ಕೊಪ್ಪಳ, ಜ. ೧೪. ನಗರದ ಶ್ರೀ ಸಹಸ್ರಾಂಜನೇಯ ದೇವಸ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಶೇಖಣ್ಣಾಚಾರ್ಯ ಶಿಲ್ಪಿಯವರ ೬ ನೇ ಪುಣ್ಯ ಸ್ಮರಣೆ ಅರ್ಥಪೂರ್ಣ ಕಾರ್ಯಕ್ರಮ ಎಂದು ವಿನೂತನ ಶಿಕ್ಷಣ ಸೇವಾ ಸಂಸ್ಥೆಯ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
ಅವರು ನಗರದ ಮಲಿಯಮ್ಮದೇವಿ ದೇವಸ್ಥಾನದ ಹತ್ತಿರ ನಿರ್ಮಾಣಗೊಳ್ಳುತ್ತಿರುವ ಶ್ರೀ ಸಹಸ್ರಾಂಜನೇಯ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡುತ್ತಿದ್ದರು, ಖ್ಯಾತ ಶಿಲ್ಪ ಯುವ ಕಲಾವಿದರು, ಆಂಜನೇಯ ಭಕ್ತರಾದ ಪ್ರಕಾಶ ಶಿಲ್ಪಿಯವರ ನೇತೃತ್ವದಲ್ಲಿ ಪ್ರತಿವರ್ಷ ಶೇಖಣ್ಣಾಚಾರ್ಯ ಶಿಲ್ಪಿಯವರ ಪುಣ್ಯಸ್ಮರಣೆ ಹಾಗೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿರುವದು ಅಭಿನಂದನಾರ್ಹ. ದೇವಸ್ಥಾನದ ಕಟ್ಟಡ ಕಾರ್ಯವನ್ನು ಆರಂಭಿಸುವ ಸಮಿತಿಯವರ ಸಂಕಲ್ಪಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳಿದರು.
ಸಿರಸಪ್ಪಯ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಶೇಖಣ್ಣಾಚಾರ್ಯರು ಕೇವಲ ಒಬ್ಬರಿಗೆ ತಂದೆಯಾಗಿ ಸಾಮಾನ್ಯ ಬದುಕನ್ನು ನಡೆಸದೆ, ಅನೇಕರ ನೋವಿಗೆ ಸ್ಪಂದಿಸಿ, ಪ್ರೀತಿಯ ಭಕ್ತ ಕುಟುಂಬವನ್ನು ಕಟ್ಟಿಕೊಂಡಿದ್ದಾರೆ, ಅವರು ಅಜರಾಮರರಾಗಿದ್ದಾರೆ ಎಂದರು. ವೇದಿಕೆಯಲ್ಲಿ ಗಿಣಗೇರಿಯ ಪುರೋಹಿತರಾದ ಸುಬ್ಬಣಾಚಾರ್ಯ, ಶ್ರೀ ಗವಿಸಿದ್ಧೇಶ್ವರ ಅರ್ಬನ್ ಬ್ಯಾಂಕ್ ಮ್ಯಾನೇಜರ್ ಶಂಕರಗೌಡ ಹಿರೇಗೌಡ್ರ, ವಿಶ್ವಕರ್ಮ ಕಲಾ ಮಂದಿರದ ಮಂಜುನಾಥ ಶಿಲ್ಪಿ, ಟ್ರಸ್ಟ್ ಸದಸ್ಯರಾದ ನಿಂಗಪ್ಪ ನಿಟ್ಟಾಲಿ, ಬಾಸುರಾವ, ಪರಮೇಶ ಚಕ್ಕಿ ಇತರರು ಇದದರು.
ಪ್ರಹ್ಲಾದ ಮುಧೋಳ ಸ್ವಾಗತಿಸಿದರು, ಟ್ರಸ್ಟ್ ಕಾರ್ಯದರ್ಶಿಗಳಾದ ಮಂಜುನಾಥ ಜಿ. ಗೊಂಡಬಾಳ ಕಾರ್ಯಕ್ರಮ ನಿರೂಪಿಸಿದರು, ವಿರೇಶ ಚೋಳಪ್ಪನವರ ವಂದಿಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಕೊಪ್ಪಳದ ಜಗದ್ಗುರು ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಪ್ರಕಾಶ ಶಿಲ್ಪಿಯವರ ೨೧೮೯ ನೇ ನಿತ್ಯ ಆಂಜನೇಯ ಮೂರ್ತಿ ಸೇವೆ ಪೂಜೆ, ಪಂಚಾಮೃತಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ಮಾಡಿ, ದೇವಸ್ಥಾನ ನಿರ್ಮಾಣದ ಸಂಕಲ್ಪ ನಿರ್ವಿಘ್ನವಾಗಿ ಸಾಗಲಿ ಎಂದು ಶುಭ ಕೋರಿದರು.
0 comments:
Post a Comment