PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಡಿ. ೧೯   ಸದಾ ಒತ್ತಡದ ನಡುವೆ ಕಾರ್ಯ ನಿರ್ವಹಿಸುವವರಿಗೆ ಕ್ರೀಡಾ ಕೂಟಗಳು ಕರ್ತವ್ಯ ದಕ್ಷತೆಯನ್ನು ಪುನಶ್ಚೇತನಗೊಳಿಸಿ, ಆತ್ಮಸ್ಥೈರ್ಯ ವೃದ್ಧಿಸಲು ಸಹಕಾರಿಯಾಗಿವೆ ಎಂದು ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಎಸ್.ಸವಡಿ ಅವರು ಹೇಳಿದರು.
  ಕೊಪ್ಪಳ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಪೊಲೀಸರು ಹಾಗೂ ವೈದ್ಯರು ಸದಾ ಒತ್ತಡದ ನಡುವೆ ಕಾರ್ಯ ನಿರ್ವಹಿಸಬೇಕಾಗುತ್ತದೆ,  ಅಲ್ಲದೆ ದಿನದ ೨೪ ಗಂಟೆಗಳೂ ಸಹ ಅವರು ಸಾರ್ವಜನಿಕರ ಸೇವೆಗೆ ಸನ್ನದ್ಧರಾಗಿರಬೇಕಾಗುತ್ತದೆ.  ಈ ರೀತಿಯ ಮಾನಸಿಕ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುವವರಿಗೆ ಇಂತಹ ಕ್ರೀಡಾಕೂಟಗಳು ಮನಸ್ಸನ್ನು ಉಲ್ಲಸಿತಗೊಳಿಸುವುದರ ಜೊತೆಗೆ, ಅವರಲ್ಲಿ ಆತ್ಮ ಸ್ಥೈರ್ಯ ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ.  ನಮ್ಮ ದೇಶದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಈ ಹಿಂದಿಗಿಂತಲೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.  ಕ್ರೀಡಾಕ್ಷೇತ್ರದಲ್ಲಿ ಉತ್ತಮ ಸಾಧನೆಗೈದವರಿಗೆ ಉನ್ನತ ಸ್ಥಾನಮಾನ, ಗೌರವ ದೊರೆಯುತ್ತಿದೆ.  ಪೊಲೀಸರು, ಮಾನಸಿಕ ಆರೋಗ್ಯದ ಜೊತೆ ಜೊತೆಗೆ ದೈಹಿಕ ಸದೃಢತೆಯನ್ನು ಕಾಯ್ದುಕೊಂಡು ಬರಬೇಕಾಗುತ್ತದೆ.  ಈ ನಿಟ್ಟಿನಲ್ಲಿ ಕ್ರೀಡೆಗಳು ದೇಹಕ್ಕೆ ಶಕ್ತಿ ಹಾಗೂ ಸ್ಪೂರ್ತಿ ನೀಡುತ್ತವೆ.  ಕ್ರೀಡಾಕೂಟದಲ್ಲಿ ಸೋಲು, ಗೆಲುವಿನ ಬಗ್ಗೆ ವಿಮರ್ಶೆ ನಡೆಸದೆ, ಕ್ರೀಡಾ ಮನೋಭಾವನೆಯಿಂದ ಭಾಗವಹಿಸುವಿಕೆಗೆ ಮಹತ್ವ ನೀಡಬೇಕು ಎಂದು ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಎಸ್.ಸವಡಿ ಅವರು ಹೇಳಿದರು.
  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್ ಅವರು ಪ್ರಾರಂಭದಲ್ಲಿ ಸ್ವಾಗತ ಭಾಷಣ ನೆರವೇರಿಸಿ, ಪೊಲೀಸರಲ್ಲಿನ ಮಾನಸಿಕ ಒತ್ತಡದ ನಿವಾರಣೆಗೆ, ದೈಹಿಕ ಕ್ಷಮತೆಯ ಸಾಬೀತಿಗೆ ಕ್ರೀಡಾಕೂಟಗಳನ್ನು ಪೊಲೀಸ್ ಇಲಾಖೆ ಆಯೋಜಿಸುತ್ತಿದೆ ಎಂದರು.
  ಕುಷ್ಟಗಿ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ವಿರುಪಾಕ್ಷಪ್ಪ ಅವರು ಕ್ರೀಡಾ ಜ್ಯೋತಿಯನ್ನು ಉದ್ಘಾಟಕರಿಗೆ ಹಸ್ತಾಂತರಿಸಿದರು, ಪರೇಡ್ ಕಮಾಂಡರ್ ಅವರು ಕ್ರೀಡಾಳುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.  ಶಿವಮೊಗ್ಗದಲ್ಲಿ ಕಳೆದ ವರ್ಷ ಕರ್ತವ್ಯ ನಿರತರಾಗಿರುವಾಗ ಮರಣಹೊಂದಿದ ಕೊಪ್ಪಳ ನಗರ ಠಾಣೆಯ ಪೊಲೀಸ್ ಪೇದೆ ರಂಗನಾಥ ಅವರ ಪಾಲಕರಿಗೆ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಂದ ರೂ. ೬೦೦೦೦ ಗಳ ಸಹಾಯಧನವನ್ನು ವಿತರಣೆ ಮಾಡಲಾಯಿತು.  ಕೊಪ್ಪಳ ಡಿವೈಎಸ್‌ಪಿ ಸುರೇಶ್ ಮಸೂತಿ ಅವರು ವಂದನಾರ್ಪನೆ ನೆರವೇರಿಸಿದರು.

Advertisement

0 comments:

Post a Comment

 
Top