ಕರ್ನಾಟಕದಲ್ಲಿ ಮೇ 5ರಂದು ವಿಧಾನಸಭಾ ಚುನಾವಣೆ
ಬೆಂಗಳೂರು, ಮಾ.20: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಇಂದು ಹೊಸದಿಲ್ಲಿಯಲ್ಲಿ ಪ್ರಕಟಿಸಿದ್ದು, ಮೇ 5ರಂದು ಚುನಾವಣೆಗೆ ದಿನ ನಿಗದಿಪಡಿಸಿದೆ. ಈ ಬಗ್ಗೆ ಎಪ್ರಿಲ್ 10ರಂದು ಅಧಿಸೂಚನೆ ಹೊರಡಲಿದ್ದು, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಎಪ್ರಿಲ್ 10ರಿಂದಲೇ ನಾಮಪತ್ರ ಸಲ್ಲಿಸಲು ಅವಕಾಶವಿರುತ್ತದೆ. ಎಪ್ರಿಲ್ 17ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಎ.18ರಂದು ನಾಮಪತ್ರಗಳ ಪರಿಶೀಲನಾ ದಿನವಾಗಿರುತ್ತದೆ. ಎ.20ರಂದು ನಾಮಪತ್ರಗಳ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಮೇ 5ರಂದು ಒಂದೇ ಹಂತದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 8ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಇಂದು ಬೆಳಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್‌ರೊಂದಿಗೆ ಚರ್ಚೆ ನಡೆಸಿತ್ತು. ಇದಲ್ಲದರ ಬಳಿಕ ಇದೀಗ ನಿರೀಕ್ಷಿತ ಚುನಾವಣಾ ದಿನಾಂಕ ಪ್ರಕಟಗೊಂಡಿದೆ.
ಈ ಬಾರಿ ಮತದಾರರಿಗೆ ಮತದಾರರ ಚೀಟಿಯನ್ನು ಚುನಾವಣಾ ಆಯೋಗವೇ ಕಳುಹಿಸಿಕೊಡಲಿದೆ. ಚುನಾವಣಾ ದಿನಾಂಕಕ್ಕಿಂತ 3-4 ದಿನ ಮೊದಲು ಮತದಾರರ ಚೀಟಿಯನ್ನು ಆಯೋಗವು ಕಳುಹಿಸಿಕೊಡಲಿದೆ. ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ಚುನಾವಣೆ ನಡೆಯಲಿದ್ದು, ಒಟ್ಟು 50,446 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. 224 ಕ್ಷೇತ್ರಗಳಲ್ಲಿ 36 ಎಸ್‌ಸಿ ಮತ್ತು 15 ಎಸ್‌ಟಿ ಮೀಸಲು ಕ್ಷೇತ್ರವಾಗಿರುತ್ತದೆ. 4.18 ಕೋಟಿ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಹಕ್ಕು ಚಲಾಯಿಸಲಿದ್ದಾರೆ.
ಚುನಾವಣಾ ಅಕ್ರಮಗಳ ಬಗ್ಗೆ ದೂರು ಸಲ್ಲಿಸಲು 1950 ಟೋಲ್ ಫ್ರಿ ದೂರವಾಣಿ ಸಂಖ್ಯೆಯಾಗಿರುತ್ತದೆ.
0 comments:
Post a Comment