ಹೈದರಾಬಾದ್-ಕರ್ನಾಟಕ ವಿಶೇಷ ಸ್ಥಾನಮಾನ ವಿಷಯ ಇದೀಗ ಅನಗತ್ಯ ರಾಜಕಾರಣದಿಂದಾಗಿ ವಿವಾದಕ್ಕೊಳಗಾಗಿದೆ. ರಾಜಕೀಯಗಳ ಬಲಿಪಶುವೆಂದೇ ಗುರುತಿಸಲ್ಪಟ್ಟಿರುವ ಹೈದರಾಬಾದ್-ಕರ್ನಾಟಕ ಭಾಗದ ಜನರು ಇದೀಗ ಸ್ವತಃ ತನ್ನವರಿಂದಲೇ ಮತ್ತೊಮ್ಮೆ ಅನ್ಯಾಯಕ್ಕೊಳಗಾಗಿದ್ದಾರೆ. ಸಂವಿಧಾನದ 371ನೆ ಕಲಂಗೆ ತಿದ್ದುಪಡಿ ತರುವ ಮೂಲಕ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಮಸೂದೆಗೆ ಸ್ವತಃ ರಾಜ್ಯ ಸರಕಾರವೇ ಅಡ್ಡಗಾಲು ಹಾಕಿದೆ. ಈ ಮಸೂದೆಯಲ್ಲಿ ತಿದ್ದುಪಡಿ ತರುವಂತೆ ಗೃಹಖಾತೆ ವ್ಯವಹಾರ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸಲಹೆ ನೀಡಿದೆ. ಇಷ್ಟೆಲ್ಲ ಮಾಡಿದ ಬಳಿಕ, ರಾಜ್ಯ ಸರಕಾರ ‘‘ಆಂಧ್ರಪ್ರದೇಶದ ತೆಲಂಗಾಣದ ಮಾದರಿಯಲ್ಲಿ ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಗಬೇಕು’’ ಎಂದು ಹೇಳುತ್ತಿದೆ. ಇದೊಂದು ರೀತಿಯಲ್ಲಿ ಕೇಂದ್ರ ಮತ್ತು ರಾಜ್ಯದ ನಡುವಿನ ಮುಸುಕಿನ ಗುದ್ದಾಟವಾಗಿದೆ. ಜಗಳದಲ್ಲಿ ಹೈದರಾಬಾದ್-ಕರ್ನಾಟಕವೆನ್ನುವ ಕೂಸು ಇನ್ನಷ್ಟು ಬಡವಾಗುವ ಹಂತದಲ್ಲಿದೆ.ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಮುಂದಾಗುತ್ತಿರುವಾಗ, ಅದನ್ನು ಪರಿಶೀಲಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇದ್ದೇ ಇದೆ.
ಆದರೆ ಪರಿಶೀಲನೆಯ ಹೆಸರಿನಲ್ಲಿ ಹೈದರಾಬಾದ್- ಕರ್ನಾಟಕದ ಜನರಿಗೆ ಸಿಕ್ಕುವ ಅವಕಾಶವನ್ನು ತಪ್ಪಿಸುವ ಬದಲು ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತಂತೆ ಉಳಿದ ಪಕ್ಷಗಳೊಂದಿಗೆ ಚರ್ಚೆ ನಡೆಸುವ ಅಗತ್ಯವಿತ್ತು. ಆದರೆ ರಾಜ್ಯ ತನ್ನ ತಕರಾರನ್ನು ಗುಟ್ಟಾಗಿ ಸಲ್ಲಿಸಿದೆ. ರಾಜ್ಯದ ಪ್ರಕಾರ ಹೈದರಾಬಾದ್-ಕರ್ನಾಟಕ ಭಾಗದ ಜನರಿಗೆ ಶಿಕ್ಷಣ, ಉದ್ಯೋಗದಲ್ಲಿ ಸ್ಥಳೀಯವಾಗಿ ಮೀಸಲಾತಿ ಸಿಕ್ಕರೆ ಸಾಕು. ‘ಪ್ರಾದೇಶಿಕ ಅಭಿವೃದ್ಧಿ ಮಂಡಳಿ’ ಸ್ಥಾಪಿಸುವ ಅಗತ್ಯವಿಲ್ಲ. ಅಭಿವೃದ್ಧಿ ಯೋಜನೆ ಬೇಕು.
