PLEASE LOGIN TO KANNADANET.COM FOR REGULAR NEWS-UPDATES


 ಕೊಪ್ಪಳ ಗ್ರಾಹಕರ ವೇದಿಕೆಯ ತೀರ್ಪು ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಹಕರ ವೇದಿಕೆ, ಕೊಪ್ಪಳದ ಶ್ರೀ ರಾಮ ಸಿಟಿ ಯೂನಿಯನ್ ಫೈನಾನ್ಸ್‌ನ ವ್ಯವಸ್ಥಾಪಕನಿಗೆ ಜೈಲು ಶಿಕ್ಷೆ ವಿಧಿಸಿದೆ.
  ಕೊಪ್ಪಳದ ಹೆಡ್ ಪೋಸ್ಟ್ ಆಫೀಸ್ ಬಳಿ ಇರುವ ಶ್ರೀ ರಾಮ ಸಿಟಿ ಯೂನಿಯನ್ ಫೈನಾನ್ಸ್ ಲಿಮಿಟೆಡ್ ನವರು, ಫೈನಾನ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಯಲಬುರ್ಗಾ ತಾಲೂಕು ಕೋಳಿಹಾಳ ಗ್ರಾಮದ ಹನುಮಂತಪ್ಪ ತಂದೆ ಯಂಕಪ್ಪ ವಡ್ಡರ ಅವರ ಬಜಾಜ್ ಪ್ಲಾಟಿನಾ ದ್ವಿ-ಚಕ್ರ ವಾಹನವನ್ನು ಜಪ್ತು ಮಾಡಿ, ಹರಾಜು ಹಾಕಿದ್ದರು.  ಗ್ರಾಹಕರ ವೇದಿಕೆಯಲ್ಲಿ ದಾಖಲುಗೊಂಡು ಇತ್ಯರ್ಥಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಅನ್ನು ಯಾವ ಬೆಲೆಗೆ ಹರಾಜು ಮಾಡಲಾಗಿದೆ ಎಂಬುದರ ವಿವರವನ್ನು ಒಂದು ತಿಂಗಳ ಒಳಗಾಗಿ ಒದಗಿಸುವಂತೆ ಹಾಗೂ ಪ್ರಕರಣದ ಖರ್ಚು ೧೦೦೦ ಗಳನ್ನು ನೀಡುವಂತೆ ಗ್ರಾಹಕರ ವೇದಿಕೆ ತೀರ್ಪು ನೀಡಿತ್ತು.  ಈ ತೀರ್ಪಿನ ವಿರುದ್ಧ ಫೈನಾನ್ಸ್ ಕಂಪನಿಯವರು ರಾಜ್ಯ ಗ್ರಾಹಕರ ವೇದಿಕೆಗೆ ಮೇಲ್ಮನವಿ ಸಲ್ಲಿಸಿದ್ದರು.  ಆದರೆ ಈ ಮೇಲ್ಮನವಿ ರಾಜ್ಯ ಗ್ರಾಹಕರ ವೇದಿಕೆಯಲ್ಲಿ ವಜಾಗೊಂಡಿದ್ದು, ರಾಜ್ಯ ಗ್ರಾಹಕರ ವೇದಿಕೆ ಜಿಲ್ಲಾ ಗ್ರಾಹಕರ ವೇದಿಕೆಯ ತೀರ್ಪನ್ನು ಎತ್ತಿ ಹಿಡಿದಿತ್ತು.  ದ್ವಿ-ಚಕ್ರ ವಾಹನವನ್ನು ಹರಾಜಿನಲ್ಲಿ ಯಾವ ಬೆಲೆಗೆ ಮಾರಾಟ ಮಾಡಲಾಗಿದೆ ಎಂಬುದರ ವಇವರವನ್ನು ಒದಗಿಸದೇ, ವೇದಿಕೆಯ ಆದೇಶ ಪಾಲಿಸದೇ ಇರುವುದು ಸ್ಪಷ್ಟವಾಗಿದ್ದರಿಂದ, ಹನುಮಂತಪ್ಪ ಅವರು ಫೈನಾನ್ಸ್ ಕಂಪನಿಯವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರಿಗೆ ಶಿಕ್ಷೆ ನೀಡುವಂತೆ ವೇದಿಕೆಯ ಮೊರೆ ಹೋಗಿದ್ದರು.  