PLEASE LOGIN TO KANNADANET.COM FOR REGULAR NEWS-UPDATES


  ಮತವನ್ನು ಚಲಾಯಿಸುವುದು, ನಮ್ಮ ಸಂವಿಧಾನ ನಮಗೆ ನೀಡಿರುವ ಹಕ್ಕು, ಇದನ್ನು ತಪ್ಪದೆ ಎಲ್ಲ ಮತದಾರರು ಚಲಾಯಿಸಬೇಕು ಎಂದು ಸ್ವೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಕರೆ ನೀಡಿದರು.
  ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗಂಗಾವತಿ ತಾಲೂಕು ಕಾರಟಗಿಯ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್) ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ರಾಜ್ಯದಲ್ಲಿ ಮತದಾರರ ನೋಂದಣಿ ಹಾಗೂ ಮತದಾನ ಚಲಾವಣೆ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಈ ಬಾರಿ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್) ಕಾರ್ಯಕ್ರಮವನ್ನು ಜಾರಿಗೊಳಿಸಿದೆ.  ಈ ಕಾರ್ಯಕ್ರಮದ ಉದ್ದೇಶ, ಯಾವುದೇ ಅರ್ಹ ವ್ಯಕ್ತಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಬೇಕು, ಹಾಗೂ ಮತದಾರರು ತಪ್ಪದೆ ತಮ್ಮ ಮತದಾನದ ಹಕ್ಕು ಚಲಾಯಿಸಬೇಕು ಎನ್ನುವ ಜಾಗೃತಿ ಮೂಡಿಸುವುದಾಗಿದೆ.  ಯಾವುದೇ ಸರ್ಕಾರ ರಚನೆಗೆ ಚುನಾವಣೆ ಪ್ರಕ್ರಿಯೆ ಪ್ರಮುಖವಾಗಿದ್ದು, ಅರ್ಹ ಮತದಾರ, ಅದನ್ನು ಚಲಾಯಿಸುವ ಮೂಲಕ ತನ್ನ ಕರ್ತವ್ಯ ನಿರ್ವಹಿಸಬೇಕಿದೆ.  ಪ್ರತಿಯೊಂದು ಮತವೂ ಅತ್ಯಂತ ಮಹತ್ವದ್ದಾಗಿದ್ದು, ನಮ್ಮ ಒಂದು ಮತದಿಂದ ಯಾವುದೇ ಪರಿಣಾಮ ಸಾಧ್ಯವಿಲ್ಲ ಎಂಬ ಮತದಾರರ ನಿರ್ಲಕ್ಷ್ಯ ಮನೋಭಾವ ಬದಲಾಗಬೇಕಿದೆ.  ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವುದು ಆದ್ಯ ಕರ್ತವ್ಯ ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕಿದೆ.  ಮತದಾರರಲ್ಲಿ ಅರಿವು ಮೂಡಿಸಲು ಆಯಾ ಭಾಗದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಾ ಸಂಸ್ಥೆಗಳು ಸೇವಾ ಮನೋಭಾವದಿಂದ ಇದನ್ನು ಆಂದೋಲನ ಮಾದರಿಯಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಮನವಿ ಮಾಡಿಕೊಂಡರು.
