PLEASE LOGIN TO KANNADANET.COM FOR REGULAR NEWS-UPDATES


  ಎಲ್ಲ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಸಾಧಿಸುತ್ತಿರುವ ಇಂದಿನ ಮಹಿಳೆಯರು ಸ್ವಾವಲಂಬಿಗಳಾಗಿ, ತಮ್ಮ ಬದುಕನ್ನು ಹಸನುಗೊಳಿಸಬೇಕು ಎಂದು ಜಿಲ್ಲಾ ಅಪರಾಧ ಪತ್ತೆ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಎಂ. ಶಿವಕುಮಾರ್ ಅವರು ಮಹಿಳೆಯರಿಗೆ ಕರೆ ನೀಡಿದರು.
  ಕೊಪ್ಪಳ ಜಿಲ್ಲಾ ಘಟಕದ ಮಹಿಳಾ ಸಮಾಖ್ಯಾ ವತಿಯಿಂದ, ತಾಲೂಕಿನ ಹೂವಿನಾಳದ ಭಾಗೀರತಿ ತರಬೇತಿ ಸಂಸ್ಥೆಯ ಆವರಣದಲ್ಲಿ, ಸೋಮವಾರ ಏರ್ಪಡಿಸಲಾಗಿದ್ದ ಮಹಿಳೆಯರ ಸಾಧನೆಯ ಸಮಾವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
  ಆಧುನಿಕ ಜೀವನ ಶೈಲಿಯಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಪ್ರಾತಿನಿಧ್ಯವನ್ನು ಸಾಧಿಸುತ್ತಿದ್ದಾರೆ.  ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರನ್ನು ಒಂದೆಡೆ ಸೇರಿಸಿ, ಅವರ ಸಾಧನೆಯ ಪರಿಚಯವನ್ನು, ಇತರೆ ಮಹಿಳೆಯರಿಗೆ ಮಾಡಿಸುವ ಮೂಲಕ, ಮಹಿಳೆಯರ ಸಾಧನೆಗೆ ಪ್ರೇರೇಪಿಸುವಂತಹ ಉತ್ತಮ ಕಾರ್ಯವನ್ನು ಮಹಿಳಾ ಸಮಾಖ್ಯಾ ಮಾಡುತ್ತಿರುವುದು ಶ್ಲಾಘನೀಯವಾಗಿದೆ.  ಒಂದೆಡೆ ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿರುವುದನ್ನು ಕಾಣಬಹುದಾಗಿದ್ದರೂ, ಇನ್ನೊಂದೆಡೆ, ಅದೇ ಮಹಿಳೆ ಬಾಲ್ಯ ವಿವಾಹ, ದೇವದಾಸಿ ಪದ್ಧತಿಯಂತಹ ಸಾಮಾಜಿಕ ಪಿಡುಗಿಗೆ ಬಲಿಯಾಗುತ್ತಿರುವುದನ್ನೂ ಸಹ ಕಾಣುತ್ತಿದ್ದೇವೆ.  ಹೆಣ್ಣು ಮಕ್ಕಳನ್ನು ಬಾಲ್ಯದಿಂದಲೇ ಮನೆಗೆಲಸಕ್ಕೆ ಹಚ್ಚದೆ, ಅವರಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ, ಸಾಮಾಜಿಕ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಬಹುದಾಗಿದೆ.  ತೊಂದರೆಗೆ, ಶೋಷಣೆಗೆ ಸಿಲುಕುವ ಮಹಿಳೆಯರ ರಕ್ಷಣೆಗೆ ಇದೀಗ ಕಾನೂನು ಸಹ ಅತ್ಯಂತ ಬಿಗಿಯಾಗಿದ್ದು, ಶೋಷಣೆಗೆ ಒಳಗಾದವರು ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ ಸೂಕ್ತ ರಕ್ಷಣೆ ಮತ್ತು ನ್ಯಾಯವನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಅಪರಾಧ ಪತ್ತೆ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಎಂ. ಶಿವಕುಮಾರ್ ಅವರು ಹೇಳಿದರು.
  ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಗಣ್ಯರಾದ ಇಂದಿರಾಬಾವಿಕಟ್ಟಿ ಅವರು, ಜಗಜ್ಯೋತಿ ಬಸವೇಶ್ವರರು ಅಂದಿನ ಕಾಲದಲ್ಲೇ ಮಹಿಳೆಗೆ ಸ್ಥಾನಮಾನ ಕಲ್ಪಿಸಿ, ಮಹಿಳೆಗೆ ಆದ್ಯತೆ ನೀಡಿದ್ದರು.  ಅಂದಿನ ಕಾಲದಲ್ಲಿ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳೆಯ ಜೀವನ, ಇದೀಗ ರಾಜಕೀಯ, ಉದ್ಯಮ, ಶಿಕ್ಷಣ, ವಿಜ್ಞಾನ, ಕಲೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿದೆ.  ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತಾನು ಅಬಲೆಯಲ್ಲ ಎಂದು ಸಾಬೀತು ಪಡಿಸಿದ್ದಾರೆ ಎಂದರು.
  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಈ ಸಂದರ್ಭದಲ್ಲಿ ಮಾತನಾಡಿ, ಕಳೆದ ಚುನಾವಣೆಗಳನ್ನು ಗಮನಿಸಿದಾಗ, ಮಹಿಳೆಯರ ಮತದಾನ ಪ್ರಮಾಣದಲ್ಲಿ ಕುಸಿತವಾಗಿರುವುದು ಕಂಡುಬಂದಿದೆ.  ಎಲ್ಲ ಮಹಿಳೆಯರು ಚುನಾವಣೆ ಸಂದರ್ಭದಲ್ಲಿ ತಪ್ಪದೆ ಮತದಾನ ಮಾಡಬೇಕು.  ೧೮ ವರ್ಷ ಮೇಲ್ಪಟ್ಟವರಿದ್ದರೆ, ತಪ್ಪದೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಳಿಸಬೇಕು ಎಂದು ಕರೆ ನೀಡಿದರು.  ಗಣ್ಯರಾದ ಸರೋಜ ಬಾಕಳೆ, ಶಂಕ್ರಮ್ಮ ಹಿರೇಮಠ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.
  ಪ್ರಾರಂಭದಲ್ಲಿ ಮಹಿಳಾ ಸಮಾಖ್ಯಾದ ಕಿರಿಯ ಸಂಪನ್ಮೂಲ ವ್ಯಕ್ತಿ ಮೀನಾಕ್ಷಿ ಸ್ವಾಗತಿಸಿದರು, ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಮಹಾದೇವಿ ಗುಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

0 comments:

Post a Comment

 
Top