: ಸಿದ್ದರಾಮಯ್ಯ
ಬಳ್ಳಾರಿ, ನ. 25: ಆರ್ಥಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೆ ಕಲಂಗೆ ತಿದ್ದುಪಡಿ ಸಂಬಂಧ ರಾಜ್ಯ ಸರಕಾರ ಕೇಂದ್ರಕ್ಕೆ ಪತ್ರ ಬರೆದಿರುವುದು ಜನದ್ರೋಹಿ ಕ್ರಮ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡಲೇ ಕೇಂದ್ರಕ್ಕೆ ಮತ್ತೊಂದು ಪತ್ರ ಬರೆದು ಮಸೂದೆ ಅಂಗೀಕಾರಕ್ಕೆ ಒಪ್ಪಿಗೆ ನೀಡಬೇಕು. ಆ ಮೂಲಕ ಹೈಕ ಭಾಗದ ಜನತೆಯ ದಶಕಗಳ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.ಸಂಸತ್‌ನಲ್ಲಿ ಮಸೂದೆ ಮಂಡನೆಯಾಗಿ ಒಪ್ಪಿಗೆಗೆ ಕಾದಿರುವ ಸಂದರ್ಭದಲ್ಲಿ ರಾಜ್ಯ ಸರಕಾರ ಪತ್ರ ಬರೆಯುವ ಮೂಲಕ ಅನಗತ್ಯ ವಿವಾದ ಸೃಷ್ಟಿಸಿದೆ ಎಂದ ಸಿದ್ದರಾಮಯ್ಯ, ರಾಜಕೀಯ ದುರುದ್ದೇಶದಿಂದ ಹೀಗೆ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
371ನೆ ಕಲಂಗೆ ತಿದ್ದುಪಡಿ ಮಾಡುವ ಸಂಬಂಧ ಕೇಂದ್ರ ರಾಜ್ಯ ಸರಕಾರವನ್ನು ಸಂಪರ್ಕಿಸಿಲ್ಲ ಎಂದು ರಾಜ್ಯಸಭಾ ಸದಸ್ಯ ವೆಂಕಯ್ಯನಾಯ್ಡು ಕೇಂದ್ರಕ್ಕೆ ಪತ್ರ ಬರೆಯುವ ಮೂಲಕ ಹೈಕ ಪ್ರದೇಶದ ಜನತೆಗೆ ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಪ್ರಸ್ತುತ ಚಳಿಗಾಲದ ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ದೊರೆಯಬೇಕು ಎಂದು ಹೇಳಿದರು.
ಕೇಂದ್ರ ಸರಕಾರ ಹೈಕ ಪ್ರದೇಶದ ಜನರ ಅಭಿವೃದ್ಧಿಗೆ ಮುಂದಾಗಿರುವ ಸಂದರ್ಭದಲ್ಲಿ ರಾಜ್ಯ ಸರಕಾರ ಅನಗತ್ಯ ಕ್ಯಾತೆ ತೆಗೆಯುತ್ತಿರುವುದು ಸರಿಯಲ್ಲ ಎಂದ ಸಿದ್ದರಾಮಯ್ಯ, ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಬೆರೆಸಲು ಯಾರು ಕೂಡ ಆಲೋಚಿಸಬಾರದು ಎಂದು ಮನವಿ ಮಾಡಿದರು.
0 comments:
Post a Comment