PLEASE LOGIN TO KANNADANET.COM FOR REGULAR NEWS-UPDATES



- ಸನತ್‌ಕುಮಾರ ಬೆಳಗಲಿ

ಗುಲ್ಬರ್ಗದಲ್ಲಿ ಕೆಂಡದಂಥ ಬಿಸಿಲು. ಕಳೆದ ವಾರ ಅಲ್ಲಿ ಹೋಗಿದ್ದ ನಾನು ಮುಂಜಾನೆ 9ಕ್ಕೆ ಸುಸ್ತಾಗಿ ಹೋದೆ. ಕೈಗೆ ಕೆಲಸವಿಲ್ಲದ, ಕುಡಿಯುವ ನೀರಿಲ್ಲದ ಈ ಭಾಗದ ಜನ ಬೆಂಗಳೂರು- ಮಂಗಳೂರುಗಳಿಗೆ ಗುಳೆ ಹೊರಟ ದೃಶ್ಯಗಳನ್ನು ದಾರಿಯುದ್ದಕ್ಕೂ ಕಂಡೆ. ರಾಯಚೂರು, ಯಾದಗಿರಿ, ವಾಡಿ, ಶಹಾಬಾದ್ ಹೀಗೆ ಎಲ್ಲ ರೈಲು ನಿಲ್ದಾಣಗಳಲ್ಲಿ ಹೆಗಲ ಮೇಲೆ ಮಕ್ಕಳನ್ನು, ಕೈಯಲ್ಲಿ ಸರಂಜಾಮುಗಳ ಗಂಟನ್ನು ಹೊತ್ತುಕೊಂಡು ಈ ಜನ ನಿಂತದ್ದನ್ನು ಕಂಡು ಕರಳು ಕಿವಿಚಿತು. ಕೆಲ ಕುಟಂಬಗಳು ಮಕ್ಕಳ ವಾರ್ಷಿಕ ಪರೀಕ್ಷೆಯನ್ನು ಲೆಕ್ಕಿಸದೆ ತುತ್ತಿನ ಚೀಲ ತುಂಬಿಸಲು ಹೊರಟಿದ್ದಾರೆ. ಇದು ಈ ಭಾಗದ ಜನರ ಪ್ರತಿ ವರ್ಷದ ಗೋಳು.
ಇಂಥ ಹೈದರಾಬಾದ್ ಕರ್ನಾಟಕದಲ್ಲಿ ಒಂದೆಡೆ ಹೊಟ್ಟೆಪಾಡಿಗಾಗಿ ಜನ ಗುಳೆ ಹೊರಟಿದ್ದಾರೆ. ಇನ್ನೊಂದು ಕಡೆ ಚುನಾವಣೆಯ ಕಾವು ನಿಧಾನವಾಗಿ ಏರುತ್ತಿದೆ. ಎಲ್ಲ ಕಡೆಗಳಂತೆ ಇಲ್ಲೂ ರಿಯಲ್ ಎಸ್ಟೇಟ್ ಮಾಫಿಯಾದ ಖದೀಮರು ಸಮಾಜ ಸೇವಕರೆಂಬ ಲಫಂಗರು ಕಾಂಗ್ರೆಸ್, ಬಿಜೆಪಿ, ಕೆಜೆಪಿ ಟಿಕೇಟಿಗಾಗಿ ಓಡಾಡುತ್ತಿದ್ದಾರೆ. ಈ ನಡುವೆ ನಾವೆಲ್ಲ ತುಂಬ ಹೆಮ್ಮೆಪಟ್ಟುಕೊಳ್ಳುತ್ತಿದ್ದ ಶುಭ್ರ ಚಾರಿತ್ರದ ಜನನಾಯಕ ಎಸ್.ಕೆ.ಕಾಂತಾ ಕೆಜೆಪಿ ಸೇರಿ ಸಮಾನ ಮನಸ್ಕರಲ್ಲಿ ದಿಗಿಲು ಮೂಡಿಸಿದ್ದಾರೆ. ಖರ್ಗೆ, ಧರ್ಮ ಸಿಂಗ್ ಮತ್ತಿತರ ಘಟಾನುಘಟಿಗಳು ತಮ್ಮ ಮಕ್ಕಳನ್ನು ವಿಧಾನಸಭೆ ಮೆಟ್ಟಿಲು ಹತ್ತಿಸಲು ಕಸರತ್ತು ಆರಂಭಿಸಿದ್ದಾರೆ.
