PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ,ಅ.೦೧: ಅಸ್ಪೃಶ್ಯತೆ ನಿವಾರಣೆಯಾಗಲು ಶೋಷಿತ ಸಮಾಜದವರಲ್ಲಿ ಜಾಗೃತಿ ಮೂಡಿಸಿ ಶೋಷಣೆಗೊಳಗಾದ ಸಂದರ್ಭದಲ್ಲಿ ಅದರ ವಿರುದ್ದ ಹೋರಾಡಲು ಮುಂದಾಗಬೇಕು. ಅಂದಾಗ ಅಸಮಾನತೆ ಹೋಗಲಾಡಿಸಲು ಸಾಧ್ಯವಾಗುತ್ತದೆ. ಆ ಸಮಾನತೆಯನ್ನು ಹೋಗಲಾಡಿಸಲು ಶೋಷಿತ ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ದಲಿತ ಸಂಘಟನೆ ಮಾಡಬೇಕೆಂದು ನಾಡೋಜ ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಹೇಳಿದರು.
ಅವರು ರವಿವಾರ ಸಂಜೆ ಇಲ್ಲಿನ ಸಾಹಿತ್ಯ ಭವನದಲ್ಲಿ ಕರ್ನಾಟಕ ರಾಜ್ಯ ಅಸ್ಪೃಶ್ಯರ ವಿಮೋಚನಾ ಸಮಿತಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಜ್ಯೋತಿ ಬಾ ಫುಲೆವಾದ) ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಜ್ಯೋತಿ ಬಾ ಫುಲೆ ಪ್ರಶಸ್ತಿ ಪ್ರದಾನ, ಪುರಸ್ಕಾರ ಸಮಾರಂಭ ಹಾಗೂ ರಾಜ್ಯ ಮಟ್ಟದ ವಿಚಾರ ಸಂಕೀರಣ ಸಮಾರಂಭದಲ್ಲಿ ವಿಶೇಷ ಆಮಂತ್ರಿತರಾಗಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಅಸ್ಪೃಶ್ಯತೆ ಬಿಡಿ ಬಸವಣ್ಣನವರ ವಚನ ಹೇಳುವುದಕ್ಕಿಂತ ಅದನ್ನು ಜೀವನದಲ್ಲಿ ಆಚರಣೆಗೆ ತನ್ನಿ ಅಸ್ಪೃಶ್ಯತೆ ತನ್ನತಾನೆ ನಿವಾರಣೆಯಾಗುತ್ತದೆ. ಆದರೆ ನಾವು ಹೇಳುವುದು ಬೇರೆ ಮಾಡುವುದು ಬೇರೆ ಎಂದ ಅವರು, ಅಸ್ಪೃಶ್ಯತೆ ಸಮಾಜದಲ್ಲಿ ಹಾಗೇಯೆ ಉಳಿಯಲು ರಾಜಕಾರಣಿಗಳೇ ಕಾರಣ ತಮ್ಮ ಓಟ್ ಬ್ಯಾಂಕ್‌ಗಾಗಿ ಅವರನ್ನು ಹಾಗೆಯೇ ಉಳಿಸುವಂತಹ ಕುತಂತ್ರ ನಡೆಯುತ್ತಿದೆ. ಇದನ್ನು ತಡೆಗಟ್ಟಬೇಕು ಇವೆಲ್ಲ ಶಿಕ್ಷಣದಿಂದ ಜಾಗೃತಿ ಹೊಂದಿ ಸಮಾಜದಲ್ಲಿ ಬದಲಾವಣೆ ಬಂದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು. ಡಾ|| ಬಿ.ಆರ್.ಅಂಬೇಡ್ಕರದಂತಹ ಬುದ್ದಿವಾನ ವ್ಯಕ್ತಿ ನಾನು ಮತ್ತೊಬ್ಬರನ್ನು ನೋಡಿಯೇ ಇಲ್ಲ. ಅದರಂತೆ ಜಗಜೀವನ್‌ರಾಂ ಕೂಡ ಒಳ್ಳೆಯ ಬುದ್ದಿವಂತ ಮಹಾನ್ ನಾಯಕರಾಗಿದ್ದರು. ಜ್ಯೋತಿ ಬಾ ಫುಲೆಯವರು ಕೂಡ ಶೋಷಿತ ಸಮಾಜದವರನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸ ಮಾಡಿದ್ದರು ಎಂದು ನಾಡೋಜ ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಹೇಳಿದರು.
ಎಸ್.ಎಸ್.ಪಾಟೀಲ್ : ಮಾಜಿ ಸಚಿವ ಹಾಗೂ ವೀರಶೈವ ಮಹಾ ಸಭಾದ ರಾಜ್ಯ ಉಪಾಧ್ಯಕ್ಷ ಎಸ್.ಎಸ್.ಪಾಟೀಲ್‌ರವರು ವಿಚಾರ ಸಂಕೀರಣದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸಮಾಜ ಬಾಂಧವರು ಶಿಕ್ಷಣದಿಂದ ಜಾಗೃತಿ ಹೊಂದದೇ ಅಸ್ಪೃಶ್ಯತೆ ನಿವಾರಣೆಯಾಗಲು ಸಾಧ್ಯವಾಗುತ್ತದೆ ಎಂದರು. ಐ.ಜಿ.ಸನದಿ : ಮಾಜಿ ಸಂಸದ ಹಿರಿಯ ಕಾಂಗ್ರೆಸ್ ಮುಖಂಡ ಐ.ಜಿ.