PLEASE LOGIN TO KANNADANET.COM FOR REGULAR NEWS-UPDATES


 ಜಿಲ್ಲೆಯಲ್ಲಿ ಸಂಭವಿಸುವ ಯಾವುದೇ ಜನನ ಮತ್ತು ಮರಣ ಪ್ರಕರಣಗಳ ನೋಂದಣಿ ಕಡ್ಡಾಯವಾಗಿ ಆಗಬೇಕು.  ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಗ್ರಾಮ ಲೆಕ್ಕಾಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
  ಜನನ ಮತ್ತು ಮರಣ ನೋಂದಣಿ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಣಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
  ಜಿಲ್ಲೆಯಲ್ಲಿ ಯಾವುದೇ ಮಗು ಜನಿಸಿದಲ್ಲಿ, ಅದು ಮನೆ, ಆಸ್ಪತ್ರೆ ಅಥವಾ ಇತರೆಡೆಯಲ್ಲಿ ಆಗಿದ್ದರೂ, ಅಂತಹ ಮಗುವಿನ ಜನನದ ನೋಂದಣಿ ಕಡ್ಡಾಯವಾಗಿ ಮಾಡಬೇಕು.  ಅಲ್ಲದೆ ಮರಣ ಪ್ರಕರಣಗಳಿಗೂ ಸಹ ನೋಂದಣಿ ಕಡ್ಡಾಯವಾಗಿದೆ.  ಜನನ ಮತ್ತು ಮರಣ ನೋಂದಣಿಗೆ ಸಂಬಂಧಿಸಿದಂತೆ ಈಗಾಗಲೆ ನಿಯಮಗಳನ್ನು ಸರಳೀಕರಣಗೊಳಿಸಲಾಗಿದ್ದು, ಆಯಾ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಗ್ರಾಮ ಲೆಕ್ಕಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರಿಗೆ ತರಬೇತಿಯನ್ನು ನೀಡಲಾಗಿದೆ.  ಮರಣದ ಕಾರಣವನ್ನು ಸ್ಪಷ್ಟವಾಗಿ ನಿಗದಿತ ನಮೂನೆಯಲ್ಲಿ ನಮೂದಿಸುವ ಕುರಿತು ವೈದ್ಯರಿಗೆ ಸೂಕ್ತ ತರಬೇತಿಯನ್ನು ನೀಡಲಾಗಿದ್ದರೂ, ಹಲವು ವೈದ್ಯರು ಮರಣದ ಕಾರಣವನ್ನು ಸಮರ್ಪಕವಾಗಿ ನಮೂದಿಸುತ್ತಿಲ್ಲ ಹಾಗೂ ವರದಿ ನೀಡುವಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಇದರಿಂದಾಗಿ ಆರೋಗ್ಯ ಯೋಜನೆಗಳನ್ನು ರೂಪಿಸುವಲ್ಲಿ ಅಡ್ಡಿಯಾಗುತ್ತಿದೆ.  ವೈದ್ಯರು ಯಾವುದೇ ಮರಣದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮರಣದ ಕಾರಣವನ್ನು ಸಮರ್ಪಕವಾಗಿ ನಮೂದಿಸಬೇಕು.  ಜನನ ಮತ್ತು ಮರಣ ನೋಂದಣಿಗೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸದ್ಯದಲ್ಲೇ ಸೂಕ್ತ ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದರು.
  ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಸಭೆಗೆ ವಿವರ ನೀಡಿ, ಜನನ, ಮರಣ ನೋಂದಣಿಯ ಬಗ್ಗೆ ಹಲವಾರು ಬಾರಿ ತರಬೇತಿ ನೀಡಿದ್ದರೂ, ಜನನ ಮತ್ತು ಮರಣದ ನೋಂದಣಿಗಳು ವಿಳಂಬವಾಗುತ್ತಿವೆ.  ಆಸ್ಪತ್ರೆಗಳಲ್ಲಿ ಜನನದ ಪ್ರಮಾಣ ಹೆಚ್ಚಾಗಿದ್ದರೂ, ನಿಗದಿತ ನಮೂನೆಯಲ್ಲಿ ವರದಿ ನೀಡುವಲ್ಲಿ ಸಂಬಂಧಪಟ್ಟವರು ನಿರ್ಲಕ್ಷ್ಯ ತೋರುತ್ತಿದ್ದಾರೆ.  ಜನನ ಮತ್ತು ಮರಣದ ನಿಖರ ನೋಂದಣಿ ಕುರಿತಂತೆ ಅಂಗನವಾಡಿ ಸಹಾಯಕಿಯರು ತಮ್ಮ ವ್ಯಾಪ್ತಿಯಲ್ಲಿ ಸೂಕ್ತ ಅರಿವು ಮೂಡಿಸಬೇಕಾಗಿದೆ.  ಯಾವುದೇ ಜನನ ಅಥವಾ ಮರಣ ಪ್ರಕರಣ ಜರುಗಿದಲ್ಲಿ ೨೧ ದಿನಗಳ ಒಳಗಾಗಿ ನೋಂದಣಿ ಮಾಡಿಸಬೇಕಾಗಿರುವುದು ಕಡ್ಡಾಯ.  ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗಾಗಿ ಜೆರಾಕ್ಸ್ ಪ್ರತಿಯನ್ನು ಬಳಸಬಾರದು.  ಇಲಾಖೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೂಲ ನಮೂನೆಗಳು ಲಭ್ಯವಿದ್ದು, ಬೇಡಿಕೆಯ ಆಧಾರದಲ್ಲಿ ನಮೂನೆಗಳನ್ನು ಪೂರೈಸಲಾಗುವುದು.  ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ೫೮೯ ಮತ್ತು ನಗರ ಪ್ರದೇಶದಲ್ಲಿ ೦೯ ಜನನ-ಮರಣ ನೋಂದಣಿ ಕೇಂದ್ರಗಳಿವೆ.  ಗ್ರಾಮೀಣ ಪ್ರದೇಶದಲ್ಲಿ ಆಯಾ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ನಗರ ಪ್ರದೇಶಗಳಲ್ಲಿ ನಗರಸಭೆಯ ಮುಖ್ಯಸ್ಥರು ನೋಂದಣಿ ಅಧಿಕಾರಿಗಳಾಗಿರುತ್ತಾರೆ.  ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಇದೀಗ ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನೋಂದಣಿ ಕೇಂದ್ರ ಪ್ರಾರಂಭಿಸಲಾಗಿದ್ದು, ವೈದ್ಯಾಧಿಕಾರಿಗಳನ್ನೂ ಸಹ ನೋಂದಣಾಧಿಕಾರಿಗಳೆಂದು ನೇಮಕ ಮಾಡಲಾಗಿದೆ.  ಶೇ. ೧೦೦ ರಷ್ಟು ಜನನ-ಮರಣ ಪ್ರಕರಣಗಳು ನೋಂದಣಿಯಾಗಬೇಕು ಎನ್ನುವ ಗುರಿಯನ್ನು ಇಲಾಖೆ ಹೊಂದಿದೆ.  ಆಯಾ ಗ್ರಾಮದಲ್ಲಿ ಜರುಗುವ ಜನನ, ಮರಣ ಮತ್ತು ನಿರ್ಜೀವ ಜನನ ವರದಿಗಳನ್ನು ಅಂಗನವಾಡಿ ಕಾರ್ಯಕರ್ತೆಯರು, ಎ.ಎನ್.ಎಂ. ಅಥವಾ ಆಶಾ ಕಾರ್ಯಕರ್ತೆಯರು ಕಡ್ಡಾಯವಾಗಿ ಮಾಹಿತಿಯನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ತಪ್ಪದೆ ಒದಗಿಸಬೇಕು ಎಂದರು.
  ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹಾದೇವಸ್ವಾಮಿ, ನಗರಸಭೆ ಪೌರಾಯುಕ್ತೆ ಬಿ.ಎಂ. ಅಶ್ವಿನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಾಧಿಕಾರಿ ವೆಂಕಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top