ಆದರೆ ಅದಕ್ಕಾಗಿ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಬೇಡ ಎನ್ನುವುದು ರಾಜ್ಯ ಸರಕಾರದ ತಕರಾರು. ಇದರ ಕಾರಣವೂ ಸ್ಪಷ್ಟ. ಆರು ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ರಚಿಸಲಾಗುವ ‘ಪ್ರಾದೇಶಿಕ ಅಭಿವೃದ್ಧಿ ಮಂಡಳಿ’ ರಾಜ್ಯಪಾಲರ ನಿಯಂತ್ರಣಕ್ಕೆ ಒಳಪಡುತ್ತದೆ ಎಂಬುದೇ ರಾಜ್ಯ ಸರಕಾರದ ಭಯ. ಬೀದರ್, ಗುಲ್ಬರ್ಗಾ, ರಾಯಚೂರು, ಯಾದಗಿರಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಲು ಕೇಂದ್ರ ಸರಕಾರ ಮಸೂದೆಯನ್ನು ರೂಪಿಸಿದೆ. ಈ ತಿದ್ದುಪಡಿಯನ್ನು 371 ಜೆ ಎಂದು ಗುರುತಿಸಲಾಗಿದೆ. ಆರ್ಥಿಕ ಮತ್ತು ಭೌಗೋಳಿಕ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯನ್ನು ರಚಿಸಲು ರಾಜ್ಯಪಾಲರಿಗೆ ಅಧಿಕಾರ ನೀಡಿದೆ.
ರಾಜ್ಯ ಸರಕಾರಕ್ಕೆ ಇದು ನುಂಗಲಾರದ ತುತ್ತಾಗಿದೆ. ಈ ತಿದ್ದುಪಡಿಯಿಂದಾಗಿ ಆರು ಜಿಲ್ಲೆಗಳ ಮೇಲೆ ತನ್ನ ಹಿಡಿತ ತಪ್ಪಿ ಬಿಡಬಹುದು ಎನ್ನುವುದು ರಾಜ್ಯ ಸರಕಾರದ ಭಯ. ಹಿಂದುಳಿದಿರುವ ಆರು ಜಿಲ್ಲೆಗಳ ಅಭಿವೃದ್ಧಿಗಾಗಿ ಕೆಲಸ ಮಾಡಲು ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಎಂಬ ಪ್ರತ್ಯೇಕ ರಚನೆಯ ಅಗತ್ಯವಿಲ್ಲ. ವಿಶೇಷ ಅಭಿವೃದ್ಧಿಯ ಯೋಜನೆಯನ್ನು ರೂಪಿಸಿ ಜಾರಿಗೆ ತಂದರೆ ಸಾಕು ಎಂದಿರುವ ರಾಜ್ಯ ಸರಕಾರ ತನ್ನ ನಿರ್ಧಾರಕ್ಕೆ ಡಾ. ಡಿ.ಎಂ.ನಂಜುಂಡಪ್ಪ ಸಮಿತಿಯನ್ನು ಸಮರ್ಥನೆಯಾಗಿ ಇಟ್ಟಿದೆ. ಅದೇನೇ ಇರಲಿ.
ರಾಜ್ಯ ಸರಕಾರದ ತಕರಾರಿನಿಂದಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಇನ್ನಷ್ಟು ಮುಂದೆ ಹೋದಂತಾಗಿದೆ. ಈಗಾಗಲೇ ಬಾಯಿಯವರೆಗೆ ಬಂದ ವಿಶೇಷ ಸ್ಥಾನಮಾನ ಕೈತಪ್ಪಿದರೆ ಅದರ ಪರಿಣಾಮ ಇನ್ನಷ್ಟು ಕೆಟ್ಟದಾಗುತ್ತದೆ. ಈಗಾಗಲೇ ಉತ್ತರಕರ್ನಾಟಕದ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಇದರಿಂದ ಕುಮ್ಮಕ್ಕು ನೀಡಿದಂತಾಗಿದೆ. ಆದುದರಿಂದ ತನ್ನ ಹೇಳಿಕೆಯನ್ನು ಒಂದೋ ರಾಜ್ಯ ಸರಕಾರ ಹಿಂದಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ, ತನ್ನ ನಿರ್ಧಾರಕ್ಕೆ ಏನು ಕಾರಣ ಎನ್ನುವುದನ್ನು ರಾಜ್ಯದ ಜನತೆಯ ಮುಂದೆ ಸ್ಪಷ್ಟಪಡಿಸಬೇಕು. ಈಗಾಗಲೇ ಈ ವಿಷಯವನ್ನು ಹಿಡಿದುಕೊಂಡು ವಿರೋಧ ಪಕ್ಷಗಳು ರಾಜಕೀಯ ಮಾಡಲು ಆರಂಭಿಸಿದೆ.
ಉತ್ತರ ಕರ್ನಾಟಕದಲ್ಲಿ ಬಂದ್‌ನ್ನೂ ಆಚರಿಸಲಾಗಿದೆ. ಆದರೆ ಇದಾವುದೂ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ರಾಜ್ಯ ಸರಕಾರ ವರ್ತಿಸುತ್ತಿದೆ. ಸದ್ಯಕ್ಕೆ ನಮಗೆ ಬೇಕಾಗಿರುವುದು ಉತ್ತರ ಕರ್ನಾಟಕದ ಅಭಿವೃದ್ಧಿ. ಈವರೆಗೆ ಜನಪ್ರತಿನಿಧಿಗಳು ಉತ್ತರಕರ್ನಾಟಕಕ್ಕೆ ಏನು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಬೆಂಗಳೂರಿನಲ್ಲಿ ಕುಳಿತು ಉತ್ತರ ಕರ್ನಾಟಕದ ಬಗ್ಗೆ ಗಮನ ಹರಿಸುವುದು ಸಾಧ್ಯವಿಲ್ಲ ಎನ್ನುವುದನ್ನು ಎಲ್ಲ ಪಕ್ಷಗಳೂ ಸಾಬೀತು ಮಾಡಿವೆ. ಆದುದರಿಂದ, ಪ್ರತ್ಯೇಕವಾದ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಮೂಲಕವೇ ಹೈದರಾಬಾದ್- ಕರ್ನಾಟಕಕ್ಕೆ ಸಲ್ಲಬೇಕಾದ ಸೌಲಭ್ಯಗಳನ್ನು ಒದಗಿಸುವುದು ಒಳಿತು.
ಎಲ್ಲ ಪಕ್ಷಗಳೂ ಸೇರಿಸಿಕೊಂಡು ಕರ್ನಾಟಕ ರಾಜ್ಯ ಸರಕಾರವನ್ನು ಮನವೊಲಿಸಿ, ಅದನ್ನೂ ಇದರಲ್ಲಿ ಪಾಲುದಾರ ವನ್ನಾಗಿ ಮಾಡಿಕೊಂಡು ಹೈದರಾಬಾದ್- ಕರ್ನಾಟಕದ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು. ತೆಲಂಗಾಣ ಮಾದರಿಯ ಅಭಿವೃದ್ಧಿ ಎಂದು ಹೇಳುತ್ತಾ, ಹೈದರಾಬಾದ್- ಕರ್ನಾಟಕವನ್ನು ಇನ್ನೊಂದು ತೆಲಂಗಾಣ ಮಾಡುವುದು ಬೇಡ. - ವಾರ್ತಾಭಾರತಿ ಸಂಪಾದಕೀಯ
0 comments:
Post a Comment