ಕೊಪ್ಪಳ : ಚಿಕ್ಕಮಗಳೂರಿನಲ್ಲಿ ಮಂಗಳವಾರ ಸಚಿವ ಸಿ.ಟಿ.ರವಿ ಬೆಂಬಲಿಗರಿಂದ ಜನಶ್ರೀ ಸುದ್ದಿ ವಾಹಿನಿಯ ವರದಿಗಾರ ಪ್ರವೀಣ ಬಾಡಾ ಮೇಲೆ ನಡೆದ ಹಲ್ಲೆಯನ್ನು ಕೊಪ್ಪಳ ಮೀಡಿಯಾ ಕ್ಲಬ್ ಖಂಡಿಸಿದೆ. ಗುರುವಾರ ಈ ಕುರಿತು ಸಭೆ ನಡೆಸಿದ ಮೀಡಿಯಾ ಕ್ಲಬ್ ಇತ್ತಿಚೆಗೆ ರಾಜ್ಯದಲ್ಲಿ ಪತ್ರಕರ್ತರ ಮೇಲೆ ಆಗುತ್ತಿರುವ ಹಲ್ಲೆಗಳು, ದೌರ್ಜನ್ಯದಂಥ ಪ್ರಕರಣಗಳು ಹೆಚ್ಚುತ್ತಿರುವುದು ಸುದ್ದಿಗಾರರಿಗೆ ರಕ್ಷಣೆ ಇಲ್ಲ ಎಂಬುದಕ್ಕೆ ನಿದರ್ಶನ. ಇಂಥ ಘಟನೆಗಳು ಯಾವುದೇ ಭಾಗದ ಪತ್ರಕರ್ತರ ಮೇಲೆ ನಡೆದರೂ ಅದು ಖಂಡನೀಯ ಎಂದು ಸದಸ್ಯರು ಅಭಿಪ್ರಾಯಪಟ್ಟರು.
ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ಸೋಮರಡ್ಡಿ ಅಳವಂಡಿ ಮಾತನಾಡಿ, ಈಚೆಗಷ್ಟೇ ಮಂಗಳೂರಿನಲ್ಲಿ ಕಸ್ತೂರಿ ವಾಹಿನಿಯ ವರದಿಗಾರ ನವೀನ್ ಸೂರಿಂಜೆಯವರನ್ನು ಬಂಧಿಸಿದ ಸರಕಾರದ ಕ್ರಮ ಖಂಡಿಸಿ ರಾಜ್ಯದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆದರೂ ಎಚ್ಚೆತ್ತುಕೊಳ್ಳದ ಸರಕಾರ ಹಾಗೂ ಸಚಿವರು ಮಾಧ್ಯಮದವರ ವಿರುದ್ಧ ಬಲಪ್ರಯೋಗ ಮಾಡುತ್ತಿರುವುದು ಖೇದನೀಯ. ಇಂಥ ಘಟನೆಗಳು ನಡೆದಾಗ ಖಂಡನಾ ಸಭೆ, ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಕೊಟ್ಟರೆ ಸಾಲದು. ಇಂಥ ಪ್ರಕರಣಗಳು ಮರುಕಳಿಸದಂತೆ ಸರಕಾರ ಎಚ್ಚರಿಕೆ ವಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯರ ಮೇಲೆ ಹಲ್ಲೆಯಂತ ಪ್ರಕರಣಗಳು ಹೆಚ್ಚಾದಾಗ ಸರಕಾರ ತಿದ್ದುಪಡಿ ತಂದು ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಅಂಥ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಹಾಗೂ ದಂಡ ವಿಧಿಸುವ ಕಾನೂನನ್ನು ತರಲಾಯಿತು. ಈಗ ವೈದ್ಯರು ನಿರಾಂತಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದುಷ್ಕರ್ಮಿಗಳ ಕಣ್ಣು ಇದೀಗ ಮಾಧ್ಯಮದವರ ಮೇಲೆ ಬಿದ್ದಿರುವಂತೆ ಕಾಣುತ್ತದೆ. ಹಗಲಿರುಳು ಸುದ್ದಿಗಾಗಿ ಶ್ರಮಿಸುವ ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಸುದ್ದಿಗಾರರಿಗೆ ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಬೇಕೆಂದರೆ ಸಂವಿಧಾನದಲ್ಲಿ ತಿದ್ದುಪಡಿ ತಂದು ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಸಭೆಯ ನಂತರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಚಿಕ್ಕಮಗಳೂರಿನಲ್ಲಿ ಮಾದ್ಯಮದವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮೀಡಿಯಾ ಕ್ಲಬ್‌ನ ಸದಸ್ಯರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಠ್ಠಪ್ಪ ಗೋರಂಟ್ಲಿ, ಬಸವರಾಜ ಶೀಲವಂತರ್, ಶರಣಪ್ಪ ಬಾಚಲಾಪುರ, ಭೀಮಸೇನ ಚಳಗೇರಿ, ಶರಣಪ್ಪ ಕೊತಬಾಳ, ಬಸವರಾಜ ಕರುಗಲ್, ಗಂಗಾಧರ ಬಂಡಿಹಾಳ, ದೇವು ನಾಗನೂರ, ಬಸವರಾಜ ಬಿನ್ನಾಳ, ಮೌನೇಶ ಬಡಿಗೇರ, ಶರಣಬಸವ ಹುಲಿಹೈದರ್, ತಿಪ್ಪನಗೌಡ ಮಾಲೀಪಾಟೀಲ್, ಶ್ರೀಪಾದ ಅಯಾಚಿತ್, ನಾಭಿರಾಜ ದಸ್ತೇನವರ್, ನಾಗರಾಜ ಹಿರೇಮಠ, ವೆಂಕಟೇಶ ದೇಸಾಯಿ, ಪ್ರಕಾಶ ಕಂದಕೂರ, ಈರಣ್ಣ ಬಡಿಗೇರ, ಸಿರಾಜ್ ಬಿಸರಳ್ಳಿ, ದೊಡ್ಡೇಶ ಯಲಿಗಾರ, ಗುರುರಾಜ.ಬಿ.ಆರ್., ಮಲ್ಲಿಕಾರ್ಜುನಸ್ವಾಮಿ, ಹುಸೇನ್‌ಪಾಷಾ, ಪರಶುರಾಮ ಮತ್ತಿತರರು ಇದ್ದರು.
0 comments:
Post a Comment