PLEASE LOGIN TO KANNADANET.COM FOR REGULAR NEWS-UPDATES


 ಮತದಾನ ಮಾಡದವರಿಗೆ ಯಾವುದೇ ಜನಪ್ರತಿನಿಧಿಗಳಿಗೆ ಸೌಲಭ್ಯ ಕೇಳುವ ಅಥವಾ ಆರೋಪಿಸುವ ನೈತಿಕತೆ ಇಲ್ಲದಂತಾಗುತ್ತದೆ ಎಂದು ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಹೇಳಿದರು.
  ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಕಾರ್ಯಕ್ರಮದಡಿ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢ ಶಾಲೆ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು, ಪೋಷಕರಿಗೆ ಬುಧವಾರ ಏರ್ಪಡಿಸಲಾಗಿದ್ದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಪ್ರಜೆಗಳೇ ಪ್ರಭುಗಳು, ಪ್ರಜೆಗಳ ಪ್ರತಿನಿಧಿಗಳನ್ನು ವಿಧಾನಸಭೆಗೆ ಆರಿಸಿ ಕಳುಹಿಸುವ ಮಹತ್ತರ ಜವಾಬ್ದಾರಿ ಈ ನಾಡಿನ ಪ್ರತಿಯೊಬ್ಬ ಮತದಾರನ ಮೇಲಿದ್ದು, ಈ ಜವಾಬ್ದಾರಿಯ ಮಹತ್ವವನ್ನು ಅರಿತು, ಎಲ್ಲ ಮತದಾರರು ತಪ್ಪದೆ ತಮ್ಮ ಮತ ಚಲಾಯಿಸಬೇಕು.  ಮತದಾರ ಎನಿಸಿಕೊಂಡವರು ತಮ್ಮ ಹೊಣೆಗಾರಿಕೆಯನ್ನು ಮರೆತಲ್ಲಿ, ಅಂತಹ ವ್ಯಕ್ತಿ ಯಾವುದೇ ಸೌಲಭ್ಯ ಕೇಳುವುದು ಅಥವಾ ಆರೋಪಿಸುವ ನೈತಿಕತೆಯನ್ನು ಕಳೆದುಕೊಂಡಂತಾಗುತ್ತದೆ.  ಪ್ರತಿಯೊಂದು ಮತವೂ, ಚುನಾವಣೆಯ ಫಲಿತಾಂಶದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದ್ದು, ಅಂತಹ ಅಮೂಲ್ಯವಾದ ಮತವನ್ನು ಹಣದ ಆಸೆಗೆ ಅಥವಾ ಹೆಂಡ, ಮದ್ಯದ ಚಟಕ್ಕೆ ಮಾರಾಟ ಮಾಡಿಕೊಂಡಲ್ಲಿ, ಪ್ರಜಾಪ್ರಭುತ್ವದ ಸಿದ್ಧಾಂತಕ್ಕೆ ಮಾರಕವಾಗಲಿದೆ.  ಕಳೆದ ಚುನಾವಣೆಗಳ ಮತದಾನದ ಪ್ರಮಾಣವನ್ನು ಅವಲೋಕಿಸಿದಾಗ, ನಗರವಾಸಿಗಳಿಗಿಂತ, ಗ್ರಾಮೀಣರೇ ಬುದ್ದಿವಂತರೆನಿಸಿಕೊಂಡಂತಾಗಿದೆ.  ಏಕೆಂದರೆ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲೇ ಮತದಾನ ಪ್ರಮಾಣ ಶೇ. ೫೦ ಕ್ಕಿಂತ ಕಡಿಮೆಯಾಗಿದೆ.  ನಗರವಾಸಿಗಳು ಪ್ರತಿಯೊಂದು ಹಂತದಲ್ಲೂ ನಮಗೆ ಏನು ಸಿಗುತ್ತದೆ ಎಂದು ಸ್ವಾರ್ಥಿಗಳಾಗಿ ಚಿಂತಿಸುವ ಮನೋಭಾವನೆ ಬೆಳೆಸಿಕೊಂಡಿದ್ದಾರೆ.  ಪ್ರತಿಯೊಬ್ಬ ಮತದಾರನ ಮತದಾನದ ನಿರ್ಧಾರ, ಇಡೀ ರಾಜ್ಯದ ಮುಂದಿನ ೦೫ ವರ್ಷಗಳ ಭವಿಷ್ಯವನ್ನು ನಿರ್ಧರಿಸುತ್ತದೆ.  ಪ್ರಾಮಾಣಿಕರಲ್ಲದವರನ್ನು ಆರಿಸಿದಲ್ಲಿ, ಭ್ರಷ್ಠಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.  ಆದ್ದರಿಂದ, ಪ್ರಾಮಾಣಿಕರನ್ನೇ ಆರಿಸಲು, ಯೋಚಿಸಿ, ಸೂಕ್ತರಿಗೆ ತಪ್ಪದೆ ಮತ ಚಲಾಯಿಸಿ.    ನಿಮ್ಮ ಕರ್ತವ್ಯವನ್ನು ಪಾಲಿಸಿ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಮನವಿ ಮಾಡಿಕೊಂಡರು.
  'ಪ್ರಜಾ ಪ್ರಭುತ್ವದಲ್ಲಿ ದೃಢವಿಶ್ವಾಸ ಹೊಂದಿ, ಮುಕ್ತ, ನ್ಯಾಯ ಸಮ್ಮತ ಚುನಾವಣೆಯ ಘನತೆಯನ್ನು ಎತ್ತಿ ಹಿಡಿಯುತ್ತೇವೆ, ನಿರ್ಭೀತರಾಗಿ, ಜಾತಿ,ಧರ್ಮ, ಮತ, ಇತ್ಯಾದಿಗಳಿಗೆ ಪ್ರಭಾವಿತರಾಗದೆ, ಯಾವುದೇ ಆಮಿಷಕ್ಕೊಳಗಾಗದೆ ಮತ ಚಲಾಯಿಸುತ್ತೇವೆ' ಎಂಬ ಪ್ರಮಾಣವನ್ನು ಎಲ್ಲ ವಿದ್ಯಾರ್ಥಿಗಳ ಪೋಷಕರು, ಪಾಲಕರು, ಸಾರ್ವಜನಿಕರಿಂದ ಇದೇ ಸಂದರ್ಭದಲ್ಲಿ ಪಡೆಯಲಾಯಿತು. 
  ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಡಿಡಿಪಿಐ ಜಿ.ಹೆಚ್. ವೀರಣ್ಣ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ, ಕ್ರೀಡಾ ಇಲಾಖೆ ಅಧಿಕಾರಿ ಪಾಟೀಲ್, ಪ್ರಕಾಶ್, ಶಾಲಾ ಶಿಕ್ಷಕರು ಸೇರಿದಂತೆ ಗ್ರಾಮದ ಹಲವು ಮುಖಂಡರು ಭಾಗವಹಿಸಿದ್ದರು.
  ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು, ಮತದಾನದ ಜಾಗೃತಿ ಘೋಷಣೆಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪ್ರಭಾತಫೇರಿ ನಡೆಸಿ, ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದರು.  ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಎಲ್ಲ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಂದ ಮತದಾರರ ಜಾಗೃತಿಗಾಗಿ ಪ್ರಭಾತಫೇರಿ ಹಾಗೂ ಆಯಾ ವಿದ್ಯಾರ್ಥಿಗಳ ಪೋಷಕರು, ಪಾಲಕರಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸುವ ವಿಶೇಷ ಅಭಿಯಾನವನ್ನು ಬುಧವಾರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

Advertisement

0 comments:

Post a Comment

 
Top