ಸಾರ್ವಜನಿಕರಿಗೆ ತುರ್ತು ಚಿಕಿತ್ಸಾ ಸೇವೆ ಒದಗಿಸುವ ಸಲುವಾಗಿ ಸರ್ಕಾರ ಜಾರಿಗೆ ತಂದಿರುವ ೧೦೮ ಉಚಿತ ಆಂಬುಲೆನ್ಸ್ ವಾಹನಗಳಿಂದ ಇದುವರೆಗೂ ರಾಜ್ಯದಲ್ಲಿ ಸುಮಾರು ೨೧ ಲಕ್ಷ ಜನರಿಗೆ ತುರ್ತು ಸೇವೆ ಒದಗಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದರು.
ಕೊಪ್ಪಳ ನಗರದಲ್ಲಿ ನೂತನವಾಗಿ ೨೨ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ೨೫೦ ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ತುರ್ತು ಚಿಕಿತ್ಸಾ ಸೇವೆ ಒದಗಿಸಲು ಜಾರಿಗೆ ತಂದಿರುವ ೧೦೮- ಉಚಿತ ಆಂಬುಲೆನ್ಸ್ ವಾಹನಗಳಿಂದ ಇದುವರೆಗೂ ರಾಜ್ಯದ ಸುಮಾರು ೨೧ ಲಕ್ಷ ಜನರು ಸೌಲಭ್ಯ ಪಡೆದಿದ್ದಾರೆ. ಇದೇ ಮಾದರಿಯಲ್ಲಿ ೧೦೪- ಉಚಿತ ಆರೋಗ್ಯ ಸಲಹಾ ಸೌಲಭ್ಯ ಒದಗಿಸಲು ಸರ್ಕಾರ ಯೋಜನೆ ರೂಪಿಸಿ, ಜಾರಿಗೊಳಿಸಿದ್ದು, ಇದರ ಮೂಲಕ ದೂರವಾಣಿಯಲ್ಲಿಯೇ ತಜ್ಞ ವೈದ್ಯರಿಂದ ಉಚಿತವಾಗಿ ದೂರವಾಣಿ ಮೂಲಕ ಆರೋಗ್ಯ ಸೇವೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದ್ದು, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಕೊಪ್ಪಳ ಜಿಲ್ಲೆಯಾಗಿ ದಶಕಗಳೇ ಕಳೆದಿದ್ದರೂ, ಇದುವರೆಗೂ ಅಭಿವೃದ್ಧಿಯನ್ನು ಕಂಡಿರಲಿಲ್ಲ. ಇದೀಗ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಮಂಜೂರಾತಿ ನೀಡಲಾಗಿದ್ದು, ಇಂಡಿಯನ್ ಮೆಡಿಕಲ್ ಕೌನ್ಸಿಲ್ ಸಹ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಅನುಮೋದನೆ ನೀಡಿದೆ. ಈಗಾಗಲೆ ಮೆಡಿಕಲ್ ಕಾಲೇಜಿಗೆ ಅಗತ್ಯವಿರುವ ಭೂಮಿಯನ್ನು ಖರೀದಿಸಲು ೦೭ ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ವಾಜಪೇಯಿ ವಸತಿ ಯೋಜನೆಯಡಿ ನಿವೇಶನಕ್ಕಾಗಿ ೧೧೬ ಎಕರೆ ಜಮೀನು ಖರೀದಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಸುಮಾರು ೩೫೦೦ ಬಡ ಕುಟುಂಬಗಳಿಗೆ ಸೂರು ಕಲ್ಪಿಸಬೇಕೆನ್ನುವ ಕನಸನ್ನು ಸಾಕಾರಗೊಳಿಸಲಾಗಿದೆ. ಇತ್ತೀಚೆಗೆ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಕೊಪ್ಪಳದಲ್ಲಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಕ್ಕೆ ಅನುಮೋದನೆ ನೀಡಲಾಗಿದೆ. ಕೊಪ್ಪಳದಲ್ಲಿ ಹಿಂದಂದೂ ಕಾಣದಷ್ಟು ಅಭಿವೃದ್ಧಿಯನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದರು. ನೆನೆಗುದಿಗೆ ಬಿದ್ದಿದ್ದ ಡಾ. ನಂಜುಂಡಪ್ಪ ವರದಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಿಗೆ ವಿಶೇಷ ಅನುದಾನವನ್ನು ಒದಗಿಸುವ ಮೂಲಕ, ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಶ್ರಮಿಸಿದ್ದೇವೆ. ಇದರಲ್ಲಿ ಬಹುತೇಕ ಉತ್ತರ ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳೇ ಸೇರಿವೆ. ಕೊಪ್ಪಳ ಕ್ಷೇತ್ರಕ್ಕೆ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಶ್ರಮಿಸಿದ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಅಭಿನಂದನಾರ್ಹರು ಎಂದರು.
ರೈಲ್ವೆ ಯೋಜನೆಗಳಿಗೆ ಬಹಿರಂಗ ಆಹ್ವಾನ : ರಾಜ್ಯದ ಹೊಸ ರೈಲ್ವೆ ಯೋಜನೆಗಳಿಗೆ ಶೇ. ೫೦ ರಷ್ಟು ಅನುದಾನವನ್ನು ರಾಜ್ಯವೇ ಭರಿಸುವುದು ಹಾಗೂ ಅಗತ್ಯವಿರುವ ಭೂಮಿಯನ್ನು ಉಚಿತವಾಗಿ ನೀಡಲಾಗುವುದು ಎಂಬುದಾಗಿ ನಮ್ಮ ಸರ್ಕಾರ ಕೇಂದ್ರ ರೈಲ್ವೆ ಇಲಾಖೆಗೆ ಬಹಿರಂಗ ಆಹ್ವಾನವನ್ನು ನೀಡಿದೆ. ಅಲ್ಲದೆ ಅಗತ್ಯವಿರುವ ಯೋಜನೆಗಳಿಗೆ ಈಗಾಗಲೆ ಶೇ. ೫೦ ರಷ್ಟು ಅನುದಾನ ಒದಗಿಸುತ್ತೇವೆ ಎನ್ನುವ ಒಪ್ಪಿಗೆ ಪತ್ರವನ್ನೂ ಸಹ ನೀಡಿದ್ದೇವೆ. ಈ ಮೂಲಕ ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ರೈಲ್ವೆ ಇಲಾಖೆಗೆ ಆಹ್ವಾನ ನೀಡಿದ್ದೇವೆ. ಕೊಪ್ಪಳದಲ್ಲಿನ ರೈಲ್ವೆ ಗೇಟ್ ಸಂಖ್ಯೆ ೬೨ ರಲ್ಲಿ ಮೇಲ್ಸೇತುವೆ ಹಾಗೂ ೬೪ ರಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ತನ್ನ ಪಾಲಿನ ಶೇ. ೫೦ ರಷ್ಟು ಅನುದಾನವನ್ನು ಅಂದರೆ, ಎರಡೂ ಸೇತುವೆಗಳ ನಿರ್ಮಾಣಕ್ಕೆ ೩೫. ೧೩ ಕೋಟಿ ರೂ.ಗಳ ಅಂದಾಜು ವೆಚ್ಚದ ಪೈಕಿ ಶೇ. ೫೦ ರಷ್ಟು- ೧೭. ೫೬ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಭರಿಸಲು ಒಪ್ಪಿಗೆ ನೀಡಿದ್ದೇವೆ. ರೈಲ್ವೆ ಗೇಟ್ ಸಂಖ್ಯೆ ೬೨ ಮತ್ತು ೬೪ ಈ ಎರಡೂ ಕಡೆ ಸೇತುವೆ ನಿರ್ಮಿಸಬೇಕು ಎನ್ನುವ ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ನಮ್ಮ ಸರ್ಕಾರ ಚಾಲನೆ ನೀಡಿದ್ದು, ೨೦೧೩-೧೪ ರ ಅಂತ್ಯದೊಳಗೆ ಕೊಪ್ಪಳ ತಾಲೂಕಿನ ಜಮೀನುಗಳಿಗೆ ನೀರು ಹರಿಯುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬೆಟಗೇರಿ, ಬಹದ್ದೂರಬಂಡಿ ಏತ ನೀರಾವರಿ ಯೋಜನೆಗಳಿಗೆ ಸರ್ಕಾರ ಈಗಾಗಲೆ ಒಪ್ಪಿಗೆ ಸೂಚಿಸಿದ್ದು, ಈ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಇರುವ ತೊಂದರೆಗಳನ್ನು ನಿವಾರಿಸಲಾಗುವುದು ಎಂದರು.
