PLEASE LOGIN TO KANNADANET.COM FOR REGULAR NEWS-UPDATES








ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ : 
  ಇತ್ತೀಚಿನ ದಿನಗಳಲ್ಲಿ ರೈತರು ನಿರಂತರ ಹಣ ಒದಗಿಸುವಂತಹ ತೋಟಗಾರಿಕೆ ಬೆಳೆ ಬೆಳೆಯುವತ್ತ ಆಸಕ್ತಿ ತೋರುತ್ತಿದ್ದು, ಪ್ರಧಾನ ಕೃಷಿ ಕೆಲಸದ ನಡುವೆ ತೋಟಗಾರಿಕೆ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಯಲು ಬಯಸುವವರೇ ಹೆಚ್ಚಾಗಿರುವವರ ನಡುವೆ ಕೊಪ್ಪಳ ತಾಲೂಕಿನ ರೈತರು ತೋಟಗಾರಿಕೆ ಇಲಾಖೆಯಿಂದ ಸಮಗ್ರ ತೊಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತರಬೇತಿ ಪಡೆದು ತಮ್ಮ ಹೊಲದಲ್ಲಿ ಬಂಪರ್ ಟೊಮ್ಯಾಟೋ ಬೆಳೆ ಬೆಳೆದು ಇತರೆ ರೈತರಿಗೆ ಮಾದರಿಯೆನಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಮಣ್ಣಿನ ಗುಣವೇ ಅಂಥಾದ್ದು ಎನಿಸುತ್ತದೆ,  ತೋಟಗಾರಿಕೆ ಬೆಳೆಗಳಿಗೆ ಕೊಪ್ಪಳ ಜಿಲ್ಲೆ ಸೂಕ್ತ ಹವಾಮಾನ, ವಾತಾವರಣ, ಮಣ್ಣಿನ ಗುಣಮಟ್ಟ ಪೂರಕವಾಗಿದೆ.  ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆದು ಯಶಸ್ಸು ಕಂಡವರು ಬಹಳಷ್ಟು ರೈತರು.  ಇಂಥ ಪರಿಸರದ ಲಾಭ ಹೊಂದಲು ಅನುಕೂಲವಾಗುವಂತೆ ತೋಟಗಾರಿಕೆ ಇಲಾಖೆಯು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಪ್ರತಿ ಹೋಬಳಿಯಲ್ಲಿ ಎರಡು ಗ್ರಾಮಗಳಂತೆ, ರೈತ ಫಲಾನುಭವಿಗಳನ್ನು ಆಯ್ಕೆ ಮಾಡಿ, ಇಂತಹ ಗುಚ್ಛ ಗ್ರಾಮಗಳ ರೈತರ ಒಂದೊಂದು ಎಕರೆಯಲ್ಲಿ ನೂತನ ತಾಂತ್ರಿಕತೆಯನ್ನು ಅಳವಡಿಸಿ, ಪ್ರಾಯೋಗಿಕವಾಗಿ ಬೆಳೆ ಬೆಳೆಯುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಕೊಪ್ಪಳ ತಾಲೂಕಿನಲ್ಲಿ ಇದಕ್ಕಾಗಿ ಒಟ್ಟು ೮೭ ಫಲಾನುಭವಿಗಳನ್ನು ಆಯ್ಕೆ ಮಾಡಿದೆ.
  ಈ ರೀತಿ ಆಯ್ಕೆ ಮಾಡಲಾದ ಕೊಪ್ಪಳ ತಾಲೂಕಿನ ಹಿಟ್ನಾಳ ಹೋಬಳಿಯ ಗಬ್ಬೂರ ಮತ್ತು ಹಾಲಹಳ್ಳಿ ಗ್ರಾಮಗಳ ರೈತರಾದ ಅಣ್ಣಪ್ಪ, ಕರಿಯಪ್ಪ ಪೂಜಾರ, ಮುರ್ತುಜಸಾಬ, ಮಂಜುನಾಥಗೌಡ ಮುಂತಾದವರ ಹೊಲಗಳಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಪ್ರಾಯೋಗಿಕವಾಗಿ ಟೊಮ್ಯಾಟೋ ಬೆಳೆ ಬೆಳೆದಿದ್ದು, ಇದೀಗ ಬರ ಪರಿಸ್ಥಿತಿಯಲ್ಲೂ ಟೊಮ್ಯಾಟೋ ಬೆಳೆ ಬಂಪರ್ ಆಗಿ ಬೆಳೆದಿದೆ.
