ಬೈಠಕ್‌ಗೆ ಬಿಎಸ್‌ವೈ ಬೆಂಬಲಿಗರ ಗೈರು;
ಬೆಂಗಳೂರು, ಜ. : ಮುಂದಿನ ವಿಧಾನ ಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಂಬಂಧ ನಗರದ ಹೊರವಲಯದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಚಿಂತನ ಬೈಠಕ್ ಹಾಗೂ ಕೋರ್ ಕಮಿಟಿಯ ಸಭೆಗೆ ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ಬೆಂಬಲಿಗ ಸಚಿವರು ಪಾಲ್ಗೊಳ್ಳದೆ ದೂರ ಉಳಿದುದು, ಬಿಜೆಪಿ ನಾಯಕರನ್ನು ಕೆರಳಿಸಿದೆ. ಬಿಜೆಪಿಯ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್‌ಕುಮಾರ್, ಉಪ ಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ರಾಜ್ಯ ಸಭಾ ಸದಸ್ಯ ಎಂ.ವೆಂಕಯ್ಯ ನಾಯ್ಡು ಪಾಲ್ಗೊಂಡಿದ್ದರು. ಸಚಿವರಾದ ಅರವಿಂದ ಲಿಂಬಾವಳಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಆನಂದ್ ಸಿಂಗ್, ಸುರೇಶ್‌ಕುಮಾರ್, ರಾಮದಾಸ್, ನಾರಾಯಣಸ್ವಾಮಿ, ಎಸ್.ಕೆ.ಬೆಳ್ಳುಬ್ಬಿ, ಗೋವಿಂದ ಕಾರಜೋಳ, ಅಪ್ಪಚ್ಚು ರಂಜನ್, ಸಿ.ಟಿ.ರವಿ, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.
ಆದರೆ, ಯಡಿಯೂರಪ್ಪನವರ ಬೆಂಬಲಿಗ ಸಚಿವರಾದ ಶೋಭಾ ಕರಂದ್ಲಾಜೆ, ಸಿ.ಎಂ.ಉದಾಸಿ, ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ರೇಣುಕಾಚಾರ್ಯ, ಉಮೇಶ್ ಕತ್ತಿ ಸಭೆಯಲ್ಲಿ ಪಾಲ್ಗೊಳ್ಳದೆ ದೂರು ಉಳಿದಿದ್ದರು. ಕೆಜೆಪಿಯೊಂದಿಗೆ ಗುರುತಿಸಿಕೊಂಡಿರುವ ಸುನೀಲ್ ವಲ್ಯಾಪುರೆ ಹಾಗೂ ಬಿ.ಜೆ.ಪುಟ್ಟಸ್ವಾಮಿಯವರಿಂದ ತೆರವಾಗಿರುವ ಸಚಿವ ಸ್ಥಾನಗಳನ್ನು ತುಂಬಲು, ಒಂದು ವಾರದೊಳಗೆ ಸಚಿವ ಸಂಪುಟವನ್ನು ವಿಸ್ತರಣೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಸರಕಾರವನ್ನು ಉರುಳಿಸುವ ಬೆದರಿಕೆಯೊಡ್ಡುತ್ತಿರುವ ಯಡಿಯೂರಪ್ಪನವರಿಗೆ ತಕ್ಕ ಉತ್ತರ ನೀಡಲು ನಿರ್ಧರಿಸಿರುವ ಬಿಜೆಪಿ, ಸಚಿವ ಸಂಪುಟ ವಿಸ್ತರಣೆಯ ವೇಳೆ ಅವರ ಆಪ್ತರಾದ ಶೋಭಾ ಕರಂದ್ಲಾಜೆ ಹಾಗೂ ರೇಣುಕಾಚಾರ್ಯರಿಗೆ ಖೋಕ್ ನೀಡುವ ಸಾಧ್ಯತೆಯಿದೆ. ಅಲ್ಲದೆ, ಚುನಾವಣಾ ಪ್ರಚಾರ ಕಾರ್ಯದಲ್ಲಿಯೂ ಕೆಜೆಪಿಯೊಂದಿಗೆ ಗುರುತಿಸಿಕೊಂಡಿರುವ ಶಾಸಕರು, ಸಚಿವರನ್ನು ಸೇರಿಸಕೊಳ್ಳದಿರಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.
0 comments:
Post a Comment