ಕೊಪ್ಪಳ : ಇತ್ತಿಚೆಗೆ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಪ್ರಚಾರಕ್ಕಾಗಿ ಹಾಗೂ ಚಿತ್ರದ ಯಶಸ್ಸಿಗೆ ಕಾರಣರಾದ ಜನರಿಗೆ ಕೃತಜ್ಞತೆ ಸಲ್ಲಿಸುವ ಚಿತ್ರತಂಡದ ವಿಜಯಯಾತ್ರೆ ಸೋಮವಾರ ಕೊಪ್ಪಳಕ್ಕೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಕಿರಿಕ್ ಮಾಡಿದ ದರ್ಶನ್ ಅನುಚಿತವಾಗಿ ವರ್ತಿಸಿದರು.
ಸೋಮವಾರ ಮಧ್ಯಾಹ್ನ ೧.೩೦ ಕ್ಕೆ ಆಗಮಿಸಬೇಕಿದ್ದ ಚಿತ್ರತಂಡ ಬರೋಬ್ಬರಿ ೩ ಗಂಟೆ ತಡವಾಗಿ ನಗರ ಪ್ರವೇಶಿಸಿತು. ಈ ವಿಷಯ ಮೊದಲೇ ಘೋಷಣೆಯಾಗಿದ್ದರಿಂದ ಬೆಳಗಿನಿಂದಲೇ ಅಭಿಮಾನಿಗಳು ನಗರದ ಲಕ್ಷ್ಮಿಚಿತ್ರಮಂದಿರದ ಬಳಿ ಜಮಾಯಿಸಿದ್ದರು. ಊಟದ ಸಮಯ ಮೀರುತ್ತಿದ್ದುದರಿಂದ ಚಿತ್ರತಂಡ ಮೊದಲು ಊಟ ಮಾಡಿ ನಂತರ ಜನರ ಬಳಿ ಹೋಗಲು ನಿರ್ಧರಿಸಿದಾಗ ಟಾಕೀಸಿನ ಮಾಲಕರಾದ ವೀರೇಶ ಮಹಾಂತಯ್ಯನಮಠ ಸಹೋದರರು ಅವರ ತೋಟದ ಕಡೆಗೆ ಕರೆದೊಯ್ದರು.
ಟಾಕೀಸಿನ ಕಡೆ ಜನಜಂಗುಳಿ ಇದ್ದುದರಿಂದ ತೋಟದಲ್ಲಿಯೇ ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿ ಏರ್ಪಾಟು ಮಾಡಲಾಗಿತ್ತು. ಚಿತ್ರತಂಡದವರು ತಂದಿದ್ದ ಬಸ್ ತೋಟದ ಕಡೆ ಬಂದು ನಿಲ್ಲುತ್ತಿದ್ದಂತೆ ಛಾಯಾಗ್ರಾಹಕರು ಫೋಟೋ ತೆಗೆಯಲು ತೆರಳಿದರು. ಬಸ್‌ನಿಂದ ಇಳಿದ ದರ್ಶನ್ ಛಾಯಾಗ್ರಾಹಕ ಗವಿಸಿದ್ಧಪ್ಪ ಕರ್ಕಿಹಳ್ಳಿಯವರಿಗೆ `ಏಯ್ ಗೂಬೆ, ನಾನು ಬಹಿರ್ದೆಸೆಗೆ ಹೋಗ್ತಿನಿ, ಅದನ್ನು ತೆಗಿತೀಯಾ?' ಎಂದು ಸೊಕ್ಕು ಪ್ರದರ್ಶಿಸಿದರು.
ಚಾನೆಲ್‌ಗಳ ಕ್ಯಾಮರಾಮನ್‌ಗಳು ದೃಶ್ಯಗಳನ್ನು ಸೆರೆಹಿಡಿಯಲು ಮುಂದಾಗುತ್ತಿದ್ದಂತೆ ಸರ್‍ಕೋಳ್ರಪಾ ಬರೀ ಇದೇ ಆಯ್ತು ನಿಮ್ದು. ಎಂದು ಸಿಟ್ಟಿನಿಂದ ಮಾಧ್ಯಮದವರನ್ನು ಗುರಾಯಿಸಿದರು. ಇಲ್ಲದ ಮನಸ್ಸಿನಿಂದ ಆಸನದಲ್ಲಿ ದರ್ಶನ್ ಕುಳಿತರೂ ಭದ್ರತಾ ಸಿಬ್ಬಂದಿ ಮಾಧ್ಯಮದವರೊಂದಿಗೆ ವಾಗ್ವಾದಕ್ಕಿಳಿದರು. ಈ ಸಂದರ್ಭದಲ್ಲಿ ಟಾಕೀಸಿನ ಮಾಲಕರಾದ ವೀರೇಶ ಮಹಾಂತಯ್ಯನಮಠ ಮಾಧ್ಯಮದವರಿಗೆ ಕ್ಷಮೆ ಕೇಳಿ ಸಮಾಧಾನಪಡಿಸಲು ಮುಂದಾಗುತ್ತಿದ್ದಂತೆ ದರ್ಶನ್ ಅವರು ಮಹಾಂತಯ್ಯನಮಠ ಅವರನ್ನು ಹಿಂದಿನಿಂದ ಥಳಿಸಿ, `ಅವರ ಏನಾರಾ ಮಾಡ್ಕಳ್ಳಿ, ನಿಂದೇನು ಮಧ್ಯೆ? ಎಂದು ಮತ್ತೊಮ್ಮೆ ಕಿರಿಕ್ ಮಾಡಿದರು.
