PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಫೆ.೦೫ ಮಕ್ಕಳಲ್ಲಿನ ಅಪೌಷ್ಠಿಕತೆ ಎಂಬ ಪಿಡುಗು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದು, ಅಪೌಷ್ಠಿಕತೆಯ ನಿವಾರಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೊತೆಗೆ ಆರೋಗ್ಯ, ಶಿಕ್ಷಣ ಮತ್ತು ಇತರ ಇಲಾಖೆಯ ಅಧಿಕಾರಿಗಳು ಅಲ್ಲದೆ ಸಂಘ ಸಂಸ್ಥೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಶ್ರಮಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್ ಅವರು ಹೇಳಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯು ಪೌಷ್ಠಿಕಾಂಶಗಳ ಪರಿಣಾಮಕಾರಿ ಅನುಷ್ಠಾನ ಕುರಿತಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಿದ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
  ಅಪೌಷ್ಠಿಕತೆ ಎಂಬುದು ಹೆಚ್ಚಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಕಂಡುಬಂದಿದ್ದು, ಅದರಲ್ಲೂ ಬೆಳಗಾವಿ ಜಿಲ್ಲೆಯೂ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವ್ಯಾಪಿಸಿರುವುದು ಮಾಧ್ಯಮಗಳ ವರದಿಗಳಿಂದ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿದೆ.  ಮಕ್ಕಳಲ್ಲಿನ ಅಪೌಷ್ಠಿಕತೆಗೆ ಸಮಾಜದಲ್ಲಿ ಮನೆ ಮಾಡಿರುವ ಮೂಢನಂಬಿಕೆ ಮತ್ತು ಅನಕ್ಷರತೆ ಪ್ರಮುಖ ಕಾರಣವಾಗಿದೆ.  ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿ ಈ ಭಾಗದಲ್ಲಿ ಹೆಚ್ಚಾಗಿದ್ದು,  ಮಕ್ಕಳಲ್ಲಿನ ಅಪೌಷ್ಠಿಕತೆಗೆ ಮೂಲ ಕಾರಣವಾಗಿದೆ.  ಅಪೌಷ್ಠಿಕತೆ ನಿವಾರಣೆಗೆ ಸರ್ಕಾರ ಮುಂದಾಗಿದ್ದು, ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.  ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರವನ್ನು ನೀಡುವುದು, ತಾಯಂದಿರಿಗೆ ಅರಿವು ಮೂಡಿಸುವುದು, ನಿಯಮಿತವಾಗಿ ಮಕ್ಕಳ ಆರೋಗ್ಯ ತಪಾಸಣೆ ಮುಂತಾದ ಜಾಗೃತಿ ಕಾರ್ಯಕ್ರಮಗಳನ್ನು ಈಗಾಗಲೆ ಪ್ರಾರಂಭಿಸಲಾಗಿದೆ.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಮುಂತಾದ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಅಪೌಷ್ಠಿಕತೆ ನಿವಾರಣೆಗೆ ಆಂದೋಲನ ರೀತಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್ ಅವರು ಹೇಳಿದರು.
  ಧಾರವಾಡದ ಆರ್.ಸಿ.ಹೆಚ್. ಕಾರ್ಯಕ್ರಮಾಧಿಕಾರಿ ಡಾ. ಬಬ್ರುವಾಡ್ ಅವರು ಮಾತನಾಡಿ, ಮಕ್ಕಳು ಹಾಗೂ ಗರ್ಭಿಣಿಯರ ಅಪೌಷ್ಠಿಕತೆ ಬಗ್ಗೆ ರಾಜ್ಯ ಉಚ್ಛ ನ್ಯಾಯಾಲಯ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಇದರ ನಿವಾರಣೆಗೆ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.  ಸರ್ಕಾರ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಉನ್ನತಾಧಿಕಾರಿ ಸಮಿತಿಯನ್ನು ರಚಿಸಿದ್ದು, ಈಗಾಗಲೆ ಸಮಿತಿಯು ಸರ್ಕಾರಕ್ಕೆ ೧೩೫ ಅಂಶಗಳ ಶಿಫಾರಸ್ಸು ಸಲ್ಲಿಸಿದ್ದು, ಈ ಪೈಕಿ ೯೦ ಅಂಶಗಳನ್ನು ತಕ್ಷಣ ಅನುಷ್ಠಾನಕ್ಕೆ ತರುವಂತೆ ಸೂಚನೆ ನೀಡಿದೆ.  ಗರ್ಭಿಣಿ ಸ್ತ್ರೀಯರಿಗೆ ಅಗತ್ಯವಿರುವ ಪೋಷಕಾಂಶಯುತ ಆಹಾರ ನೀಡುವ ಬಗ್ಗೆ ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ನಿವಾರಿಸುವ ಅಗತ್ಯವಿದೆ.  ಅಂಗನವಾಡಿಗಳಲ್ಲಿನ ಪರಿಸ್ಥಿತಿಯನ್ನು ಸುಧಾರಿಸುವುದು ಪ್ರಮುಖ ಅಗತ್ಯಗಳಲ್ಲೊಂದಾಗಿದೆ ಎಂದರು.
  ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಅಧಿಕಾರಿ ಶಂಕರ್ ಅವರು ಕಾರ್ಯಾಗಾರದ ಬಗ್ಗೆ ವಿವರಣೆ ನೀಡಿದರು.  ಜಿ.ಪಂ. ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್, ಜಿಲ್ಲಾ ಆಡಳಿತ ತರಬೇತಿ ಸಂಸ್ಥೆಯ ಉಪಪ್ರಾಚಾರ್ಯ ಲಾಯಿಖ್‌ಅಲಿ ಅವರು ಉಪಸ್ಥಿತರಿದ್ದರು.  ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕಿಯರು, ಆಹಾರ, ಆರೋಗ್ಯ, ಕೃಷಿ, ಶಿಕ್ಷಣ ಮುಂತಾದ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top