PLEASE LOGIN TO KANNADANET.COM FOR REGULAR NEWS-UPDATES

 ಲೋಕಸಭಾ ಚುನಾವಣೆ ಕೊಪ್ಪಳ ಜಿಲ್ಲೆಯಲ್ಲಿ ರಂಗೇರುತ್ತಿದ್ದು, ಅತ್ತ ವಿವಿಧ ಪಕ್ಷಗಳು ಪ್ರಚಾರಕ್ಕೆ ತಮ್ಮದೇ ವಿಧಾನವನ್ನು ಅನುಸರಿಸುತ್ತಿದ್ದರೆ, ಇತ್ತ ಜಿಲ್ಲಾ ಸ್ವೀಪ್ ಸಮಿತಿಯು ಮತದಾರರಲ್ಲಿ ಕಡ್ಡಾಯ ಮತದಾನದ ಜಾಗೃತಿ ಮೂಡಿಸಲು ಹಲವು ಕಸರತ್ತು ನಡೆಸುತ್ತಿದೆ. ಇದೀಗ ಜಾತ್ರೆಯಲ್ಲಿ ನಿರಾಯಾಸವಾಗಿ ಲಭ್ಯವಾಗುವ ಲಕ್ಷಾಂತರ ಜನರಿಗೆ ಕಡ್ಡಾಯ ಮತದಾನದ ಅರಿವು ಮೂಡಿಸುವ ಅವಕಾಶವನ್ನು ಜಿಲ್ಲಾ ಸ್ವೀಪ್ ಸಮಿತಿ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ.


  ಕಳೆದ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಪ್ರದೇಶಗಳ ಪೈಕಿ ಗಂಗಾವತಿ ತಾಲೂಕಿನ ಕನಕಗಿರಿಯೂ ಸಹ ಒಂದಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮತದಾನ ದಾಖಲಾಗಬೇಕು ಎಂಬುದು ಜಿಲ್ಲಾ ಸ್ವೀಪ್ ಸಮಿತಿಯ ಉದ್ದೇಶವಾಗಿದೆ.  ಈ ನಿಟ್ಟಿನಲ್ಲಿ ಕನಕಗಿರಿಯಲ್ಲಿ ಭಾನುವಾರ ಜರುಗಿದ ಶ್ರೀ ಕನಕಾಚಲಪತಿ ಮಹಾರಥೋತ್ಸವ ಜಾತ್ರೆಯಲ್ಲಿ ಮತದಾರರ ಜಾಗೃತಿಗಾಗಿಯೇ ಪ್ರತ್ಯೇಕ ಮಳಿಗೆಯನ್ನು ಎಪಿಎಂಸಿ ಆವರಣದಲ್ಲಿ ತೆರೆಯಲಾಗಿದ್ದು, ಇಲ್ಲಿ ಮತದಾನಕ್ಕೆ ಪ್ರೇರೇಪಣೆ ನೀಡುವಂತಹ ಘೋಷಣಾ ಫಲಕಗಳನ್ನು ಅಳವಡಿಸಲಾಗಿದೆ.  ಪ್ರತಿಜ್ಞಾ ವಿಧಿಯುಳ್ಳ ಕರಪತ್ರಗಳನ್ನು ಈ ಮಳಿಗೆಯಲ್ಲಿ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು, ಜಾತ್ರೆಗೆ ಆಗಮಿಸಿರುವ ಸಾರ್ವಜನಿಕರಿಗೆ ವಿತರಿಸುವ ಅಲ್ಲದೆ ಮಳಿಗೆಯಲ್ಲಿಯೇ ನೂರಾರು ಜನರಿಗೆ ನೈತಿಕ ಮತದಾನದ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಕರಪತ್ರಕ್ಕೆ ಸಹಿ ಪಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.
  ಭಾನುವಾರ ಜರುಗಿದ ಕನಕಗಿರಿ ಜಾತ್ರೆ ಮಹಾರಥೋತ್ಸವ ಸಂದರ್ಭದಲ್ಲಿ ಮತದಾರರ ಜಾಗೃತಿಗಾಗಿ ತೆರೆಯಲಾಗಿರುವ ಮಳಿಗೆಗೆ ಭೇಟಿ ನೀಡಿದ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರೇ ಖುದ್ದಾಗಿ ನಿಂತು ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿದರು, ಅಲ್ಲದೆ ಕಡ್ಡಾಯ ಮತದಾನಕ್ಕೆ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು.  ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಬೇಕಾದ್ದು, ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದ್ದು, ಚುನಾವಣೆಯ ಸಂದರ್ಭದಲ್ಲಿ ಮತದಾನ ಮಾಡುವುದು ಸಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಿದಂತಾಗುತ್ತದೆ.  ಮತದಾನ ಮಾಡದೇ ಇರುವವರು, ಜನಪ್ರತಿನಿಧಿಗಳಿಗೆ ಅಹವಾಲು ಸಲ್ಲಿಸುವ ನೈತಿಕ ಹಕ್ಕು ಕಳೆದುಕೊಂಡಂತೆ.  ಮತದಾರರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ, ಆತ್ಮ ಗೌರವವನ್ನು ಕಾಪಾಡುವ ರೀತಿಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
  ಮತದಾರರ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿ ಕನಕಗಿರಿ ಜಾತ್ರೆಯಲ್ಲಿ ಹಮ್ಮಿಕೊಂಡ ಜಾಗೃತಿ ಅಭಿಯಾನಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು.  ಮತದಾರರಲ್ಲಿ ಕಡ್ಡಾಯ ಮತದಾನಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಳಿಗೆಯಲ್ಲಿ ಮತದಾರರ ಜಾಗೃತಿ ಗೀತೆಗಳು ಪ್ರಸಾರಗೊಳ್ಳುತ್ತಿದ್ದು, ಪ್ರತಿಜ್ಞಾ ವಿಧಿ ಸ್ವೀಕಾರ ಪತ್ರಕ್ಕೆ ಸಹಿ ಹಾಕಲು ಬಹಳಷ್ಟು ಮತದಾರರು ಉತ್ಸುಕವಾಗಿ ಪಾಲ್ಗೊಂಡರು.
  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಗಂಗಾವತಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಠದ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಕನಕಗಿರಿ ಜಾತ್ರೆಯ ಅಂಗವಾಗಿ ಮತದಾರರ ಜಾಗೃತಿಗೆ ಪ್ರಾರಂಭಿಸಲಾಗಿರುವ ಮಳಿಗೆಯಲ್ಲಿ ಇನ್ನೂ ಎರಡ್ಮೂರು ದಿನ ಮತದಾರರಿಗೆ ಅರಿವು ಮೂಡಿಸುವ ಕಾರ್ಯ ನಡೆಯಲಿದೆ.

Advertisement

0 comments:

Post a Comment

 
Top