ವಸತಿ ಸಚಿವ ಸೋಮಣ್ಣ ಅವರು ಇದೇ ಸಂದರ್ಭದಲ್ಲಿ ಮಾತನಾಡಿ, ಅನೇಕ ಕೊರತೆಗಳನ್ನು ಎದುರಿಸುತ್ತಿದ್ದ ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ಕಾಯಕಲ್ಪ ನೀಡುವಂತಹ ಕಾರ್ಯವನ್ನು ಶಾಸಕ ಸಂಗಣ್ಣ ಕರಡಿ ಅವರು ಮಾಡಿದ್ದಾರೆ. ಸರ್ಕಾರ ಜಾರಿಗೆ ತರುವ ಯಾವುದೇ ಯೋಜನೆಗಳಿರಲಿ, ಆ ಯೋಜನೆಗಳನ್ನು ತಮ್ಮ ಕ್ಷೇತ್ರಕ್ಕೆ ತರಲು ಪ್ರಾಮಾಣಿಕ ಯತ್ನ ಮಾಡುತ್ತಿದ್ದಾರೆ. ಮೆಡಿಕಲ್ ಕಾಲೇಜು, ವಸತಿ ಯೋಜನೆಗಳು, ಇಂಜಿನಿಯರಿಂಗ್ ಕಾಲೇಜು ಮುಂತಾದ ಯೋಜನೆಗಳೇ ಇದಕ್ಕೆ ಸಾಕ್ಷಿಯಾಗಿವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಮಾತನಾಡಿ, ಕೊಪ್ಪಳ ಕ್ಷೇತ್ರದ ಅಭಿವೃದ್ಧಿಯ ಏಕೈಕ ಉದ್ದೇಶವನ್ನಿಟ್ಟುಕೊಂಡು ನಾವು ರಾಜಕೀಯ ಮಾಡುತ್ತಿದ್ದೇವೆ. ಈ ಭಾಗದ ಜನರ ಋಣವನ್ನು ತೀರಿಸುವುದು ಇಲ್ಲಿನ ಎಲ್ಲ ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಕೊಪ್ಪಳಕ್ಕೆ ರಿಂಗ್ ರೋಡ್ ನಿರ್ಮಾಣ ಆಗಬೇಕು ಎನ್ನುವುದು ನಮ್ಮ ಈಗಿನ ಬೇಡಿಕೆಯಾಗಿದೆ. ಸರ್ಕಾರ ಇದಕ್ಕೆ ಸ್ಪಂದಿಸಲಿದೆ ಎನ್ನುವ ವಿಶ್ವಾಸ ನಮಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ರಾಜ್ಯ ಬಾಲಭವನ ಸಮಿತಿಯ ಅಧ್ಯಕ್ಷೆ ಸುಲೋಚನಾ ಭಟ್, ಕಾಡಾ ಅಧ್ಯಕ್ಷ ಹೆಚ್. ಗಿರೇಗೌಡ, ಶಾಸಕರುಗಳಾದ ಪರಣ್ಣ ಮುನವಳ್ಳಿ, ಅಮರೇಗೌಡ ಬಯ್ಯಾಪುರ, ಹಾಲಪ್ಪ ಆಚಾರ್, ಜಿ.ಪಂ. ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನಗೋಪಾಲ್, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಮುಂತಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ಹಕ್ಕುಪತ್ರ ವಿತರಣೆ ಮಾಡಿದರು.
0 comments:
Post a Comment