ಮತದಾರರಲ್ಲಿ ನೈತಿಕ ಮತದಾನದ ಬಗ್ಗೆ ಅರಿವು ಮೂಡಿಸಲು ಕೊಪ್ಪಳ ಜಿಲ್ಲೆಯ ಆಟೋರಿಕ್ಷಾಗಳು ಸಹ ಜಿಲ್ಲಾಡಳಿತದೊಂದಿಗೆ ಸಾಥ್ ನೀಡಿದ್ದು, ಮತದಾರರ ಜಾಗೃತಿಗೆ ಮುಂದಾಗಿವೆ.
ಗ್ರಾಮೀಣ ಪ್ರದೇಶಗಳಿಗಿಂತಲೂ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲೇ ಮತದಾನ ಪ್ರಮಾಣ ಕಡಿಮೆ ಇರುವುದಾಗಿ ಹಿಂದಿನ ಚುನಾವಣೆಯ ಅಂಕಿ-ಅಂಶಗಳು ಹೇಳುತ್ತವೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದ್ದು, ನಗರವಾಸಿಗಳು ಮತದಾನದ ದಿನದಂದು ಮತಗಟ್ಟೆಗೆ ಆಗಮಿಸಿ ತಮ್ಮ ಅಮೂಲ್ಯ ಮತ ಚಲಾಯಿಸುವಂತಾಗಬೇಕು ಎನ್ನುವುದು ಜಿಲ್ಲಾಡಳಿತದ ಆಶಯ. ಈ ನಿಟ್ಟಿನಲ್ಲಿ ನಗರವಾಸಿಗಳಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಆಟೋರಿಕ್ಷಾಗಳ ಮೂಲಕ ಮತದಾರರ ಜಾಗೃತಿ ಸಂದೇಶ ತಲುಪಿಸಲು ಕ್ರಮ ಕೈಗೊಂಡಿದ್ದು, ಇದೀಗ ಕೊಪ್ಪಳ ಜಿಲ್ಲೆಯ ಎಲ್ಲ ನಗರ ಮತ್ತು ಪಟ್ಟಣ ಪ್ರದೇಶಗಳ ಆಟೋರಿಕ್ಷಾ ಮಾಲೀಕರು, ಆಟೋ ಚಾಲಕರು ಜಾಗೃತಿ ಫ್ಲೆಕ್ಸ್‌ಗಳನ್ನು ಆಟೋರಿಕ್ಷಾಗಳಿಗೆ ಅಳವಡಿಸುವ ಮೂಲಕ ಜಿಲ್ಲಾಡಳಿತದ ಜಾಗೃತಿ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದಾರೆ. ಯೋಚಿಸಿ, ಸೂಕ್ತ ಅಭ್ಯರ್ಥಿಗೆ ತಮ್ಮ ಮತ ಚಲಾಯಿಸಿ ಎನ್ನುವ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಮತದಾನ ಮಾಡಿ ನಿಮ್ಮ ಪವರ್ ತೋರಿಸಿ ಎನ್ನುವ ಕನ್ನಡ ಚಿತ್ರರಂಗದ ಖ್ಯಾತ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರ ಸಂದೇಶವನ್ನೊಳಗೊಂಡ ಫ್ಲೆಕ್ಸ್‌ಗಳನ್ನು ಇದೀಗ ಜಿಲ್ಲೆಯ ಎಲ್ಲ ಆಟೋರಿಕ್ಷಾದವರಿಗೆ ವಿತರಿಸಲಾಗಿದ್ದು, ಆಟೋರಿಕ್ಷಾಗಳ ಸಹಕಾರದೊಂದಿಗೆ ಮತದಾರರ ಜಾಗೃತಿ ಸಂದೇಶಗಳು ನಗರವಾಸಿಗಳಿಗಳಿಗೆ ತಲುಪಿಸುವಲ್ಲಿ ಉತ್ತಮ ಸ್ಪಂದನೆ ಕಂಡುಬರುತ್ತಿದೆ. ಕೊಪ್ಪಳದಲ್ಲಿ ಸುಮಾರು ೧೦೦ ಆಟೋ ರಿಕ್ಷಾಗಳಿಗೆ ಈ ಫ್ಲೆಕ್ಸ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದ್ದು, ಇದೇ ರೀತಿ ಗಂಗಾವತಿಯಲ್ಲಿ ೧೦೦, ಕುಷ್ಟಗಿ ಮತ್ತು ಯಲಬುರ್ಗಾ ಪಟ್ಟಣಗಳಲ್ಲಿ ತಲಾ ೫೦ ಆಟೋಗಳಲ್ಲಿ ಮತದಾರರ ಜಾಗೃತಿ ಬಿಂಬಿಸುವ ಫ್ಲೆಕ್ಸ್ ಅಳವಡಿಕೆಗೆ ನಿರ್ಧರಿಸಲಾಗಿದೆ.
ಮತದಾರರ ಜಾಗೃತಿಗೆ ಎಲ್ಲ ಆಟೋರಿಕ್ಷಾ ಸಂಘಟನೆಗಳು, ಆಟೋರಿಕ್ಷಾ ಚಾಲಕರು ಈ ಮತದಾರರ ಜಾಗೃತಿ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಮನವಿ ಮಾಡಿದ್ದಾರೆ.
0 comments:
Post a Comment