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಗಾಗಿ ಆಯ್ಕೆ ಮಾಡಿರುವ ಫಲಾನುಭವಿಗಳ ಪೈಕಿ ಬಹುತೇಕ ರೈತರು ಸಣ್ಣ ಹಿಡುವಳಿದಾರರಾಗಿದ್ದು, ಅನೇಕ ವರ್ಷಗಳಿಂದಲೂ ತರಕಾರಿ ಬೆಳೆಗಳನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆಯುತ್ತಿದ್ದವರು.  ಇಂತಹ ರೈತರನ್ನೇ ಈ ಯೋಜನೆಗಾಗಿ ಆಯ್ಕೆ ಮಾಡಿ, ರೈತರ ಒಂದು ಎಕರೆ ಜಮೀನಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಪ್ಲಾಸ್ಟಿಕ್ ಹೊದಿಕೆ, ಹನಿ ನೀರಾವರಿ, ರಸಾವರಿ ಮತ್ತು ಹಸಿರು ಮನೆ ತಾಂತ್ರಿಕತೆಯಲ್ಲಿ ಬೆಳೆದ ಸಸಿಗಳ ಆಯ್ಕೆ ಮುಂತಾದ ನವೀನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಟೊಮ್ಯಾಟೊ ಬೆಳೆ ಬೆಳೆಯುವಂತೆ ರೈತರಿಗೆ ತರಬೇತಿ ನೀಡಲಾಗಿತ್ತು.
  ಸುಪೀರಿಯಾ ಎಂಬ ಟೊಮ್ಯಾಟೋ ತಳಿಯನ್ನು ಆಯ್ಕೆ ಮಾಡಿಕೊಂಡು, ಇದೀಗ ಈ ಯೋಜನೆಯಡಿ ಬೆಳೆದ ಟೊಮ್ಯಾಟೋ ಬೆಳೆ ಬಂಪರ್ ಆಗಿ ಬೆಳೆದಿದ್ದು, ಸೇಬು ಹಣ್ಣಿನಂತೆ ಕಂಗೊಳಿಸುತ್ತಿವೆ.  ಸಾಮಾನ್ಯ ಟೊಮ್ಯಾಟೋ ೫೦ ರಿಂದ ೧೦೦ ಗ್ರಾಮ ತೂಕವಿದ್ದರೆ, ಈ ನೂತನ ತಾಂತ್ರಿಕತೆಯಲ್ಲಿ ಬೆಳೆದ ಪ್ರತಿಯೊಂದು ಟೊಮ್ಯಾಟೋ ಹಣ್ಣು ಸರಾಸರಿ ೩೦೦ ರಿಂದ ೪೦೦ ಗ್ರಾಂ ತೂಗುತ್ತದೆ ಎಂದರೆ ಇದರ ಬಂಪರ್ ಇಳುವರಿಯ ಬಗ್ಗೆ ಆಶ್ಚರ್ಯ ಮೂಡಿಸುತ್ತದೆ.  ಪ್ರತಿ ಬಾರಿ ಕೊಯ್ಲು ಮಾಡಿದಾಗಲೂ ಸರಾಸರಿ ೧೫೦ ರಿಂದ ೨೦೦ ಪುಟ್ಟಿಗಳಷ್ಟು ಇಳುವರಿ ಬರುತ್ತಿದೆ.  ಇದರಲ್ಲಿ ೦೧ ಪುಟ್ಟಿ ಸರಿ ಸುಮಾರು ೮ ರಿಂದ ೧೦ ಕೆ.ಜಿ. ತೂಗುತ್ತದೆ.  ಗಬ್ಬೂರಿನ ಮಂಜುನಾಥಗೌಡ ಎಂಬ ರೈತ ಬರೋಬ್ಬರಿ ೨೫ ಟನ್ ಟೊಮ್ಯಾಟೋ ಬೆಳೆ ಇಳುವರಿ ಪಡೆದಿದ್ದಾರೆ.  ತಾವೇ ಬೆಳೆದ ಟೊಮ್ಯಾಟೋ ಹಣ್ಣುಗಳನ್ನು ಬೆರಗುಗಣ್ಣಿನಿಂದ ನೋಡುತ್ತಾ, ಈ ರೀತಿಯೂ ಟೊಮ್ಯಾಟೋವನ್ನು ಬೆಳೆಯಬಹುದು ಎಂಬುದು ನಮಗೇ ತಿಳಿದಿರಲಿಲ್ಲ.  ಬೆಳೆ ತುಂಬಾ ಆರೋಗ್ಯವಾಗಿದ್ದು, ಉತ್ತಮ ಗುಣಮಟ್ಟದ ಕಾಯಿಗಳನ್ನು ಕೊಡುವುದರ ಜೊತೆಗೆ ಬಂಪರ್ ಇಳುವರಿ ಕೊಡುತ್ತಿದೆ.  ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು, ಖರೀದಿದಾರರು ನಾಮುಂದು, ತಾಮುಂದು ಎಂದು ಮುಗಿಬಿದ್ದು ಖರೀದಿಸುತ್ತಿದ್ದಾರೆ.  ಪ್ಲಾಸ್ಟಿಕ್ ಹೊದಿಕೆಯಿಂದಾಗಿ ಬೆಳೆಯು ಕಳೆ ನಿಯಂತ್ರಣವಾಗಿದ್ದು, ಹನಿ ನೀರಾವರಿ ಹಾಗೂ ರಸಾವರಿಯಿಂದಾಗಿ ನೀರಿನ ಸಮರ್ಪಕ ಬಳಕೆ ಮತ್ತು ಸಸ್ಯಗಳ ಸಮಗ್ರ ಪೋಷಣೆಯಿಂದಾಗಿ ಕೂಲಿ ಆಳಿನ ಖರ್ಚು ಸಹ ಕಡಿಮೆಯಾಗಿ, ಲಾಭದಾಯಕವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸುತ್ತಾರೆ.
