PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜ. ೨೧   ನಿಗದಿತ ಅವಧಿಯಲ್ಲಿ ಸ್ಕೀಮ್‌ನ ಕಂತಿನ ಹಣ ಪಾವತಿಸದಿರುವುದರಿಂದ, ಪ್ಲಾಟ್ ನೊಂದಣಿಗೆ ಸದಸ್ಯರು ಅರ್ಹರಲ್ಲ ಎಂದು ತೀರ್ಪು ನೀಡಿರುವ ಗ್ರಾಹಕರ ವೇದಿಕೆ, ಕಂತಿನ ಹಣ ಹಿಂದಿರುಗಿಸುವಂತೆ ತೀರ್ಪು ನೀಡಿದೆ.
  ಗಂಗಾವತಿಯ ಒಂದೇ ಕುಟುಂಬದ ರಾಜಗೋಪಾಲ, ಭಂಡಾ ತರುಣಕುಮಾರ್, ಭಂಡಾ ಕಿರಣ ಮತ್ತು ವನಜಾಕ್ಷಿ ಎಂಬುವವರು ಗಂಗಾವತಿಯ ಶಾಂತದುರ್ಗಾ ಚಾಮುಂಡೇಶ್ವರಿ ಡೆವಲಪರ್‍ಸ್ ನವರ ಪ್ಲಾಟ್ ಮಾರಾಟ ಸ್ಕೀಂನಲ್ಲಿ ಸದಸ್ಯರಾಗಿ ನೊಂದಣಿ ಮಾಡಿಸಿಕೊಂಡಿದ್ದರು.  ಸ್ಕೀಂ ನಿಯಮದನ್ವಯ  ೨೦೦೬ ರ ಜೂನ್ ೧೭ ರಿಂದ ೨೦೧೦ ರ ಡಿಸೆಂಬರ್ ೧೭ಕ್ಕೆ ಅಂತ್ಯಗೊಳ್ಳುವ ಸ್ಕೀಂ ಇದಾಗಿದ್ದು, ಪ್ರತಿ ತಿಂಗಳು ರೂ. ೧೦೦೦ ರಂತೆ ಒಟ್ಟು ೫೫ ತಿಂಗಳು ಪಾವತಿಸಬೇಕು, ಪ್ರತಿ ೧೦, ೨೦, ೩೦, ೪೦ ಮತ್ತು ೫೦ನೇ ತಿಂಗಳಿನ ಡ್ರಾದಲ್ಲಿ ವಿಜೇತರಾದವರಿಗೆ ೩೦*೪೦ ಅಳತೆಯ ಪ್ಲಾಟ್ ನೊಂದಣಿ ಮಾಡಿಸಿಕೊಡಲಾಗುವುದು, ಅಂತಹ ವಿಜೇತರು ಮುಂದಿನ ತಿಂಗಳುಗಳ ಕಂತಿನ ಹಣ ಪಾವತಿಸಬೇಕಿರುವುದಿಲ್ಲ.  ಒಂದೇ ಸಲ ಪ್ಲಾಟ್‌ನ ಹಣ ಪಾವತಿಸಿದವರಿಗೆ ಶೇ. ೧೦ ರ ರಿಯಾಯಿತಿ ನೀಡುವ ಸೌಲಭ್ಯ ನೀಡಲಾಗಿತ್ತು.  ಅದರಂತೆ ರಾಜಗೋಪಾಲ ರೂ. ೧೭೦೦೦, ಭಂಡಾ ತರುಣಕುಮಾರ್-ರೂ. ೩೨೦೦೦, ಭಂಡಾ ಕಿರಣ- ರೂ. ೨೯೦೦೦ ಮತ್ತು ವನಜಾಕ್ಷಿ- ರೂ. ೨೯೦೦೦ ಪಾವತಿಸಿದ್ದರು.  