ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ, ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯ ಠೇವಣಿ ಮೊತ್ತವನ್ನು ಸಾಮಾನ್ಯ ಕ್ಷೇತ್ರಗಳಿಗೆ ರೂ. ೧೦೦೦೦ ಹಾಗೂ ಮೀಸಲು ಕ್ಷೇತ್ರಗಳಿಗೆ ರೂ. ೫೦೦೦ ಗಳನ್ನು ಠೇವಣಿ ಮೊತ್ತವಾಗಿ ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸಿದೆ. ಅಲ್ಲದೆ ಅಭ್ಯರ್ಥಿಯ ಗರಿಷ್ಟ ವೆಚ್ಚದ ಮಿತಿಯನ್ನು ೧೬ ಲಕ್ಷ ರೂ.ಗಳಿಗೆ ನಿಗದಿಪಡಿಸಿದೆ.
ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ತನ್ನ ಚುನಾವಣಾ ವೆಚ್ಚದ ಮಿತಿಯನ್ನು ೧೬ ಲಕ್ಷ ರೂ.ಗಳಿಗೆ ಸೀಮಿತಪಡಿಸಿಕೊಳ್ಳಬೇಕು. ಚುನಾವಣಾ ವೆಚ್ಚದ ನಿರ್ವಹಣೆಗಾಗಿಯೇ ಅಭ್ಯರ್ಥಿ ಹೊಸದಾಗಿ ಬ್ಯಾಂಕ್ ಖಾತೆಯನ್ನು ಪ್ರಾರಂಭಿಸಿಕೊಳ್ಳಬೇಕಾಗಿದ್ದು, ಬ್ಯಾಂಕ್ ಖಾತೆಯು ಅಭ್ಯರ್ಥಿ ಅಥವಾ ಅಭ್ಯರ್ಥಿಯೊಂದಿಗೆ ಆತನ ಚುನಾವಣಾ ಏಜೆಂಟ್‌ನ ಜಂಟಿ ಖಾತೆಯಲ್ಲಿ ಇರಬಹುದಾಗಿದೆ. ೨೦೦೦೦ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಕಡ್ಡಾಯವಾಗಿ ಅದೇ ಖಾತೆಯಿಂದ ಚೆಕ್ ಮೂಲಕ ನೀಡಬೇಕು. ಅಭ್ಯರ್ಥಿಗಳು ಚುನಾವಣಾ ವೆಚ್ಚದ ವಿವರಗಳನ್ನು ೦೩ ರಿಜಿಸ್ಟರ್‌ಗಳಲ್ಲಿ ದಾಖಲಿಸಿಕೊಳ್ಳಬೇಕಾಗಿದ್ದು, ಪ್ರತಿ ದಿನದ ಖರ್ಚಿನ ವಿವರಗಳನ್ನು ಪಾರ್ಟ್-ಎ, ನಗದು ಮುಖಾಂತರ ನಡೆಸುವ ಖರ್ಚಿನ ವಿವರಗಳನ್ನು ಪಾರ್ಟ್-ಬಿ, ಮತ್ತು ಬ್ಯಾಂಕ್ ಮುಖಾಂತರ ನಡೆಸುವ ಖರ್ಚಿನ ವಿವರಗಳನ್ನು ಪಾರ್ಟ್-ಸಿ ರಂತೆ ರಜಿಸ್ಟರ್‌ಗಳಲ್ಲಿ ದಾಖಲಿಸಬೇಕು. ವೆಚ್ಚಗಳ ವಿವರವನ್ನು ಪ್ರಚಾರ ಅವಧಿಯಲ್ಲಿ ಕನಿಷ್ಟ ೦೩ ಸಲ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಚುನಾವಣೆ ವೆಚ್ಚದ ಸಂಪೂರ್ಣ ವಿವರಗಳನ್ನು ೨೦೧೩ ರ ಜೂನ್ ೦೮ ಅಂದರೆ ಚುನಾವಣೆ ಫಲಿತಾಂಶ ಘೋಷಣೆಯಾದ ಒಂದು ತಿಂಗಳ ಒಳಗಡೆ ಸಲ್ಲಿಸಬೇಕು. ಪೋಲಿಂಗ್ ಏಜೆಂಟ್ ಅನ್ನು ನೇಮಕ ಮಾಡಿಕೊಳ್ಳುವಾಗ ಅಂತಹ ಏಜೆಂಟ್ ಅದೇ ಮತಗಟ್ಟೆಯ ಮತದಾರನಾಗಿರಬೇಕು.