ಗ್ರಾಹಕರ ವೇದಿಕೆಯಲ್ಲಿ ವಾದ ಮಂಡಿಸಿದ ಫೈನಾನ್ಸ್ ಕಂಪನಿಯವರು, ಫಿರ್ಯಾದುದಾರರ ಹೆಸರಿನವರು ಕಂಪನಿಯಲ್ಲಿ ಹಲವಾರು ಜನರಿದ್ದು, ಇವರ ವಾಹನವನ್ನು ನೊಂದಾಯಿಸದೇ ಇರುವುದರಿಂದ, ಅವರ ವಾಹನದ ಮಾರಾಟದ ಬೆಲೆ ಒದಗಿಸಲು ಸಾಧ್ಯವಾಗಿಲ್ಲವೆಂದು ಹೇಳಿಕೆ ನೀಡಿ, ವಾಹನವನ್ನು ೧೨೨೫೦ ರೂ.ಗಳಿಗೆ ಮಾರಾಟ ಮಾಡಿರುವುದಾಗಿ ತಿಳಿಸಿ, ತಮ್ಮಿಂದ ಯಾವುದೇ ಆದೇಶದ ಉಲ್ಲಂಘನೆಯಾಗಿಲ್ಲ, ಪ್ರಕರಣವನ್ನು ವಜಾಗೊಳಿಸುವಂತೆ ಕೋರಿದ್ದರು.
  ಪ್ರಕರಣದ ವಿಚಾರಣೆ ನಡೆಸಿದ ವೇದಿಕೆ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಹಾಗೂ ಸದಸ್ಯರುಗಳಾದ ಶಿವರೆಡ್ಡಿ ಬಿ. ಗೌಡ ಮತ್ತು ವೇದಾ ಜೋಷಿ ಅವರು, ಕಂಪನಿಯು, ವಾಹನವನ್ನು ೧೨೨೫೦ ರೂ.ಗಳಿಗೇ ಮಾರಾಟ ಮಾಡಿದ್ದಾರೆ ಎಂಬುದಕ್ಕೆ ಪೂರಕ ದಾಖಲೆ ಹಾಜರುಪಡಿಸಿಲ್ಲವಾದ ಕಾಋಣ ವಾಹನವನ್ನು ಹರಾಜಿನಲ್ಲಿ ಯಾವ ಬೆಲೆಗೆ ಮಾರಾಟ ಮಾಡಲಾಗಿದೆ ಎಂಬ ಮಾಹಿತಿಯನ್ನು ಫಿರ್ಯಾದುದಾರರಿಗೆ ಒದಗಿಸದೇ ಇರುವುದು, ಗ್ರಾಹಕರ ವೇದಿಕೆಯ ಆದೇಶ ಪಾಲಿಸದೇ ಇರುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.  ಆದ್ದರಿಂದ ಶ್ರೀ ರಾಮ ಸಿಟಿ ಯೂನಿಯನ್ ಫೈನಾನ್ಸ್ ಲಿಮಿಟೆಡ್‌ನ ವ್ಯವಸ್ಥಾಪಕರಿಗೆ ಗ್ರಾಹಕರ ಸಂರಕ್ಷಣಾ ಕಾಯ್ದೆ- ೧೯೮೬ ರನ್ವಯ ಒಂದು ತಿಂಗಳ ಸಾಧಾರಣ ಜೈಲು ಶಿಕ್ಷೆ ಹಾಗೂ ರೂ. ೨೦೦೦ ಗಳ ದಂಡ ವಿಧಿಸಿದೆ.  ದಂಡ ಪಾವತಿಸಲು ವಿಫಲರಾದಲ್ಲಿ, ಹೆಚ್ಚುವರಿಯಾಗಿ ೮ ದಿನಗಳ ಸಾದಾರಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Advertisement

0 comments:

Post a Comment

 
Top