PLEASE LOGIN TO KANNADANET.COM FOR REGULAR NEWS-UPDATES




`ದೇವ್ರಾಣೆ'ಗೂ ಇದು `೯೦'ಯ ಮುಂದುವರಿದ ಭಾಗ ೧೮೦.

         ಈ ಹಿಂದೆ ನಿರ್ದೇಶಕ ಶಂಕರ ಅವರು, ಸಾಧುಕೋಕಿಲ ಮೂಲಕ ೯೦ರ ಕಿಕ್ ಕನ್ನಡದ ಜನರಿಗೆ ನೀಡಿದ್ದರು. ಜೊತೆಗೆ ೯೦ರ ನಶೆಯ ಜೊತೆಗೆ ಗೆದ್ದಿದ್ದರು ಕೂಡಾ. ಈಗ ದೇವ್ರಾಣೆ ಮೂಲಕ ಪ್ರೇಕ್ಷಕರಿಗೆ ಎದುರಿಗೆ ಮತ್ತೊಂದು ಪರೀಕ್ಷೆ ಎದುರಿಸುತ್ತಿದ್ದಾರೆ. ಇಡೀ ಸಿನಿಮಾ ನೊಡಿದರೆ ಇದು ದೇವ್ರಾಣೆಗೂ ೯೦ಯ ಮುಂದುವರಿದ ಭಾಗ ೧೮೦ ಎನಿಸದೇ ಇರದು.
          ೯೦ ಸಿನಿಮಾದಲ್ಲಿ ಕುಡಿತದ ಪರಿಣಾಮಗಳನ್ನು ಹೇಳುವುದರ ಜೊತೆಗೆ ಸಾಮಾಜಿಕ ಸಮಸ್ಯೆ, ವಿಡಂಬನೆ ಮಾಡಿದ್ದ ಶಂಕರ್ ಈ ಬಾರಿ ದೇವರ ಮೊರೆ ಹೋಗಿದ್ದಾರೆ. ವೇಸ್ಟ್‌ಬಾಡಿಯೊಬ್ಬ ಅಚಾನಕ್ ಆಗಿ ಚಿಟ್ಟೆಸ್ವಾಮಿಯಾಗುವ ಕಥೆ. ಸ್ವಾಮಿಯಾಗುವ ಮುನ್ನ ಶಂಕರ ನಿರುದ್ಯೋಗಿ, ಉಂಡಾಡಿ ಗುಂಡ. ಯಾವುದಕ್ಕೂ ಲಾಯಕ್ಕಿಲ್ಲದಾತ. ಗೆಳೆಯನ ಪುಟ್ಟ ಮಗಳ ಉಂಗುರವನ್ನೇ ಮಾರಿದ ಕಳ್ಳ. ಸ್ನೇಹಿತನ ಹೊಸ ಬಕ್‌ನ್ನು ಒಂದು ರೌಂಡ್ ಹೋಗಿ ಬರ್‍ತಿನಿ ಎಂದು ಹೇಳಿ ಮಾರಿದ ಭೂಪ ಕೊನೆಗೆ ಸಾಯಲು ಹೋಗಿ ಸ್ವಾಮಿಯಾಗುತ್ತಾನೆ.
            ಸ್ವಾಮಿಗಳನ್ನು ಹುಟ್ಟು ಹಾಕುವುದು ರಾಜಕೀಯ ನಾಯಕರು ಎಂದು ಲಕ್ಕಿ ಶಂಕರ್ ಚಿತ್ರದಲ್ಲಿ ಹೇಳಿದ್ದಾರೆ. ವಿಶೇಷವಾಗಿ ತಲೆ ಮೇಲೆ ತೆನೆ ಹೊತ್ತ ಮಹಿಲೆಯ ಪಕ್ಷದ ನಾಯಕರನ್ನು ಖಳರಂತೆ ಬಿಂಬಿಸಿದ್ದಾರೆ. ಜನರಿಗೆ ಮಠಾಽಶರ ಬಗ್ಗೆ ಭಕ್ತಿ ಭಾವ ಇರುತ್ತದೆ. ಮಠಾಽಶರು ಹೇಳಿದರೆ ಜನ  ಕೇಳುತ್ತಾರೆ ಎಂಬ ಒಂದೆಳೆ ಇಟ್ಟುಕೊಂಡು ಸಿನಿಮಾ ಕಥೆ ಹೆಣೆದಿರುವ ಶಂಕರ್ ಕಥೆಯುದ್ದಕ್ಕೂ ಸಾಮಾಜಿಕ ವಿಡಂಬನೆ, ಕೆಲ ಸ್ವಾಮಿಗಳ ಬಂಡವಾಳ, ರಾಜಕೀಯ ಲೆಕ್ಕಾಚಾರ, ಕೌಟುಂಬಿಕ ಸಮಸ್ಯೆ, ರೇಪಿಸ್ಟಗಳಿಗೆ ಆಗಬೇಕಿರುವ ಶಿಕ್ಷೆ ಹೀಗೆ ಹಲವು ವಿಷಯಗಳನ್ನು ಸೇರಿಸಿ ವಾಸ್ತವ ಚಿತ್ರ ಮಾಡಿದ್ದಾರೆ.
              ಸ್ವಾಮಿಯಾದಾಗ ಸಿಗುವ ಮಾನ-ಮರ್ಯಾದೆ, ಹಣ ಆಸ್ತಿ ಪಡೆಯುವ ಚಿಟ್ಟೆಸ್ವಾಮಿ ಜನರ ನಂಬಿಕೆಗಳಿಗೆ ದ್ರೋಹ ಬಗೆಯಲಾಗದೇ ನೆಮ್ಮದಿಯ ಬದುಕು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ನಾವು ನೆಮ್ಮದಿಯನ್ನು ಹುಡುಕಿಕೊಂಡು ಹೋಗುವುದು ಹೇಗೆ ಎಂಬುದನ್ನು ತಿಳಿಸುತ್ತಾ ಜನರ ಪ್ರೀತಿ ಗಳಿಸುತ್ತಾನೆ. ಎಷ್ಟೋ ಸಲ ದೇವ್ರಾಣೆ ನಾನು ದೇವರಲ್ಲ ಎನ್ನುವ ರೀತಿಯಲ್ಲಿ ಚಿಟ್ಟೆಸ್ವಾಮಿ ವರ್ತಿಸಿದರೂ ಜನ ಮಾತ್ರ ಚಿಟ್ಟೆಸ್ವಾಮಿಯನ್ನು ದೇವರ ರೂಪದಲ್ಲೇ ಕಾಣುತ್ತಾರೆ. ಸ್ವಾಮಿಗಳು ಕೂಡಾ ಅದನ್ನೇ ಕೊನೆಯತನಕ ಮೇಂಟೇನ್ ಮಾಡಿ ಕೊನೆಗೆ ಲೌಕಿಕ ಜೀವನ ಕೈಕೊಳ್ಳುತ್ತಾರೆ ಎಂಬಲ್ಲಿಗೆ ಸಿನಿಮಾ ಸಮಾಪ್ತಿ.
              ರವಿಶಂಕರಗೌಡ ಅವರಂತೆ ತಬಲಾನಾಣಿ ಹಾಗೂ ಅವರು ಬರೆದ ಸಂಭಾಷಣೆ ಕೂಡಾ ಚಿತ್ರದ ಹಿರೋ ಎನ್ನಲಡ್ಡಿಯಿಲ್ಲ. ಚಿತ್ರದಲ್ಲಿ ಅಲ್ಲಲ್ಲಿ ಪಂಚಿಂಗ್ ಡೈಲಾಗ್‌ಗಳು ಕಚಗುಳಿ ಇಡುತ್ತವೆ.  ನೀತೂ ಪಾತ್ರಕ್ಕೆ ಅಷ್ಟೊಂದು ತೂಕವಿಲ್ಲವಾದರೂ ಅವರು ತೆರೆಯ ಮೇಲೆ ಕಂಡಾಗ ಭಾರಿ ತೂಕವಿರುವಂತೆ ಭಾಸವಾಗುತ್ತಾರೆ. ಚಿತ್ರದ ಮೊದಲರ್ಧವನ್ನು ಸಾಗಿಸುವ ರಾಜು ತಾಳಿಕೋಟೆ ಪತ್ರಕರ್ತನ ತಾಳಗೆರೆ ಪಾತ್ರದಲ್ಲಿ ಕಾಣಿಸಿಕೊಂಡು ಚಿಟ್ಟೆಸ್ವಾಮಿಯ ಜೀವನ ಚರಿತ್ರೆ ಬರೆಯುತ್ತಾರೆ. ಎರಡನೇ ಅರ್ಧವನ್ನು ಸಾಗಿಸುವ ಹೊಣೆ ಹೊತ್ತಿರುವ ಸಾಧುಕೋಕಿಲ ಕೊನೆಗೆ ವಿವೇಕಾನಂದರ ಪುಸ್ತಕ ಓದಿ ಆಶ್ರಮ ಸ್ಥಾಪಿಸುವುದರ ಜೊತೆಗೆ ದೇವರನ್ನು ಪೂಜಿಸಿ ದೇವರಾಗಬೇಡಿ ಎಂಬ ನೀತಿಯನ್ನು ಹೇಳುತ್ತಾರೆ.
              ಮಿಕ್ಕಂತೆ ವಿಲನ್ ಕಮ್ ಕಾಮಿಡಿ ಸ್ವಾಮಿಗಳ ಪಾತ್ರದಲ್ಲಿ ಬ್ಯಾಂಕ್ ಜನಾರ್ಧನ, ಬುಲೆಟ್ ಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಬಿರಾದಾರ್ ಪಾತ್ರದಿಂದಲೇ ನಾಯಕ ಚಿಟ್ಟೆಸ್ವಾಮಿಯಾಗುತ್ತಾನೆ. ಆದರೆ ಬಿರಾದಾರ್ ಪಾತ್ರ ಇದ್ದಕ್ಕಿದ್ದಂತೆ ಮಾಯವಾಗಿಬಿಡುತ್ತದೆ. ಆ ಪಾತ್ರಕ್ಕೊಂದು ಅಂತಿಮ ಸ್ಪರ್ಶ ಕೊಡುವುದನ್ನು ಶಂಕರ ಮರೆತಿರಬೇಕು. ಇಲ್ಲದಿದ್ದರೆ ಸಂಕಲನದ ಸಂದರ್ಭದಲ್ಲಿ ಆ ದೃಶ್ಯಗಳು ವ್ಯವಕಲನ ಆಗಿರಬೇಕು. ಚಿತ್ರದಲ್ಲಿ ನಾಲ್ಕು ಹಾಡುಗಳ ಪೈಕಿ ಐಟಂ ಸಾಂಗ್ ರುಚಿಸದು. ಮಿಕ್ಕವು ಖುಷಿ ಕೊಡುತ್ತವೆ. ಎಂ.ಆರ್.ಶೀನು ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.
               ರವಿಶಂಕರಗೌಡ ಇನ್ನೂ ಡಾ.ವಿಠ್ಠಲ ಪಾತ್ರದ ಹ್ಯಾಂಗೋವರ್‌ನಲ್ಲೇ ಇರುವಂತೆ ಭಾಸವಾಗುತ್ತದೆ. ಆದರೂ ಸೆಂಟಿಮೆಂಟ್ ಸೀನ್‌ಗಳನ್ನು ಗೌಡರು ಹೃದಯ ಕದಿಯುತ್ತಾರೆ. ದೇವ್ರಾಣೆ ಮೂಲಕ ಅವರಿಗೆ ಬ್ರೇಕ್ ಸಿಗುವ ನಿರೀಕ್ಷೆ ಇದೆ. ಶಂಕರ ಜೊತೆಗೆ ಶಿವು ಕಬ್ಬಿಣ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇಬ್ಬರೂ ಸೇರಿದ ಲಾಭದ ಅದಿರು ಪಡೆಯುತ್ತಾರಾ ಎನ್ನುವುದು ಸಿನಿಪ್ರಿಯರ ಕೈಯಲ್ಲಿದೆ. 

Advertisement

0 comments:

Post a Comment

 
Top