PLEASE LOGIN TO KANNADANET.COM FOR REGULAR NEWS-UPDATES


  ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಕಾನೂನು ಸಾಕ್ಷರತಾ ಮತ್ತು ಜನತಾ ನ್ಯಾಯಾಲಯ ಸಂಚಾರಿ ವಾಹನದ ಮೂಲಕ ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲು ಕಡಿಮೆ ಅವಧಿಯಲ್ಲಿ ಹೆಚ್ಚು ಹೆಚ್ಚು ಗ್ರಾಮಗಳನ್ನು ತಲುಪಲು ಸಾಧ್ಯವಾಗಲಿದೆ ಎಂದು ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್. ಶಿಂಧೆ ಅವರು ಅಭಿಪ್ರಾಯಪಟ್ಟರು.
  ಕೊಪ್ಪಳ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಕಾನೂನು ಸಾಕ್ಷರತಾ ಮತ್ತು ಜನತಾ ನ್ಯಾಯಾಲಯ ಸಂಚಾರಿ ವಾಹನಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಕೊಪ್ಪಳ ಜಿಲ್ಲೆಯಲ್ಲಿ ಅ. ೧೦ ರಿಂದ ೧೨ ರವರೆಗೆ ಕಾನೂನು ಸಾಕ್ಷರತಾ ಮತ್ತು ಜನತಾ ನ್ಯಾಯಾಲಯದ ಸಂಚಾರಿ ವಾಹನದ ಮೂಲಕ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇದಕ್ಕಾಗಿ ಬಸ್ ವಾಹನದ ವ್ಯವಸ್ಥೆ ಕಲ್ಪಿಸಿದೆ.  ಈ ವಿಶೇಷ ಬಸ್ ಅನ್ನು ಈ ಕಾರ್ಯಕ್ರಮಕ್ಕಾಗಿ  ವಿನೂತನವಾಗಿ ವಿನ್ಯಾಸಗೊಳಿಸಲಾಗಿದೆ.  ಕಾನೂನಿನ ಅರಿವು ಗ್ರಾಮೀಣ ಭಾಗಗಳಲ್ಲಿ ಹೆಚ್ಚು, ಹೆಚ್ಚು ವಿಸ್ತರಣೆಗೊಳಿಸುವ ನಿಟ್ಟಿನಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಶ್ರಮ ಶ್ಲಾಘನೀಯ,  ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್. ಶಿಂಧೆ ಅವರು ಶುಭ ಕೋರಿದರು.
  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಯೂ ಆಗಿರುವ ಸೀನಿಯರ್ ಸಿವಿಲ್ ಜಡ್ಜ್ ಶಿವರಾಮ ಕೆ. ಅವರು ಈ ಸಂದರ್ಭದಲ್ಲಿ ಮಾತನಾಡಿ, ಈಗಾಗಲೆ ಪ್ರಾಧಿಕಾರವು ಗ್ರಾಮೀಣ ಪ್ರದೇಶಗಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಲು ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಪರಿಣಾಮಕಾರಿಯಾಗಿ ಶ್ರಮಿಸುತ್ತಿದೆ.  ಕಾನೂನು ಸಾಕ್ಷರತಾ ಮತ್ತು ಜನತಾ ನ್ಯಾಯಾಲಯ ಸಂಚಾರಿ ಘಟಕದ ಬಸ್ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ಹೆಚ್ಚು ಗ್ರಾಮಗಳಿಗೆ ಕಾನೂನು ಸಾಕ್ಷರತೆ ಕಾರ್ಯಕ್ರಮವನ್ನು ತಲುಪಿಸಲು ಸಹಕಾರಿಯಾಗಿದೆ.  ಅಲ್ಲದೆ ಈ ಸಂದರ್ಭದಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಬಹುದಾದ ಜನತಾ ನ್ಯಾಯಾಲಯದ ಬಗ್ಗೆಯೂ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲಾಗುವುದು. ಕಾನೂನು ಸಾಕ್ಷರತಾ ಮತ್ತು ಜನತಾ ನ್ಯಾಯಾಲಯ ಸಂಚಾರಿ ವಾಹನವು ಅ. ೧೦ ರಿಂದ ೧೨ ರವರೆಗೆ ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಚರಿಸಲಿದ್ದು, ಅ. ೧೧ ರಂದು ಬೆಳಿಗ್ಗೆ ಕಾಟರಳ್ಳಿ, ಮಧ್ಯಾಹ್ನ ಬೂದಿಹಾಳ, ಸಂಜೆ ಮೈನಳ್ಳಿ.  ಅ. ೧೨ ರಂದು ಬೆಳಿಗ್ಗೆ ಅಲ್ಲಾನಗರ, ಮಧ್ಯಾಹ್ನ ಹಿರೇಬಗನಾಳ, ಸಂಜೆ ಹಿರೇಕಾಸನಕಂಡಿ ಗ್ರಾಮದಲ್ಲಿ ಸಂಚರಿಸಲಿದ್ದು, ಈ ಎಲ್ಲಾ ಗ್ರಾಮಗಳಲ್ಲಿ ಸಾಕ್ಷರತಾ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು.
  ಈ ಸಂದರ್ಭದಲ್ಲಿ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಎಲ್.ಬಿ. ಜಂಬಗಿ, ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ. ಕಾವೇರಿ ಸೇರಿದಂತೆ ನ್ಯಾಯಾಂಗ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

Advertisement

0 comments:

Post a Comment

 
Top