ಈ ನಡುವೆ ರಾಮಚಂದ್ರಾಪುರದ ಮಠದ ರಾಘವೇಶ್ವರ ಭಾರತಿ ಸ್ವಾಮಿ ಇಲ್ಲಿ ಬಂದು ‘ರಾಮಕಥಾ’ ಪ್ರಹಸನ ನಡೆಸಿದ್ದಾನೆ. ವಾಸ್ತವವಾಗಿ ಇದು ಧಾರ್ಮಿಕ ಕಾರ್ಯಕ್ರಮವಲ್ಲ.  ಬಿಜೆಪಿಗೆ ಹಿಂದೂ ಓಟ್ ಬ್ಯಾಂಕ್ ನಿರ್ಮಿಸುವ ಷಡ್ಯಂತ್ರ ಇದರ ಹಿಂದಿದೆ. ತೊಂಬತ್ತರ ದಶಕದ ಆರಂಭದಲ್ಲಿ ರಾಮರಥ ಕಾರ್ಯಕ್ರಮ ನಡೆಸಿ ದೇಶದ ಶಾಂತಿ ಸೌಹಾರ್ದತೆಗೆ ಕೊಳ್ಳಿ ಇಟ್ಟ ಸಂಘಪರಿವಾರ ಈ ಬಾರಿ ಹೆಸರನ್ನು ಕೊಂಚ ಬದಲಿಸಿ ‘ರಾಮಕಥಾ’ ಎಂಬ ನಾಟಕ ನಡೆಸಿದೆ. ಕರ್ನಾಟಕದಲ್ಲಿ ಇದರ ಪ್ರಯೋಗಕ್ಕೆ ಗುಲ್ಬರ್ಗವನ್ನು ಆರಿಸಿಕೊಂಡಿರುವುದರ ಹಿಂದೆ ತುಂಬ ಆಳವಾದ ಪಿತೂರಿ ಇದೆ.
ಈ ಹಿಂದೆ ಇದೇ ರೀತಿ ರಾಮರಥ, ಇಟ್ಟಿಗೆ ಯಾತ್ರೆ, ಶಿಲಾಪೂಜೆ, ಪಾದುಕೆ ಪೂಜೆ, ಕರಾವಳಿ ಜಿಲ್ಲೆಗಳನ್ನು ಮತ್ತು ಉತ್ತರ ಕರ್ನಾಟಕದ ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳನ್ನು ರೋಗಗ್ರಸ್ತಗೊಳಿಸಿದ್ದ ಸಂಘಪರಿವಾರಕ್ಕೆ ಹೈದರಾಬಾದ್ ಕರ್ನಾಟಕದ ಗುಲ್ಬರ್ಗ, ರಾಯಚೂರು, ಬೀದರ, ಕೊಪ್ಪಳಗಳನ್ನು ಆಕ್ರಮಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಹಿಂದೆ ಆಕ್ರಮಿಸಿಕೊಂಡ ಪ್ರದೇಶಗಳಲ್ಲಿ ತನ್ನ ಕೋಟೆ ಕುಸಿಯುತ್ತಿರುವುದರಿಂದ ದಿಗಿಲುಗೊಂಡ ಆರೆಸ್ಸೆಸ್ ಚಡ್ಡಿ ಗ್ಯಾಂಗು ಈಗ ಗುಲ್ಬರ್ಗಕ್ಕೆ ಲಗ್ಗೆ ಇಟ್ಟಿದೆ.
ಹನ್ನೊಂದನೆ ಶತಮಾನದಲ್ಲಿ ಬಸವಣ್ಣನವರು, ಹದಿನೇಳನೆ ಶತಮಾನದಲ್ಲಿ ಬಂದೇ ನವಾಜರು ಓಡಾಡಿದ ಗುಲ್ಬರ್ಗ-ಬೀದರಗಳು ಇಂದಿಗೂ ಸೌಹಾರ್ದತೆಯ ತಾಣಗಳಾಗಿವೆ. ಸೂಫಿ, ಶರಣ, ಸಂತರು ಜನಿಸಿದ ಈ ನೆಲದಲ್ಲಿ ಫ್ಯಾಸಿಸ್ಟ್ ಮನುವಾದಿಗಳು ಕಾಲೂರಲು ಈವರೆಗೆ ಸಾಧ್ಯವಾಗಿಲ್ಲ. ಬಸವಣ್ಣ, ಬಂದೇ ನವಾಜರ ಜೊತೆ ಅಂಬೇಡ್ಕರ್ ಪ್ರಭಾವವೂ ಇಲ್ಲಿದೆ. ಹಿಂದೆ ಬೌದ್ಧಧರ್ಮವೂ ಇಲ್ಲಿ ನೆಲೆಯೂರಿದ್ದ ಹಿನ್ನೆಲೆ ಇದೆ. ಇಂಥ ತಾಣವನ್ನು ವಶಪಡಿಸಿಕೊಳ್ಳಲು ಈ ಬಾರಿ ಸಂಘಪರಿವಾರ ಮತ್ತೆ ರಾಮಕಥಾ ಕುಚೇಷ್ಟೆ ಆರಂಭಿಸಿದೆ.
ಸಂಘ ಪರಿವಾರ ತನ್ನ ಹಿಡನ್ ಅಜೆಂಡಾ ಜಾರಿಗೆ ಈ ಬಾರಿ ರಾಮಚಂದ್ರ ಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಯನ್ನು ಮುಂದೆ ಮಾಡಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ಈತನ ದನಗಳ ಜಾತ್ರೆಗೆ 3 ಕೋಟಿ ರೂಪಾಯಿ ಬಜೆಟ್ ಅನುದಾನ ನೀಡಿದ್ದರು. ಅದಷ್ಟೇ ಅಲ್ಲ ಶತಮಾನಗಳಿಂದ ಆಸ್ತಿಕರ ಯಾತ್ರಾ ಸ್ಥಳವಾಗಿರುವ ಗೋಕರ್ಣದ ದೇವಾಲಯವನ್ನೇ ಡೀನೋಟಿಫೈ ಮಾಡಿ ಈ ಸ್ವಾಮಿಗೆ ಹಸ್ತಾಂತರಿಸಿದ್ದರು. ಇದಕ್ಕೆ ಕಾರವಾರ ಜಿಲ್ಲೆಯ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿ ದ್ದರು. ಗೋಕರ್ಣದಲ್ಲಿ ಪ್ರತಿಭಟನೆಯ ನಡೆದಿತ್ತು.
ಇಂಥ ಗೋಮುಖದ ವಂಚಕ ಸ್ವಾಮಿಯನ್ನು ಗುಲ್ಬರ್ಗಕ್ಕೆ ಕರೆದುಕೊಂಡು ಬಂದು ‘ರಾಮಕಥಾ’ ಎಂದು ಹೊಸ ಪ್ರಹಸನವನ್ನು ಆರೆಸ್ಸೆಸ್ ಆರಂಭಿಸಿದೆ. ಈ ಬಾರಿ ಅಪ್ಪಿತಪ್ಪಿಯೂ ಪರಿವಾರದ ಸಂಘಟನೆಗಳ ಹೆಸರನ್ನು ಬಳಸಿಲ್ಲ. ಇದಕ್ಕಾಗಿ ರಾಮಕಥಾ ಉತ್ಸವ ಸಮಿತಿ ಎಂಬ ಹೊಸ ಸಮಿತಿಯನ್ನು ಅದು ಹುಟ್ಟು ಹಾಕಿದೆ. ಇದಕ್ಕಾಗಿ ರಚಿಸಿದ ಸಿದ್ಧತಾ ಸಮಿತಿಯಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಜೆಡಿಎಸ್ ನಾಯಕರ ಹೆಸರನ್ನು ಅವರನ್ನು ಕೇಳದೆ ಹಾಕಿಕೊಂಡಿದೆ. ಸ್ಥಳೀಯ ಲಿಂಗಾಯತ ಪ್ರಮುಖರ ಹೆಸರನ್ನು ಸೇರಿಸಲಾಗಿದೆ. ಈ ಬಗ್ಗೆ ಅವರನ್ನು ವಿಚಾರಿಸಿದಾಗ ಯಾರ ಒಪ್ಪಿಗೆಯನ್ನು ತೆಗೆದುಕೊಳ್ಳದೆ ಹೆಸರು ಹಾಕಿಕೊಳ್ಳಲಾಗಿದೆ ಎಂದು ತಿಳಿದು ಬಂತು.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಮಕಥಾ ಸೋಗಿನಲ್ಲಿ ಕೋಮುದಳ್ಳುರಿ ಹಬ್ಬಿಸಲು ಹೊರಟಿರುವ ಸಂಘಪರಿವಾರ ಹುನ್ನಾರದ ವಿರುದ್ಧ ಗುಲ್ಬರ್ಗದ ಸೌಹಾರ್ದ ಚಿಂತನ ವೇದಿಕೆ ಪ್ರತಿಭಟನಾ ಕಾರ್ಯಕ್ರಮ ಒಂದನ್ನು ರೂಪಿಸಿತ್ತು. ನಮ್ಮ ನಡುವಿನ ಅಪರೂಪದ ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಮತ್ತು ಹೆಸರಾಂತ ಚಿಂತಕಿ ಮೀನಾಕ್ಷಿ ಬಾಳಿ ಅವರು ಸಮಾನ ಮನಸ್ಕರನ್ನೆಲ್ಲ ಸೇರಿಸಿದ್ದರು. ಮಾರ್ಚ್ ೨೦ರಂದು ನಡೆದ ಸಭೆಗೆ ನಾನೂ ಹೋಗಿದ್ದೆ. ಸ್ಥಳೀಯ ಲಿಂಗಾಯತ ಸಮಾಜದ ಪ್ರಮುಖರು, ದಲಿತ- ಹಿಂದುಳಿದ ಸಂಘಟನೆಗಳ ನಾಯಕರು, ಕಾರ್ಯ ಕರ್ತರು ಸಭೆಗೆ ಬಂದಿದ್ದರು.
ಗುಲ್ಬರ್ಗದ ಪ್ರತಿಭಟನೆಯ ವಿಶೇಷವೆಂದರೆ ಉಳಿದ ಕಡೆ ಪ್ರತಿಭಟನೆ ನಡೆದರೆ ಅದೇ ಪ್ರಗತಿಪರ ಸಂಘಟನೆಗಳು, ಕಾರ್ಯಕರ್ತರು ಮಾತ್ರ ತುಂಬಿರುತ್ತಾರೆ. ಪ್ರತಿ ಬಾರಿ ಕಾರ್ಯಕ್ರಮದಲ್ಲೂ ಅವೇ ಮುಖಗಳಿರುತ್ತವೆ. ಆದರೆ ಗುಲ್ಬರ್ಗದಲ್ಲಿ ಮೀನಾಕ್ಷಿ ಬಾಳಿ ಮತ್ತು ನೀಲಾ ಅವರು ಸ್ಥಳೀಯ ಲಿಂಗಾಯತ ಸಮುದಾಯದ ಪ್ರಮುಖರನ್ನು ಮಾತನಾಡಿಸಿದರು. ವಚನ ಸಂಸ್ಕೃತಿಯನ್ನು ತಿರುಚುವ ವೈದಿಕೀಕರಣಗೊಳಿಸುವ ಹುನ್ನಾರಕ್ಕೆ ಬಲಿಯಾಗಬೇಡಿ ಎಂದು ಎಚ್ಚರಿಸಿ ದರು. ಈ ಮಾತು ಅವರಿಗೆ ತಟ್ಟಿತು. ಒಂದೇ ದಿನದಲ್ಲಿ ನೂರಾರು ಜನರನ್ನು ಸೇರಿಸಿದರು.
