ಕೊಪ್ಪಳ.ನ.೧೦: ಇಂದಿನ ಸ್ಪರ್ಧಾತ್ಮಕ, ಜಾಗತಿಕ ಯುಗದಲ್ಲಿ ಶಿಕ್ಷಣವಿಲ್ಲದೇ ಬದುಕಿಲ್ಲದ ಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಅರಿತು ಇಂದಿನ ಮಕ್ಕಳು ಶಿಕ್ಷಣದ ಅಗತ್ಯತೆಯನ್ನು ಅರಿತು ಉತ್ತಮ ಗುಣಮಟ್ಟ ಶಿಕ್ಷಣ ಪಡೆದುಕೊಳ್ಳುವಲ್ಲಿ ಮುಂದಾಗಲು ಶಾಸಕ ಸಂಗಣ್ಣ ಕರಡಿ ಕರೆ ನೀಡಿದರು.
ವರು ನಗರದ ಬನ್ನಿಕಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಮಕ್ಕಳನ್ನು ಶಾಲೆಗೆ ಕರೆತರಲು, ಹೆಚ್ಚಿನ ಹಾಜರಾತಿ ಹೆಚ್ಚಿಸಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಈ ಸೈಕಲ್ ವಿತರಣೆಯು ಒಂದಾಗಿದ್ದು, ಇದು ಕಳೆದ ೨೦೦೬-೦೭ರಿಂದ ಕಾರ್ಯಕ್ರಮ ಜಾರಿಯಲ್ಲಿದ್ದು, ಇದನ್ನು ಅನುಷ್ಠಾನಗೊಳಿಸಿದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಕೀರ್ತಿ ಸಲ್ಲಬೇಕು. ಇದಲ್ಲದೇ ಇನ್ನು ಹಲವಾರು ಕಾರ್ಯಕ್ರಮಗಳು ಸರಕಾರದಿಂದ ಜಾರಿಯಾಗುತ್ತಿದೆ. ಇದರಿಂದ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಅಲ್ಲದೇ ಹೆಚ್ಚಿನ ಅನುಕೂಲಗಳನ್ನು ಒದಗಿಸುವಲ್ಲಿ ಶಾಲೆಯ ಸಿಬ್ಬಂದಿಯವರು ಪ್ರಯತ್ನಿಸಬೇಕೆಂದು ಕರೆ ನೀಡಿದ ಅವರು, ಇದಲ್ಲದೇ ಮಕ್ಕಳು ಶಿಕ್ಷಣದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಲು ಮುಂದಾಗಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳು ತಾವು ಪಡೆದ ಶಿಕ್ಷಣಕ್ಕೆ ಅರ್ಥ ದೊರೆತಂತಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಸ್ಥಿತಿಯನ್ನು ಮನಗಂಡು ಶಿಕ್ಷಕರು ಮಕ್ಕಳಿಗೆ ಬೋಧಿಸಬೇಕು. ಇದಲ್ಲದೇ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ವೈಯಕ್ತಿಕವಾಗಿ ಗಮನಹರಿಸಿ ಅವರ ನ್ಯೂನತೆಗಳನ್ನು ಹೋಗಲಾಡಿಸಲು ಶಿಕ್ಷಕರು ಹೆಚ್ಚಿನ ಕಾಳಜಿವಹಿಸಿದಲ್ಲಿ ಅವರನ್ನು ಉತ್ತಮ ನಾಗರಿಕರಾಗಿ ಸಮಾಜಕ್ಕೆ ಪರಿಚಯಿಸಲು ಸಾಧ್ಯವಾಗುತ್ತದೆ ಎಂದರು.
ಕೊಪ್ಪಳ ನಗರದಲ್ಲಿಯೇ ಬನ್ನಿಕಟ್ಟಿ ಸರಕಾರಿ ಪ್ರೌಢಶಾಲೆಯು ತನ್ನ ವಿಶಿಷ್ಟತೆಯನ್ನು ಕಾಪಾಡಿಕೊಂಡು ಬಂದಿದೆ. ಇಲ್ಲಿನ ವಾತಾವರಣ, ಶೈಕ್ಷಣಿಕ ಗುಣಮಟ್ಟ ಅಲ್ಲದೇ ಇತರೇ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುತ್ತಿರುವುದು ನೋಡಿದರೆ ತುಂಬಾ ಸಂತೋಷವಾಗುತ್ತದೆ. ಇದಕ್ಕೆಲ್ಲಾ ಶ್ರಮಿಸುತ್ತಿರುವ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಪರಮಾನಂದ ಯಾಳಗಿ, ಸದಸ್ಯರು ಹಾಗೂ ಶಿಕ್ಷಕ ವೃಂದದ ಕಾರ್ಯ ನಿಜಕ್ಕೂ ಶ್ಲಾಘನೀಯ. ಪ್ರತಿಯೊಬ್ಬರು ಶಿಕ್ಷಣದ ಕಾಳಜಿ ಹೊಂದಿರುವುದರಿಂದಲೇ ಈ ಶಾಲೆ ಇಷ್ಟು ಸುಂಧರವಾಗಲು ಸಾಧ್ಯವಾಗಿದ್ದು, ಇದರಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಲಿ ಎಂದು ಹಾರೈಸಿದರು.
