: ಸಿಇಓ ಎಸ್. ರಾಜಾರಾಂ ಕರೆ
ಕೊಪ್ಪಳ ಡಿ. ೧೯ : ಬ್ಯಾಂಕ್‌ಗಳು ಸಾರ್ವಜನಿಕರಿಗೆ ಒದಗಿಸುವ ಬ್ಯಾಂಕಿಂಗ್ ಸೇವೆಗಳ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳಿಗೆ ಕರೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ವತಿಯಿಂದ ಸಿದ್ಧಪಡಿಸಲಾದ ೧೨ನೇ ಪಂಚವಾರ್ಷಿಕ ಅವಧಿ (೨೦೧೨-೧೩ ರಿಂದ ೨೦೧೬-೧೭) ಯವರೆಗಿನ ಅವಕಾಶ ಆಧಾರಿತ ಸಾಲ ಯೋಜನಾ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಬ್ಯಾಂಕಿಂಗ್ ವಲಯದಲ್ಲಿ ಇತ್ತೀಚೆಗೆ ಮಹತ್ತರ ಬೆಳವಣಿಗೆಗಳಾಗುತ್ತಿದ್ದು, ಹಲವಾರು ನೀತಿ, ನಿಯಮಗಳಲ್ಲಿ ಬದಲಾವಣೆಗಳಾಗುತ್ತಿವೆ. ಹಿಂದಿನ ದಿನಗಳಲ್ಲಿ ಬ್ಯಾಂಕ್ ವ್ಯವಹಾರವೆಂದರೆ ಕೇವಲ ಸಿರಿವಂತರಿಗೆ ಮಾತ್ರ ಎಂಬ ಧೋರಣೆ ಇತ್ತು. ಆದರೆ ಇತ್ತೀಚಿಗಿನ ಹಣಕಾಸು ನೀತಿಗಳು, ಸರ್ಕಾರದ ಯೋಜನೆಗಳ ಯಶಸ್ಸಿಗೆ ಅನುಕೂಲವಾಗುವಂತೆ ಬ್ಯಾಂಕಿಂಗ್ ಕ್ಷೇತ್ರ ಎಲ್ಲ ವರ್ಗದವರಿಗೂ ಮುಕ್ತಗೊಳ್ಳುವಂತೆ ಅವಕಾಶದ ಬಾಗಿಲು ತೆರೆದಿದೆ. ಸಾರ್ವಜನಿಕರಿಗೆ ವಿತರಿಸಬಹುದಾದ ಸಬ್ಸಿಡಿಯನ್ನು ಆಯಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ. ಇದರಿಂದಾಗಿ ಪ್ರತಿಯೊಬ್ಬರೂ ಬ್ಯಾಂಕಿಂಗ್ ಸೇವೆಗಳ ಬಗ್ಗೆ ಅರಿವು ಹೊಂದುವುದು ಅತ್ಯಗತ್ಯವಾಗಿದೆ. ಕೃಷಿ, ಪಶುಸಂಗೋಪನೆ ಇಲಾಖೆ, ಉದ್ಯೋಗಖಾತ್ರಿ ಮುಂತಾದ ಯೋಜನೆಗಳಡಿ ಬ್ಯಾಂಕ್‌ಗಳು ಸಾರ್ವಜನಿಕರ ವ್ಯವಹಾರಕ್ಕೆ ಮುಕ್ತವಾಗಿ ಕಾರ್ಯನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸರ್ಕಾರದ ಆದೇಶಗಳನ್ವಯ ಶೂನ್ಯ ಬ್ಯಾಲೆನ್ಸ್ ನಲ್ಲಿಯೂ ಬ್ಯಾಂಕ್ ಖಾತೆಯನ್ನು ತೆರೆಯಲು ಬ್ಯಾಂಕ್‌ಗಳು ಸಹಕರಿಸುತ್ತಿವೆ. ಅಲ್ಲದೆ ಅತಿ ಸಣ್ಣ ಗ್ರಾಮಗಳಿಗೂ ಸಹ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್ ಪ್ರಾರಂಭಿಸಿರುವ ಕಿರು ಬ್ಯಾಂಕಿಂಗ್ ಶಾಖೆಗಳು ಸಹ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿವೆ. ಕೃಷಿ ಕ್ಷೇತ್ರ ಸೇರಿದಂತೆ ವಿವಿಧ ಆರ್ಥಿಕ ಚಟುವಟಿಕೆಗಳಿಗೆ ನಿಗದಿತ ಗುರಿಯಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಹೆಚ್ಚಿನ ಸಾಲವನ್ನು ವಿತರಿಸುವ ಮೂಲಕ, ಸಾರ್ವಜನಿಕರ ಆರ್ಥಿಕ ಸದೃಢತೆಗೆ ಸಹಕಾರಿಯಾಗಬೇಕಿದೆ. ಬ್ಯಾಂಕಿಂಗ್ ಸೇವೆಗಳಾಗಿರುವ ಉಳಿತಾಯ, ಸಾಲ, ಹಣ ವರ್ಗಾವಣೆ, ಪಿಂಚಣಿ, ವಿಮೆ ಮುಂತಾದ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಲು ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಬೀದಿ ನಾಟಕ, ಜಾನಪದ ಸಂಗೀತಗಳ ಮೂಲಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಹೇಳಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ವತಿಯಿಂದ ಸಿದ್ಧಪಡಿಸಲಾದ ೧೨ನೇ ಪಂಚವಾರ್ಷಿಕ ಅವಧಿ ಯವರೆಗಿನ ಅವಕಾಶ ಆಧಾರಿತ ಸಾಲ ಯೋಜನೆಯ ಕುರಿತು ವಿವರಣೆ ನೀಡಿದ ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಯೋಗೇಶ್ ಅವರು ಮಾತನಾಡಿ, ೨೦೧೨-೧೩ ರಿಂದ ೨೦೧೬-೧೭ ವರೆಗಿನ ಅವಧಿಯಲ್ಲಿ ಸಂಭವನೀಯ ಬ್ಯಾಂಕಿಂಗ್ ಸಾಲ ನೀಡಬಹುದಾದ ಕ್ಷೇತ್ರಗಳನ್ನು ಗುರುತಿಸಿ, ಯೋಜನೆ ತಯಾರಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಪ್ರತಿ ಎಕರೆಯ ವೆಚ್ಚದಲ್ಲಿ ಹೆಚ್ಚಳವಾಗುತ್ತಿದ್ದು, ಸಾಲ ನೀಡುವ ವ್ಯವಸ್ಥೆಯಲ್ಲಿಯೂ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಕುರಿ, ಮೇಕೆ ಸಾಕಾಣಿಕೆ, ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಸ್ವ-ಸಹಾಯ ಗುಂಪುಗಳಿಗೆ ಸಬ್ಸಿಡಿಯ ಸಾಲ ನೀಡಬಹುದಾದ ಕ್ಷೇತ್ರಗಳ ಬಗ್ಗೆಯೂ ಸಾಲ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರಿನ ಸಹಾಯಕ ಮುಖ್ಯ ಪ್ರಬಂಧಕ ವಿ. ಶ್ರೀನಿವಾಸ್, ಜಿಲ್ಲಾ ಲೀಡ್‌ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್‌ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವೆಂಕಟೇಶ್ವರರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಹಕಾರಿ ಬ್ಯಾಂಕ್, ಪ್ರಗತಿ ಗ್ರಾಮೀಣ ಬ್ಯಾಂಕ್ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಅಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment