್ಬರು ಸೇರಿದಂತೆ 22 ಮಂದಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಸಂಪುಟ ಸದಸ್ಯರ ಆಯ್ಕೆ ಕುರಿತಂತೆ ಒಮ್ಮೆ ಚರ್ಚೆ ನಡೆಸಿರುವ ಸಿದ್ದರಾಮಯ್ಯ, ನಾಳೆ ಬೆಳಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಅಂತಿಮ ಸಮಾಲೋಚನೆ ನಡೆಸಿ ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿಯೊಂದಿಗೆ ನಗರಕ್ಕೆ ವಾಪಸ್ಸಾಗಲಿದ್ದಾರೆ. ಕಳಂಕಿತರಿಗೆ ಸಂಪುಟದಲ್ಲಿ ಸ್ಥಾನ ನೀಡಬಾರದು ಎನ್ನುವ ಕಠಿಣ ನಿಲುವಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಂಟಿಕೊಂಡಿದ್ದು, ಇದರಿಂದಾಗಿ ಹಿರಿಯ ಮುಖಂಡ ಡಿ.ಕೆ. ಶಿವಕುಮಾರ್‌ರಿಗೆ ಅವಕಾಶ ದೊರೆಯುವ ಸಾಧ್ಯತೆಗಳು ಕ್ಷೀಣಿಸಿವೆ.
ಲಾಡ್ ಸಹೋದರರನ್ನೂ ಸಹ ಮಂತ್ರಿಮಂಡಲದಿಂದ ದೂರ ಇಡುವ ನಿರೀಕ್ಷೆಯಿದೆ. ಡಿ.ಕೆ. ಶಿವಕುಮಾರ್ ಬದಲು ಒಕ್ಕಲಿಗ ಸಮುದಾಯದ ಮತ್ತೋರ್ವ ಪ್ರಬಲ ನಾಯಕ ಎಂ. ಕೃಷ್ಣಪ್ಪರಿಗೆ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಇದರಿಂದ ಒಕ್ಕಲಿಗ ಸಮುದಾಯ ಅಸಮಾಧಾನಗೊಳ್ಳುವುದನ್ನು ತಡೆಯಲು ತಂತ್ರ ರೂಪಿಸಲಾಗಿದೆ. ಬೆಂಗಳೂರಿನಿಂದ ಮಾಜಿ ಸಚಿವ, ಕೆ.ಜೆ. ಜಾರ್ಜ್‌ರಿಗೆ ಅವಕಾಶ ನೀಡಲು ಉದ್ದೇಶಿಸಲಾಗಿದೆ. ಇನ್ನು ಮಾಜಿ ಸಚಿವ ಕೆ.ಬಿ. ಕೋಳಿವಾಡರನ್ನು ವಿಧಾನಸಭಾಧ್ಯಕ್ಷರನ್ನಾಗಿ ನಿಯೋಜಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಅವರೂ ಸಹ ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ.
ಉಳಿದಂತೆ ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ, ಟಿ.ಬಿ.ಜಯಚಂದ್ರ, ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಹೆಚ್.ಎಸ್.ಮಹದೇವಪ್ರಸಾದ್, ಹೆಚ್.ಸಿ.ಮಹದೇವಪ್ಪ, ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಸ್ಧಾನ ದೊರೆಯಲಿದೆ. ಜಿಲ್ಲೆ, ಜಾತಿ, ಪ್ರಾದೇಶಿಕ ಆದ್ಯತೆ ಮೇರೆಗೆ ಮೊದಲ ಹಂತದ ಸಚಿವ ಸಂಪುಟ ಪಟ್ಟಿ ಸಿದ್ದವಾಗಿದೆ. ಚಿತ್ರನಟ, ನಟಿಯರಾದ ಅಂಬರೀಷ್, ಉಮಾಶ್ರೀ, ಎಸ್. ಎಸ್.