ಕಣ್ಣ ನೀರು ಜಾರೋ ಮುನ್ನ...
ಚಾರ್‌ಮಿನಾರ್ ಅಂದರೆ ನಾಲ್ಕು ಕಂಬಗಳು. ಈ ಚಾರ್‌ಮಿನಾರ್ ನಿಜಕ್ಕೂ ನಾಕು ಕಂಬಗಳ ಕಥೆ. ಆದರೆ ಪ್ರೀತಿಯ ಪಿಲ್ಲರ್‌ಗೆ ಒಂಚೂರು ಸುಣ್ಣ ಬಣ್ಣ ಜಾಸ್ತಿ ಬಳೆಯಲಾಗಿದೆ. ಹೇಳಿ ಕೇಳಿ ನೈಜಕಥೆಯಾಧಾರಿತ ಚಿತ್ರವಾದ್ದರಿಂದ ಚಾರ್‌ಮಿನಾರ್ ನಿಜಕ್ಕೂ ಮನಸ್ಸಿಗೆ ಹತ್ತಿರವಾಗುತ್ತದೆ. ಹಾಗೆಂದ ಮಾತ್ರಕ್ಕೆ ಇಂಥ ಸಿನಿಮಾಗಳು ಕನ್ನಡದಲ್ಲಿ ಬಂದೇ ಇಲ್ಲ ಅಂತೇನಿಲ್ಲ. ಮೂಲತಃ ಚೇರನ್ ನಿರ್ದೇಶನದ ಮೈ ಆಟೋಗ್ರಾಫ್, ವಿಜಯ ಪ್ರಸಾದ್ ಅವರ ಸಿದ್ಲಿಂಗು ಪಡಿಯಚ್ಚಿನಲ್ಲಿ ಅದ್ದಿ ತಗೆದ ಹಾಗೆ ಚಾರ್‌ಮಿನಾರ್ ಭಾಸವಾದರೂ ಚಂದ್ರು ಆರಂಭದಲ್ಲಿ ಮೈಲಾರಿಯ ಹಾದಿಯಲ್ಲೇ ಬಂದು ನಂತರ ಮಿನಾರ್ ಮೇಲೆ ಹಿಡಿತ ಸಾಽಸುತ್ತಾ ಹೋಗುತ್ತಾರೆ.
ಎಬಿಸಿಡಿಯೂ ಸರಿಯಾಗಿ ಗೊತ್ತಿಲ್ಲದ ಮೋಹನನಿಗೆ ಎಲ್ಲರೂ ಎಬಿಸಿಡಿ ಮೋಹನಾ ಎಂದೇ ಕಿಚಾಯಿಸುತ್ತಾರೆ. ಅದಕ್ಕೆ ಅಪ್ಪನ ಸಪೋರ್ಟ್ ಬೇರೆ. ಓದಿ ದಬ್ಬಾಕೋದು ಅಷ್ಟರಲ್ಲೇ ಇದೆ. ಓದಿದೋರು ತಿಂಗಳಿಗೆ ಮೂರು ಸಾವಿರ ರುಪಾಯಿಗೆ ಕಾಯಬೇಕು. ಅದೇ ಕುರಿ ಕಾಯ್ದರೆ ತಿಂಗಳಿಗೆ ಕನಿಷ್ಟ ೨೦ ರಿಂದ ೨೫ ಸಾವಿರ ದುಡಿಮೆ ಎನ್ನುವುದು ಮೋಹನನ ತಂದೆಯ ವಾದ. ಸುಮ್ಮನೆ ಎಲ್ಲರೂ ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ ಎನ್ನುವ ಕಾರಣಕ್ಕೆ ಮಗನನ್ನು ಶಾಲಾಗೆ ಕಳಿಸುವಂತೆ ತೋರುವ ಅಪ್ಪ, ಹುಡುಗಿಗೆ ಬರೆದ ಲವ್ ಲೆಟರ್‌ನ್ನು ಪರೀಕ್ಷೆಯ ಪ್ರಶ್ನೆಪತ್ರಿಕೆ ಎಂದು ಮಗನ ಕೈಗೆ ಕೊಡುವ ಮುಗ್ಧ ತಾಯಿಯ ಪ್ರೀತಿಯಲ್ಲಿ ಮೋಹನ ಬೆಳೆದಿರುತ್ತಾನೆ.