ಸನದಿಯವರು ಜ್ಯೋತಿ ಬಾ ಫುಲೆ ಭಾವಚಿತ್ರಕ್ಕೆ ಪುಶ್ಪಾರ್ಪಣೆ ಮಾಡಿ ಮಾತನಾಡಿದ ಮನುಷ್ಯ ಹುಟ್ಟಿದಾಗ ಉಸಿರು ಇರುತ್ತದೆ. ಅದೇ ಮನುಷ್ಯ ಸತ್ತಾಗ ಹೆಸರು ಉಳಿಯುತ್ತದೆ. ಜ್ಞಾನ ಸಂಪಾದನೆಯಿಂದ ಆ ಮನುಷ್ಯ ಮಹಾತ್ಮನಾಗುತ್ತಾನೆ. ತನ್ನನ್ನು ತಾನು ಸಮಾಜಕ್ಕೆ ಅರ್ಪಿಸಿಕೊಂಡು ಜ್ಯೋತಿ ಬಾ ಫೂಲೆ ಸಮಾಜಕ್ಕೆ ಜ್ಯೋತಿಯಾಗಿದ್ದರು ಎಂದ ಅವರು, ಕಷ್ಟದಲ್ಲಿರುವನಿಗೆ ಸಹಾಯ ಮಾಡುವ ಮಾನವ ಧರ್ಮ ಶ್ರೇಷ್ಠ ಧರ್ಮವಾಗಿದೆ ಎಂದು ಹೇಳಿದರು.
ಡಾ.ಚಿನ್ನಸ್ವಾಮಿ ಸೋಸಲೆ : ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಮುಖ್ಯಸ್ಥ ಪ್ರೋ| ಡಾ.ಎನ್.ಚಿನ್ನಸ್ವಾಮಿ ಸೋಸಲೆಯವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ನಮ್ಮ ದೇಶದಲ್ಲಿ ಎರಡು ಸಂವಿಧಾನವಿದೆ. ಒಂದು ಲಿಖಿತ ಸಂವಿಧಾನ ಇನ್ನೊಂದು ಅಲಿಖಿತ ಸಂವಿಧಾನ ಅಲಿಖಿತ ಸಂವಿದಾನ ಯಾವಾಗಬೇಕು ಯಾವಾಗ, ಹೇಗೆ ಬೇಕು ಹಾಗೇ ತನ್ನ ಇಷ್ಟ ಬಂದಂತಹ ಅಲಿಖಿತ ಸಂವಿಧಾನದಿಂದ ಮಾನವ ಸಮಾಜಕ್ಕೆ ಆಗಾಗ ದಕ್ಕೆಯನ್ನುಂಟಾಗುತ್ತದೆ. ಶೋಷಿತ ಸಮಾಜದವರು ಅಸ್ಪೃಶ್ಯತೆ ನಿವಾರಣೆಯಾಗಲು ಮೊದಲು ಶಿಕ್ಷಣ ಪಡೆಯಿರಿ ನಂತರ ಸಂಘಟಿತರಾಗಿ ಹೋರಾಡಿ ಸಂವಿಧಾನ ಬರೆದಂತಹ ಅಂಬೇಡ್ಕರ್ ಪಿತಾಮಹವಾಗಿದ್ದಾರೆ. ಡಾ|| ಅಂಬೇಡ್ಕರ, ಬಾಬು ಜಗಜೀವನ್‌ರಾಂ ಮತ್ತು ಜ್ಯೋತಿ ಬಾ ಫುಲೆಯವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಬೇಕೆಂದು ಅವರು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ರಂಗಭೂಮಿ ಹಿರಿಯ ಕಲಾವಿದ ಹಾಗೂ ರಾಜ್ಯ ನಾಟಕ ಅಕ್ಯಾಡೆಮಿ ಪ್ರಶಸ್ತಿ ಪುರಸ್ಕೃತ ಲಿಂಗರಾಜ ಪಲ್ಲೇದ್ ವಹಿಸಿದ್ದರು. ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯ್ಯದ್, ಸ್ಪಂಧನಾ ಸಂಸ್ಥೆಯ ಬಿ.ದೇವಣ್ಣ, ಎಸ್.ಕೆ.ಪಾಟೀಲ್, ವಿಜಯ ನಗರವಾಣಿ ಪತ್ರಿಕೆಯ ಸಂಪಾದಕ ಹೆಚ್.ಪ್ರಕಾಶಗೌಡ, ಕಾಂಗ್ರೆಸ್ ಎಸ್.ಸಿ. ಎಸ್.ಟಿ. ಜಿಲ್ಲಾಧ್ಯಕ್ಷ ಗಾಳೆಪ್ಪ ಪೂಜಾರ, ಮುಖಂಡರಾದ ಭರಮಪ್ಪ ಬೆಲ್ಲದ್, ಡಾ.ಜ್ಞಾನ ಸುಂದರ, ಮುನಿರಾಬಾದ್ ತಾ.ಪಂ.ಸದಸ್ಯೆ ಬಾನು ಚಂದುಸಾಬ, ಮುನಿರಾಬಾದ್ ಗ್ರಾ.ಪಂ.ಉಪಾಧ್ಯಕ್ಷೆ ಪಾರ್ವತಿ ಬೆಲ್ಲದ್, ರಾಮಕೃಷ್ಣ ದೊಡ್ಡಮನಿ, ಮುದುಕಯ್ಯ ಕಣವಿಮಠ, ವಿರುಪಾಕ್ಷಗೌಡ ಪಾಟೀಲ್, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಕೊಟ್ರಯ್ಯ ಸ್ವಾಮಿ ಹಿರೇಮಠ, ವಿಜಯಕುಮಾರ, ಪತ್ರಕರ್ತ ಎಂ.ಸಾಧಿಕ್ ಅಲಿ ಮತ್ತೀತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ೨೦೧೨ ರ ಜ್ಯೋತಿ ಬಾ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

0 comments:

Post a Comment

 
Top