ಪ್ಲಾಟಿನ ಬಾಕಿ ಕಂತಿನ ಹಣವನ್ನು ಒಟ್ಟಿಗೆ ಪಾವತಿಸಲು ತಯಾರಿದ್ದರೂ, ನೋಂದಣಿಗೆ ನಿರಾಕರಿಸಿ, ಹೆಚ್ಚಿನ ಹಣ ಕೇಳುತ್ತಿರುವುದನ್ನು ಸೇವಾ ನ್ಯೂನತೆ ಎಂದು ಪರಿಗಣಿಸಿ, ಒಟ್ಟು ೪೦೫೦೦ ಗಳನ್ನು ಪರಿಹಾರವಾಗಿ ಕೊಡಿಸುವಂತೆ ಸ್ಕೀಂನ ಮೇಲ್ಕಂಡ ಸದಸ್ಯರು ಶಾಂತದುರ್ಗಾ ಚಾಮುಂಡೇಶ್ವರಿ ಡೆವಲಪರ್‍ಸ್ ಅವರ ವಿರುದ್ಧ ಗ್ರಾಹಕರ ವೇದಿಕೆಗೆ ಅರ್ಜಿ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ, ಸದಸ್ಯೆ ವೇದಾ ಜೋಷಿ ಅವರು, ಸ್ಕೀಂ ೨೦೦೬ ರ ಜೂನ್ ೧೭ ರಿಂದ ೨೦೧೦ ರ ಡಿಸೆಂಬರ್ ೧೭ಕ್ಕೆ ಅಂತ್ಯಗೊಳ್ಳುವುದಿದ್ದರೂ, ಸಹ ಮಧ್ಯದಲ್ಲಿ ಬಾಕಿ ಕಂತುಗಳ ಹಣವನ್ನು ಸಮರ್ಪಕವಾಗಿ ಪಾವತಿಸಲು ಸ್ಕೀಂನವರ ಬಳಿ ಹೋಗಿರುವುದಾಗಿ ತಿಳಿಸಿದ್ದರೂ, ಅದಕ್ಕೆ ಪೂರಕವಾದ ದಾಖಲೆಗಳನ್ನು ಅಂದರೆ ಬಾಕಿ ಹಣ ಪಾವತಿಗೆ ಸಂಬಂಧಿಸಿದ ಚೆಕ್, ಅಥವಾ ಡಿಡಿ ಯನ್ನಾಗಲಿ ವೇದಿಕೆಯ ಮುಂದೆ ಹಾಜರುಪಡಿಸಿರುವುದಿಲ್ಲ.  ಅಲ್ಲದೆ ೨೦೧೦ ರವರೆಗೆ ಸ್ಕೀಂ ಅವಧಿಯಿದ್ದರೂ, ೨೦೦೭ ಮತ್ತು ೨೦೦೮ ರಿಂದ ಬಾಕಿ ಕಂತುಗಳ ಹಣವನ್ನು ಪಾವತಿಸದೇ ಇರುವುದರಿಂದ, ಸದಸ್ಯರು ಬಾಕಿ ಹಣವನ್ನು ಸ್ಕೀಂ ನಡೆಸುವವರಿಗೆ ಪಾವತಿಸಿ ಪ್ಲಾಟ್ ಅನ್ನು ನೋಂದಣಿ ಮಾಡಿಸಿಕೊಳ್ಳಲು ಅನರ್ಹರಾಗಿರುತ್ತಾರೆಂದು ಪರಿಗಣಿಸಿ, ಸದಸ್ಯರು ಶಾಂತದುರ್ಗಾ ಚಾಮುಂಡೇಶ್ವರಿ ಡೆವಲಪರ್‍ಸ್ ಅವರಿಗೆ ಪಾವತಿಸಿರುವ ಒಟ್ಟು ಕಂತಿನ ಮೊತ್ತವನ್ನು ಮೇಲ್ಕಂಡ ಸದಸ್ಯರಿಗೆ ೯೦ ದಿನಗಳ ಒಳಗಾಗಿ ಮರುಪಾವತಿಸುವಂತೆ, ತಪ್ಪಿದಲ್ಲಿ ನಂತರದ ಅವಧಿಗೆ ಶೇ. ೧೦ರ ಬಡ್ಡಿಯೊಂದಿಗೆ ಪಾವತಿಸುವಂತೆ ಗ್ರಾಹಕರ ವೇದಿಕೆ ಆದೇಶ ನೀಡಿದೆ.

Advertisement

0 comments:

Post a Comment

 
Top