ಹೇಗಿದ್ರೂ ೭ ನೇ ಕ್ಲಾಸ್ ಫೇಲಾಗ್ತಿನಿ. ಆಮೇಲೆ ಕುರಿ ಕಾಯ್ಕೊಂಡು ಹಾಯಾಗಿ ಇರಬಹುದು ಎಂದು ಲೆಕ್ಕಾಚಾರ ಹಾಕಿ ಫಲಿತಾಂಶ ನೋಡಲು ಹೋದ ಮೋಹನನಿಗೆ ಶಾಕ್ ಆಗುತ್ತದೆ. ಆತ ಎಣಿಸಿದಂತೆ ಪರೀಕ್ಷೆಯಲ್ಲಿ ಫೇಲಾಗಿರುತ್ತಾನೆ. ಆದರೆ ಮೇಷ್ಟ್ರು ಹಾಳಾಗಿ ಹೋಗ್ಲಿ ಅಂತ ೮ ನೇ ಕ್ಲಾಸ್‌ಗೆ ದಬ್ಬುತ್ತಾರೆ. ೮ ನೇ ಕ್ಲಾಸ್‌ಗೆ ಹೊಸದಾಗಿ ಸೇರ್ಪಡೆಯಾಗುವ ರಾಧಾ ಮೋಹನನ ಮನದಲ್ಲಿ ಪ್ರೀತಿಯ ತರಂಗವಾಗುತ್ತಾಳೆ. ಆ ಕ್ಷಣದಿಂದ ಓದಿನಲ್ಲಿ ಹಿಂದಿದ್ದ ಮೋಹನ ಡಿಸ್ಟಿಂಕ್ಷನ್ ಪಡೆಯೋ ಲೆವೆಲ್‌ಗೆ ಓದಿಕೊಳ್ಳುತ್ತಾನೆ.
ಪಿಯುಸಿಗೆ ಬಂದ ಮೇಲೆ ಪ್ರೀತಿ ಹೇಳ್ಕೋಬೇಕೋ ಅನ್ನುವಾಗಲೆಲ್ಲ ಕಡ್ಡಿ ಎನ್ನುವ ಪಡ್ಡೆ ಹುಡುಗ ಅಡ್ಡವಾಗಿ ಕೊನೆಗೆ ಮೋಹನನ ಕೈಯಿಂದ ಅಡ್ಡಡ್ಡ ಹೊಡೆಸಿಕೊಳ್ಳುತ್ತಾನೆ. ಕೊನೆಗೂ ಧೈರ್ಯ ಮಾಡಿ ಪ್ರೀತಿಯೊಲೆ ಬರೆದು ಹುಡುಗಿಗೆ ಕೊಟ್ಟರೂ ಅದನ್ನು ಆಕೆ ಓದದೇ ರಾಧಾಳ ಅಮ್ಮ ಓದಿ ಪ್ರಿನ್ಸಿಪಾಲ್‌ಗೆ ಕಂಪ್ಲೇಂಟ್ ಕೊಡುತ್ತಾಳೆ.
ಅಲ್ಲಿ ಪ್ರಿನ್ಸಿ ರಂಗಾಯಣ ರಘು ರಾಧಾ-ಮೋಹನರ ಪ್ರೀತಿ ಪರೀಕ್ಷೆ ನಡೆಸಿ ಕೊನೆಗೆ ಮೋಹನನಿಗೆ ಜೀವನದಲ್ಲಿ ಗುರಿ ಮುಖ್ಯ. ಗುರಿ ಸಾಽಸಿದರೆ ಪ್ರೀತಿ ತಾನಾಗೆ ಸಿಗುತ್ತದೆ ಎಂದು ಬದುಕಿನ ಗುರಿಯ ಕಡೆ ಕೈ ಮಾಡಿದಾಗ ಮೋಹನ ಬದಲಾಗುತ್ತಾನೆ. ಓದಿನ ಕಡೆ ಗಮನ ಕೊಟ್ಟು ಜೊತೆಗೆ ಬಿಡುವಿದ್ದಾಗ ಅಪ್ಪನ ಜೊತೆಗೆ ರೈತಾಪಿ ಕೆಲಸ ಮಾಡಿಕೊಂಡು ಇರುವಾಗ ಇಂಜನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕುತ್ತದೆ. ಶ್ರದ್ಧೆಯಿಂದ ಓದಿ ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ತನ್ನ ಪ್ರೀತಿಯನ್ನು ಈಗಲಾದರೂ ಹೇಳಿದರಾಯಿತು ಎಂದುಕೊಂಡು ಬಂದರೆ ರಾಧಾಳ ತಾಯಿ ಮೋಹನನ ಕಾಲು ಹಿಡಿದು ನಮ್ಮ ನಿಮ್ಮ ಆಚಾರ ವಿಚಾರ ಸರಿಹೋಗಲ್ಲ. ಪ್ರೀತಿ-ಗೀತಿ ಅಂತೆಲ್ಲ ಮಗಳ ತಲೆ ಕೆಡಿಸಬೇಡ ಎಂದು ಕಣ್ಣೀರು ಹಾಕುತ್ತಾಳೆ. ಕೊನೆಗೆ ನಾಯಕ ಅಮೇರಿಕಾಕ್ಕೆ ತೆರಳಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ.