ಕೊನೆಗೂ ಪತ್ರಿಕಾಗೋಷ್ಠಿ ಆರಂಭಗೊಂಡಿತು. ಮಾತು ಪ್ರಾರಂಭಿಸಿದ ದರ್ಶನ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾಗೆ ಎಲ್ಲೆಡೆ ಅಧ್ಬುತ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲ ಕಡೆ ೫೦ ನೇ ದಿನದತ್ತ ಚಿತ್ರ ಮುನ್ನುಗ್ಗುತ್ತಿದೆ. ಚಿತ್ರವನ್ನು ಗೆಲ್ಲಿಸಿದ ಚಿತ್ರರಸಿಕರಿಗೆ ಬೆಂಗಳೂರಿನಲ್ಲಿ ಕುಳಿತು ಕೃತಜ್ಞತೆ ಸಲ್ಲಿಸುವುದಕ್ಕಿಂತ ಜನರ ಬಳಿಗೆ ಹೋಗಿ ಅವರನ್ನು ನೋಡಿ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ವಿಜಯಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಇಲ್ಲಿಗೆ ಬರೋದು ೩ ಗಂಟೆ ತಡವಾಗಿದೆ ನಿಜ. ನೀವು ಮೂರು ಗಂಟೆಯಿಂದ ನಮ್ಮನ್ನ ಕಾಯುತ್ತಿರಬಹುದು. ನಾವೇನೂ ಎಲ್ಲ ಕಡೆ ಡ್ಯಾನ್ಸ ಮಾಡ್ತಾ ಕೂಡ್ತಿವಾ? ಎಂದು ಮಾತಿನ ಮಧ್ಯೆ ರೇಗಿದ ದರ್ಶನ್ ಡಬ್ಬಿಂಗ್ ಬಗ್ಗೆ ನಾನೇನೂ ಮಾತಾಡಲ್ಲ, ನಾನು ಬಂದಿರುವುದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಸಲುವಾಗಿ. ಮುಂದೆ ಇದೇ ತಂಡದೊಂದಿಗೆ ಇನ್ನೊಂದು ಸಿನಿಮಾ ಮಾಡೊದನ್ನ ನೋಡ್ತಿನಿ ಎಂದು ಹೇಳಿದರು.
ಚಿತ್ರ ಚೆನ್ನಾಗಿ ಕಲೆಕ್ಷನ್ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಅದನ್ನು ಸರಿಪಡಿಸಲು ಈ ವಿಜಯಯಾತ್ರೆ ಕಾನ್ಸೆಪ್ಟಾ ಎಂದು ಪ್ರಶ್ನೆ ತೂರಿ ಬರುತ್ತಿದ್ದಂತೆ ಕೆಂಡಾಮಂಡಲರಾದ ನಿರ್ಮಾಪಕ ಆನಂದ್ ಅಪ್ಪುಗೋಳ ಈ ರೀತಿ ಪ್ರಶ್ನೆ ಕೇಳುವುದೇ ತಪ್ಪು ಎಂದು ವಾದಿಸಿದರು. ನಾನು ಚಿತ್ರಿಕರಣ ಆರಂಭಕ್ಕೂ ಮುನ್ನವೇ ಹೇಳಿದ್ದೇನೆ. ಈ ಸಿನಿಮಾವನ್ನು ದುಡ್ಡಿಗಾಗಿ ಮಾಡುತ್ತಿಲ್ಲ ಎಂದು. ಆದರೂ ಚಿತ್ರಕ್ಕೆ ಹಾಕಿದ ಬಹುತೇಕ ಬಂಡವಾಳ ಹಿಂತಿರುಗಿದೆ ಎಂದು ವಿವರಿಸಿದರು.