ಅಂತಲೇ ಸಂಘಪರಿವಾರದ ರಾಮಕಥಾ ಹುನ್ನಾರದ ವಿರುದ್ಧ ನಡೆದ ಪ್ರತಿಭಟನಾ ಸಭೆಗೆ ರಶೈವ ಮಹಾಸಭಾ ಪ್ರಮುಖರಾದ ಶಿವಶರಣಪ್ಪ ಕಲಬುರ್ಗಿ, ಸೋಮಣ್ಣ ನಡಕಟ್ಟಿ, ಡಿ.ಬಿ.ಪಾಟೀಲ, ಬಿಡಿ ಜತ್ತಿಯವರ ಪುತ್ರಿ ಶ್ರೀಮತಿ ವಿಲಾಸವತಿ ಖೂಬಾ,  ಕಾಶಿನಾಥ ಅಂಬಲಗಿ ಪ್ರಭು ಖಾನಾಪುರೆ, ಡಿಎಸ್‌ಎಸ್ ನಾಯಕರಾದ ಬಿ.ವಿ.ಚಕ್ರವರ್ತಿ, ಇಕ್ಕಳಕಿ ಮುಂತಾದವರು ಭಾಗವಹಿಸಿದ್ದರು. ಇವರ ಹೆಸರುಗಳನ್ನೆಲ್ಲ ಸಂಘಪರಿವಾರ ರಾಮಕಥಾ ಸಮಿತಿಯಲ್ಲಿ ಹಾಕಿತ್ತು. ಅವರೇ ಬಂದು ಈ ವಂಚನೆಯನ್ನು ಬಯಲಿಗೆಳೆದರು.
ಗುಲ್ಬರ್ಗದಲ್ಲಿ ಸಂಘಪರಿವಾರದ ಈವರೆಗೆ ಕಾಲೂರಲು ಸಾಧ್ಯವಾಗಿಲ್ಲ. ಅಂದರೆ ಅದರ ಶ್ರೇಯಸ್ಸು ಇಲ್ಲಿನ ಪ್ರಗತಿಪರ ತಂಡವಾದ ಸೌಹಾರ್ದ ಚಿಂತನ ವೇದಿಕೆಗೆ ಸಲ್ಲುತ್ತದೆ. ಮುಖ್ಯವಾಗಿ ಈ ಭಾಗದ ಪ್ರಮುಖ ಲೇಖಕ ಆರ್.ಕೆ.ಹುಡುಗಿ, ನೀಲಾ, ಮೀನಾಕ್ಷಿ ಬಾಳಿ ಅಂಥವರು ನಿರಂತರವಾಗಿ ಮೈತುಂಬ ಕಣ್ಣುಗಳನ್ನಿಟ್ಟುಕೊಂಡು ಈ ಭಾಗದ ಶಾಂತಿ ನೆಮ್ಮದಿ ಕದಡದಂತೆ ಕಾಪಾಡುತ್ತಲೇ ಬಂದಿದ್ದಾರೆ.
ಕೋಮುವಾದಿ ವಿರೋಧಿ ಹೋರಾಟವನ್ನು ಹೇಗೆ ನಡೆಸಬೇಕೆಂಬುದಕ್ಕೆ ಗುಲ್ಬರ್ಗ ಅತ್ಯುತ್ತಮ ಉದಾಹರಣೆಯಾಗಿದೆ. ಬರೀ ಪ್ರಗತಿಪರರನ್ನು ಮಾತ್ರವಲ್ಲ ಸಮಾಜದ ಎಲ್ಲ ಜನರನ್ನು ಒಳಗೊಂಡಾಗ ಮಾತ್ರ ಫ್ಯಾಸಿಸ್ಟ್‌ಶಕ್ತಿಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಸಾಧ್ಯವಾಗುತ್ತದೆ ಎಂಬುದನ್ನು ಗುಲ್ಬರ್ಗದ ಸಂಗಾತಿಗಳಿಂದ ನಾವು ಕಲಿಯಬೇಕಾಗಿದೆ. 

Advertisement

0 comments:

Post a Comment

 
Top