ಇದಿಷ್ಟು ಫ್ಲ್ಯಾಶ್‌ಬ್ಯಾಕ್. ಚಿತ್ರ ಆರಂಭವಾಗುವುದೇ ಇಂಟರೆಸ್ಟಿಂಗ್. ಎಲ್ಲ ಸಿನಿಮಾದವರು ಅಷ್ಟೇ. ನಮ್ಮದು ವಿಭಿನ್ನ ಕಥೆ. ನೈಜ ಕತೆ ಎಂದೇ ಹೇಳುತ್ತಾರೆ. ಚಿತ್ರದಿಂದ ಹೊರಬಂದ ಮೇಲೆ ಬಣ್ಣ ಬಯಲಾಗುತ್ತೆ ಎಂದು ಮಾತನಾಡಿಕೊಳ್ಳುವ ಪತ್ರಕರ್ತರ ಮುಂದೆಯೇ ಚಂದ್ರು ಕಥೆಯನ್ನು ಆರಂಭಿಸಿರುವುದು ಅವರ ಜಾಣ್ಮೆಗೆ ಸಾಕ್ಷಿ. ಚಾರ್‌ಮಿನಾರ್ ಸಿನಿಮಾದ ಮುಹೂರ್ತದಿಂದಲೇ ಸಿನಿಮಾ ಆರಂಭವಾಗುತ್ತದೆ. ಮುಹೂರ್ತಕ್ಕೂ ಮುನ್ನ ಸುದ್ದಿಗೋಷ್ಟಿ ನಡೆಸುವಾಗ ಪತ್ರಕರ್ತರಿಗೆ ಕಥೆ ಹೇಳುತ್ತಿರುವಂತೆ ಚಿತ್ರ ತೆರೆದುಕೊಳ್ಳುತ್ತಾ ಹೋಗುತ್ತದೆ.
ಹೈಸ್ಕೂಲಿನ ಆ ಪೋಲಿ ಗೆಳೆಯರು ಹಲವು ವರ್ಷಗಳ ನಂತರ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಅವರಿಗೆ ಇದ್ದಕ್ಕಿದ್ದಂತೆ ಹೈಸ್ಕೂಲು ಗೆಳೆಯರೆಲ್ಲ ಒಟ್ಟಿಗೆ ಸೇರಿ ಕಲಿತ ಶಾಲೆಯಲ್ಲಿ ಸಮ್ಮಿಲನವಾಗಬೇಕು ಎನ್ನುವ ಆಸೆ ಚಿಗುರೊಡೆಯುತ್ತದೆ. ಆಗ ಎಲ್ಲೆಲ್ಲೋ ಇರುವ ಕಥೆಯ ಪಾತ್ರಗಳು ಒಂದೊಂದಾಗಿ ಪರಿಚಯವಾಗುತ್ತಾ ಹೋಗುತ್ತವೆ. ಅದರ ಜೊತೆಗೆ ರಾಧಾ-ಮೋಹನರ ಪ್ರೀತಿಯ ಹುಡುಕಾಟ, ಮೇಷ್ಟ್ರು ಗಳ ಪೆದ್ದಾಟ, ಹೆತ್ತವರ ಗೊಣಗಾಟ, ಕೊನೆಗೆ ಪ್ರೀತಿಸಿದ ಹುಡುಗಿಗಾಗಿ ನಾಯಕನ ಅಲೆದಾಟ...