  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ಮತವನ್ನು ದಾನವೆಂದು ಪರಿಗಣಿಸದೆ, ಅದನ್ನು ಚಲಾಯಿಸುವುದು ತಮ್ಮ ಜನ್ಮ ಸಿದ್ದ ಹಕ್ಕು ಎಂದು ಮತದಾರರು ಪರಿಗಣಿಸಬೇಕು.  ಪ್ರಸಕ್ತ ವಿಧಾನಸಭೆ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಏ. ೦೭ ರವರೆಗೂ ಕಾಲಾವಕಾಶವಿದೆ.  ಜಿಲ್ಲೆಯಲ್ಲಿ ೧೮ ರಿಂದ ೨೫ ವರ್ಷ ವಯೋಮಾನದ ಬಹಳಷ್ಟು ಜನ ಇದುವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸದೇ ಇರುವುದು ಕಂಡುಬಂದಿದೆ.  ಜನಗಣತಿಯ ಸಂದರ್ಭದಲ್ಲಿ ಏರಿಕೆ ಕಂಡಿರುವ ಜನಸಂಖ್ಯೆಗೆ ಅನುಗುಣವಾಗಿ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿಲ್ಲದಿರುವುದು, ಕಳವಳಕಾರಿ ಸಂಗತಿಯಾಗಿದೆ.  ಕೊಪ್ಪಳ ಜಿಲ್ಲೆಯಲ್ಲಿ ಅದರಲ್ಲೂ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಜನಸಂಖ್ಯೆಗೂ ಮತದಾರರ ಸಂಖ್ಯೆಗೂ ಬಹಳಷ್ಟು ಅಂತರವಿದ್ದು, ರಾಜ್ಯದಲ್ಲಿ ಇದರ ಪ್ರಮಾಣ ಒಟ್ಟು ಜನಸಂಖ್ಯೆಗೆ ಶೇ. ೬೪ ರಷ್ಟು ಇದ್ದರೆ, ಕನಕಗಿರಿ ಕ್ಷೇತ್ರದಲ್ಲಿ ಇದರ ಪ್ರಮಾಣ ಕೇವಲ ಶೇ. ೫೭ ರಷ್ಟು ಇದೆ.  ಅಂದರೆ ಇನ್ನೂ ಶೇ. ೭ ರಷ್ಟು ಜನ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಿಲ್ಲ ಎಂದರ್ಥ.  ಅದರಲ್ಲೂ ಈ ಕ್ಷೇತ್ರದಲ್ಲಿ ಮತದಾನ ಸಂದರ್ಭದಲ್ಲಿ ಮಹಿಳಾ ಮತದಾನದ ಪ್ರಮಾಣ ಬಹಳಷ್ಟು ಕಡಿಮೆ ಇದೆ.  ಇದಕ್ಕೆ ಕಾರಣಗಳಾದರೂ ಏನು.  ಮಹಿಳೆಯರು ತಾವು ಮತದಾನ ಮಾಡಲು ಇರುವ ತೊಂದರೆಗಳ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರೆ, ಅದನ್ನು ಸೂಕ್ತ ರೀತಿಯಲ್ಲಿ ಪರಿಹರಿಸಲು ಯತ್ನಿಸಲಾಗುವುದು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಇದೀಗ ವಿಧಾನ ಅತ್ಯಂತ ಸರಳವಾಗಿದೆ.  ೧೮ ವರ್ಷ ಮೇಲ್ಪಟ್ಟವರು, ಆಯಾ ಮತಗಟ್ಟೆ ಅಧಿಕಾರಿಗಳ ಬಳಿ ಲಭ್ಯವಿರುವ ನಮೂನೆ-೬ ಅನ್ನು ಭರ್ತಿ ಮಾಡಿ ನೀಡಿದರಾಯಿತು.  ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುವುದು.  ಚುನಾವಣೆಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಮತದಾರರ ಗುರುತಿನ ಚೀಟಿಯನ್ನು ಮತದಾನದ ದಿನಾಂಕದ ಮೂರು ದಿನಕ್ಕೂ ಮೊದಲೇ ಆಯಾ ಮತದಾರರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಆಯಾ ಮತಗಟ್ಟೆ ಅಧಿಕಾರಿಗಳು ಹಾಗೂ ಕ್ಷೇತ್ರ ಚುನಾವಣಾಧಿಕಾರಿಗಳು, ಇದನ್ನು ಸಮರ್ಪಕವಾಗಿ ಮತದಾರರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು.  ಮತದಾರರಲ್ಲಿ ಜಾಗೃತಿ ಮೂಡಿಸಿ, ಚುನಾವಣೆಯನ್ನು ಯಶಸ್ವಿಯಾಗಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಆಶಾ ಕಾರ್ಯಕರ್ತೆಯರಿಗೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮನವಿ ಮಾಡಿಕೊಂಡರು.
  ಕಾರ್ಯಕ್ರಮದಲ್ಲಿ ಗಂಗಾವತಿ ತಹಸಿಲ್ದಾರ್ ದಿನೇಶ್ ಕುಮಾರ್, ಸ್ವೀಪ್ ಕಾರ್ಯಕ್ರಮದ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕ ದೊರೈಸ್ವಾಮಿ, ಕೃಷಿ ಇಲಾಖೆ ಉಪನಿರ್ದೇಶಕ ವೀರೇಶ್ ಹುನಗುಂದ, ಕಾರಟಗಿ ಉಪ ತಹಸಿಲ್ದಾರ್ ಶ್ರೀನಿವಾಸ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top