PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಕಿರಿದರಲ್ಲಿ ಹಿರಿದಾದ ಅರ್ಥವನ್ನು ಬಿಂಬಿಸುವುದೇ ಚುಟುಕು. ಪತ್ರಿಕೆಗಳಲ್ಲಿ ಖಾಲಿ ಜಾಗ ತುಂಬುವ ಪೂರಕ ಸಾಹಿತ್ಯವಾಗಿದ್ದ ಚುಟುಕುಗಳು ಇಂದು ಚುಟುಕುಗಳನ್ನು ಪ್ರಕಟಿಸದ ಪತ್ರಿಕೆಗಳೇ ಇಲ್ಲ ಎನ್ನುವಷ್ಟರಮಟ್ಟಿಗೆ ಸಾಹಿತ್ಯ ಪ್ರಕಾರ  ಜನಪ್ರಿಯತೆ ಗಳಿಸಿದೆ.  ಚುಟುಕು ರಚಿಸುವವರ ಸಂಖ್ಯೆ ಈಗ ದಿನೆ ದಿನೇ ಹೆಚ್ಚುತ್ತಿದೆ. ಹೊಸದಾಗಿ ಸಾಹಿತ್ಯ ಕೃಷಿ ಪ್ರಾರಂಭಿಸುವವರು ಕೂಡಾ ಚುಟುಕದ ಹೆಬ್ಬಾಗಿಲಿನಿಂದಲೆ ಎಂದರೆ ತಪ್ಪಾಗಲಾರದು. ಹಾಸ್ಯ, ವಿಡಂಬನೆ, ಸೌಂದರ್ಯಾನುಭವ , ವಿಮರ್ಶೆ ಹೀಗೆ ಸಾಹಿತ್ಯಕ್ಕಿರುವ ಅನಂತ ಮುಖಗಳು ಚುಟುಕಕ್ಕೂ ಇವೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.  
ಅವರು ಶನಿವಾರ ಕೊಪ್ಪಳ ತಾಲೂಕಿನ ಗಬ್ಬೂರಿನಲ್ಲಿ ಭಕ್ತ ಕನಕದಾಸ ನಾಟ್ಯ ಸಂಘ ಹಮ್ಮಿಕೊಂಡ 'ತುತ್ತು ಕೊಟ್ಟ ಅತ್ತಿಗೆ'  ನಾಟಕದ ಉದ್ಘಾಟನಾ ಸಂದರ್ಭದಲ್ಲಿ ಸುರೇಶ ಕಂಬಳಿಯವರ 'ಹನಿಗವಿತೆ' ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. 
ಅವರು ಮುಂದುವರೆದು ಮಾತನಾಡುತ್ತಾ, ಕಾಮ-ಪ್ರೇಮಗಳು ಚುಟುಕುಗಳ ಸಾಮಾನ್ಯ ವಸ್ತುವಾಗಿರುವುದು ಸಹಜವಾದರೂ ಅವುಗಳನ್ನುಮೀರಿ ಅದು ಬೆಳೆಯಬೇಕಿದೆ. ಬಹಳಷ್ಟು ಚುಟುಕುಗಳು ಕೇವಲ ಪ್ರಾಸ ಮಾಲಿಕೆಗಳಾಗಿ, ಶಬ್ದ ಚಮತ್ಕಾರಗಳಾಗಿ ರೂಪಗೊಳ್ಳುತ್ತಿರುವುದು ವಿಷಾದನೀಯ. ಚುಟುಕುಗಳು ಈ ಅಪಾಯದಿಂದ  ಪಾರಾಗಬೇಕಿದೆ. ಕಾವ್ಯವಿರುವುದು ಕವಿತೆಯ ಗಾತ್ರದಲ್ಲಲ್ಲ. ಅದು ನೀಡುವ ಅನುಭವದಲ್ಲಿದೆ. ಕಾವ್ಯ ರಚಿಸುತ್ತಿರುವ ಹೊಸಬರಲ್ಲಿ ಅಧಯನ ಹಾಗೂ ಮಾರ್ಗದರ್ಶನದ ಕೊರತೆ ಕಾಡುತ್ತಿರುತ್ತದೆ. ಆದರೆ ಸುರೇಶ ಕಂಬಳಿಯವರ 'ಹನಿಗವಿತೆ' ಕವನ ಸಂಕಲನದಲ್ಲಿ ಅಧಯನಪೂರ್ಣವಾದ ಕವಿತೆಗಳಿವೆ. ಈ ಹನಿಗವಿತೆಯಲ್ಲಿ ಪ್ರಸ್ತುತ ರಾಜಕಾರಣವಿದೆ, ಬರಗಾಲದ ಬಗ್ಗೆ ಗಮನವಿದೆ, ಪ್ರೀತಿಯ ಸ್ವಯಂ ವರವಿದೆ, ವರದಕ್ಷಿಣೆಯ ದುರಂತವಿದೆ, ಮಾವನ ಕಣ್ಣೀರಿದೆ, ಮಕ್ಕಳ ಮಾರಾಟವಿದೆ, ಪ್ರೀತಿ ದುಃಖವಿದೆ, ಅಮೂಲ್ಯವಾದ ಅನ್ನವಿದೆ, ಹವಳ ಮುತ್ತಿದೆ, ನೌಕ್ರಿ ಕೊರಗಿದೆ, ಸೊಳ್ಳೆಯ ಚಿಂತೆಯಿದೆ, ಪ್ರಶಸ್ತಿಯ ರೇಟಿದೆ, ಗುರುವಿನ ಗೋಳಿದೆ. ಒಟ್ಟಾರೆಯಾಗಿ ಈ ಕವನ ಸಂಕಲನ ಸಂಗ್ರಹಯೋಗ್ಯವಾಗಿದೆ ಎಂದು ಹನುಮಂತಪ್ಪ ಅಂಡಗಿ ಚಿಲವಾಡಗಿ ಅಭಿಪ್ರಾಯಪಟ್ಟರು. 
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಮಂಜುನಾಥ ಗೌಡ್ರು, ಕವಿಗಳಾದ ಸುರೇಶ ಕಂಬಳಿ, ಗ್ರಾ. ಪಂ. ಸದಸ್ಯರಾದ, ರಮೇಶ ವಾಯ್ ಕಂಬಳಿ, ಅಮಾಜಪ್ಪ ಕುರಿ, ವಿಜಯಕುಮಾರ ಚವಡಿ ಹಾಲಳ್ಳಿ, ಆರಕ್ಷಕರಾದ ಯಮನೂರಪ್ಪ ಕುರಿ, ಶಿಕ್ಷಕರಾದ ಅಮರೇಶ ಕರಡಿ, ಹಿರಿಯರಾದ ಕಂಠೆಪ್ಪ ಬೆಣ್ಣಿ, ಶರಣಪ್ಪ ತಂಬ್ರಳ್ಳಿ, ಪಂಪಣ್ಣ ಪೂಜಾರ, ದೇವಪ್ಪ ಕುರಿ, ಅಂದಿಗಾಲಪ್ಪ ಕಂಬಳಿ, ಭೀಮಪ್ಪ ಹರಿಜನ, ಸತ್ಯಪ್ಪ ಹರಿಜನ, ಶಿವಶಂಕರ ಕನಕಾಪೂರ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶಿಕ್ಷಕರಾದ ಸತ್ಯಪ್ಪ ಕಂಬಳಿ ನಿರೂಪಿಸಿ, ವಂದಿಸಿದರು.

Advertisement

0 comments:

Post a Comment

 
Top