ಮುಂಬೈ, ನ. 21: 26/11 ಮುಂಬೈ ದಾಳಿಯ ಅಪರಾಧಿ ಪಾಕಿಸ್ತಾನದ ಉಗ್ರ ಮುಹಮ್ಮದ್ ಅಜ್ಮಲ್ ಅಜ್ಮಲ್ ಅಮೀರ್ ಕಸಬ್‌ನನ್ನು ಬುಧವಾರ ಬೆಳಗ್ಗೆ ಗಲ್ಲಿಗೇರಿಸಲಾಯಿತು.
ಇಂದು ಬೆಳಗ್ಗೆ 7:30ಕ್ಕೆ ಅತ್ಯಂತ ಗೌಪ್ಯವಾಗಿ ಪುಣೆಯ ಯರವಾಡ ಜೈಲಿನಲ್ಲಿ ಈತನನ್ನು ಗಲ್ಲಿಗೇರಿಸಲಾಯಿತು. ರಾಷ್ಟ್ರಪತಿ ಪ್ರಣವ್ ಮುಖರ್ಜಿ ನ.5ರಂದೇ ಕಸಬ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚು ಕಾಲಾವಕಾಶ ನೀಡದೆ ಕಸಬ್‌ನನ್ನು ಗಲ್ಲಿಗೇರಿಸಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಕಸಬ್‌ನನ್ನು ಗಲ್ಲಿಗೆ ಹಾಕುವುದನ್ನು ಗೌಪ್ಯವಾಗಿಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಅಜ್ಮಲ್ ಕಸಬ್ ಸತ್ತಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೃಹ ಸಚಿವರುಗಳಿಂದ ದೃಢ: ಉಗ್ರ ಅಜ್ಮಲ್ ಕಸಬ್‌ನನ್ನು ಗಲ್ಲಿಗೇರಿಸಿರುವುದನ್ನು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹಾಗೂ ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್. ಪಾಟೀಲ್ ದೃಢಪಡಿಸಿದ್ದಾರೆ.
ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮಾತನಾಡಿ, ಕಸಬ್‌ನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಅರ್ಥರ್ ರೋಡ್ ಜೈಲಿನಿಂದ ಪುಣೆಯ ಯರವಾಡ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಇಂದು ಬೆಳಗ್ಗೆ 7:30ಕ್ಕೆ ಆತನನ್ನು ಗಲ್ಲಿಗೇರಿಸಲಾಯಿತು ಎಂದು ತಿಳಿಸಿದರು.
ಆತನನ್ನು ಗಲ್ಲಿಗೇರಿಸುವ ವಿಷಯದ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ, ಅವರು ಆತನ ಶವವನ್ನು ನೀಡಲು ಯಾವುದೇ ಕೋರಿಕೆ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಆತನ ಅಂತ್ಯಕ್ರಿಯೆಯನ್ನು ಭಾರತದಲ್ಲೇ ನಡೆಸಲಾಗುವುದು ಎಂದರು.
ಕಸಬ್‌ನನ್ನು ಗಲ್ಲಿಗೇರಿಸುವ ಬಗ್ಗೆ ರಹಸ್ಯ ಕಾಪಾಡುವುದು ಅನಿವಾರ್ಯವಾಗಿತ್ತು ಎಂದು ಅವರು ತಿಳಿಸಿದರು.
0 comments:
Post a Comment