ಮಲ್ಲಿಕಾರ್ಜುನ್, ವಿನಯ್ ಕುಮಾರ್ ಸೊರಕೆ, ರಮಾನಾಥ್ ರೈ, ಎಚ್.ಕೆ. ಪಾಟೀಲ್, ಬಸವರಾಜರಾಯರೆಡ್ಡಿ, ಶರಣಪ್ರಕಾಶ್ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ್ ಹಾಗೂ ಮೋಟಮ್ಮ ಅವರ ಹೆಸರು ಮಂತ್ರಿ ಸ್ಥಾನದಲ್ಲಿ ಪ್ರಬಲವಾಗಿ ಕೇಳಿ ಬಂದಿದೆ. ಕಂಠೀರವ ಕ್ರಿಡಾಂಗಣದಲ್ಲೇ ಶುಕ್ರವಾರದಂದು ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ನಡೆಸಲಾಗಿತ್ತಾದರೂ ಶನಿವಾರದಂದು ಮ್ಯಾರಥಾನ್ ಓಟ ಇರುವ ಕಾರಣ ಇದೀಗ ರಾಜಭವನಕ್ಕೆ ಸಮಾರಂಭ ವರ್ಗಾವಣೆಗೊಂಡಿದೆ. ಮುಂಬರುವ ಲೋಕಸಭೆ ಚುನಾವಣೆಯ ನಂತರ ಬಾಕಿ ಉಳಿದಿರುವ ಸ್ಧಾನಗಳನ್ನು ತುಂಬಲು ನಿರ್ಧರಿಸಲಾಗಿದೆ
ಸಂಭವನೀಯ ಸಚಿವರ ಪಟ್ಟಿ: ಮೈಸೂರು-ವಿ.ಶ್ರೀನಿವಾಸ್ ಪ್ರಸಾದ್, ತನ್ವೀರ್ ಸೇಠ್, ಚಾಮರಾಜನಗರ-ಮಹದೇವ್ ಪ್ರಸಾದ್, ಬೆಂಗಳೂರು- ರೋಷನ್ ಬೇಗ್, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಮಂಡ್ಯ-ಡಾ.ಎಂ. ಎಚ್.ಅಂಬರೀಶ್, ರಾಮನಗರ-ಡಿ.ಕೆ.ಶಿವಕುಮಾರ್, ತುಮಕೂರು-ಟಿ.ಬಿ. ಜಯಚಂದ್ರ.
ಚಿಕ್ಕಮಗಳೂರು-ಮೋಟಮ್ಮ, ಕಾರವಾರ-ಆರ್.ವಿ.ದೇಶಪಾಂಡೆ, ಚಿತ್ರದುರ್ಗ- ಆಂಜನೇಯ, ದಾವಣಗೆರೆ-ಎಸ್.ಎಸ್.ಮಲ್ಲಿಕಾರ್ಜುನ್, ಯಾದಗಿರಿ-ಡಾ.ಎ.ಬಿ. ಮಾಲಕರೆಡ್ಡಿ, ಬೀದರ್-ರಾಜಶೇಖರ್ ಪಾಟೀಲ್, ಬೆಳಗಾವಿ-ರಮೇಶ್ ಜಾರಕಿಹೋಳಿ, ಪ್ರಕಾಶ್ ಹುಕ್ಕೇರಿ.
ಧಾರವಾಡ-ವೀರಣ್ಣ ಮತ್ತಿಕಟ್ಟಿ/ವಿನಯ ಕುಲಕರ್ಣಿ, ಬಿಜಾಪುರ-ಎಂ.ಬಿ. ಪಾಟೀಲ್, ಗದಗ-ಎಚ್.ಕೆ.ಪಾಟೀಲ್, ದಕ್ಷಿಣ ಕನ್ನಡ-ರಮಾನಾಥ ರೈ, ಯು.ಟಿ. ಖಾದರ್, ಉಡುಪಿ-ವಿನಯ್ಕುಮಾರ್ ಸೊರಕೆ, ಬಾಗಲಕೋಟೆ-ಎಸ್.ಆರ್. ಪಾಟೀಲ್/ಉಮಾಶ್ರೀ
ವಿಧಾನಸಭಾ ಸ್ಪೀಕರ್ ಸ್ಥಾನ ಅಲಂಕರಿಸಲು ಹಲವು ಶಾಸಕರು ನಿರಾಕರಿಸಿದ್ದು, ತಮಗೆ ಮಂತ್ರಿ ಸ್ಥಾನವೇ ಬೇಕು ಎಂದು ಪಟ್ಟು ಹಿಡಿದ್ದಾರೆ ಎನ್ನಲಾಗಿದೆ. ಹಿರಿಯ ಸದಸ್ಯ ವಿ. ಶ್ರೀನಿವಾಸ ಪ್ರಸಾದ್, ರಮೇಶ್ ಕುಮಾರ್ ಸೇರಿದಂತೆ ಹಲವು ನಾಯಕರು ಈ ಸ್ಥಾನ ತಮಗೆ ಬೇಡ ಎಂದಿದ್ದಾರೆ. ಹೀಗಾಗಿ ಕೋಳಿವಾಡ ಅವರಿಗೆ ಈ ಸ್ಥಾನ ಒಲಿದು ಬರಲಿದೆ.
0 comments:
Post a Comment