  ತೋಟಗಾರಿಕೆ ಉಪನಿರ್ದೇಶಕ ಎಸ್.ಪಿ. ಭೋಗಿಯವರು ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡ ಫಲಾನುಭವಿ ರೈತರ ಶ್ರಮವನ್ನು ಶ್ಲಾಘಿಸಿದ್ದಾರೆ.  ಇತ್ತೀಚೆಗೆ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಆಯ್ಕೆಯಾದ ಗುಚ್ಛಗ್ರಾಮಗಳ ಫಲಾನುಭವಿಗಳ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ರಾಜ್ಯ ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ ಡಾ. ಡಿ.ಎಲ್. ಮಹೇಶ್ವರ್ ಅವರು ಕೃಷಿ ಕ್ಷೇತ್ರವೇ ಆಗಿರಲಿ ಅಥವಾ ವ್ಯಾಪಾರ ಕ್ಷೇತ್ರವೇ ಇರಲಿ, ಶ್ರಮ ಮತ್ತು ಛಲ ಅದರ ಜೊತೆಗೆ ಬದ್ಧತೆ ಇದ್ದಲ್ಲಿ, ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎಂದು ರೈತರಿಗೆ ಪ್ರೋತ್ಸಾಹಕ ನುಡಿಗಳನ್ನು ಆಡಿದರಲ್ಲದೆ, ತಜ್ಞರು ಕ್ಷೇತ್ರೊತ್ಸವ ಮಾಡಲು ಸೂಕ್ತವಾಗಿದೆ ಎಂಬ ಸಲಹೆ ನೀಡಿದ್ದಾರೆ.
  ರೈತರಿಗೆ ಅಗತ್ಯ ಸಲಹೆ, ಸಹಕಾರ, ಸೌಲಭ್ಯ ಒದಗಿಸಲೆಂದೇ ತೋಟಗಾರಿಕೆ ಇಲಾಖೆ ಇದೆ.  ರೈತರು ನಮ್ಮ ಇಲಾಖೆಯ ಸದುಪಯೋಗ ಪಡೆದುಕೊಂಡು, ತಮ್ಮ ಭೂಮಿಗೆ ತಕ್ಕುದಾದ ಬೆಳೆ ಬೆಳೆದು ಆರ್ಥಿಕ ಸದೃಢತೆಯನ್ನು ಸಾಧಿಸಬಹುದಾಗಿದೆ ಎನ್ನುತ್ತಾರೆ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ಅಧಿಕಾರಿ ಮೂರ್ತಿ ಅವರು.  ಸಹಾಯಕ ತೋಟಗಾರಿಕೆ ಅದಿಕಾರಿ ರುದ್ರಪ್ಪ, ವಿಷಯ ತಜ್ಞ ಶಿವಾನಂದ, ತೋಟಗಾರಿಕೆ ಸಹಾಯಕ ಬಸವರಾಜ ರಾಂಪೂರ ಅವರು ಯೋಜನೆಯಡಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಗಿಂದಾಗ್ಗೆ ರೈತರಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದ್ದರು. ಹೆಚ್ಚಿನ ಮಾಹಿತಿಗಾಗಿ ರೈತರು ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಕೊಪ್ಪಳ- ೦೮೫೩೯-೨೩೦೧೭೦ ಕ್ಕೆ ಸಂಪರ್ಕಿಸಬಹುದಾಗಿದೆ.

                                                                     - ತುಕಾರಾಂ ರಾವ್ ಬಿ.ವಿ., ಜಿಲ್ಲಾ ವಾರ್ತಾಧಿಕಾರಿ,  ಕೊಪ್ಪಳ.

Advertisement

0 comments:

Post a Comment

 
Top