ಸೂಚಕರು : ಮಾನ್ಯತೆ ಪಡೆದ ರಾಷ್ಟ್ರ ಮತ್ತು ರಾಜ್ಯ ಪಕ್ಷಗಳ ಅಭ್ಯರ್ಥಿಗಳಿಗೆ ಒಬ್ಬರು ಸೂಚಕರು ಇರಬೇಕು. ನೋಂದಾಯಿತ ಆದರೆ ಮಾನ್ಯತೆ ಪಡೆಯದ ಪಕ್ಷಗಳು ಅಂದರೆ ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಇತ್ಯಾದಿ ಪಕ್ಷಗಳಿಗೆ, ಪಕ್ಷೇತರ ಅಭ್ಯರ್ಥಿಗಳಿಗೆ ಹಾಗೂ ಬೇರೆ ರಾಜ್ಯದಲ್ಲಿ ನೋಂದಾಯಿತಗೊಂಡು ಕರ್ನಾಟಕದಲ್ಲಿ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ೧೦ ಜನ ಸೂಚಕರು ಇರಬೇಕಾಗುತ್ತದೆ. ಸೂಚಕರು ಕಡ್ಡಾಯವಾಗಿ ಅದೇ ವಿಧಾನಸಭಾ ಕ್ಷೇತ್ರದ ಮತದಾರನಾಗಿರಬೇಕು ಮತ್ತು ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಯೊಂದಿಗೆ ತನ್ನ ಮತದಾರರ ಗುರುತಿನ ಚೀಟಿ ಮತ್ತು ಮತದಾರರ ಪಟ್ಟಿಯೊಂದಿಗೆ ಹಾಜರಿರಬೇಕಾಗುತ್ತದೆ.
ನಾಮಪತ್ರ ಸಲ್ಲಿಸುವವರಿಗೆ ಸೂಚನೆ : ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಯೊಂದಿಗೆ ಇತರೆ ನಾಲ್ವರು ಸೇರಿದಂತೆ ಒಟ್ಟು ೦೫ ಜನ ಮಾತ್ರ ಚುನಾವಣಾ ಅಧಿಕಾರಿಗಳ ಕಚೇರಿಯೊಳಗೆ ಹೋಗಬಹುದಾಗಿದ್ದು, ಕೇವಲ ೦೩ ವಾಹನಗಳನ್ನು ಮಾತ್ರ ಚುನಾವಣಾಧಿಕಾರಿಗಳ ಕಚೇರಿಯ ೧೦೦ ಮೀ. ಆವರಣದೊಳಗೆ ಬಿಡಲಾಗುವುದು. ಒಬ್ಬ ಅಭ್ಯರ್ಥಿ ೦೪ ನಾಮಪತ್ರಗಳನ್ನು ಮಾತ್ರ ಸಲ್ಲಿಸಬಹುದಾಗಿದೆ. ಫಾರ್ಮ್- ಎ & ಬಿ ಗಳನ್ನು ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕವಾದ ಏ. ೧೭ ರಂದು ಮಧ್ಯಾಹ್ನ ೩ ಗಂಟೆಯ ಒಳಗಾಗಿ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬೇಕು. ಅಭ್ಯರ್ಥಿಗಳ ಚರ, ಸ್ಥಿರಾಸ್ಥಿ, ಶಿಕ್ಷೆ, ಬಾಕಿ ಇತ್ಯಾದಿಗಳ ಮಾಹಿತಿ ಒಳಗೊಂಡ ಪ್ರಮಾಣ ಪತ್ರ ಅಫಿಡೆವಿಟ್ ನಮೂನೆ-೨೬ ಅನ್ನು ೧೦೦ ರೂ. ಗಳ ಬಾಂಡ್ ಪೇಪರ್‌ನಲ್ಲಿ ತಯಾರಿಸಿ, ಅಭ್ಯರ್ಥಿಯ ಸಹಿಯನ್ನು ನೋಟರಿ ಮುಂದೆ ಪ್ರಮಾಣೀಕರಿಸಿ ಏಪ್ರಿಲ್ ೧೭ ರ ಮಧ್ಯಾಹ್ನ ೩ ಗಂಟೆ ಒಳಗಡೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು.
ಫ್ಲೈಯಿಂಗ್ ಸ್ಕ್ವಾಡ್ ನೇಮಕ : ಚುನಾವಣೆ ಮಾದರಿ ನೀತಿ ಸಂಹಿತೆ ಕುರಿತಂತೆ ಈಗಾಗಲೆ ಜಿಲ್ಲೆಯ ಹಲವೆಡೆ ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮಾದರಿ ನೀತಿ ಸಂಹಿತೆ ಬಗ್ಗೆ ನಿಗಾ ವಹಿಸಲು ಫ್ಲೈಯಿಂಗ್ ಸ್ಕ್ವಾಡ್ ನೇಮಿಸಲಾಗಿದೆ. ಚುನಾವಣೆ ನೀತಿ ಸಂಹಿತೆಯ ಕುರಿತ ದೂರುಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ೦೮೫೩೯-೨೨೫೦೦೨ ಪ್ರಾರಂಭಿಸಲಾಗಿದೆ.
ಕಟೌಟ್, ಪೋಸ್ಟರ್ ಗಳಿಗೆ ನಿಷೇಧ : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ ಯಾವುದೇ ಪ್ರಮುಖ ವೃತ್ತ, ರಸ್ತೆಯ ಇಕ್ಕೆಲಗಳು, ಎಲೆಕ್ಟ್ರಿಕ್ ಕಂಬ ಇತ್ಯಾದಿ ಸ್ಥಳಗಳಲ್ಲಿ ಕಟೌಟ್, ಪೋಸ್ಟರ್, ಗೋಡೆ ಬರಹ, ಬ್ಯಾನರ್, ಬಂಟಿಂಗ್ಸ್ ಅಂಟಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಶಾಲಾ ಮೈದಾನ, ಶಾಲಾ ಆವರಣ, ಧಾರ್ಮಿಕ ಸ್ಥಳಗಳನ್ನು ಚುನಾವಣಾ ಪ್ರಚಾರ ಕಾರ್ಯಕ್ಕೆ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment