PLEASE LOGIN TO KANNADANET.COM FOR REGULAR NEWS-UPDATES


        ಕೊಪ್ಪಳ : ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯ ಬಗ್ಗೆ ಕೇಳಿದ್ದೆ. ಇದು ಧರ್ಮ ಜಾಗೃತಿಯ ಸಂಕೇತದಂತೆ ನನಗೆ ಭಾಸವಾಗುತ್ತಿದೆ. ಕೊಪ್ಪಳದ ಜನರ ಮನಮನದಲ್ಲಿ ಅವರ ಶ್ರದ್ಧೆ, ಭಕ್ತಿ, ಭಾವವನ್ನು ಇಲ್ಲಿ ಕಾಣಬಹುದು. ನಮ್ಮ ದೇಶದಲ್ಲಿ ಧರ್ಮ ಇನ್ನೂ ಜಾಗೃತವಾಗಿದೆ. ಮಾನವೀಯತೆಯ ಸಂದೇಶ ಇಲ್ಲಿಂದ ಸಿಗುತ್ತಿದೆ. ಎಲ್ಲ ಜಾತಿಯ ಎಲ್ಲ ಧರ್ಮದ ಜನರು ಒಟ್ಟಿಗೆ ಸೇರಿ ದಾಸೋಹ ಮಾಡುತ್ತಿದ್ದಾರೆ. ಸ್ವಾಮಿನಿಯವರ ಸೇವೆಗೆ ಮೆಚ್ಚಿ, ಜನರ ಉತ್ಕೃಷ್ಟವಾದ ಸೇವೆ, ಜನಗಳ ಮನಸಿಗೆ ಶಾಂತಿ, ಬುದ್ಧಿಗೆ ಶಿಕ್ಷಣ, ಶರೀರಕ್ಕೆ ಸ್ವಾಸ್ಥ್ಯ ಹಾಗೂ ಜೀವನದಲ್ಲಿ ಸುಖ ಸಂvರುಷ ಕೊಡಲು ಈ ಜಾತ್ರೆ ಒಂದು ದಾರಿಯಾಗಿದೆ ಎಂದು ಆರ್ಟ್ ಆಫ್ ಲಿವಿಂಗ್‌ನ ಪಂಡಿತ ರವಿಶಂಕರ ಗುರೂಜಿ ನುಡಿದರು. 
       ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ೨೦೧೩ರ ಜಾತ್ರಾ ಮಹೋತ್ಸವದಲ್ಲಿ ಪ್ರಮುಖ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು ರಥೋತ್ಸವದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊಪ್ಪಳದಲ್ಲಿ ಈ ಹಿಂದೆ ಪ್ರವಾಹ ಬಂದು ಜನ ಸಂತ್ರಸ್ತರಾಗಿದ್ದರು. ಅವರ ಮನಸಿನಲ್ಲಿ ಶ್ರದ್ಧೆ ಇರುವುದರಿಂದ ಭಕ್ತಿ, ವಿಶ್ವಾಸ ಜೀವನಕ್ಕೆ ಅದೊಂದು ಹರಿಗೋಲಾಗಿ ಅವರನ್ನು ಮುನ್ನಡೆಸುತ್ತಿದೆ. ಅದ್ಭುತವಾದ ಜನಸ್ತೋಮ, ಶಿಸ್ತಿನಿಂದ, ಭಕ್ತಿಭಾವದಿಂದ ಜನರು ಸೇರಿದ್ದಾರೆ. ಬೇರೆ ಯಾವುದಾದರೂ ಕಾರ್ಯಕ್ರಮ ಇದ್ದರೆ ಜನರನ್ನು ತುಂಬಿಕೊಂಡು ಹೋಗುವ ಪರಿಪಾಠ ಬೆಳೆದಿರುವ ಈ ದಿನಗಳಲ್ಲಿ ಸ್ವ ಇಚ್ಛೆಯಿಂದ ಜನರು ಇಲ್ಲಿ ಸಾಗರೋಪಾದಿಯಲ್ಲಿ ಸೇರುವುದು ನಿಜಕ್ಕೂ ರೋಮಾಂಚನ. ಇಂಥ ಸಂಸ್ಕ್ರತಿ ಇನ್ನೂ ಬೆಳೆಯಬೇಕು. ಉ.ಕ ಜನರ ಜೀವಾನಾಧಾರವಾಗಿರುವ ಈ ಜಾತ್ರೆಯ ವೈಭವ ವರ್ಷದಿಂದ ವರ್ಷಕ್ಕೆ ಹೆಚ್ಚಾಗಲಿ, ಈ ಭಾಗಕ್ಕೆ ಇನ್ನೂ ಅಽಕ ಸೌಲಭ್ಯಗಳು ಸಿಗುವಂತಾಗಲಿ ಎಂದರು.
        ಧರ್ಮ ಅಧೋಗತಿಗೆ ಹೋಗುತ್ತಿಲ್ಲ ಎನ್ನುವುದಕ್ಕೆ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಸೇರಿರುವ ಜನಸ್ತೋಮವೇ ಸಾಕ್ಷಿ. ಸಜ್ಜನರು ಎಚ್ಚೆತ್ತರೆ ಕೆಟ್ಟ ಜನರ ಅವ್ಯವಹಾರ ಅನಾಚಾರಗಳು ಸಂಪೂರ್ಣ ನಿಂತು ಹೋಗುತ್ತವೆ. ರಾಜಕಾರಣದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಅತ್ಯಾಚಾರ, ಅವ್ಯವಹಾರ ತಾಂಡವವಾಡುತ್ತಿದೆ. ಧರ್ಮ ಗುರುಗಳು ಎನಿಸಿಕೊಂಡವರು ರಾಜಕಾರಣಕ್ಕೆ ಇಳಿಯಬಾರದು. ಅಂಥ ಧರ್ಮಗುರುಗಳು ನಮ್ಮಲ್ಲಿಲ್ಲ ಎಂದು ಅವರು ಹೇಳಿದರು. 

Advertisement

0 comments:

Post a Comment

 
Top