ಲವ್ಲಿ ಪ್ರೇಮ್ ನಟನೆಯಲ್ಲಿ ಎರಡೂ ಮಾತಿಲ್ಲ. ಅವರಿಗೆ ಅಳುವ ಹಾಗೆ ನಟಿಸಲು ಬರುವುದಿಲ್ಲ ಎಂಬ ಕಂಪ್ಲೇಂಟ್ ಈ ಸಿನಿಮಾದಿಂದ ರಿಜೆಕ್ಟ್ ಆಗಿದೆ. ಮೇಘನಾ ಗಾಂವ್ಕರ್ ಅವರಿಗೆ ನಟನೆಗೆ ಒಂದು ಅದ್ಭುತ ಅವಕಾಶ ಸಿಕ್ಕಿದೆ. ಮೇಘನಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಂಘಾಯಣ ರಘು, ರಾಜು ತಾಳಿಕೋಟೆ ಹೀಗೆ ಬಂದು ಹಾಗೆ ಹೋದರೂ ನೆನಪಲ್ಲುಳಿಯುತ್ತಾರೆ. ಗೌರೀಶ ಅಕ್ಕಿ ಮೊದಲ ಬಾರಿಗೆ ಬೆಳ್ಳಿ ತೆರೆಯ ಮೇಲೆ ತಮ್ಮ ವೃತ್ತಿಯನ್ನೇ ಪಾತ್ರವಾಗಿಸಿಕೊಂಡು ಗಮನ ಸೆಳೆಯುತ್ತಾರೆ.
ಕೆ.ಎಸ್.ಚಂದ್ರಶೇಖರ್ ಅವರ ಕ್ಯಾಮರಾ ವರ್ಕ್ ಸಿಂಡ್ರೆಲಾ.. ಸಿಂಡ್ರೆಲಾ.. ಹಾಡನಲ್ಲಿ ಎದ್ದು ಕಾಣುತ್ತದೆ. ಕಥೆಗೆ ತಕ್ಕಂತೆ ದೃಶ್ಯಗಳು ಕಣ್ಮುಂದೆ ಬರುತ್ತವೆ. ಹರಿ ಸಂಗೀತದಲ್ಲಿ ಮೂರು ಹಾಡುಗಳು ಮಧುರವಾಗಿವೆ. ಗುರುಕಿರಣ್ ಹಿನ್ನೆಲೆ ಸಂಗೀತಕ್ಕೆ ಫುಲ್ ಮಾರ್ಕ್ಸ್ ಕೊಡಬಹುದು. ಥ್ರಿಲ್ಲರ್ ಮಂಜು ಯಾಕೋ ಒಂದೇ ಫೈಟಿನಲ್ಲಿ ವಿಶೇಷ ಎನಿಸುವುದಿಲ್ಲ. ಕಥೆ. ಚಿತ್ರಕಥೆ, ನಿರ್ಮಾಣ, ನಿರ್ದೇಶನದ ಜೊತೆಗೆ ಸಂಭಾಷಣೆಯ ಹೊಣೆಯನ್ನೂ ಹೊತ್ತಿರುವ ಚಂದ್ರು ವಿಶ್ವಾಸದಿಂದ ಮಾಡಿರುವ ಚಾರ್ ಮಿನಾರ್ ಆ ಚಾರ್ ಮಿನಾರ್‌ನಂತೆ ಖ್ಯಾತಿಯಾಗಲಿ ಎಂದು ಚಿತ್ರದ ಕೊನೆಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾರೈಸಿದಂತೆ ಪ್ರೇಕ್ಷಕರು ಚಂದ್ರು ಕೈ ಹಿಡಿಯಬೇಕಿದೆ.
ರಾಧಾ-ಮೋಹನ ಒಂದಾಗ್ತಾರಾ? ಚಾರ್ ಮಿನಾರ್ ಸಿನಿಮಾ ಶುರುವಾಗುತ್ತಾ? ಅಂದ ಹಾಗೆ ಚಾರ್ ಮಿನಾರ್ ಅಂದರೆ ನಾಲ್ಕು ಕಂಬಗಳು ಎಂದು ಚಂದ್ರು ಹೇಳಿರುವುದು ಯಾರ್‍ಯಾರಿಗೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಚಾರ್ ಮಿನಾರ್ ನೋಡಿ.
ಎಚ್ಚರಿಕೆ : ಹೈಸ್ಕೂಲ್ ಗೆಳತಿಯ ನೆನಪು ಮತ್ತೇ ಮರುಕಳಿಸಿದರೆ ಚಂದ್ರು ಜಬಾವ್ದಾರಿಯಲ್ಲ.
-ಚಿತ್ರಪ್ರಿಯ ಸಂಭ್ರಮ್.

0 comments:
Post a Comment