ಕೊಪ್ಪಳ ಮೆಡಿಕಲ್ ಕಾಲೇಜ್ : ಕೊಪ್ಪಳದ ಕನಸಿನ ಕೂಸಾಗಿದ್ದ ಮೆಡಿಕಲ್ ಕಾಲೇಜ್ ಕೊಪ್ಪಳಕ್ಕೆ ದೊರಕಿರುವುದು ಹಲವು ದಿನಗಳ ಕನಸು ನನಸಾದಂತಾಗಿದೆ. ಇಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಬೇರೆಡೆಗೆ ಹೋಗಿ ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದರು. ಇದನ್ನು ತಪ್ಪಿಸಲು ಈಗ ಕೊಪ್ಪಳಕ್ಕೆ ಮೆಡಿಕಲ್ ಕಾಲೇಜ್ ದೊರಕಿರುವುದು ಸಂತೋಷದ ಸಂಗತಿ. ಅಂದಾಜು ೨೦೦ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುವ ಮೆಡಿಕಲ್ ಕಾಲೇಜ್‌ಗೆ ಕೇಂದ್ರ ಸರಕಾರವು ೭೫% ಪ್ರತಿಶತ ಹಾಗೂ ರಾಜ್ಯ ಸರ್ಕಾರ ೨೫% ಪ್ರತಿಶತ ಅನುದಾನ ನೀಡಲಿದ್ದು, ಇದರಿಂದ ಈ ಭಾಗಕ್ಕೆ ಆರೋಗ್ಯಕರ ವಾತಾವರಣ ನೀಡಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸ್ವಾಮಿ ಮಾತನಾಡಿ, ಇಡೀ ರಾಜ್ಯದಲ್ಲೇ ಕೊಪ್ಪಳ ಜಿಲ್ಲೆಯು ಕಳೆದ ವರ್ಷದ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ೨೦ನೇ ಸ್ಥಾನದಲ್ಲಿತ್ತು, ಆದರೆ ಈ ಬಾರಿ ಅದು ೨೬ನೇ ಸ್ಥಾನಕ್ಕೆ ಹಿಂದೆ ಸರಿದಿದ್ದು, ಇದನ್ನು ಸರಿಪಡಿಸಲು ಇಲಾಖೆಯಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕಾಗಿಯೇ ಶಿಕ್ಷಕರಿಗೆ ಹೆಚ್ಚಿನ ಮುತುವರ್ಜಿವಹಿಸಲು ತರಬೇತಿಗಳನ್ನು ಆಯೋಜಿಸಲಾಗುತ್ತಿದ್ದು, ಉತ್ತಮ ಫಲಿತಾಂಶಕ್ಕೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಶ್ರಮಿಸಲು ಕರೆ ನೀಡಿದರು.
ಶಾಲೆಯ ಸುಧಾರಣಾ ಸಮಿತಿಯ ಅಧ್ಯಕ್ಷ ಪರಮಾನಂದ ಯಾಳಗಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಈ ಶಾಲೆಯು ಪ್ರೌಢಶಾಲೆಯಾಗುವಲ್ಲಿ ಶಾಸಕರ ಪಾತ್ರ ಮಹತ್ವದ್ದಾಗಿದ್ದು, ಇನ್ನು ಹೆಚ್ಚಿನ ಅನುಕೂಲ ಈ ಶಾಲೆಗೆ ಒದಗಿಸಿ ಶೈಕ್ಷಣಿಕ ಗುಣಮಟ್ಟದ ಹೆಚ್ಚಿಸುವಲ್ಲಿ ತಮ್ಮ ಸಹಾಯ ಸಹಕಾರ ನೀಡಬೇಕೆಂದು ಮನವಿ ಮಾಡುತ್ತಾ, ಮುಂದಿನ ದಿನಗಳಲ್ಲಿ ಈ ಶಾಲೆಗೆ ಹೆಚ್ಚಿನ ಕೊಠಡಿಗಳ ಅವಶ್ಯಕತೆ ಇದ್ದು, ತಮ್ಮ ಶಾಸಕರ ಅನುದಾನದಲ್ಲಿ ಹೆಚ್ಚಿನ ಅನುದಾನ ಒದಗಿಸಿ ಶಾಲೆಯ ವಾತಾವರಣವನ್ನು ಶುಚ್ಚಿತ್ವವಾಗಿಟ್ಟುಕೊಳ್ಳಲು ಕಂಪೌಂಡ್ ನಿರ್ಮಾಣ ಅವಶ್ಯಕವಾಗಿದ್ದು, ಅನುದಾನ ಒದಗಿಸುವಂತೆ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯರಾದ ಮಹಾಂತೇಶ ಮೈನಳ್ಳಿ, ಮಾಜಿ ಜಿ.ಪಂ.ಅಧ್ಯಕ್ಷ ಹೆಚ್.ಎಲ್.ಹಿರೇಗೌಡರ್, ನಗರಸಭೆ ಸದಸ್ಯ ವಿರುಪಾಕ್ಷಪ್ಪ ಮೋರನಾಳ, ಶಾಲೆಯ ಮುಖ್ಯೋಪಧ್ಯಾಯ ಕರಿಬಸಪ್ಪ ಪಲ್ಲೇದ್, ಎಸ್.ಡಿ.ಎಂ.ಸಿ. ಸದಸ್ಯರಾದ ಮಲ್ಲಿಕಾರ್ಜುನ ಶೆಟ್ಟರ್, ಮಂಜುಳಾ ಮೀರಜಕರ್, ಮಹೇಂದ್ರಗೌಡ ಮಾಲಿಪಾಟೀಲ್, ಹಾಲೇಶ ಕಂದಾರಿ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ಪಾಲಕರು ಪಾಲ್ಗೊಂಡಿದ್ದರು. ಶಿಕ್ಷಕ ಜಯರಾಜ್ ಭೂಸದ ಕಾರ್ಯಕ್ರಮ ನಿರ್ವಹಿಸಿದರೆ, ಇನ್ನೊರ್ವ ಶಿಕ್ಷಕ ರಾಮರೆಡ್ಡಿ ರಡ್ಡೇರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ವೀರಯ್ಯ ಒಂಟಿಗೋಡಿಮಠ ವಂದಿಸಿದರು.
0 comments:
Post a Comment