ಕೊನೆಗೂ ಎಲ್ಲರೊಂದಿಗೆ ಊಟ ಮಾಡದ ಚಿತ್ರತಂಡ ತಮ್ಮ ಬಸ್ಸಿನ ಒಳಗಡೆಯೇ ಹೋಗಿ ಊಟ ಮಾಡಿತು. ಇದರಿಂದ ಮುಜುಗರಕ್ಕೊಳಗಾದ ಕೆಲ ಗಣ್ಯರು ಊಟ ಮಾಡದೇ ಅಲ್ಲಿಂದ ಕಾಲ್ಕಿತ್ತರು. ನಂತರ ಟಾಕೀಸಿನ ಕಡೆಗೆ ಬಂದ ದರ್ಶನ್ ಅಭಿಮಾನಿಗಳ ಎದುರು ಫೋಸು ಕೊಟ್ಟರು. ಮೈಕು ಕೈಗೆತ್ತಿಕೊಂಡು ಮಾತು ಆರಂಭಿಸಬೇಕು ಎನ್ನುವಷ್ಟರಲ್ಲಿ ಮೈಕು ಕೂಡಾ ಕೈ ಕೊಟ್ಟಿತು. ಆ ಸಂದರ್ಭದಲ್ಲಿಯೂ ಕೆಂಡ ಕಾರಿದ ದರ್ಶನ್ ಅದನ್ನು ಸರಿಪಡಿಸಲು ವಿಫಲ ಯತ್ನ ಮಾಡಿದರು. ಕೊನೆಗೆ ಅಭಿಮಾನಿಗಳಿಗೆ ಕೈ ಬೀಸಿ ತಲೆಬಾಗಿ ನಮಸ್ಕರಿಸಿ ತೆರಳಿದರು. ದರ್ಶನ್ ಮತ್ತು ಚಿತ್ರತಂಡವನ್ನು ನೋಡಲು ಸಾವಿರಾರು ಜನರು ಸೇರಿದ್ದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ ಕಲ್ಪಿಸಲಾಗಿತ್ತು.
ಯಶಸ್ಸು ನೆತ್ತಿಗೇರಿದೆ :
ದರ್ಶನ್ ದಶಕದ ಹಿಂದೆ ಹೀಗಿರಲಿಲ್ಲ. ಈಗ ಅವರಿಗೆ ಯಶಸ್ಸು ನೆತ್ತಿಗೆ ಹತ್ತಿದೆ. ಅದಕ್ಕೆ ದರ್ಪ ಪ್ರದರ್ಶಿಸುತ್ತಾರೆ. ನಟ ಸೋತಾಗಲೂ, ಗೆದ್ದಾಗಲೂ ಒಂದೇ ರೀತಿ ಇರಬೇಕು. ಕನ್ನಡ ಚಿತ್ರರಂಗದಲ್ಲಿ ಆ ರೀತಿಯ ಮನೋಭಾವ ಬೆಳೆಸಿಕೊಂಡ ಕಲಾವಿದ ಡಾ.ರಾಜಕುಮಾರ ಮಾತ್ರ. ಅಭಿಮಾನಿಗಳೇ ದೇವರು ಎನ್ನುತ್ತಿದ್ದ ರಾಜ್‌ಕುಮಾರ್ ಎಲ್ಲಿ, ಒಂದು ಸಿನಿಮಾ ಗೆದ್ದಿರುವ ಮಾತ್ರಕ್ಕೆ ಸೊಕ್ಕು ಪ್ರದರ್ಶಿಸುತ್ತಿರುವ ದರ್ಶನ್ ಎಲ್ಲಿ. ಯಶಸ್ಸು ಶಾಶ್ವತವಾಗಿ ದರ್ಶನ್ ಬಳಿ ಇರುವುದಿಲ್ಲ. ಅವರಿಗೂ ಸೋಲು ಬರುತ್ತದೆ. ಆಗ ಗೊತ್ತಾಗುತ್ತದೆ ಜನಗಳ ಪ್ರೀತಿ ಎಂಥದ್ದ ಎಂದು. ಸಾರಥಿ ಸಿನಿಮಾ ನೋಡಿ ನಾನು ದರ್ಶನ್ ಅಭಿಮಾನಿಯಾಗಿದ್ದೆ. ಸೋಮವಾರ ಕೊಪ್ಪಳದಲ್ಲಿ ಅವರ ವರ್ತನೆ ಕಂಡು ನಿಜಕ್ಕೂ ಬೇಸರ ಎನಿಸಿದೆ.
-ಶಕ್ಷಾವಲಿ, ಆಟೋ ಚಾಲಕ, ಕೊಪ್ಪಳ.
0 comments:
Post a Comment